ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಪಟ್ಟುಗಳಿಗೆ ಬಾಗಿರುವ ಕಮಲ ಪಡೆಯ ವರಿಷ್ಠರು, ಆಕಾಂಕ್ಷಿಗಳಾಗಿದ್ದ ಹಿರಿತಲೆಗಳನ್ನು ಬದಿಗಿಟ್ಟು, ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರಗೆ ರಾಜ್ಯ ಘಟಕದ ಅಧ್ಯಕ್ಷ ಪಟ್ಟ ಕಟ್ಟಿದ್ದಾರೆ.

ಐದುರಾಜ್ಯಗಳ ಚುನಾವಣಾ ಪ್ರಚಾರದ ಭರಾಟೆಯ ನಡುವೆಯೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ರಾಜ್ಯ ಘಟಕದ ಉಪಾಧ್ಯಕ್ಷರಾಗಿದ್ದ ವಿಜಯೇಂದ್ರ ಅವರಿಗೆ ಭಾರಿ ಬಡ್ತಿ ನೀಡಿ ಶುಕ್ರವಾರ ಸಂಜೆ ಆದೇಶ ಹೊರಡಿಸಿದ್ದಾರೆ. 47ರ ಹರೆಯದ ವಿಜಯೇಂದ್ರ ಅವರು ಪಕ್ಷದ ಕಿರಿಯ ವಯಸ್ಸಿನ ಅಧ್ಯಕ್ಷ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

2019ರಲ್ಲಿ ’ವಾಮಮಾರ್ಗ’ದಿಂದ ಪಕ್ಷವನ್ನು ರಾಜ್ಯದಲ್ಲಿ ಯಡಿಯೂರಪ್ಪ ಅಧಿಕಾರಕ್ಕೆ ತಂದಿದ್ದರು. ಅಧಿಕಾರದಲ್ಲಿ ಅವರ ಪುತ್ರ ವಿಜಯೇಂದ್ರ ಹಾಗೂ ಕುಟುಂಬದವರ ಹಸ್ತಕ್ಷೇಪ ಹೆಚ್ಚಾಗಿದೆ ಎಂಬ ಕಾರಣ ಮುಂದೊಡ್ಡಿ, ಕೇವಲ ಎರಡೇ ವರ್ಷದಲ್ಲಿ ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಈ ನಿರ್ಧಾರವು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಭಾರಿ ಹಿನ್ನಡೆಗೆ ಕಾರಣವಾದ ಒಂದು ಅಂಶವಾಗಿತ್ತು. ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿಯಬೇಕಾದರೆ, ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಹೆಚ್ಚಿನ ಸ್ಥಾನ ಗೆಲ್ಲಬೇಕಿದ್ದರೆ ಯಡಿಯೂರಪ್ಪ ನೆರವು ಅತ್ಯಗತ್ಯ ಎಂದು ಮೋದಿ ಮತ್ತು ಅಮಿತ್ ಶಾ ಮನಗಂಡಿದ್ದಾರೆ ಎಂಬುದನ್ನು ಈ ನೇಮಕ ತೋರಿಸುತ್ತದೆ. ಎರಡೇ ವರ್ಷಗಳಲ್ಲಿ ಬಿಎಸ್ವೈ ಕುಟುಂಬವೇ ದೆಹಲಿ ನಾಯಕರಿಗೆ ಪ್ರಿಯವೆನಿಸಿದೆ.

ವಿಧಾನಸಭೆ ಚುನಾವಣೆ ಬಳಿಕ, ನೆಲ ಕಚ್ಚಿರುವ ಪಕ್ಷ ಸಂಘಟನೆಗೆ ಹೊಸ ಹುರುಪು ನೀಡಿ ಮಹಾ ಸಮರಕ್ಕೆ ‘ಕಮಲ’ವನ್ನು ಸಜ್ಜುಗೊಳಿಸುವ ದೊಡ್ಡ ಹೊಣೆ ವಿಜಯೇಂದ್ರ ಅವರ ಮೇಲಿದೆ. ಲಿಂಗಾಯತ ಮತಗಳು ಪಕ್ಷದಿಂದ ಚದುರದಂತೆ ನೋಡಿಕೊಳ್ಳಲು ಯಡಿಯೂರಪ್ಪ ಬೇಡಿಕೆಗೆ ಪಕ್ಷದ ವರಿಷ್ಠರು ಅಸ್ತು ಎಂದಿದ್ದಾರೆ. ನಾಲ್ಕೈದು ತಿಂಗಳಿಂದ ತಮ್ಮ ಬೇಡಿಕೆಯಿಂದ ಒಂಚೂರು ಹಿಂದಕ್ಕೆ ಸರಿಯದೆ ತಮ್ಮ ಪುತ್ರನ ನೇಮಕಕ್ಕೆ ವರಿಷ್ಠರಿಂದ ಕೊನೆಗೂ ಅಂಕಿತ ಹಾಕಿಸಿಕೊಂಡಿರುವ ಯಡಿಯೂರಪ್ಪ, ರಾಜ್ಯದ ಬಿಜೆಪಿ ಪಾಲಿಗೆ ತಾವೇ ‘ಸುಪ್ರೀಂ’ ಎಂದು ತೋರಿಸಿಕೊಟ್ಟಿದ್ದಾರೆ.

ತಂದೆಯಿಂದ ಬಂದಿರುವ ವರ್ಚಸ್ಸು, ಜನಪ್ರಿಯತೆ, ಹಣ ಖರ್ಚು ಮಾಡುವ ಹಾಗೂ ಪಕ್ಷವನ್ನು ಸಂಘಟಿಸುವ ಸಾಮರ್ಥ್ಯ ವಿಜಯೇಂದ್ರ ಅವರಿಗಿದೆ. ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷವನ್ನು ಕಟ್ಟಬಲ್ಲರು. ಮಗನಿಗೆ ಪಟ್ಟ ಕಟ್ಟಿರುವುದರಿಂದ ಯಡಿಯೂರಪ್ಪ ಅವರೂ ಪೂರ್ಣ ಮನಸ್ಸಿನಿಂದ ಕೆಲಸ ಮಾಡಬಲ್ಲರು ಎಂಬ ಲೆಕ್ಕಾಚಾರ ಹಾಕಿ ಈ ನೇಮಕ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಈ ಹಠಾತ್ ಬೆಳವಣಿಗೆಯಿಂದಾಗಿ, ಪಕ್ಷದ ‘ಸಾರಥಿ’ಯಾಗಲು ಆಸೆ ಕಂಗಳಿಂದ ಕಾಯುತ್ತಿದ್ದ ಕೇಸರಿ ಪಡೆಯ ಹಿರಿಯ ನಾಯಕರಿಗೆ ನಿರಾಸೆಯಾಗಿದೆ. ರಾಜ್ಯದ ಸಂಘಟನೆ, ನೇಮಕದಲ್ಲಿ ಮೇಲುಗೈ ಸಾಧಿಸಲು ಸದ್ದಿಲ್ಲದೆ ತಂತ್ರ ಹೆಣೆಯುತ್ತಿದ್ದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೂ ಹಿನ್ನಡೆಯಾಗಿದೆ.

ದೀಪಾವಳಿ ಸಮಯದಲ್ಲಿ ಬಿಜೆಪಿ ವರಿಷ್ಠರು ಬಿಎಸ್ವೈ ಕುಟುಂಬಕ್ಕೆ ಮತ್ತೊಮ್ಮೆ ಸಿಹಿ ಸುದ್ದಿ ನೀಡಿದ್ದಾರೆ. ದೀಪಾವಳಿ ಸಂದರ್ಭದಲ್ಲೇ 2014ರಲ್ಲಿ ಬಿಎಸ್ವೈ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯು ನಾವಿಕನಿಲ್ಲದ ದೋಣಿಯಂತಾಗಿತ್ತು. ನಳಿನ್ ಕುಮಾರ್ ಕಟೀಲು ಹೆಸರಿಗೆ ಮಾತ್ರ ಅಧ್ಯಕ್ಷರಾಗಿದ್ದರು. ವಿರೋಧ ಪಕ್ಷದ ನಾಯಕನ ಜತೆಗೆ ನೂತನ ಅಧ್ಯಕ್ಷರನ್ನು ನೇಮಿಸಲು ವರಿಷ್ಠರು ಒಲವು ತೋರಿದ್ದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಥವಾ ಸಿ.ಟಿ.ರವಿ ನೇಮಕವಾಗಬಹುದು ಎಂದು ಪಕ್ಷದ ಪಡಸಾಲೆಯಲ್ಲಿ ಚರ್ಚೆಗಳು ನಡೆದಿದ್ದವು. ನಡ್ಡಾ ಹಾಗೂ ಅಮಿತ್ ಶಾ ಅವರು ಯಡಿಯೂರಪ್ಪ ಅವರನ್ನು ಜೂನ್ ತಿಂಗಳಲ್ಲಿ ಕರೆಸಿಕೊಂಡು ಸಲಹೆ ಕೇಳಿದ್ದರು. ವಿಜಯೇಂದ್ರ ಅವರನ್ನೇ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಬಿಎಸ್ವೈ ಹಟ ಹಿಡಿದಿದ್ದರು. ಇದಕ್ಕೆ ವರಿಷ್ಠರು ಒಪ್ಪಿರಲಿಲ್ಲ. ನಡ್ಡಾ ಅವರನ್ನು ವಿಜಯೇಂದ್ರ ಅವರೂ ಭೇಟಿ ಮಾಡಿ ಲಾಬಿ ನಡೆಸಿದ್ದರು. ವರಿಷ್ಠರನ್ನು ಮತ್ತೊಮ್ಮೆ ಭೇಟಿ ಮಾಡಿದಾಗಲೂ ಬಿಎಸ್ವೈ ಇಟ್ಟಿದ್ದು ಒಂದೇ ಬೇಡಿಕೆ. ಮಗನಿಗೆ ಪಟ್ಟ ಕಟ್ಟಬೇಕು ಎಂಬುದು ಅವರ ಏಕೈಕ ಸಲಹೆ ಹಾಗೂ ಎಚ್ಚರಿಕೆ ಆಗಿತ್ತು. ಈ ನಡುವೆ, ಬಿಎಸ್ವೈ ಕುಟುಂಬದ ಜತೆಗೆ ಉತ್ತಮ ನಂಟು ಹೊಂದಿರುವ ಶೋಭಾ ಕರಂದ್ಲಾಜೆ ಅವರನ್ನು ನೇಮಿಸಲು ದೆಹಲಿ ನಾಯಕರು ಮನಸ್ಸು ಮಾಡಿದ್ದರು. ಆದರೆ, ರಾಜ್ಯ ರಾಜಕಾರಣಕ್ಕೆ ಮರಳಲು ಶೋಭಾ ಹಿಂದೇಟು ಹಾಕಿದ್ದರು.

ಯತ್ನಾಳಗೆ ಹಿನ್ನಡೆ: ಯಾರು ವಿಪಕ್ಷ ನಾಯಕ?

ಲಿಂಗಾಯತ ಸಮುದಾಯಕ್ಕೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಿರುವುದರಿಂದ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಶಾಸಕ ವಿ.ಸುನೀಲ್ ಕುಮಾರ್, ಆರಗ ಜ್ಞಾನೇಂದ್ರ, ಆರ್.ಅಶೋಕ ಹಾಗೂ ಸಿ.ಎನ್.ಅಶ್ವತ್ಥನಾರಾಯಣ ಹೆಸರು ಮುನ್ನೆಲೆಗೆ ಬಂದಿದೆ.

ಹಿಂದುಳಿದ ಅಥವಾ ಒಕ್ಕಲಿಗ ಸಮುದಾಯದ ನಾಯಕರನ್ನು ವಿಪಕ್ಷ ನಾಯಕರನ್ನಾಗಿ ನೇಮಿಸಬಹುದು ಎಂಬ ಚರ್ಚೆಗಳು ನಡೆದಿವೆ.

ವಿಜಯೇಂದ್ರ ನೇಮಕದಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಪಕ್ಷದಲ್ಲಿ ಭಾರಿ ಹಿನ್ನಡೆಯಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಯಡಿಯೂರಪ್ಪ ಅವರನ್ನು ಪ್ರಬಲವಾಗಿ ವಿರೋಧಿಸುತ್ತಿದ್ದ ಯತ್ನಾಳ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರದ ಆರೋಪವನ್ನೂ ಮಾಡಿದ್ದರು. ವಿಜಯೇಂದ್ರ ಅವರನ್ನು ಗುರಿ ಮಾಡಿ ನಿರಂತರ ಟೀಕೆ ಮಾಡಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ’ತ್ಯಾಗ‘ ಮಾಡಲು ಇದೂ ಒಂದು ಕಾರಣವಾಗಿತ್ತು. ಈ ವೇಳೆ, ಅಧ್ಯಕ್ಷ ಅಥವಾ ಪ್ರತಿಪಕ್ಷ ಸ್ಥಾನದ ನಿರೀಕ್ಷೆಯಲ್ಲಿದ್ದ ಯತ್ನಾಳರ ಆಸೆಗೆ ವರಿಷ್ಠರು ತಣ್ಣೀರು ಎರಚಿದ್ದಾರೆ.

ಕುಟುಂಬ ರಾಜಕಾರಣಕ್ಕೆ ಮಣೆ

ಕಾಂಗ್ರೆಸ್ ಹಾಗೂ ವಿಪಕ್ಷ ನಾಯಕರ ‘ಕುಟುಂಬ ರಾಜಕಾರಣ’ವನ್ನು ವ್ಯಂಗ್ಯವಾಗಿ ತಿವಿಯುತ್ತಿದ್ದ ಮೋದಿ ಹಾಗೂ ಅಮಿತ್ ಶಾ ಜೋಡಿ, ವಿಜಯೇಂದ್ರ ನೇಮಕಕ್ಕೆ ಸಮ್ಮತಿ ಸೂಚಿಸಿದ್ದಾರೆ.

ಯಡಿಯೂರಪ್ಪ ಅವರು ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯರಾಗಿದ್ದಾರೆ. ಅವರ ಹಿರಿಯ ಮಗ ಬಿ.ವೈ. ರಾಘವೇಂದ್ರ ಶಿವಮೊಗ್ಗ ಸಂಸದರಾಗಿದ್ದಾರೆ. ಎರಡನೇ ಮಗ ವಿಜಯೇಂದ್ರಗೆ ರಾಜ್ಯದಲ್ಲಿ ಮಹತ್ವದ ಹುದ್ದೆಯನ್ನೂ ಈಗ ನೀಡಿದ್ದಾರೆ. ಬಿಜೆಪಿಯೂ ಕುಟುಂಬ ರಾಜಕಾರಣವನ್ನೇ ನೆಚ್ಚಿಕೊಂಡಿರುವುದನ್ನು ಇದು ತೋರಿಸುತ್ತದೆ.

ವಿಜಯೇಂದ್ರ ಮುಂದಿರುವ ಸವಾಲುಗಳು

* ಕಾಂಗ್ರೆಸ್ನತ್ತ ಮುಖ ಮಾಡಿರುವ ಶಾಸಕರು, ಮಾಜಿ ಶಾಸಕರು ಹಾಗೂ ಮುಖಂಡರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವುದು.

* ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದು

* 2019ರಲ್ಲಿ ಗೆದ್ದ 25 ಸ್ಥಾನಗಳನ್ನು ಉಳಿಸಿಕೊಳ್ಳಲು ತಂತ್ರ ಹೆಣೆಯುವುದು

* ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ನಂತರ ಪಕ್ಷದ ರಾಜ್ಯ ಘಟಕ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಗೆ ನವ ಚೈತನ್ಯ ತುಂಬುವುದು.

* ಸೋಲಿನಿಂದ ದಿಕ್ಕೆಟ್ಟು ಕೂತಿರುವ ಕಾರ್ಯಕರ್ತರನ್ನು ಒಟ್ಟುಗೂಡಿಸಿ ಸಂಘಟನೆಗೆ ಅಣಿಗೊಳಿಸುವುದು.

ಸಂಘ ಹಾಗೂ ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಸರ್ವರ ನಿರೀಕ್ಷೆ, ಜನರ ಅಪೇಕ್ಷೆಗೆ ಪೂರಕವಾಗಿ ರಾಜ್ಯದಲ್ಲಿ ಪಕ್ಷಕ್ಕೆ ಹೊಸ ಚೈತನ್ಯ ತುಂಬಲು ಕಾರ್ಯಕರ್ತರೊಂದಿಗೆ ಕಾರ್ಯಕರ್ತನಾಗಿ ಅಹರ್ನಿಶಿ ದುಡಿಯುವ ಸಂಕಲ್ಪ ತೊಟ್ಟಿರುವೆ. ನಾಡಿನ ಜನರ ಆಶೀರ್ವಾದವೇ ಶ್ರೀರಕ್ಷೆ.
–ಬಿ.ವೈ.ವಿಜಯೇಂದ್ರ, ರಾಜ್ಯ ಘಟಕದ ನೂತನ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.