ನವದೆಹಲಿ: ಆಂಧ್ರ ಪ್ರದೇಶದಲ್ಲಿ ಮುಂಬರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ಸಂಬಂಧ ಬಿಜೆಪಿ, ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಜನಸೇನಾ ಪಕ್ಷಗಳು ಮೈತ್ರಿ ಕುರಿತು ಶನಿವಾರ ಒಪ್ಪಂದ ಮಾಡಿಕೊಂಡಿವೆ.

ಕೇಂದ್ರ ಸರ್ಕಾರವು ಆಂಧ್ರ ಪ್ರದೇಶಕ್ಕೆ ಹೆಚ್ಚಿನ ಕೊಡುಗೆಗಳನ್ನು ನೀಡಿಲ್ಲ ಎಂದು ಆರೋಪಿಸಿ 2018ರಲ್ಲಿ ಎನ್‌ಡಿಎ ತೊರೆದಿದ್ದ ಟಿಡಿಪಿ, ಆರು ವರ್ಷಗಳ ಬಳಿಕ ಮತ್ತೆ ಎನ್‌ಡಿಎ ತೆಕ್ಕೆಗೆ ಮರಳಿದೆ.

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು, ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ದೆಹಲಿಯಲ್ಲಿ ಎರಡು ದಿನಗಳ ಕಾಲ ನಡೆಸಿದ ಸುದೀರ್ಘ ಚರ್ಚೆಯ ಬಳಿಕ ಲೋಕಸಭಾ, ವಿಧಾನಸಭಾ ಕ್ಷೇತ್ರಗಳ ಸೀಟು ಹಂಚಿಕೆಯನ್ನು ಅಂತಿಮಗೊಳಿಸಲಾಗಿದೆ. ಈ ಕುರಿತು ಔಪಚಾರಿಕ ಘೋಷಣೆಯಷ್ಟೇ ಬಾಕಿಯಿದೆ ಎಂದು ಮೂಲಗಳು ತಿಳಿಸಿವೆ.

‘ಆಂಧ್ರ ಪ್ರದೇಶದ ಜನರ ಪ್ರಗತಿಗಾಗಿ ಬಿಜೆಪಿ, ಟಿಡಿಪಿ, ಜನಸೇನಾ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಸೀಟು ಹಂಚಿಕೆ ಕುರಿತು ಒಂದೆರಡು ದಿನಗಳಲ್ಲಿ ತಿಳಿಸಲಾಗುವುದು’ ಎಂದು ಮೂರು ಪಕ್ಷಗಳ ಮುಖ್ಯಸ್ಥರು ಜಂಟಿ ಹೇಳಿಕೆಯಲ್ಲಿ ಬಿಡುಗಡೆ ಮಾಡಿದ್ದಾರೆ. ‘ಆಂಧ್ರದ ಜನರ ನಿರೀಕ್ಷೆಗೆ ತಕ್ಕಂತೆ ಈ ಮೈತ್ರಿ ಮಾಡಿಕೊಳ್ಳಲಾಗಿದ್ದು, ಜನರ ಪೂರ್ಣ ಬೆಂಬಲ ದೊರೆಯುತ್ತದೆ ಎಂದು ನಿರೀಕ್ಷಿಸಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ಸೀಟು ಹಂಚಿಕೆ: ಆಂಧ್ರ ಪ್ರದೇಶದಲ್ಲಿ ಒಟ್ಟು 25 ಲೋಕಸಭಾ ಕ್ಷೇತ್ರ ಮತ್ತು 175 ವಿಧಾನಸಭಾ ಕ್ಷೇತ್ರಗಳಿದ್ದು, ಏಕಕಾಲದಲ್ಲಿ ಚುನಾವಣೆ ನಡೆಯಲಿವೆ. ಬಿಜೆಪಿ ಆರು ಲೋಕಸಭಾ ಮತ್ತು ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಒಪ್ಪಿದೆ. ಜನಸೇನಾ ಪಕ್ಷಕ್ಕೆ ಆರಂಭದಲ್ಲಿ ಮೂರು ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸುವಂತೆ ಹೇಳಲಾಗಿತ್ತು, ಆದರೆ ಅದೀಗ ಎರಡು ಲೋಕಸಭಾ ಕ್ಷೇತ್ರಗಳು ಮತ್ತು 24 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಉಳಿದ 17 ಲೋಕಸಭಾ ಕ್ಷೇತ್ರಗಳು ಮತ್ತು 145 ವಿಧಾನಸಭಾ ಕ್ಷೇತ್ರಗಳಲ್ಲಿ ಟಿಡಿಪಿ ಸ್ಪರ್ಧೆ ಮಾಡಲಿದೆ ಎಂದು ಮೂಲಗಳು ಹೇಳಿವೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜನಸೇನಾ ಪಕ್ಷವು ಟಿಡಿಪಿ ಜತೆಗೆ ಚುನಾವಣಾ ಒಪ್ಪಂದದ ಘೋಷಣೆ ಮಾಡಿತ್ತು. ಅದಕ್ಕೂ ಮೊದಲಿನಿಂದ (2014) ಅದು ಬಿಜೆಪಿಯ ಮಿತ್ರ ಪಕ್ಷವಾಗಿದೆ. 370 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿರುವ ಬಿಜೆಪಿಯು ಆಂಧ್ರದಲ್ಲಿ 10 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸಿತ್ತು. ಆದರೆ ಅದು ಅಂತಿಮವಾಗಿ ಆರು ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

ಲೋಕಸಭಾ ಅಖಾಡಕ್ಕೆ ಪವನ್ ಕಲ್ಯಾಣ್?: ವಿಧಾನಸಭೆಗೆ ಸ್ಪರ್ಧಿಸಲು ಬಯಸಿದ್ದ ಪವನ್ ಕಲ್ಯಾಣ್ ಅವರನ್ನು ಬಿಜೆಪಿಯ ಸಲಹೆಯ ಮೇರೆಗೆ ಕಾಕಿನಾಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಲಾಯಿತು. ಅವರಿಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನದ ಭರವಸೆಯನ್ನೂ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಟಿಡಿಪಿ ಮತ್ತು ಜನಸೇನಾ ಪಕ್ಷಗಳು ಈಗಾಗಲೇ 99 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿವೆ.

ಬಿಜೆಪಿ ಸ್ಪರ್ಧಿಸುವ ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮೈತ್ರಿ ಪಕ್ಷಗಳು ಒಮ್ಮತಕ್ಕೆ ಬಂದಿದ್ದು, ವಿಧಾನಸಭಾ ಕ್ಷೇತ್ರಗಳ ಕುರಿತು ರಾಜ್ಯದ ಬಿಜೆಪಿ ನಾಯಕರು ಟಿಡಿಪಿ ಮತ್ತು ಜನಸೇನಾ ಪಕ್ಷದ ನಾಯಕರ ಜತೆ ಮಾತುಕತೆ ನಡೆಸಲಿದ್ದಾರೆ. ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ದಗ್ಗುಬಾಟಿ ಪುರಂದೇಶ್ವರಿ, ಮಾಜಿ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ, ಕೇಂದ್ರದ ಮಾಜಿ ಸಚಿವ ವೈ.ಎಸ್.ಚೌಧರಿ, ರಾಜ್ಯಸಭೆಯ ಮಾಜಿ ಸದಸ್ಯ ಸಿ.ಎಂ.ರಮೇಶ್ ಬಿಜೆಪಿಯಿಂದ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

‘ಮೈತ್ರಿ ಕುರಿತು ಎಲ್ಲ ಪ್ರಕ್ರಿಯೆ ಮುಗಿದಿದೆ. ಮುಂದಿನ ವಾರ ನಡೆಯಲಿರುವ ಎನ್‌ಡಿಎ ಸಭೆಯಲ್ಲಿ ನಾವು ಪಾಲ್ಗೊಳ್ಳುವ ಸಾಧ್ಯತೆ ಇದೆ’ ಎಂದು ಟಿಡಿಪಿ ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಅಮಿತ್ ಶಾ ಅವರೊಂದಿಗಿನ ಸಭೆಯ ಬಳಿಕ ನಾಯ್ಡು ಅವರು ತಮ್ಮ ಪಕ್ಷದ ನಾಯಕರೊಂದಿಗೆ ಟೆಲಿಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿ, ‘ಇದೇ 17 ಅಥವಾ 18ರಂದು ಚಿಲಕಲೂರಿಪೇಟೆ ಸುತ್ತಮುತ್ತ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು. ಅಲ್ಲಿ ಅವರು ಆಂಧ್ರ ಪ್ರದೇಶಕ್ಕೆ ಕೆಲವು ಪ್ರಮುಖ ಘೋಷಣೆಗಳನ್ನು ಮಾಡುವರು’ ಎಂದರು.

ಇತ್ತೀಚೆಗಷ್ಟೇ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಎನ್‌ಡಿಎಗೆ ಮರು ಸೇರ್ಪಡೆಯಾಗಿತ್ತು. ಅದರ ಬೆನ್ನಲ್ಲೇ ಈಗ ಟಿಡಿಪಿ ಮತ್ತೆ ಎನ್‌ಡಿಎ ತೆಕ್ಕೆಗೆ ಬಂದಿದೆ. ಒಡಿಶಾದ ಆಡಳಿತಾರೂಢ ಬಿಜು ಜನತಾ ದಳ (ಬಿಜೆಡಿ) ಜತೆಯೂ ಮೈತ್ರಿ ಕುರಿತು ಬಿಜೆಪಿ ಮಾತುಕತೆ ನಡೆಸುತ್ತಿದೆ.

ಟಿಡಿಪಿಯು 1996ರಲ್ಲಿ ಎನ್‌ಡಿಎ ಸೇರಿತ್ತು ಮತ್ತು ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ ಅವರ ನೇತೃತ್ವದ ಮೊದಲ ಅವಧಿಯ ಸರ್ಕಾರಗಳಲ್ಲಿ ಒಟ್ಟಿಗೆ ಕೆಲಸ ಮಾಡಿತ್ತು.

ಮೋದಿಯನ್ನು ಹೊಗಳಿದ ನಾಯ್ಡು: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶದಲ್ಲಿ ಹಲವಾರು ಒಳ್ಳೆಯ ಕೆಲಸಗಳು ನಡೆಯುತ್ತಿವೆ ಎಂದು ಹೊಗಳಿದ ಚಂದ್ರಬಾಬು ನಾಯ್ಡು ಅವರು ವೈಎಸ್‌ಆರ್ ಕಾಂಗ್ರೆಸ್ ಆಳ್ವಿಕೆಯಲ್ಲಿ ಆಂಧ್ರ ಪ್ರದೇಶ ಹಿಂದುಳಿದಿದೆ ಎಂದು ಟೀಕಿಸಿದರು. ಮೋದಿ ಅವರಿಗೆ ಆರ್ಥಿಕತೆ ವೃದ್ಧಿ ಮೊದಲ ಆದ್ಯತೆ ಆಗಿದ್ದರೆ ವೈಎಸ್‌ಆರ್ ಕಾಂಗ್ರೆಸ್‌ಗೆ ಆರ್ಥಿಕತೆ ನಾಶವೇ ಪ್ರಮುಖ ಆದ್ಯತೆ ಆಗಿದೆ ಎಂದರು. ಕೇಂದ್ರ ಮತ್ತು ಆಂಧ್ರ ಪ್ರದೇಶದಲ್ಲಿ ಒಂದೇ ಮೈತ್ರಿಕೂಟ ಅಧಿಕಾರದಲ್ಲಿದ್ದರೆ ರಾಜ್ಯಕ್ಕೆ ಹೆಚ್ಚು ಪ್ರಯೋಜನವಾಗುತ್ತದೆ ಎಂದು ನಾಯ್ಡು ಪ್ರತಿಪಾದಿಸಿದರು.

ಮುಖ್ಯಾಂಶಗಳು

* ಲೋಕಸಭಾ ಕ್ಷೇತ್ರ: ಬಿಜೆಪಿಗೆ 6, ಜನಸೇನಾಗೆ 2, ಟಿಡಿಪಿಗೆ 17 ಸ್ಥಾನ ಸಾಧ್ಯತೆ

* ವಿಧಾನಸಭಾ ಕ್ಷೇತ್ರ: ಬಿಜೆಪಿ 6, ಜನಸೇನಾಗೆ 24, ಟಿಡಿಪಿಗೆ 145 ಸ್ಥಾನ ಸಾಧ್ಯತೆ

* ಇದೇ 17 ಅಥವಾ 18ರಂದು ಆಂಧ್ರ ಪ್ರದೇಶಕ್ಕೆ ಮೋದಿ

ಐದು ವರ್ಷಗಳಲ್ಲಿ ವೈಎಸ್‌ಆರ್ ಕಾಂಗ್ರೆಸ್ ಆಡಳಿತವು ರಾಜ್ಯವನ್ನು ಅದೋಗತಿಗೆ ತೆಗೆದುಕೊಂಡು ಹೋಗಿದೆ. ಹೀಗಿರುವಾಗ ಆಂಧ್ರ ಪ್ರದೇಶದ ಹಿತಾಸಕ್ತಿಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ
– ಎನ್. ಚಂದ್ರಬಾಬು ನಾಯ್ಡು, ಟಿಡಿಪಿ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.