‘ಭಾಷಾ ದೋಷಗಳು ಶಾಸನದ ಉದ್ದೇಶಕ್ಕೇ ಕೊಳ್ಳಿ ಇಡಬಲ್ಲವು’
ಬೆಂಗಳೂರು: ‘ಭಾಷಾ ದೋಷಗಳು ಶಾಸನದ ಮೂಲ ಉದ್ದೇಶವನ್ನೇ ವಿಫಲಗೊಳಿಸುತ್ತವೆ’ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ‘ಶಾಸನ ರಚನಾ ಪ್ರಕ್ರಿಯೆಯನ್ನು ಸಾಕಷ್ಟು ಕಾಳಜಿ, ಎಚ್ಚರಿಕೆ ಹಾಗೂ ಪರಿಣತಿಯ ನೆಲೆಗಟ್ಟಿನಲ್ಲಿ ಕೈಗೊಳ್ಳಬೇಕು’ ಎಂದು ಹೇಳಿದೆ.
ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಜಮೀನು ಪರಭಾರೆ ನಿಷೇಧ) ಕಾಯ್ದೆ–1978ಕ್ಕೆ 2023ರ ಜುಲೈನಲ್ಲಿ ಮಾಡಲಾಗಿರುವ ತಿದ್ದುಪಡಿ ಕುರಿತಾದ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ವಿಜಯಕುಮಾರ್ ಎ.ಪಾಟೀಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಜಮೀನಿನ ಸ್ವಾಮಿತ್ವ ನಿರಾಕರಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ದಾವಣಗೆರೆಯ ಗೌರಮ್ಮ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾಯಪೀಠ, ‘ಕಾನೂನು ಭಾಷೆಯ ಮೂಲಕ ಮಾತನಾಡುತ್ತದೆ. ಭಾಷೆಯನ್ನು ಸರಿಯಾಗಿ ಬಳಕೆ ಮಾಡದೇ ಹೋದರೆ ಅದು ಯಾವ ಸಾರ್ಥಕತೆ ಈಡೇರಿಸಬೇಕೊ ಅದು ಆಗುವುದಿಲ್ಲ. ಭಾಷಾ ದೋಷವಾದರೆ ಶಾಸನದ ಮೂಲ ಉದ್ದೇಶಕ್ಕೇ ಸೋಲಾಗುತ್ತದೆ’ ಎಂದು ಹೇಳಿದೆ.
ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಎತ್ತಿಹಿಡಿದಿರುವ ವಿಭಾಗೀಯ ನ್ಯಾಯಪೀಠವು, ‘ಜಮೀನಿನ ಸ್ವಾಮಿತ್ವ ಕೋರಿಕೆಯ ಅರ್ಜಿಗಳ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ಹೊರಬರಬೇಕು ಎನ್ನುವುದಾದರೆ ಶಾಸನದಲ್ಲಿ ಬೇರೆ ರೀತಿಯ ಪದಗಳನ್ನು ಬಳಕೆ ಮಾಡಬಹುದಿತ್ತು’ ಎಂಬ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
‘ಮಂಜೂರಾಗಿದ್ದ ಜಮೀನನ್ನು 1978ರ ಕಾಯ್ದೆ ಪ್ರಕಾರ ಪರಭಾರೆ ಮಾಡಿದ್ದರೂ ಕಾಲಮಿತಿ ಇಲ್ಲದೆ, ಸ್ವಾಮಿತ್ವ ಅರ್ಜಿ ಸಲ್ಲಿಸಬಹುದು. ಆದರೆ, ತಿದ್ದುಪಡಿ ಕಾಯ್ದೆಯನ್ನು ಪೂರ್ವಾನ್ವಯಗೊಳಿಸಲಾಗಿದೆ. ಸದ್ಯ ಈ ಕಾನೂನು ಚಾಲ್ತಿಯಲ್ಲಿ ಇದ್ದರೂ ಪುನಃ ಅದನ್ನು ಇನ್ನೊಂದು ಅಂಶವಾಗಿ ಸೇರ್ಪಡೆ ಮಾಡಿರುವುದು ಹಳೆಯದರ ಪ್ರತಿರೂಪದಂತಿದೆ ಅಷ್ಟೇ’ ಎಂದು ನ್ಯಾಯಪೀಠ ಹೇಳಿದೆ.
‘2023ನೇ ಸಾಲಿನ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಲಾದ ಅರ್ಜಿಯ ವಿಚಾರಣೆ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಾಕಿ ಇರುವ ಹಿನ್ನೆಲೆಯಲ್ಲಿ, ತಿದ್ದುಪಡಿಯ ಸಿಂಧುತ್ವದ ಬಗ್ಗೆ ಯಾವುದೇ ಚರ್ಚೆ ಮಾಡಲಾಗದು’ ಎಂದು ಆದೇಶದಲ್ಲಿ ವಿವರಿಸಲಾಗಿದೆ.