ವಿಜಯಪುರ:ಗದಗಿನ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಪೂರ್ವಾಶ್ರಮದ ನೆಲೆ ಜಿಲ್ಲೆಯ ಸಿಂದಗಿ ಪಟ್ಟಣ. ಶನಿವಾರ ಸ್ವಾಮೀಜಿ ಲಿಂಗೈಕ್ಯರಾದ ಸುದ್ದಿ ತಿಳಿದೊಡನೆ ಅಪಾರ ಜನಸ್ತೋಮ, ಭಕ್ತ ವರ್ಗ ಕಂಬನಿ ಮಿಡಿಯಿತು. ಗುರುವಿನ ಆತ್ಮ ಪರಮಾತ್ಮನಲ್ಲಿ ಲೀನವಾಗಲಿ ಎಂದು ಪ್ರಾರ್ಥಿಸಿತು.

ಸಿಂದಗಿ ಪಟ್ಟಣದ ಮರಯ್ಯ ಹಿರೇಮಠ–ಶಂಕ್ರಮ್ಮ ದಂಪತಿಯ ದ್ವಿತೀಯ ಪುತ್ರರಾಗಿ ಸಿದ್ದರಾಮ ದೇವರು 1949ರ ಫೆಬ್ರುವರಿ 21ರಂದು ಕೋರವಾರ ಗ್ರಾಮದಲ್ಲಿನ ತನ್ನ ದೊಡ್ಡಮ್ಮನ ಮನೆಯಲ್ಲಿ ಜನಿಸಿದರು. ತನ್ನ ಬಾಲ್ಯ, ಪ್ರಾಥಮಿಕ ಶಿಕ್ಷಣವನ್ನು ಸಿಂದಗಿಯಲ್ಲೇ ಪೂರೈಸಿದರು.

ಪುತ್ರ ವರ್ಗ ಪರಂಪರೆಯ ‘ಸಿಂದಗಿ ಹಿರೇಮಠ’ ಸಿದ್ದರಾಮ ದೇವರ ಪೂರ್ವಿಕರದ್ದು. ಮಠದ ಹನ್ನೆರಡನೇ ಪಟ್ಟಾಧ್ಯಕ್ಷರಾಗಿದ್ದ, ಪೂರ್ವಾಶ್ರಮದ ಸಂಬಂಧದಲ್ಲಿ ದೊಡ್ಡಪ್ಪ ಆಗಬೇಕಿದ್ದ, ಶಾಂತವೀರ ಶಿವಾಚಾರ್ಯರು ನಮ್ಮ ಪೀಠಕ್ಕೆ ಈತನೇ ಸೂಕ್ತ. ಹದಿಮೂರನೇ ಪಟ್ಟಾಧ್ಯಕ್ಷ ಈತನೇ ಆಗಬೇಕು ಎಂದು ಸಿದ್ದರಾಮರನ್ನು ಗುರುತಿಸಿದ್ದರು.

ಸ್ವಾಮೀಜಿಯಾಗಲು ಸಿದ್ದರಾಮರು ನಿರಾಕರಿಸಿದ್ದರು. ಇದಕ್ಕೆ ಅವ್ವ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಪ್ಪನ ಬಲವಂತವಿರಲಿಲ್ಲ. ಅವ್ವ ನೀನು ಕುಟುಂಬದ ಪರಂಪರೆ ಬೆಳೆಸಬೇಕು ಎಂದು ಒತ್ತಡ ಹಾಕುತ್ತಿದ್ದರು. ಇದನ್ನು ಸಿದ್ದರಾಮರು ನಿರಾಕರಿಸಿ, ಅವ್ವ ನಂಗೆ ಸಿಐಡಿ ಅಧಿಕಾರಿಯಾಗಬೇಕು ಎಂಬ ಕನಸಿದೆ ಎಂದು ಹಠ ಹಿಡಿದಿದ್ದರು.

ಅವ್ವ, ಶಾಂತವೀರ ಪಟ್ಟಾಧ್ಯಕ್ಷರು ಇದನ್ನು ಕೇಳಲಿಲ್ಲ. ಏಳನೇ ತರಗತಿ ಓದಲು ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೆ ಸೇರ್ಪಡೆಗೊಳಿಸಿದರು. ಮಠದ ವಾತಾವರಣ ಒಗ್ಗಿಕೊಂಡಂತೆ, ಪ್ರಜ್ಞಾವಂತಿಕೆ ಹೆಚ್ಚಿದಂತೆ ಪೂರ್ವಾಶ್ರಮದ ಬಾಂಧವ್ಯವನ್ನು ಸಂತನಾಗುವ ಮೊದಲೇ ಸಿದ್ದರಾಮರು ಸಂಪೂರ್ಣ ತೊರೆದಿದ್ದರು.

ವಿರೋಧದ ನಡುವೆಯೂ ಒಪ್ಪಿಕೊಂಡರು

ಹುಬ್ಬಳ್ಳಿಯಲ್ಲಿ ಬಿ.ಎ. ಓದುತ್ತಿದ್ದ ಸಂದರ್ಭ, ಪ್ರವಚನಕ್ಕೆಂದು ಗದಗಿನ ತೋಂಟದಾರ್ಯ ಮಠಕ್ಕೆ ಸಿದ್ದರಾಮರು ತೆರಳಿದ್ದರು. ನಿತ್ಯವೂ ಇವರ ಪ್ರವಚನ ಆಲಿಸಿದ ಭಕ್ತ ಸಮೂಹ, ಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಸಿದ್ದರಾಮ ದೇವರನ್ನೇ ತಮ್ಮ ಉತ್ತರಾಧಿಕಾರಿಯನ್ನಾಗಿ ಸ್ವೀಕರಿಸುವ ನಿರ್ಣಯ ಕೈಗೊಂಡು, ಮೂರು ಸಾವಿರ ಮಠದ ಸ್ವಾಮೀಜಿಯೊಟ್ಟಿಗೆ ಚರ್ಚಿಸಿದರು.

ಸಿಂದಗಿಯ ಹಿರೇಮಠದ ಪಟ್ಟಾಧ್ಯಕ್ಷರಾಗಿದ್ದ ಶಾಂತವೀರ ಶಿವಾಚಾರ್ಯರನ್ನು ಇದಕ್ಕೆ ಸಂಬಂಧಿಸಿದಂತೆ ಕೋರಿದಾಗ, ಪಟ್ಟಾಧ್ಯಕ್ಷರು ಸಮ್ಮತಿ ನೀಡಲಿಲ್ಲ. ತೀವ್ರ ವಿರೋಧ ವ್ಯಕ್ತಪಡಿಸಿದರು.

ಆದರೆ ಸಿದ್ದರಾಮರು ಸಮ್ಮತಿ ಸೂಚಿಸಿದರು. ದೊಡ್ಡ ಮಠವೊಂದಕ್ಕೆ ಮಠಾಧೀಶನಾದರೇ ಅಪಾರ ಭಕ್ತರ ಬೆಂಬಲ ಸಿಗಲಿದೆ. ಎಲ್ಲರ ಸಹಕಾರ ಪಡೆದು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆಯನ್ನು ವ್ಯಾಪಕವಾಗಿ ಕೈಗೊಳ್ಳಬಹುದು ಎಂದು ಮನವೊಲಿಸಿದರು.

ಇದಕ್ಕೊಪ್ಪದ ಸಿಂದಗಿ ಹಿರೇಮಠದ ಪಟ್ಟಾಧ್ಯಕ್ಷರು ಹಾಸಿಗೆ ಹಿಡಿದಿದ್ದು ಇತಿಹಾಸ. ಈ ಹಂತದಲ್ಲಿ ನನಗೆ ಪಟ್ಟಾಧಿಕಾರ ಕಟ್ಟುವ ಯತ್ನ ನಡೆಯಿತು. ಸಿದ್ದರಾಮ ದೇವರಿದ್ದ ಅದೇ ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೆ ಓದಿಗೆಂದು ಏಳನೇ ತರಗತಿಗೆ ನನ್ನನ್ನು ಕಳುಹಿಸಿದರು. ನಾನು ಅರ್ಧಕ್ಕೆ ಊರಿಗೆ ಮರಳಿದೆ. ನಂತರ ಪೂರ್ವಾಶ್ರಮದ ಕಿರಿಯ ಸಹೋದರ ಶಿವಾನಂದ ಶಿವಾಚಾರ್ಯರನ್ನು ಸಿಂದಗಿಯ ಹಿರೇಮಠದ ಪಟ್ಟಾಧ್ಯಕ್ಷರನ್ನಾಗಿ ನೇಮಿಸಲಾಯಿತು.

ಸಿದ್ದರಾಮ ದೇವರು 1974ರಲ್ಲಿ ಗದಗಿನ ತೋಂಟದಾರ್ಯ ಮಠದ ಪೀಠಾಧಿಪತಿಯಾದ ಬಳಿಕ ಧಾರ್ಮಿಕ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು. ನಾಲ್ಕುವರೆ ದಶಕದ ಅವಧಿ ನಾಡಿನುದ್ದಕ್ಕೂ ತಮ್ಮದೇ ಛಾಪು ಮೂಡಿಸಿದ್ದು, ರಾಜ್ಯದ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಲೇಖಕರು ಲಿಂಗೈಕ್ಯ ಸ್ವಾಮೀಜಿಯ ಪೂರ್ವಾಶ್ರಮದ ಕಿರಿಯ ಎರಡನೇ ಸಹೋದರ. ನಿರೂಪಣೆ: ಡಿ.ಬಿ.ನಾಗರಾಜ

ಅಪ್ಪ–ಅವ್ವ ಸತ್ತಾಗಲೂ ಬರಲಿಲ್ಲ

ಸಿದ್ದರಾಮ ದೇವರು ಗದಗ–ಡಂಬಳ ತೋಂಟದಾರ್ಯ ಮಠದ ಪೀಠಾಧಿಪತಿಯಾಗಿ, ಸಿದ್ಧಲಿಂಗ ಸ್ವಾಮೀಜಿಯಾಗಿ ನೇಮಕಗೊಂಡ ಬಳಿಕ ಹಲ ಬಾರಿ ಸಿಂದಗಿಗೆ ಬಂದಿದ್ದಾರೆ. ಆದರೆ ಒಮ್ಮೆಯೂ ತಾವು ಹುಟ್ಟಿದ, ಆಟವಾಡಿ ಬಾಲ್ಯ ಕಳೆದ ಮನೆಗೆ ಎಂದಿಗೂ ಹೆಜ್ಜೆಯಿಡಲಿಲ್ಲ.

ಸ್ವಾಮೀಜಿಯಾಗಿ ದೀಕ್ಷೆ ಪಡೆದ ಬಳಿಕ ಪೂರ್ವಾಶ್ರಮದ ಬಾಂಧವ್ಯದ ಬೆಸುಗೆಯನ್ನೇ ಕುಟುಂಬದೊಟ್ಟಿಗೆ ಕಡಿದುಕೊಂಡಿದ್ದರು. ಒಂದೆಡೆ ಬಾಲ್ಯದ ಸಿಟ್ಟಿದ್ದರೆ; ಇನ್ನೊಂದೆಡೆ ಜ್ಞಾನ ಹೆಚ್ಚಿದಂತೆಲ್ಲಾ ಸನ್ಯಾಸಿಯ ಜೀವನವನ್ನು ಅಕ್ಷರಶಃ ಪಾಲಿಸಲು ಪ್ರಜ್ಞಾಪೂರ್ವಕವಾಗಿ ಪೂರ್ವಾಶ್ರಮದ ಸಂಬಂಧಗಳನ್ನೇ ಕಡಿದುಕೊಂಡಿದ್ದರು.

ನಮ್ಮಪ್ಪ ಮರಯ್ಯ ಹಿರೇಮಠ 1994ರ ಫೆಬ್ರುವರಿ 12ರಂದು ನಿಧನರಾದರು. ಅವ್ವ ಶಂಕ್ರಮ್ಮ 2012ರ ನವೆಂಬರ್ 27ರಂದು ನಿಧನರಾದರು. ಪ್ರಿಯದರ್ಶಿನಿ ಹ್ಯಾಂಡ್ಲೂಮ್ಸ್ನಲ್ಲಿ ನೌಕರರಾಗಿದ್ದ ಸಹೋದರ ಕುಮಾರಸ್ವಾಮಿ ಹಿರೇಮಠ ನಿವೃತ್ತರಾದ ಬಳಿಕ ನಿಧನರಾದರು.

ಅಪ್ಪ–ಅವ್ವ, ಸಹೋದರ ನಿಧನರಾದರೂ ತೋಂಟದ ಸಿದ್ದಲಿಂಗ ಸ್ವಾಮೀಜಿ ಮಾತ್ರ ಅಂತ್ಯಕ್ರಿಯೆಗೆ ಬರುವುದಿರಲಿ, ಅಂತಿಮ ದರ್ಶನಕ್ಕೂ ಬರಲಿಲ್ಲ. ನಾನೀಗ ಜಗತ್ತಿನ ಸೊತ್ತು. ಪೂರ್ವಾಶ್ರಮದ ಸಂಬಂಧಗಳೆಲ್ಲಾ ದೀಕ್ಷೆ ಪಡೆದ ದಿನವೇ ಸತ್ತಿವೆ ಎಂದು ತಮಗೂ ತಮ್ಮ ಹೆತ್ತವರ ಸಾವಿಗೂ ಸಂಬಂಧವೇ ಇಲ್ಲದಂತಿದ್ದ ಮಹಾಪುರುಷ ಅವರಾಗಿದ್ದರು.

ಅಪ್ಪ–ಅವ್ವ ಬದುಕಿದ್ದಾಗ, ಸಿದ್ದಲಿಂಗ ಸ್ವಾಮೀಜಿ ಸಿಂದಗಿಗೆ ಬಂದರೆ ಕರುಳಿನ ಕೂಗಿಗೆ ಓಗೊಟ್ಟು ನೋಡಿಕೊಂಡು ಬರಲು ಹೋಗುತ್ತಿದ್ದರು. ಆದರೆ ಆ ಪುಣ್ಯಾತ್ಮ ತಮಗೆ ಸಂಬಂಧವೇ ಇಲ್ಲವೆಂಬಂತೆ ನಡೆದುಕೊಳ್ಳುತ್ತಿದ್ದರು. ತಮ್ಮ ಬಳಿಯೂ ಸುಳಿಯಲು ಅವಕಾಶ ನೀಡುತ್ತಿರಲಿಲ್ಲ.

ಭಕ್ತರೊಟ್ಟಿಗೆ ಮಾತ್ರ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದರು. ಅವರ ಕಷ್ಟ–ಸುಖ ಆಲಿಸುತ್ತಿದ್ದರು. ಕುಶಲೋಪರಿ ಕೇಳುತ್ತಿದ್ದರು. ಅವರ ಈ ಸ್ವಭಾವವನ್ನು ನಾವು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರಿಂದಲೇ ಒಮ್ಮೆಯೂ ಅವರನ್ನು ಮಾತನಾಡಿಸಲು ಸಹ ಹೋಗುತ್ತಿರಲಿಲ್ಲ. ನಮ್ಮ ಕುಟುಂಬವೂ ಸಹ ಅವರಿಗೆ ತೊಂದರೆ ನೀಡದಂತೆ ಅಷ್ಟೇ ಅಂತರ ಕಾದುಕೊಂಡು ಬಂದಿತ್ತು. ಆದರೆ ಇದೀಗ ಮಾತ್ರ ಭಕ್ತರಾಗಿ ಅಂತಿಮ ದರ್ಶನ ಪಡೆಯಲು ಗದಗಕ್ಕೆ ಬಂದಿದ್ದೇವೆ.

ನಾಲ್ವರು ಸಹೋದರರು; ಇಬ್ಬರು ಸಹೋದರಿಯರು

ಸಿದ್ದರಾಮ ದೇವರಿಗೆ ನಾಲ್ವರು ಸಹೋದರರು. ಇಬ್ಬರು ಸಹೋದರಿಯರು. ಮಲ್ಲಿಕಾರ್ಜುನಯ್ಯ ಹಿರೇಮಠ ನ್ಯಾಯಾಂಗ ಇಲಾಖೆಯ ನಿವೃತ್ತ ನೌಕರ. ಇವರು ಹಿರಿಯ ಸಹೋದರ.

ಕುಮಾರಸ್ವಾಮಿ ಹಿರೇಮಠ ಮೊದಲ ತಮ್ಮ. ಪ್ರಿಯದರ್ಶಿನಿ ಹ್ಯಾಂಡ್ಲೂಮ್ಸ್ನಲ್ಲಿ ನೌಕರರಿದ್ದರು. ನಿವೃತ್ತರಾದ ಬಳಿಕ ನಿಧನರಾಗಿದ್ದಾರೆ. ಶಾಂತೂ ಹಿರೇಮಠ ಎರಡನೇ ಕಿರಿಯ ಸಹೋದರ. ವಿಶ್ರಾಂತ ಪ್ರೊಫೆಸರ್.

ಸಿಂದಗಿ ಹಿರೇಮಠದ ಶಿವಾನಂದ ಶಿವಾಚಾರ್ಯ ಕೊನೆಯ ಸಹೋದರರು. ಇವರು ತಮ್ಮ ಅಧೀನದಲ್ಲಿನ ಐದು ಶಾಖಾ ಮಠಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಸಿಂದಗಿ ಮಠವೇ ಮೂಲ ಮಠ. ಬಾಳೆಹೊನ್ನೂರು ರಂಭಾಪುರಿ ಪೀಠದ ಶಾಖಾ ಮಠವಿದು.

ಹಾವೇರಿ ನಗರದ ಶಿವಬಸನ ನಗರದಲ್ಲಿನ ಸಿಂದಗಿ ಹಿರೇಮಠ, ಗದಗ ನಗರದಲ್ಲಿರುವ ಕುಮಾರೇಶ್ವರ ಧಾರ್ಮಿಕ ಪಾಠ ಶಾಲೆ, ಸಂಗೂರ, ಬ್ಯಾಡಗಿ ಪಟ್ಟಣದಲ್ಲಿರುವ ಕುಮಾರೇಶ್ವರ ಧಾರ್ಮಿಕ ಪಾಠ ಶಾಲೆ ಹಾಗೂ ಹಾನಗಲ್ನಲ್ಲಿನ ಸಿಂದಗಿ ಹಿರೇಮಠದ ಉಸ್ತುವಾರಿ ಹೊಣೆ ನಿಭಾಯಿಸುತ್ತಿದ್ದಾರೆ.

ಗಂಗಾಬಾಯಿ ಗಣಾಚಾರಿ, ನಿರ್ಮಲಾ ಹಿರೇಮಠ ಇಬ್ಬರೂ ಸಹೋದರಿಯರು. ಗೃಹಸ್ಥಾಶ್ರಮದಲ್ಲಿದ್ದಾರೆ.

ಶಿವಾಚಾರ್ಯರು ಅಸ್ವಸ್ಥ

ಗದಗ ಸ್ವಾಮೀಜಿ ಲಿಂಗೈಕ್ಯರಾದರು ಎಂಬ ಸುದ್ದಿ ಬಿತ್ತರಗೊಳ್ಳುತ್ತಿದ್ದಂತೆ ಸಿಂದಗಿ ಹಿರೇಮಠದ ಪಟ್ಟಾಧ್ಯಕ್ಷ, ಸ್ವಾಮೀಜಿಯವರ ಕಿರಿಯ ಸಹೋದರ ಶಿವಾನಂದ ಶಿವಾಚಾರ್ಯರು ಅಸ್ವಸ್ಥಗೊಂಡರು.

ತಕ್ಷಣವೇ ಭಕ್ತರು ಸಿಂದಗಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆಗೆ ಕರೆದೊಯ್ದರು. ನಂತರ ಗದಗಕ್ಕೆ ಅಂತಿಮ ದರ್ಶನಕ್ಕಾಗಿ ಕರೆದುಕೊಂಡು ಹೋದರು ಎಂದು ಮಠದ ಮೂಲಗಳು ತಿಳಿಸಿವೆ.

ನನಗೆ ಬಂದ ಕೊನೆ ಪತ್ರ

ಸಹೃದಯಿ ‘ಶಾಂತು’ವಿಗೆ...

