ನವದೆಹಲಿ: ಅನಾಜ್ ಮಂಡಿಯಲ್ಲಿ ಸಂಭವಿಸಿದ ಬೆಂಕಿ ಅವಘಡದ ಬಿಸಿ ಆರುವ ಮೊದಲೇ ದೆಹಲಿಯಲ್ಲಿ ಈ ವಿಚಾರವಾಗಿ ರಾಜಕೀಯದ ಕಾವು ಏರಲು ಆರಂಭವಾಗಿದೆ.

ದೆಹಲಿ ವಿಧಾನಸಭೆಗೆ ಒಂದೆರಡು ತಿಂಗಳಲ್ಲಿ ಚುನಾವಣೆ ನಡೆಯಲಿರುವುದರಿಂದ, ಎಲ್ಲಾ ರಾಜಕೀಯ ಪಕ್ಷಗಳು ಈ ಘಟನೆಯನ್ನು ಮುಂದಿಟ್ಟುಕೊಂಡು ಪರಸ್ಪರರ ವಿರುದ್ಧ ಆರೋಪ– ಪ್ರತ್ಯಾರೋಪ ಆರಂಭಿಸಿವೆ.

‘ಅನಾಜ್ ಮಂಡಿಯ ಬೆಂಕಿ ಅವಘಡಕ್ಕೆ ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರವೇ ಹೊಣೆ’ ಎಂದು ಬಿಜೆಪಿ ಆರೋಪಿಸಿದೆ. ಅದಕ್ಕೆ ಅಷ್ಟೇ ಕ್ಷಿಪ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ, ‘ಕೇಸರಿ ಪಕ್ಷವು ಶವಗಳ ಮೇಲೆ ರಾಜಕೀಯ ಮಾಡುತ್ತಿದೆ’ ಎಂದಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಬಿಜೆಪಿಯ ದೆಹಲಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಹಾಗೂ ಕೇಂದ್ರದ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಹರ್‌ದೀಪ್ ಪುರಿ ಅವರು, ‘ಈ ಭಾಗದಲ್ಲಿ ವಿದ್ಯುತ್ ತಂತಿಗಳು ನರ್ತನ ಮಾಡುತ್ತಿವೆ. ಹಲವು ಬಾರಿ ದೂರು ನೀಡಿದರೂ ಸರ್ಕಾರವಾಗಲಿ, ಸಂಬಂಧಪಟ್ಟ ಸಂಸ್ಥೆಯಾಗಲಿ ಕ್ರಮ ಕೈಗೊಂಡಿಲ್ಲ’ ಎಂದರು.

ಮೃತರ ಕುಟುಂಬದವರಿಗೆ ಪಕ್ಷದ ವತಿಯಿಂದ ತಲಾ ₹ 5 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹ 25,000 ಪರಿಹಾರ ನೀಡುವುದಾಗಿ ತಿವಾರಿ ಘೋಷಿಸಿದರು.

ಇದನ್ನೂ ಓದಿ:ದೆಹಲಿ ಅಗ್ನಿದುರಂತ: 11 ಜನರ ಜೀವ ಉಳಿಸಿದ ಅಗ್ನಿಶಾಮಕದಳ ಸಿಬ್ಬಂದಿ ರಾಜೇಶ್ ಶುಕ್ಲಾ

ಕಾಂಗ್ರೆಸ್ ಪಕ್ಷವು ಎಎಪಿ ಮತ್ತು ಬಿಜೆಪಿ ಎರಡೂ ಪಕ್ಷಗಳನ್ನು ಟೀಕೆಗೆ ಒಳಪಡಿಸಿದೆ. ದೆಹಲಿಯಲ್ಲಿ ಎಎಪಿ ಸರ್ಕಾರ ಇದೆ. ನಗರಪಾಲಿಕೆಯಲ್ಲಿ (ಎಂಸಿಡಿ) ಬಿಜೆಪಿಯ ಆಡಳಿತವಿದೆ. ‘ಕೇಜ್ರಿವಾಲ್ ಅವರ ಸರ್ಕಾರ ಈ ಘಟನೆಯ ಹೊಣೆ ಹೊರಬೇಕು. ಎಂಸಿಡಿ ಬಿಜೆಪಿಯ ಹಿಡಿತದಲ್ಲಿದೆ. ಆದ್ದರಿಂದ ಅವರೂ ಸಮಾನ ಹೊಣೆ ಹೊರಬೇಕು’ ಎಂದು ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸುಭಾಷ್ ಚೋಪ್ರಾ ಹೇಳಿದ್ದಾರೆ.

‘ಇಂಥ ಘಟನೆಗಳನ್ನು ತಪ್ಪಿಸುವುದು ಹೇಗೆ ಎಂದು ಚರ್ಚಿಸುವ ಸಲುವಾಗಿ ಶೀಘ್ರವೇ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಬೇಕು’ ಎಂದು ವಿರೋಧ ಪಕ್ಷದ ನಾಯಕ ವಿಜೇಂದ್ರ ಗುಪ್ತ ಒತ್ತಾಯಿಸಿದ್ದಾರೆ.

‘ಉಪಹಾರ್’ ನೆನಪಿಸಿದ ಘಟನೆ

ದೆಹಲಿಯ ಅನಾಜ್ ಮಂಡಿಯಲ್ಲಿ ಭಾನುವಾರ ನಸುಕಿನಲ್ಲಿ ಸಂಭವಿಸಿದ ಅಗ್ನಿ ದುರಂತವು 1997ರಲ್ಲಿ ದೆಹಲಿಯ ಉಪಹಾರ್ ಚಿತ್ರ ಮಂದಿರದ ಅಗ್ನಿ ದುರಂತವನ್ನು ನೆನಪಿಸಿದೆ. ಆ ದುರಂತದಲ್ಲಿ 59 ಮಂದಿಯ ಸಜೀವ ದಹನವಾಗಿತ್ತು. 100 ಮಂದಿ ಗಾಯಗೊಂಡಿದ್ದರು.

1997ರ ಜೂನ್ 13ರಂದು, ಬಾರ್ಡರ್ ಸಿನಿಮಾ ಪ್ರದರ್ಶನ ನಡೆಯುತ್ತಿದ್ದಾಗ ಉಪಹಾರ್ ಚಿತ್ರಮಂದಿರಕ್ಕೆ ಬೆಂಕಿ ಹತ್ತಿಕೊಂಡಿತ್ತು. ಇದು ದೆಹಲಿಯಲ್ಲಿ ನಡೆದ ಅತಿ ಭೀಕರ ಅಗ್ನಿ ದುರಂತ ಎನಿಸಿಕೊಂಡಿದೆ. ಅದರ ನಂತರದ ಸ್ಥಾನ ಈಗ ಅನಾಜ್ ಮಂಡಿಯ ಘಟನೆಗೆ ಲಭಿಸಿದೆ.

ಪತ್ತೆಯಾಗದ ಬಾಲಕರು

ಅವಘಡದಲ್ಲಿ ಪ್ರಾಣ ಬಿಟ್ಟವರು ಮತ್ತು ಗಾಯಗೊಂಡವರಿಗಾಗಿ ಅವರ ಕುಟುಂಬದವರು ಹುಡುಕಾಟ ನಡೆಸುತ್ತಿದ್ದ ದೃಶ್ಯವು ಮನಕಲಕುವಂತಿತ್ತು.

ಅವಘಡ ಸಂಭವಿಸಿದಾಗ ಕಟ್ಟಡದ ಒಳಗೆ ಇದ್ದರು ಎನ್ನಲಾದ ಮೊಹಮ್ಮದ್ ಸಹಮತ್ (14) ಹಾಗೂ ಮೊಹಮ್ಮದ್ ಮೆಹಬೂಬ್ (13) ಎಂಬ ಬಾಲಕರ ಬಗ್ಗೆ ಯಾವುದೇ ವಿವರ ಲಭ್ಯವಾಗಿಲ್ಲ. ಅವರಿಗಾಗಿ ಕುಟುಂಬದವರು ಹುಡುಕಾಟ ನಡೆಸುತ್ತಿದ್ದಾರೆ.

ಬೆಂಕಿ ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಬಂದಿದ್ದ ಕಾರ್ಮಿಕರ ಕುಟುಂಬದವರು ತಮ್ಮವರು ಎಲ್ಲಿದ್ದಾರೆ ಎಂದು ತಿಳಿಯಲು ಎಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದರು. ಆದರೆ ಅವರಿಗೆ ಸರಿಯಾದ ಮಾಹಿತಿ ನೀಡುವವರೇ ಇರಲಿಲ್ಲ.

‘ನನ್ನ ಸಂಬಂಧಿಕರು ಈ ಕಟ್ಟಡದಲ್ಲಿದ್ದ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಹೇಗಿದ್ದಾರೆ ಎಂದು ತಿಳಿಯಲು ಕಷ್ಟವಾಗುತ್ತಿದೆ. ಅನಾಜ್ ಮಂಡಿ ಪ್ರದೇಶಕ್ಕೆ ಹೋಗಲು ಪೊಲೀಸರು ಬಿಡುತ್ತಿಲ್ಲ. ಆಸ್ಪತ್ರೆಗೆ ಹೋದರೆ ಅಲ್ಲಿಯ ಸಿಬ್ಬಂದಿ ಮಾಹಿತಿ ನೀಡುತ್ತಿಲ್ಲ’ ಎಂದು ಮೊಹಮ್ಮದ್ ತಾಜ್ ಅಹ್ಮದ್ ಎಂಬುವರು ಅಳಲು ತೋಡಿಕೊಂಡರು.

ಕಾರ್ಬನ್ ಮೊನಾಕ್ಸೈಡ್ ಕಾರಣ

‘ಕಟ್ಟಡದ ಮೂರು ಮತ್ತು ನಾಲ್ಕನೇ ಮಹಡಿಯಲ್ಲಿ ಕಾರ್ಬನ್ ಮೊನಾಕ್ಸೈಡ್ ತುಂಬಿದ್ದರಿಂದ ಉಸಿರಾಡಲು ಸಾಧ್ಯವಾಗದೆ ಕಾರ್ಮಿಕರು ಪ್ರಾಣ ಬಿಟ್ಟಿದ್ದಾರೆ’ ಎಂದು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ ಎನ್‌ಡಿಆರ್‌ಎಫ್ ಸಿಬ್ಬಂದಿ ತಿಳಿಸಿದ್ದಾರೆ.

‘ಗ್ಯಾಸ್, ತೈಲ, ಕಲ್ಲಿದ್ದಲು, ಮರ ಮುಂತಾದ ವಸ್ತುಗಳು ಅರೆಬರೆಯಾಗಿ ಸುಟ್ಟಾಗ, ಬಣ್ಣವಾಗಲಿ, ವಾಸನೆಯಾಗಲಿ ಇಲ್ಲದ ಈ ಅತ್ಯಂತ ಅಪಾಯಕಾರಿ ಅನಿಲ ಉತ್ಪಾದನೆಯಾಗುತ್ತದೆ. ಕಾರ್ಮಿಕರು ಮಲಗಿದ್ದ ಒಂದು ಕೊಠಡಿಗೆ ಒಂದು ಕಿಟಕಿ ಮಾತ್ರ ಇತ್ತು. ಕಟ್ಟಡದಲ್ಲಿ ಸಂಗ್ರಹಿಸಿಟ್ಟಿದ್ದ ಸಾಮಗ್ರಿಗೆ ಬೆಂಕಿ ಬಿದ್ದ ಕಾರಣ ಭಾರಿ ಪ್ರಮಾಣದಲ್ಲಿ ಕಾರ್ಬನ್ ಮೊನಾಕ್ಸೈಡ್ ಉತ್ಪಾದನೆಯಾಗಿದೆ. ಅದು ಕೊಠಡಿಯಲ್ಲಿ ತುಂಬಿದ್ದರಿಂದ ಉಸಿರಾಡಲು ಸಾಧ್ಯವಾಗದೆ ಕಾರ್ಮಿಕರು ಸತ್ತಿದ್ದಾರೆ’ ಎಂದು ಎನ್‌ಡಿಆರ್‌ಎಫ್‌ನ ಡೆಪ್ಯುಟಿ ಕಮಾಂಡರ್ ಆದಿತ್ಯ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.