ಗೋರಕ್ಷಕರು ನಡೆಸುತ್ತಿರುವ ಹಿಂಸಾಚಾರ, ಅಂದರೆ ಗೋಮಾಂಸದ ಹೆಸರಿನಲ್ಲಿ ಭಾರತೀಯರನ್ನು ಕೊಲ್ಲುತ್ತಿರುವುದು, ದೇಶದಲ್ಲಿ ಒಂದು ಸಮಸ್ಯೆಯಾಗಿದೆಯೇ? ಹೌದು ಎಂದಾದರೆ ಸಮಸ್ಯೆ ಬಗೆಹರಿಸಲು ಏನು ಮಾಡಬಹುದು? ಗೋರಕ್ಷಣೆಗೆ ಸಂಬಂಧಿಸಿದ ಶೇಕಡ 97ರಷ್ಟು ಹಿಂಸಾಚಾರಗಳು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ನಡೆದಿವೆ ಎಂದು ಲಾಭದ ಉದ್ದೇಶವಿಲ್ಲದ, ಅಂಕಿ-ಅಂಶಗಳನ್ನು ಆಧರಿಸಿ ವರದಿ ಬರೆಯುವ ‘ಇಂಡಿಯಾಸ್ಪೆಂಡ್’ ಅಂತರ್ಜಾಲ ಮಾಧ್ಯಮ ಹೇಳಿದೆ.

ಮಹಾರಾಷ್ಟ್ರ, ಹರಿಯಾಣ ಮತ್ತು ಇತರ ರಾಜ್ಯಗಳಲ್ಲಿನ ಬಿಜೆಪಿ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರ ಗೋಮಾಂಸ ನಿಷೇಧಕ್ಕೆ ಮುಂದಾದ ನಂತರ ಈ ಹತ್ಯೆಗಳು ಆರಂಭವಾದವು. ಈ ವಿಚಾರವಾಗಿ ಅಂಕಿ-ಅಂಶಗಳು ಸಾಕಷ್ಟು ಸ್ಪಷ್ಟವಾಗಿವೆ. ಇವುಗಳನ್ನು ತುಸು ವಿಸ್ತೃತವಾಗಿ ಪರಿಶೀಲಿಸಲು, ಕಳೆದ ಕೆಲವು ವಾರಗಳಲ್ಲಿ ದೇಶದಲ್ಲಿ ನಡೆದಿರುವ ಘಟನೆಗಳನ್ನು ಗಮನಿಸೋಣ.

ಜೂನ್ 29, ಜಾರ್ಖಂಡ್ : ರಾಂಚಿ ಸಮೀಪದ ರಾಮಗಡದಲ್ಲಿ ಅಲಿಮುದ್ದೀನ್ ಅನ್ಸಾರಿ ಎಂಬ ವ್ಯಾಪಾರಿಯನ್ನು ಉದ್ರಿಕ್ತ ಜನರ ಗುಂಪೊಂದು ಹತ್ಯೆ ಮಾಡಿತು. ತಾವು ಹಿಂಸೆಯನ್ನು ವಿರೋಧಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಗಂಟೆಗಳ ನಂತರ ಈ ಹತ್ಯೆ ನಡೆಯಿತು.

ಜೂನ್ 27, ಜಾರ್ಖಂಡ್ : ಪಶುಸಂಗೋಪನೆಯಲ್ಲಿ ತೊಡಗಿದ್ದ ರೈತ ಉಸ್ಮಾನ್ ಅನ್ಸಾರಿ ಅವರ ಮನೆಯ ಹೊರಗೆ ಸತ್ತ ದನ ಸಿಕ್ಕಿತ್ತು ಎನ್ನಲಾದ ನಂತರ, ಅಂದಾಜು ನೂರು ಜನರ ಗುಂಪು ಅನ್ಸಾರಿ ಮೇಲೆ ಹಲ್ಲೆ ನಡೆಸಿತು. ಅವರ ಮನೆಯ ಒಂದು ಭಾಗಕ್ಕೆ ಬೆಂಕಿ ಹಚ್ಚಿತು. ದಾಳಿ ನಡೆಸಿದವರು ತಮ್ಮ ಮೇಲೆ ಕಲ್ಲು ತೂರಿದ್ದಾರೆ, ಐವತ್ತು ಜನ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಪೊಲೀಸರು, ಪತ್ರಕರ್ತರ ಬಳಿ ಹೇಳಿದ್ದಾರೆ.

