ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿಗಳು ವಾಪಸ್‌

ಚರ್ಚೆಗೆ ಗ್ರಾಸವಾದ ಆರ್‌ಎಸ್‌ಎಸ್‌ ತೀರ್ಮಾನ
Published : 18 ಜೂನ್ 2024, 16:34 IST
Last Updated : 18 ಜೂನ್ 2024, 16:34 IST
ಫಾಲೋ ಮಾಡಿ
Comments

ಬೆಂಗಳೂರು: ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯ ಬಿಜೆಪಿಯ ಹತ್ತು ವಲಯ ಸಂಘಟನಾ ಕಾರ್ಯದರ್ಶಿಗಳನ್ನು ಆರ್‌ಎಸ್‌ಎಸ್‌ ವಾಪಸ್‌ ಕರೆಯಿಸಿಕೊಂಡಿರುವುದು ಪಕ್ಷದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ.ವಿ. ರಾಜೇಶ್‌ ಅವರನ್ನು ವಾಪಸ್‌ ಕರೆಸಿಕೊಂಡ ಬೆನ್ನಲೇ ಈ ವಿದ್ಯಮಾನ ನಡೆದಿದ್ದು, ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಡುವಿನ ಮುಸುಕಿನ ಗುದ್ದಾಟದ ಪರಿಣಾಮ ಎಂದು ಬಿಜೆಪಿ ವಲಯದಲ್ಲಿ ವಿಶ್ಲೇಷಿಸಲಾಗಿದೆ.

ಲೋಕಸಭಾ ಚುನಾವಣೆ ನಡೆಯುವ ಹಂತದಲ್ಲೇ ಈ ಬಾರಿ ಸಂಘದ ಕಾರ್ಯಕರ್ತರು ಬಿಜೆಪಿ ಪರ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಿಲ್ಲ ಎಂಬ ವದಂತಿ ಹರಡಿತ್ತು. ಆದರೆ, ಚುನಾವಣೆ ಮುಗಿದ ಬಳಿಕ ಆರ್‌ಎಸ್‌ಎಸ್‌ ಸರಸಂಘ ಚಾಲಕ ಮೋಹನ್ ಭಾಗವತ್‌ ಅವರು ಚುನಾವಣೆ ಮತ್ತು ಪರೋಕ್ಷವಾಗಿ ಪ್ರಧಾನಿ ಮೋದಿ ಕುರಿತು ಆಡಿದ ಮಾತುಗಳು ಬಿಜೆಪಿ ಮತ್ತು ಸಂಘದ ಮಧ್ಯೆ ಕಂದಕ ಸೃಷ್ಟಿಯಾಗಿರುವುದಕ್ಕೆ ಸ್ಪಷ್ಟ ಸೂಚನೆ ಎಂಬ ಚರ್ಚೆಯೂ ನಡೆದಿದೆ.

ಬಿ.ಎಲ್‌.ಸಂತೋಷ್ ಅವರು ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಆಗಿದ್ದ ಅವಧಿಯಲ್ಲಿ ಎಲ್ಲ ವಿಚಾರಗಳಲ್ಲೂ ಹಸ್ತಕ್ಷೇಪ ನಡೆಯುತ್ತಿದೆ ಎಂಬ ಟೀಕೆಯನ್ನು ಪಕ್ಷದ ಪ್ರಮುಖರೇ ಮಾಡಿದ್ದುಂಟು. ಪದಾಧಿಕಾರಿಗಳ ನೇಮಕ, ಟಿಕೆಟ್‌ ಹಂಚಿಕೆ, ವಿಧಾನಪರಿಷತ್‌, ರಾಜ್ಯಸಭೆಗಳಿಗೆ ನಾಮಕರಣದಲ್ಲೂ ಸಂಘಟನಾ ಕಾರ್ಯದರ್ಶಿ ಮಾತೇ ಅಂತಿಮವಾಗುತ್ತಿತ್ತು. ಹೀಗಾಗಿ ಹಲವು ನೇಮಕಗಳು ಪಕ್ಷದ ಸಂಘಟನೆಗೆ ಯಾವುದೇ ರೀತಿಯಲ್ಲಿ ಪ್ರಯೋಜನವಾಗುತ್ತಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ಹಲವು ಮಹತ್ವದ ವಿಚಾರಗಳಲ್ಲಿ ಅವರ ಮಾತೇ ಅಂತಿಮವಾಗಿರುತ್ತಿತ್ತು. ಹೀಗಾಗಿ ನಾಯಕರು ಪೂರ್ಣ ಪ್ರಮಾಣದಲ್ಲಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂಬ ಅಸಮಾಧಾನವೂ ಬಿಜೆಪಿಯ ಹಲವು ನಾಯಕರಲ್ಲಿದೆ. 

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುವುದರ ಜತೆಗೆ ಸಂಘದ ನಿರ್ದೇಶನಗಳನ್ನು ಪಕ್ಷಕ್ಕೆ ತಿಳಿಸುವ ಜವಾಬ್ದಾರಿ ಸಂಘಟನಾ ಪ್ರಧಾನ ಕಾರ್ಯದರ್ಶಿಗಳದ್ದು. ಈ ಹುದ್ದೆಗೆ ಸಂಘವೇ ಸೂಕ್ತರಾದವರನ್ನು ನೇಮಿಸುತ್ತಿತ್ತು. ಆದರೆ, ಸಂಘಟನಾ ಕಾರ್ಯದರ್ಶಿಗಳು ತಮ್ಮ ಜವಾಬ್ದಾರಿಯ ಚೌಕಟ್ಟು ಮೀರಿ ‘ಶಕ್ತಿಕೇಂದ್ರ’ವಾಗಿ ಬೆಳೆದಿದ್ದು, ಆಗಲೇ ಇದ್ದ ಎರಡು ಬಣಗಳ ಜತೆ ಮೂರನೇ ಬಣ ಸೃಷ್ಟಿಸಿದ್ದೂ ಪರಿಸ್ಥಿತಿ ಮತ್ತಷ್ಟು ಜಟಿಲವಾಗಲು ಕಾರಣವಾಯಿತು ಎಂದು ಬಿಜೆಪಿ ಮೂಲಗಳು ಹೇಳಿವೆ.

ಬಿ.ಎಲ್‌.ಸಂತೋಷ್ ಅವರು ರಾಷ್ಟ್ರ ರಾಜಕಾರಣ ಪ್ರವೇಶಿಸಿದ ಬಳಿಕ ಬಂದ ಸಂಘಟನಾ ಕಾರ್ಯದರ್ಶಿಗಳು ಬಹುತೇಕ ಅದೇ ಪರಂಪರೆ ಮುಂದುವರಿಸಿದರು. 2018 ಮತ್ತು 2023ರ ವಿಧಾನಸಭಾ ಚುನಾವಣೆಗಳಲ್ಲಿ ಟಿಕೆಟ್‌ ಹಂಚಿಕೆಯಲ್ಲಿ ಸಂಘಟನಾ ಕಾರ್ಯದರ್ಶಿಗಳ ಪ್ರಭಾವ ದೊಡ್ಡ ಮಟ್ಟದಲ್ಲಿತ್ತು. ಹಿರಿಯ ರಾಜಕಾರಣಿಗಳೇ ಇವರ ಮುಂದೆ ಟಿಕೆಟ್‌ಗಾಗಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಮತ್ತು ಬೀದರ್‌ ಕ್ಷೇತ್ರಗಳಲ್ಲಿ ಅಣ್ಣಾ ಸಾಹೇಬ ಜೊಲ್ಲೆ, ಭಗವಂತ್ ಖೂಬಾ ಅವರು ಟಿಕೆಟ್‌ ಪಡೆಯಲು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿವರೇ ಕಾರಣ. ಇಲ್ಲಿ ಅಭ್ಯರ್ಥಿಗಳನ್ನು ಬದಲಿಸಿದ್ದರೆ, ಎರಡೂ ಕ್ಷೇತ್ರ ಗೆಲ್ಲಬಹುದಿತ್ತು ಎಂಬುದು ಬಿಜೆಪಿಯ ಕೆಲವು ನಾಯಕರ ನಂಬಿಕೆ.

ಸಂಘದ ಹಿನ್ನೆಲೆಯ ಬಿಜೆಪಿ ನಾಯಕರು ಸಂಘದ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಸಂಘ ಮತ್ತು ಪಕ್ಷವನ್ನು ಮೀರಿ ಬೆಳೆದವರು ಎಂಬ ಭಾವನೆ ಬೆಳೆಸಿಕೊಂಡಿದ್ದಾರೆ. ಸಂಘದ ತತ್ವಾದರ್ಶಗಳನ್ನು ಪಾಲಿಸದೇ ಇದ್ದರೆ ಬಿಜೆಪಿಗೂ ಇತರ ಪಕ್ಷಗಳಿಗೂ ವ್ಯತ್ಯಾಸವೇನು ಎಂಬ ಪ್ರಶ್ನೆ ಸಂಘದ ವಾದವನ್ನು ಪ್ರತಿಪಾದಿಸುವ ಬಿಜೆಪಿ ನಾಯಕರದು.

ಈಗ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಹುದ್ದೆ ಖಾಲಿ ಉಳಿದಿದೆ. ವಿಭಾಗೀಯ ಸಂಘಟನಾ ಕಾರ್ಯದರ್ಶಿಗಳ ಹುದ್ದೆಗಳೂ ತೆರವಾಗಿವೆ. ಮುಂದೆ ಏನು ಎಂಬ ಸ್ಪಷ್ಟ ಚಿತ್ರಣ ಬಿಜೆಪಿ ನಾಯಕರಲ್ಲಿಲ್ಲ. ಕೇರಳದ ಪಾಲಕ್ಕಾಡ್‌ನಲ್ಲಿ ಆಗಸ್ಟ್‌ ಕೊನೆಯಲ್ಲಿ ನಡೆಯುವ ಸಂಘ ಮತ್ತು ಬಿಜೆಪಿ ನಾಯಕರ ಸಮನ್ವಯ ಸಭೆಯ ಬಳಿಕ ಸ್ಪಷ್ಟ ನಿರ್ದೇಶನ ಹೊರಬೀಳಬಹುದು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT