ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾನು ಗಂಗಾ ಮಾತೆಯ ದತ್ತು ಪುತ್ರ: ಪ್ರಧಾನಿ ನರೇಂದ್ರ ಮೋದಿ

3ನೇ ಬಾರಿ ಪ್ರಧಾನಿಯಾದ ಬಳಿಕ ವಾರಾಣಸಿಗೆ ಮೊದಲ ಭೇಟಿ, ‍ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಬಿಡುಗಡೆ
Published : 18 ಜೂನ್ 2024, 14:49 IST
Last Updated : 18 ಜೂನ್ 2024, 14:49 IST
ಫಾಲೋ ಮಾಡಿ
Comments

ಲಖನೌ: ‘ಗಂಗಾ ಮಾತೆಯು ನನ್ನನ್ನು ದತ್ತು ತೆಗೆದುಕೊಂಡಂತೆ ಭಾಸವಾಗುತ್ತಿದೆ. ಕಾಶಿಯ ಜನರು ಅವರ ಸಂಸದನನ್ನು ಮಾತ್ರ ಆಯ್ಕೆ ಮಾಡಿಲ್ಲ, ದೇಶದ ಪ್ರಧಾನಿಯನ್ನೂ ಮೂರನೇ ಬಾರಿಗೆ ಆಯ್ಕೆ ಮಾಡಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದರು.  

ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಸಲ ತಮ್ಮ ಸ್ವಕ್ಷೇತ್ರ ವಾರಾಣಸಿಗೆ ಭೇಟಿ ನೀಡಿದ ಅವರು, ಪಿಎಂ ಕಿಸಾನ್‌ ಸಮ್ಮಾನ್‌ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು. 

‘ಬಾಬಾ ವಿಶ್ವನಾಥ, ಗಂಗಾ ಮಾತೆಯರ ಆಶೀರ್ವಾದ ಮತ್ತು ಕಾಶಿ ಜನರ ಅಪರಿಮಿತ ಪ್ರೀತಿಯಿಂದಾಗಿ ಮೂರನೇ ಅವಧಿಗೆ ದೇಶದ ‘ಪ್ರಧಾನ ಸೇವಕ’ನಾಗುವ ಅವಕಾಶ ನನಗೆ ಸಿಕ್ಕಿದೆ’ ಎಂದು ಅವರು ಹೇಳಿದರು. 

‘ಗಂಗಾ ಮಾತೆ‌ಯು ನನ್ನನ್ನು ಆಕೆಯ ಮಡಿಲಿನಲ್ಲಿ ಇರಿಸಿಕೊಂಡಿದ್ದಾಳೆ. ನಾನು ವಾರಾಣಸಿಯ ಭಾಗವೇ ಆಗಿದ್ದೇನೆ’ ಎಂದು ಮೋದಿ ಪ್ರತಿಪಾದಿಸಿದರು. 

ಐತಿಹಾಸಿಕ ತೀರ್ಪು: ‘ಲೋಕಸಭಾ ಚುನಾವಣೆಯಲ್ಲಿ ದೇಶದ ಜನರು ನಮಗೆ ನೀಡಿರುವ ತೀರ್ಪು ಐತಿಹಾಸಿಕವಾದುದು. 60 ವರ್ಷಗಳ ಬಳಿಕ ಇದೇ ಮೊದಲ ಬಾರಿ ದೇಶದಲ್ಲಿ ಸರ್ಕಾರವೊಂದು (ಬಿಜೆಪಿ) ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದು ಹ್ಯಾಟ್ರಿಕ್‌ ಸಾಧಿಸಿದೆ. ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ಕಾರವೊಂದು ಸತತವಾಗಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದು ಬಹಳ ಅಪರೂಪ’ ಎಂದು ಅವರು ಬಣ್ಣಿಸಿದರು. 

‘ದೇಶದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಎಷ್ಟು ಆಳವಾಗಿ ಹರಡಿವೆ ಎಂಬುದನ್ನು 18ನೇ ಲೋಕಸಭಾ ಚುನಾವಣೆಯು ಜಗತ್ತಿಗೆ ತೋರಿಸಿದೆ. ಈ ಚುನಾವಣೆಯಲ್ಲಿ ಸುಮಾರು 64 ಕೋಟಿ ಜನರು ಮತದಾನ ಮಾಡಿದ್ದಾರೆ. ಜಗತ್ತಿನಲ್ಲಿ ಇದಕ್ಕಿಂತ ದೊಡ್ಡ ಚುನಾವಣೆ ಬೇರೆ ಇಲ್ಲ’ ಎಂದು ಹೇಳಿದರು. 

‘ದೇಶದಲ್ಲಿರುವ ಮತದಾರರ ಸಂಖ್ಯೆಯು ಎಲ್ಲ ಜಿ–7 ರಾಷ್ಟ್ರಗಳ ಒಟ್ಟು ಮತದಾರರ ಸಂಖ್ಯೆಗಿಂತ ಒಂದೂವರೆ ಪಟ್ಟು ಹೆಚ್ಚು. ಯುರೋಪಿಯನ್‌ ಒಕ್ಕೂಟದಲ್ಲಿರುವ ಮತದಾರರಿಗಿಂತ ಎರಡೂವರೆ ಪಟ್ಟು ಜಾಸ್ತಿ ಮತದಾರರು ನಮ್ಮ ದೇಶದಲ್ಲಿದ್ದಾರೆ’ ಎಂದು ಪ್ರಧಾನಿ ತಿಳಿಸಿದರು.

ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆ‌ನ್‌ ಪಟೇಲ್‌, ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಗಂಗಾ ಆರತಿಯಲ್ಲಿ ಭಾಗಿ: ಸಂಜೆ ಪ್ರಧಾನಿಯವರು ದಶಾಶ್ವಮೇಧ ಘಾಟ್‌ಗೆ ಭೇಟಿ ನೀಡಿ, ಗಂಗಾ ಪೂಜೆ ನೆರವೇರಿಸಿ, ಗಂಗಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 

9.26 ಕೋಟಿ ರೈತರಿಗೆ ₹20 ಸಾವಿರ ಕೋಟಿ ಬಿಡುಗಡೆ

ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯ ಅಡಿಯಲ್ಲಿ  ದೇಶದಾದ್ಯಂತ 9.26 ಕೋಟಿಗೂ ಹೆಚ್ಚು ರೈತರಿಗೆ ₹20 ಸಾವಿರ ಕೋಟಿಯಷ್ಟು ಸಹಾಯಧನವನ್ನು ಪ್ರಧಾನಿ ನರೇಂದ್ರ ಮೋದಿ ಇದೇ ಸಂದ‌ರ್ಭದಲ್ಲಿ ಬಿಡುಗಡೆ ಮಾಡಿದರು.  ‘ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯು ಫಲಾನುಭವಿಗಳ ಖಾತೆಗಳಿಗೆ ನೇರ ಹಣ ವರ್ಗಾವಣೆ ಮಾಡುವ ಜಗತ್ತಿನ ಅತ್ಯಂತ ದೊಡ್ಡ ಯೋಜನೆ. ಇದುವರೆಗೆ ದೇಶದ ಕೋಟ್ಯಂತರ ರೈತರ ಖಾತೆಗೆ ₹3.15 ಲಕ್ಷ ಕೋಟಿಯಷ್ಟು ಹಣ ವರ್ಗಾವಣೆ ಮಾಡಲಾಗಿದೆ’ ಎಂದು ಮೋದಿ ಹೇಳಿದರು.  ಇದು ಪಿಎಂ ಕಿಸಾನ್‌ ಸಮ್ಮಾನ್‌ ನಿಧಿಯ 17ನೇ ಕಂತಿನ ಹಣವಾಗಿದ್ದು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಅವರು ಸಹಿ ಹಾಕಿದ ಮೊದಲ ಕಡತ ಇದಾಗಿದೆ. ಕಾರ್ಯಕ್ರಮದಲ್ಲಿ ಅವರು 30 ಸಾವಿರ ಮಹಿಳೆಯರಿಗೆ ‘ಕೃಷಿ ಸಖಿ’ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದರು. 

ಪ್ರಧಾನಿ ಹೇಳಿದ್ದು..

* ಸರ್ಕಾರ ರಚನೆಯ ಬಳಿಕ ನಮ್ಮ ಮೊದಲ ನಿರ್ಧಾರ ರೈತರು ಮತ್ತು ಬಡವರಿಗೆ ಸಂಬಂಧಿಸಿದ್ದಾಗಿದೆ. * ರೈತರು ಮಹಿಳೆಯರು ಯುವಜನರು ಮತ್ತು ಬಡವರು ವಿಕಸಿತ ಭಾರತದ ದೃಢವಾದ ಆಧಾರಸ್ತಂಭಗಳು ಎಂದು ನಾನು ಪರಿಗಣಿಸುತ್ತೇನೆ. * 21ನೇ ಶತಮಾನದ ಭಾರತವನ್ನು ಜಗತ್ತಿನ ಮೂರನೇ ಆರ್ಥಿಕ ಶಕ್ತಿಯನ್ನಾಗಿ ಮಾಡುವಲ್ಲಿ ಕೃಷಿ ಪ್ರಮುಖ ಪಾತ್ರ ವಹಿಸಲಿದೆ. 

ಶ್ರೀನಗರದಲ್ಲಿ ಯೋಗ: ಪ್ರಧಾನಿ ಭಾಗಿ

ನವದೆಹಲಿ (ಪಿಟಿಐ): ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಈ ವರ್ಷದ ಮುಖ್ಯ ಕಾರ್ಯಕ್ರಮವು ಶ್ರೀನಗರದ ಶೇರ್–ಇ–ಕಾಶ್ಮೀರ್ ಅಂತರರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ಶುಕ್ರವಾರ ನಡೆಯಲಿದೆ.

ಮೋದಿ ಈ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ ಎಂದು ಆಯುಷ್ ಖಾತೆ ರಾಜ್ಯ ಸಚಿವ (ಸ್ವತಂತ್ರ) ಪ್ರತಾಪರಾವ್ ಜಾಧವ್ ಮಂಗಳವಾರ ತಿಳಿಸಿದರು.

‘ಮನ್‌ ಕಿ ಬಾತ್’ 30ರಿಂದ ಪುನರಾರಂಭ

ನವದೆಹಲಿ (ಪಿಟಿಐ): ಚುನಾವಣೆಯ ಕಾರಣದಿಂದಾಗಿ ಮೂರು ತಿಂಗಳಿಂದ ಸ್ಥಗಿತಗೊಂಡಿದ್ದ ’ಮನ್‌ ಕಿ ಬಾತ್‌‘ (ಮನದ ಮಾತು) ಕಾರ್ಯಕ್ರಮ ಈ ತಿಂಗಳ 30ರಿಂದ ಪುನರಾರಂಭಗೊಳ್ಳಲಿದ್ದು ಜನರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

‘ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ನಮೋ ಆ್ಯಪ್‌ನಲ್ಲಿ ಬರೆಯಿರಿ ಅಥವಾ ನಿಮ್ಮ ಸಂದೇಶವನ್ನು 1800 11 7800 ನಲ್ಲಿ ದಾಖಲಿಸಿ’ ಎಂದು ಮೋದಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT