‘ಥೂತ್ ಆ ಸೆಕ್ಷನ್ನೇ ಸರಿ ಇಲ್ಲ ಕಂಡ್ರಿ. ಕೆಲವು ದರಿದ್ರ ದಂಡ ಪಿಂಡಗಳು ಅಲ್ಲಿ ಸೇರ್‌ಕಂಡಿದ್ದಾವೆ. ನಮ್ಮ ಕರ್ಮ ಅವು ಯಾಕಾದ್ರೂ ಕಾಲೇಜಿಗೆ ಸೇರಿದ್ದಾವೋ ಏನೋ ಒಂದೂ ನೆಟ್ಟಗೆ ಪಾಠ ಕೇಳಲ್ಲ. ಓದೋ ಆಸಕ್ತಿನೇ ಇಲ್ಲ ಕಂಡ್ರಿ ಅವಕ್ಕೆ. ಆ ಶನಿಗಳಿಗೆ ಪಾಠ ಮಾಡೋಕೆ ಒಂಚೂರು ಇಂಟರೆಸ್ಟೇ ಬರಲ್ಲಪ್ಪ. ಜೀವನದಲ್ಲಿ ಅವು ಉದ್ಧಾರವಾಗಲಿ ಅಂತ ಪಾಠ ಒದರಿದ್ರೆ ಕಿವಿ ಮೇಲೆ ಹಾಕ್ಕೊಳಲ್ಲ ಅಂತಾವೆ. ಎದೆ ಸೀಳಿದ್ರೂ ಅವಕ್ಕೆ ನಾಲ್ಕು ಅಕ್ಷರ ಇಲ್ಲ ಕಂಡ್ರಿ. ಅದ್ಹೆಂಗೆ ಎಸ್ಸೆಸೆಲ್ಸಿ ಪಾಸಾದವೋ, ಅದ್ಯಾವ ಪುಣ್ಯಾತ್ಮ ಇವಕ್ಕೆ ಮುಂದೆ ತಳ್ಳಿದನೋ, ಆ ದೇವರಿಗೇ ಗೊತ್ತು. ನನಗಂತೂ ಆ ಕಾಮರ್ಸ್ ಇಂಗ್ಲಿಷ್ ಮೀಡಿಯಂ ಸೆಕ್ಷನ್‌ಗೆ ಪಾಠ ಮಾಡೋದಂದ್ರೆ ಪ್ರಾಣಕ್ಕೆ ಬರುತ್ತೆ ನೋಡಿ’ ಎಂದು ಮುಖ ಕಿವುಚಿಕೊಂಡು ಸಂಕಟ ತೋಡಿಕೊಂಡರು ಸಹೋದ್ಯೋಗಿ ಒಬ್ಬರು. ಅಧ್ಯಾಪಕರು ಒಟ್ಟಾಗಿ ಕೂತಾಗ ಇಂಥ ಮಾತುಗಳನ್ನು ಸರ್ವೆಸಾಮಾನ್ಯವಾಗಿ ಆಡುತ್ತಾರೆ. ಒಳ್ಳೆ ಜನ, ಕೆಟ್ಟ ಜನ, ಒಳ್ಳೆ ಊರು, ಕೆಟ್ಟ ಊರು ಎಂದು ಜನ ಸುಲಭವಾಗಿ ತೀರ್ಮಾನಿಸುವಂತೆ ಕೆಲ ಸೆಕ್ಷನ್‌ಗಳ ವಿಷಯದಲ್ಲೂ ಅಧ್ಯಾಪಕರಾದ ನಾವು ಆಗಾಗ ರಾಗ ಎಳೆಯುತ್ತೇವೆ. ಅದೇನೋ ಗೊತ್ತಿಲ್ಲ, ಕಾಮರ್ಸ್ ಇಂಗ್ಲಿಷ್ ಮೀಡಿಯಂ ಹುಡುಗರೇ ಹೀಗೆ ಹೆಚ್ಚಾಗಿ ಪುಂಡಾಟಿಕೆ ಮಾಡುತ್ತವೆ. ಇದಕ್ಕಿರುವ ಕಾರಣಗಳನ್ನು ನಾವೂ ಸಂಶೋಧಿಸಬೇಕಾಗಿದೆ.

ನನ್ನ ಸಹೋದ್ಯೋಗಿಯ ಮಾತು ಕೇಳಿದ ನಾನು ‘ಮಕ್ಕಳನ್ನು ಶನಿಗಳು ಅನ್ನಬೇಡಿ ಸಾರ್. ಅವು ನಮಗೆ ಅನ್ನ ಕೊಡೋ ದೇವರುಗಳು. ಅವರು ಇರೋದ್ರಿಂದ ಅಲ್ಲವೇ ನಮ್ಮ ಬದುಕು ನಡೀತಿರೋದು. ತರಲೆ ಹುಡುಗ್ರು ಇರೋದು ಸಹಜ ಅಲ್ಲವೇ? ತುಡುಗುತನ ಈ ವಯಸ್ಸಲ್ಲಿ ಸ್ವಲ್ಪ ಜಾಸ್ತಿ ಇರುತ್ತೆ ನೋಡಿ ಅದಕ್ಕೆ ಹಿಂಗಾಡ್ತವೆ. ಅಂಥ ತರ್ಲೆಗಳು ಜೀವನದಲ್ಲಿ ಬಹಳ ಸಕ್ಸಸ್ ಆಗ್ತಾವೆ. ಅಂದ್ಹಂಗೆ, ಅದೇನೋ ಎದೆ ಸೀಳಿದ್ರೂ ಅವಕ್ಕೆ ನಾಲ್ಕು ಅಕ್ಷರ ಇಲ್ಲ ಅಂದ್ರಲ್ಲ ಏನ್ಸಾರ್ ಹಂಗಂದ್ರೆ. ಇದೇ ಮಾತನ್ನ ನಮ್ಮ ಮೇಷ್ಟ್ರೂ ನಮಗೆ ಬೈತಾ ಇದ್ರು. ಆ ನಾಲ್ಕು ಅಕ್ಷರ ನನ್ನ ಎದೆಯೊಳಗೆ ಇದಾವೋ ಇಲ್ವೋ? ನಾನೂ ಚೆಕ್ ಮಾಡ್ಕೊತೀನಿ’ ಎಂದು ತಮಾಷೆ ಮಾಡಿದೆ. ಆ ನಾಲ್ಕು ಅಕ್ಷರಗಳು ಅವರಿಗೂ ಗೊತ್ತಿರಲಿಲ್ಲ. ನನ್ನ ವಿದ್ಯಾರ್ಥಿಗಳಿಗೆ ಕೇಳಿದೆ. ಅವು ನಮ್ಮ ಎದೆಯೊಳಗೆ ಈಗಿರೋದು ಪ್ರೀತಿ, ಪ್ರೇಮ, ಎಂಬ ಬರೀ ಎರಡಕ್ಷರಗಳು ಸಾರ್ ಎಂದು ಹೇಳಿ ನುಣುಚಿಕೊಂಡವು.

ಇದನ್ನು ಇಷ್ಟಕ್ಕೇ ಬಿಡಬಾರದೆಂದು ತೀರ್ಮಾನಿಸಿ ನನ್ನ ಆಪ್ತಗೆಳೆಯ ಪ್ರಾಣೇಶ್‌ರನ್ನು ಹಿಡಿದು ವಿಚಾರಿಸಿದೆ. ಅವರು ‘ಶ,ಷ,ಸ,ಹ’ ಅನ್ನೋವೆ ಆ ಅಕ್ಷರಗಳು ಕಂಡ್ರಿ’ ಎಂದರು. ‘ಅದು ಹೇಗೆ ಬಿಡಿಸಿ ಹೇಳ್ರಿ ಸಾರ್’ ಎಂದು ಗಂಟುಬಿದ್ದೆ. ‘ಕನ್ನಡ ವರ್ಣ ಮಾಲೆಯನ್ನು ಸರಿಯಾಗಿ ಯಾರತ್ರನಾದ್ರೂ ಹೇಳಿಸಿ ನೋಡಿ. ಬಹಳಷ್ಟು ಜನ ‘ಶ,ಷ,ಸ,ಹ’ ಅಕ್ಷರಗಳು ಬಂದಾಗ ಅವುಗಳನ್ನು ಸರಿಯಾಗಿ ಉಚ್ಛರಿಸುವುದೇ ಇಲ್ಲ. ಅವಸರದಲ್ಲಿ ಅವನ್ನ ‘ಶೇಷಸಾಹ’ ಅಂತ ಹೇಳ್ತಾರೆ. ಬೇಕಾದ್ರೆ ನೀವೆ ಹೇಳಿ ನೋಡಿ’ ಎಂದರು.
ನಾನು ಒಮ್ಮೆ ಮನಸ್ಸಲ್ಲೇ ಹೇಳಿಕೊಂಡೆ. ನಾನು ಹೇಳಿಕೊಂಡಾಗಲೂ ಅದು ‘ಶೇಷಸಾಹ’ ಎಂದೇ ಮೂಡಿ ಬಂದಿತು. ‘ಎದೆಯೊಳಗೆ ಕನ್ನಡದ ನಾಲ್ಕು ಅಕ್ಷರ ನೆಟ್ಟಗೆ ಮಡಗಿಕೊಳ್ಳದೆ, ಇಷ್ಟು ವರ್ಷದಿಂದ ಕನ್ನಡ ಪಾಠ ಜಡೀತಿದ್ದೆನಲ್ಲಾ! ನಾನ್ಯಾವ ಸೀಮೆ ಮೇಷ್ಟ್ರಿರಬೇಕು’ ಎಂದು ನಾನೇ ನಾಚಿಕೊಂಡೆ. ಸದ್ಯ ಗೆಳೆಯ ಪ್ರಾಣೇಶ್ ನನ್ನ ಎದೆ ಸೀಳಲಿಲ್ಲ!

ಕಾಮರ್ಸ್ ಹುಡುಗರೇ ಯಾಕಂಗೆ ಹಾರಾಡ್ತಾರೆ ಸಾರ್. ಆರ್ಟ್ಸ್ ಹುಡುಗ್ರು, ಸೈನ್ಸ್ ಹುಡುಗ್ರು ಎಷ್ಟು ಸೈಲೆಂಟಾಗಿ ಇರ್ತಾವೆ ನೋಡ್ರಿ ಅಂದದಕ್ಕೆ ಕಾಮರ್ಸ್ ಮೇಷ್ಟ್ರು ಮೇಲೆ ಲೈಟಾಗಿ ಮುನಿಸಿದ್ದ ಅಧ್ಯಾಪಕರೊಬ್ಬರು ಹೀಗೊಂದು ಕಥೆ ಬಿಟ್ಟರು. ‘ಅದು ಯಾಕಂದ್ರೆ, ಆರ್ಟ್ಸ್ ಹುಡುಗ್ರು ಸ್ವಲ್ಪ ದಡ್ಡರಿರ್ತಾರೆ. ದೇವರು ಅವರಿಗೆ ಬುದ್ಧಿ ಸ್ವಲ್ಪ ಕಮ್ಮಿ ಕೊಟ್ಟಿರ್ತಾನೆ. ಹಿಂಗಾಗಿ ದೇವರು ಆದರ ಬದಲಿಗೆ ಅವರಿಗೆ ಒಳ್ಳೆ ಹಾರ್ಟ್ ಕೊಟ್ಟಿರ್ತಾನೆ. ಸೈನ್ಸ್‌ನವರಿಗೆ ದೇವ್ರು ಒಳ್ಳೆ ಬ್ರೇನ್ ಕೊಟ್ಟು, ಸಣ್ಣ ಹಾರ್ಟ್ ಕೊಟ್ಟಿರ್ತಾನೆ. ಅದೇ ಕಾಮರ್ಸ್ ಜನಕ್ಕೆ ವ್ಯವಹಾರ ಜ್ಞಾನ ಜಾಸ್ತಿ ನೋಡಿ. ಅದಕ್ಕೆ ಹಾರ್ಟ್ ಮತ್ತು ಬ್ರೇನ್ ಎರಡೂ ಕೊಡದೆ ಕಿತ್ತು ಇಟ್ಕೊಂಡಿರ್ತಾನೆ’ ಎಂದು ತಮ್ಮದೇ ಒಂದು ಕರ್ಮ ಸಿದ್ಧಾಂತವನ್ನು ಮಂಡಿಸಿದರು. ಈ ಮಾತಿನಿಂದ ಕೆರಳಿದ ಕಾಮರ್ಸ್ ಅಧ್ಯಾಪಕರು ‘ನೀವು ತಪ್ಪು ಹೇಳಿದ್ರಿ. ದೇವ್ರು ನಮಗೆ ಆರ್ಟ್, ಹಾರ್ಟ್, ಬ್ರೇನ್, ಬಿಸ್ನೆಸ್ ನಾಲ್ಕು ಕೊಟ್ಟಿರ್ತಾನೆ. ನಾವೇ ಎಲ್ಲರಿಗಿಂತ ಗ್ರೇಟ್’ ಎಂದು ಜಗಳಕ್ಕೆ ನಿಂತರು. ಮಾತಿಗೆ ಮಾತು ಬೆಳೆದು ಕೊನೆಗೆ ಎಲ್ಲರೂ ಸಮಾಧಾನವಾಗುವ ಹೊತ್ತಿಗೆ ಎಲ್ಲರೂ ಗ್ರೇಟ್ ಎಂಬ ಅಂತಿಮ ಸಮಾಧಾನದ ತೀರ್ಮಾನ ಹೊರಬಿತ್ತು. ಲೀಸರ್ ಟೈಮಿನಲ್ಲಿ ಇಂಥ ಎಷ್ಟೋ ಹಾಸ್ಯ ಚರ್ಚೆಗಳು ಮೇಷ್ಟ್ರುಗಳ ನಡುವೆ ಆಗಾಗ ನಡೀತಾನೆ ಇರ್ತಾವೆ.

ಕೆಲವು ಸಲ ನಮ್ಮ ಸಬೆಕ್ಟ್ ಮುಖ್ಯವೋ? ನಿಮ್ಮದು ಮುಖ್ಯವೋ ಎಂಬ ಚರ್ಚೆ ಕೆಲಸವಿಲ್ಲದ ಬಡಗಿಯ ಕಥೆಯಂತೆ ಒಮ್ಮೊಮ್ಮೆ ಶುರುವಾಗಿ ಬಿಡುತ್ತದೆ. ಎಲ್ಲರೂ ಮೊದಲು ಎಗರಿ ಬೀಳುವುದು ನಮ್ಮ ಕನ್ನಡದವರ ಮೇಲೇನೆ. ‘ಏನ್ರಿ ನಿಮ್ಮದು ಮಹಾ ಸಬ್ಜೆಕ್ಟಾ? ಕಮಲ ಬಂದಳು. ರವಿಯು ಅಜ್ಜನ ಮನೆಗೆ ಹೋದನು. ಚಂದ್ರ ಮೂಡಿದನು. ಸೂರ್ಯ ಮುಳುಗಿದನು. ಅವನ್ಯಾರೋ ಕವಿ ಹಿಂಗಂದ, ಇವನ್ಯಾರೋ ಕಥೆಗಾರ ಹಂಗಂದ, ಈ ಕವಿ ಹಿಂಗೆ ವರ್ಣನೆ ಮಾಡ್ದ. ಇಂಥವೇ ಅಡಗೂಲಜ್ಜಿ ಕಥೆ ಅಲ್ಲವೇನ್ರಿ? ಏನಿದೇರಿ ಅದ್ರಲ್ಲಿ? ನೀವು ಪಾಠ ಮಾಡದಿದ್ರೂ ಹುಡುಗರೇ ಓದ್ಕಂಡು ಪಾಸಾಗ್ತರಪ್ಪ’ ಎಂದು ರೇಗಿಸುವುದೂ ಉಂಟು.

ಅತ್ತ ಹಿಸ್ಟರಿಯವರಿಗೆ ‘ಅದೇನ್ರಿ ಹೇಳಿದ್ದೇ ಹೇಳ್ತೀರಿ. ಎಷ್ಟು ವರ್ಷದಿಂದ ಅದನ್ನೇ ಒದರ್್ತಾ ಇದ್ದೀರಲ್ರಿ. ಅದೇ ರಾಜ, ಅವೇ ಯುದ್ಧಗಳು. ಅವೇ ಕ್ರಾಂತಿಗಳು. ಬೇರೇನಾದ್ರೂ ನಮ್ ಥರ ಹೊಸ ಆರ್ಥಿಕ ನೀತಿ ಹೇಳ್ರಿ’ ಎಂದು ಜಗಳಕ್ಕೆ ಕರೆಯುವುದೂ ನಡೆಯುತ್ತದೆ. ಸಮಾಜಶಾಸ್ತ್ರದವರಿಗೆ ‘ಅದೇ ಕುಟುಂಬ, ಅವೇ ಹಳೆ ವಿವಾಹ ಪದ್ಧತಿ. ಇನ್ನೂ, ಎಲ್ಲಾ ಹಳೆ ಸರಕೇ ರುಬ್ತಾ ಇದ್ದೀರಲ್ರಿ. ಈ ಸಮಾಜದಲ್ಲಿ ಏನೇನೂ ಬದಲಾವಣೇನೇ ಆಗಿಲ್ವಾ? ಅದನ್ನು ಕಂಡು ಹಿಡಿದು ಹೇಳ್ರಿ’ ಎಂದು ಅವರನ್ನೂ ಮೈಮೇಲೆ ಎಳೆದುಕೊಳ್ಳುತ್ತಾರೆ. ಆಮೇಲೆ ರಾಜ್ಯಶಾಸ್ತ್ರದವರನ್ನೂ ಜರಿದಾಗ ಅವರೂ ನಮ್ಮ ಹುಸಿ ಜಗಳಕ್ಕೆ ಬಂದು ಸೇರುತ್ತಾರೆ. ಎಲ್ಲಾ ಆರ್ಟ್ಸ್ ಬಳಗದವರು ಈ ಆಂತರಿಕ ಕದನ ನಡೆಸುವಾಗ ಯಾರೂ ಅಪ್ಪಿತಪ್ಪಿಯೂ ಇಂಗ್ಲಿಷ್ ಬೋಧಿಸುವವರ ಸುದ್ದಿಗೆ ಹೋಗುವುದಿಲ್ಲ. ‘ಈ ಬ್ರಿಟಿಷರ ಸವಾಸ ಬ್ಯಾಡಪ್ಪ. ಅವರು ಬೈದರೂ ಅರ್ಥವಾಗಲ್ಲ’ ಎಂದು ಅವರನ್ನು ಕುಟುಕಿ ಕೈ ಬಿಡುತ್ತೇವೆ. ಇವೆಲ್ಲಾ ತಮಾಷೆಗೆ, ಒಂದಷ್ಟು ಹುಸಿ ಕೋಪಕ್ಕೆ, ಉಳಿದ ಸಣ್ಣಪುಟ್ಟ ಮನಸ್ತಾಪಗಳಿಗೆ ಬದಲಿಯಾಗಿ ನಡೆಯುವ ಒಣ ಜಗಳ.

ಇಂಥದ್ದೇ ಜಗಳ ವಿಜ್ಞಾನ ವಿಭಾಗದವರಿಗೂ ನಮಗೂ ಆಗಾಗ ಆಗುವುದುಂಟು. ನಮ್ಮ ಬೋಧನೆ ಬಲು ಕಷ್ಟ. ನಿಮ್ಮದು ಸುಲಭ ಎಂದು ಅವರು ಖ್ಯಾತೆ ತೆಗೆಯುವುದೂ ಉಂಟು. ಅದು ಸರಿ ಕೂಡ ಹೌದು. ವಿಜ್ಞಾನ ಕಲಿಕೆ ಕಷ್ಟ ಎಂದು ಕಲಿಯದ ನಾವಲ್ಲದೆ ಮತ್ಯಾರು ಸುಲಭವಾಗಿ ಹೇಳಲು ಸಾಧ್ಯ. ಬೋಧಿಸುವ ಕೆಲಸ ಮಾಡುವ ಎಲ್ಲರೂ ಅವರವರ ವಸ್ತು, ವಿಷಯಗಳು ಎಷ್ಟು ಮುಖ್ಯ ಎಂದು ಚೆನ್ನಾಗಿ ಹೇಳಬಲ್ಲರು. ತಾವು ಬೋಧಿಸುವ ವಿಷಯದ ಬಗ್ಗೆ ಹೆಮ್ಮೆ, ಅಭಿಮಾನ ಎಲ್ಲಾ ಅಧ್ಯಾಪಕರಿಗೂ ಇರಲೇಬೇಕು. ನಮ್ಮ ವೃತ್ತಿಯನ್ನು ನಾವು ಗೌರವಿಸಲೇಬೇಕು. ಹೂದೋಟದಲ್ಲಿ ಎಲ್ಲಾ ಬಗೆಯ ಬಣ್ಣದ ಹೂಗಳಿದ್ದರೇ ಅಂದವಲ್ಲವೇ?