ನಿನ್ನ ಪ್ರೀತಿಯ ಮಗಳು ‘ನೇತ್ರಾ’ಳ ಬಾಳಿನ ಮುಂಜಾವಿನಲ್ಲೇ ಸೂರ್ಯ ಮುಳುಗಿ ಸಂಜೆಯಾದ ವಿಷಯದಿಂದ ಹೃದಯ ತಲ್ಲಣಿಸಿತು. ಆಗಬಾರದ್ದು ಆಗಿ ಹೋಯಿತು. ಈಗ ಕೊರಳುದ್ದ ಬಂದ ಈ ಕಷ್ಟವನ್ನು ನಿಮ್ಮ ಕುಟುಂಬ ತುಟಿ ಕಚ್ಚಿ ನುಂಗಬೇಕು. ಕೊಲ್ಲುವನೆಂಬ ಭಾಷೆ ದೇವನದಾದರೆ, ಗೆಲುವೆನೆಂಬ ಭಾಷೆ ಭಕ್ತನದ್ದು. ಮನೆಯ ಆಧಾರಸ್ತಂಭವೇ ನೀನು. ಬಂದದ್ದನ್ನು ಧೈರ್ಯವಾಗಿ ಎದುರಿಸಬೇಕು. ಮೊಮ್ಮಗನ ಬೆಳವಣಿಗೆಯಲ್ಲಿ ಅಳಿಯನನ್ನು ಕಾಣಬೇಕು. ಕಾಲ ಎಲ್ಲವನ್ನು ಮರೆಸುತ್ತದೆ. ಧೈರ್ಯವಾಗಿರು.

ಜಯಬಸವ ಎಂಬ ಸಹಿಯುಳ್ಳ ಒಕ್ಕಣೆಯ ಪತ್ರವನ್ನು ಸ್ವಾಮೀಜಿ ನನ್ನ ಮಗಳ ಪತಿ ಅಪಘಾತದಲ್ಲಿ ಮೃತಪಟ್ಟ ಸಂದರ್ಭ, 2017ರ ಏ 25ರಂದು ಬರೆದಿದ್ದೆ ಅಂತಿಮ. ಅದೂ ಸಾಂತ್ವನ ಹೇಳಲಿಕ್ಕಾಗಿ. ಈ ವಿಷಯದಲ್ಲಿ ಅವರು ನನ್ನನ್ನು ಮಾತನಾಡಿಸಿಯೂ ಇರಲಿಲ್ಲ. ಅಷ್ಟು ಕಠಿಣವಾಗಿ ಸನ್ಯಾಸ ವ್ರತ ಆಚರಿಸಿದ್ದ ಈ ಕಾಲದ ಮಹಾಮಹಿಮ ಸಿದ್ಧಲಿಂಗ ಸ್ವಾಮೀಜಿ.

ಭಾನುವಾರ ಅಂತ್ಯಕ್ರಿಯೆ: ಸ್ವಾಮೀಜಿ ಅವರ ಮೃತದೇಹವನ್ನು ಆಸ್ಪತ್ರೆಯಿಂದ ಮಠಕ್ಕೆ ತೆಗೆದುಕೊಂಡು ಬರಲು ಸಿದ್ಧತೆಗಳು ನಡೆಯುತ್ತಿದ್ದು, ಮಧ್ಯಾಹ್ನ 3 ಗಂಟೆಯ ನಂತರ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಭಾನುವಾರ(ಅ.21) ಬೆಳಿಗ್ಗೆ ನಗರದಲ್ಲಿ ಮೆರವಣಿಗೆ ನಡೆಯಲಿದ್ದು, ಸಂಜೆ 4 ಗಂಟೆಗೆ ಮಠದ ಆವರಣದಲ್ಲಿಯೇ ಅವರ ಅಂತ್ಯಕ್ರಿಯೆ ನಡೆಯಲಿದೆ.

ಆರೋಗ್ಯವಾಗಿದ್ದ ಸ್ವಾಮೀಜಿ:ಶುಕ್ರವಾರ ರಾತ್ರಿ ಮಠದಲ್ಲಿ ವಿಜಯದಶಮಿ ಅಂಗವಾಗಿ ನಡೆದ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ವಾಮೀಜಿ, ಭಕ್ತರಿಗೆ ಬನ್ನಿ ಹಂಚಿ, ಬಂಗಾರದಂತೆ ಬಾಳೋಣ ಎಂದು ಆರ್ಶೀವಚನ ನೀಡಿದ್ದರು.‘ಬಸವಣ್ಣ ಸ್ಥಾಪಿಸಿದ ಸಮಾನತೆ ಸಾರುವ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಸಿಗುವವರೆಗೆ ಹೋರಾಟ ನಿರಂತರ. ಈ ಹೋರಾಟ ಬೆಂಬಲಿಸಿದವರನ್ನು ಸಮಾಜ ಸ್ಮರಿಸಬೇಕು. ವಿರೋಧಿಸಿದವರನ್ನು ಹಾಗೂ ವಿರೋಧಿಸುತ್ತಿರುವವರನ್ನು ಸಮಾಜ ಉಪೇಕ್ಷಿಸಬೇಕು’ಎಂದು ಹೇಳಿದ್ದರು. ಆರೋಗ್ಯವಾಗಿಯೇ ಇದ್ದ ಸ್ವಾಮೀಜಿ ಅವರ ಆಕಸ್ಮಿಕ ನಿಧನವು ಭಕ್ತರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ತ್ರಿವಿಧ ದಾಸೋಹಿ:ತೋಂಟದಾರ್ಯ ಮಠವು ಕ್ರಿ.ಶ 15ನೇ ಶತಮಾನದ ಶಿವಯೋಗಿ ಎಡೆಯೂರು ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ನೇರ ವಾರಸುದಾರಿಕೆಯ ಮಠ. ಸಿದ್ಧಲಿಂಗ ಶ್ರೀಗಳು ಪೀಠಾಧಿಪತಿಗಳಾದ ನಂತರವು ಈ ಪರಂಪರೆ ಮುಂದುವರಿದುಕೊಂಡು ಬಂದಿತ್ತು. ಸಿದ್ಧಲಿಂಗ ಸ್ವಾಮೀಜಿ ಅವರು, ತ್ರಿವಿದ ದಾಸೋಹಿ ಎಂದೇ ಹೆಸರಾಗಿದ್ದರು. ಮಠದಲ್ಲಿ ಅನ್ನ ದಾಸೋಹ, ಅಕ್ಷರ ದಾಸೋಹ, ಪುಸ್ತಕ ದಾಸೋಹ, ಸಂಸ್ಕೃತಿ ದಾಸೋಹ ಪರಂಪರೆಯನ್ನು ಹುಟ್ಟುಹಾಕಿದ್ದರು. ಭಕ್ತರನ್ನು ಮತೀಯ ಚೌಕಟ್ಟಿನಿಂದ ಬಿಡಿಸಿ, ಮಾನವೀಯತೆಯ ವಿಸ್ತಾರಕ್ಕೆ ಅಣಿಗೊಳಿಸಿದ್ದರಿಂದ ಮಠವು ಸರ್ವಮತ ಬಾಂಧವರ ಪ್ರೀತಿಯ ಪೀಠವಾಗಿತ್ತು. ಇದಕ್ಕಾಗಿಯೇ ಅವರು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಂದ ‘ರಾಷ್ಟ್ರೀಯ ಕೋಮು ಸೌಹಾರ್ದತಾ ಪ್ರಶಸ್ತಿ’ ಪಡೆದಿದ್ದರು.

* ಇವನ್ನೂ ಓದಿ...

*ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ನಿಧನ

*ಭಾನುವಾರ ಸಂಜೆತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿಯ ಅಂತ್ಯಕ್ರಿಯೆ

*ಕನ್ನಡದ ಸಾಕ್ಷಿಪ್ರಜ್ಞೆಯಂತಿದ್ದ ತೋಂಟದ ಶ್ರೀ

*ಮಳೆ ನೀರು ಸಂಗ್ರಹ: ತೋಂಟದ ಶ್ರೀ ಸಲಹೆ

*ಲಿಂಗಾಯತ ಧರ್ಮ ಕಲುಷಿತ: ಸಿದ್ಧಲಿಂಗಸ್ವಾಮೀಜಿ ಆತಂಕ

*ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ವಿರೋಧ ಸಲ್ಲ: ತೋಂಟದ ಶ್ರೀ

*ಮಕ್ಕಳನ್ನು ಜೀತಕ್ಕೆ ಕಳಿಸದಿರಿ: ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿ

*ದಾವಣಗೆರೆಯಲ್ಲಿ ನಡೆದ ಜಯದೇವ ಸ್ಮರಣೋತ್ಸವಕ್ಕೆ ಬಂದಿದ್ದ ತೋಟಂದಾರ್ಯ ಸ್ವಾಮೀಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.