ಒಮ್ಮೆ ನಮ್ಮ ತರಲೆ ಕಾಮರ್ಸ್ ಸೆಕ್ಷನ್ ಹುಡುಗರಿಗೆ ಮಧ್ಯಾಹ್ನ ಲೀಸರ್ ಬಿಟ್ಟಾಗ ಒಂದು ಘಟನೆ ನಡೆಯಿತು. ಹುಡುಗರು ನಮ್ಮ ಕಾಲೇಜಿನ ಮುಂದೆ ಹಾದು ಹೋದ ಹೈವೇ ರಸ್ತೆಯನ್ನು ದಾಟಿ ಆಚೆ ಕಡೆ ಐಸ್ ಕ್ಯಾಂಡಿ ತಿನ್ನಲು ಹೋಗುತ್ತಿದ್ದರು. ಅವರಲ್ಲಿ ಧನಂಜಯ ಎಂಬ ಹುಡುಗ ಎಲ್ಲರ ಜೊತೆ ತಮಾಷೆ ಮಾಡಿಕೊಂಡು ನಗುತ್ತಾ, ರಸ್ತೆ ದಾಟುತ್ತಿದ್ದ. ಅವನು ಕೈಯಲ್ಲಿ ಎರಡು ರೂಪಾಯಿ ಕಾಯಿನ್ ಹಿಡಿದು ಕೊಂಡಿದ್ದ. ಅದನ್ನು ಮೇಲೆ ತೂರಿ ಕೈಯಲ್ಲಿ ಕ್ಯಾಚ್ ಹಿಡಿಯುತ್ತಾ ಹುಡುಗಾಟದಲ್ಲಿ ಸಾಗುತ್ತಿದ್ದ. ಆ ಕಾಯಿನ್ ಅಕಾಸ್ಮಾತ್ ಆಗಿ ಕೈತಪ್ಪಿ ಜಾರಿ ರಸ್ತೆಯಲ್ಲಿ ಬಿದ್ದು ಹೋಯಿತು. ತನ್ನ ಹಿಂದೆ ಬಿದ್ದ ಕಾಯಿನ್ ಎತ್ತಿಕೊಳ್ಳಲು ಧನಂಜಯ ಅಚಾನಕ್ಕಾಗಿ ರಸ್ತೆಯ ಆ ಕಡೆಗೆ ಬಗ್ಗಿ ಬಿಟ್ಟ.

ಅತ್ತ ಕಡೆಯಿಂದ ವೇಗವಾಗಿ ಬೈಕ್ ಬರುತ್ತಿತ್ತು. ಓಡಿಸುತ್ತಿದ್ದವನು ಯೌವ್ವನ ತಲೆಗೆ ಹಚ್ಚಿಕೊಂಡಿದ್ದ ಹುಡುಗ. ಬೈಕ್ ಸವಾರನಿಗೆ ಅಂಥ ಅವಸರದ ಕೆಲಸ ಏನೂ ಇರಲಿಲ್ಲ. ಕಾಲೇಜು ಲೀಸರ್ ಬಿಟ್ಟ ಸಮಯದಲ್ಲಿ ರೋಡಿಗೆ ತಿಂಡಿ ತಿನ್ನಲು ಬರುವ ನಮ್ಮ ಕಾಲೇಜು ಹುಡುಗಿಯರಿಗೆ ಅವನ ಬೈಕಿನ ವೇಗ ತೋರಿಸಬೇಕಿತ್ತು. ಅದರ ಕರ್ಕಶ ಶಬ್ದದ ರುಚಿ ತಲುಪಿಸಬೇಕಿತ್ತು. ಹೀಗಾಗಿ ಬೈಕ್ ಹೀರೋ ವೇಗವಾಗಿ ಬಂದವನೆ ಬಗ್ಗಿದ್ದ ಧನಂಜಯನ ತಲೆಗೆ ಗುದ್ದಿ ಬಿಟ್ಟ. ಹಾರಿ ಬಿದ್ದ ಧನಂಜಯನಿಗೆ ಪ್ರಜ್ಞೆಯೇ ಇರಲಿಲ್ಲ.
ಅವನ ಜೊತೆಗಿದ್ದ; ನಾವು ಸದಾ ಬೈಯುತ್ತಿದ್ದ ಆ ತರಲೆ ಹುಡುಗರೇ ಅವನನ್ನು ಮಗುವಿನಂತೆ ಎತ್ತಿಕೊಂಡು ಆಸ್ಪತ್ರೆಗೆ ಒಯ್ದರು. ತಮ್ಮ ರಕ್ತ ನೀಡಿದರು. ತಮ್ಮ ಕೈಯಲ್ಲಿದ್ದ ಹಣವನ್ನು ಆಸ್ಪತ್ರೆಗೆ ಕಟ್ಟಿದರು. ಧನಂಜಯನ ತಾಯಿಗೆ ಸಮಾಧಾನ ಹೇಳಿದರು. ಊಟ, ನಿದ್ದೆ ಬಿಟ್ಟು ಗೆಳೆಯ ಧನಂಜಯನಿಗಾಗಿ ಪ್ರಾರ್ಥಿಸಿದರು. ಧನಂಜಯ ಬಡತನದ ಹುಡುಗ. ಅವನಿಗಾಗಿ ನಮ್ಮೆಲ್ಲರ ಜೊತೆ ಸೇರಿ ಹಣ ಸಂಗ್ರಹ ಮಾಡಿದರು. ಅವರ ತರಲೆ, ಕಿಡಿಗೇಡಿತನ, ಸ್ಟೈಲು, ಕೇಕೆ, ನಗು ಎಲ್ಲಾ ಮಾಯವಾಗಿದ್ದವು. ಅಷ್ಟೊಂದು ಕ್ಲಾಸಿನಲ್ಲಿ ಎಗರಾಡುತ್ತಿದ್ದ ಹುಡುಗರು ಇವರೇನಾ ಎಂದು ಸೋಜಿಗವಾಯಿತು.

ಈ ಘಟನೆ ಆದ ಮೇಲೆ ಕ್ಲಾಸಿನಲ್ಲಿ ಆ ಕಾಮರ್ಸ್ ಹುಡುಗರು ಮತ್ತೆ ಗಲಾಟೆಯನ್ನೇ ಮಾಡಲಿಲ್ಲ. ಮೊದಲ ಸಲಕ್ಕೆ ಜೀವನದ ಬರ್ಬರ ಕಷ್ಟ ನೋಡಿ ಕಂಗಾಲಾಗಿ ಹೋಗಿದ್ದರು. ಅವರೆಲ್ಲರ ಸತತ ಪರಿಶ್ರಮದಿಂದ ಇಪ್ಪತ್ತು ದಿನಗಳ ನಂತರ ಮರು ಜೀವ ಪಡೆದ ಧನಂಜಯ ಮತ್ತೆ ಕಾಲೇಜಿಗೆ ಬಂದ. ನಾವು ತುಡುಗುತನ ಮಾಡುವ ಮಕ್ಕಳನ್ನು ಎಷ್ಟೋ ಸಲ ದುಷ್ಟರಂತೆ ಕಾಣುತ್ತೇವೆ. ಅವರ ಎದೆಯೊಳಗೆ ಅವಿತಿರುವ ಪ್ರೀತಿ, ಕರುಣೆ, ಧೃಡತೆಗಳನ್ನು ಹತ್ತಿರ ನಿಂತು ಕಾಣದೆ ಹೋಗುತ್ತೇವೆ. ಜೀವನ ಎಂಬ ಕ್ಲಾಸ್ ಟೀಚರ್ ಅವರಿಗೂ ನಮಗೂ ಸರಿಯಾದ ಟೈಮಿನಲ್ಲಿ ಕಲಿಸುವ ಪಾಠವನ್ನು ಕಲಿಸಿಯೇ ಹೋಗುತ್ತಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.