ಜೂನ್ 24, ಪಶ್ಚಿಮ ಬಂಗಾಳ : ರಾಜ್ಯದ ಉತ್ತರ ದಿನಾಜ್‌ಪುರದಲ್ಲಿ ಗೋವು ಕಳ್ಳತನ ಮಾಡಿದ್ದಾರೆ ಎಂದು ಉದ್ರಿಕ್ತರ ಗುಂಪೊಂದು ನಾಸಿರ್ ಉಲ್ ಹಕ್, ಮೊಹಮ್ಮದ್ ಸಮೀರುದ್ದೀನ್ ಮತ್ತು ಮೊಹಮ್ಮದ್ ನಾಸೀರ್ ಎನ್ನುವ ಮೂವರು ಕಟ್ಟಡ ಕಾರ್ಮಿಕರನ್ನು ಹೊಡೆದು ಕೊಂದಿದೆ. ಈ ಹತ್ಯೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ, ಮೂವರನ್ನು ಬಂಧಿಸಲಾಗಿದೆ.

ಜೂನ್ 22, ಹರಿಯಾಣ : ಹರಿಯಾಣದಲ್ಲಿ ರೈಲೊಂದರಲ್ಲಿ ಜುನೈದ್ ಖಾನ್ ಎನ್ನುವ 15 ವರ್ಷ ವಯಸ್ಸಿನ ಹುಡುಗನನ್ನು ಚಾಕುವಿನಿಂದ ಇರಿದು ಕೊಲ್ಲಲಾಯಿತು. ಚಾಕುವಿನಿಂದ ಇರಿಯುವ ಮೊದಲು ಜುನೈದ್‌ನನ್ನು ‘ಗೋಮಾಂಸ ತಿನ್ನುವವ’ ಎಂದು ನಿಂದಿಸಲಾಯಿತು, ಆತ ಧರಿಸಿದ್ದ ಟೋಪಿಯನ್ನು ತೆಗೆದು ಎಸೆಯಲಾಯಿತು. ಆತನ ಸಹೋದರನಿಗೆ ಗಾಯಗಳಾಗಿವೆ. ದಾಳಿಯಿಂದ ಬಚಾವಾದವರ ಹೇಳಿಕೆಗಳು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ದಾಳಿಕೋರರ ಸಂಖ್ಯೆ ಕನಿಷ್ಠ 20 ಎಂದು ಹೇಳಲಾಗಿದೆ. ರಾಜ್ಯದ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.

ಮೇ 26, ಮಹಾರಾಷ್ಟ್ರ : ಗೋಮಾಂಸ ಹೊಂದಿದ್ದ ಅನುಮಾನದ ಅಡಿ ಗೋರಕ್ಷಕ ದಳದವರು ಇಬ್ಬರು ಮುಸ್ಲಿಂ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಮುಸ್ಲಿಮರು ಮಾಂಸದ ವ್ಯಾಪಾರಿಗಳು. ಅವರ ಮೇಲೆ ನಡೆದ ಹಲ್ಲೆಯ ವಿಡಿಯೊ ತುಣುಕಿನ ಅನ್ವಯ, ಗುಂಪು ಈ ಇಬ್ಬರ ಕೆನ್ನೆಗೆ ಬಾರಿಸಿ, ನಿಂದಿಸಿದೆ. ನಂತರ ‘ಜೈ ಶ್ರೀರಾಂ’ ಎಂದು ಹೇಳಲು ಒತ್ತಾಯಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಜನರನ್ನು ಬಂಧಿಸಲಾಗಿದೆ. ಆದರೆ, ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ’ ಆರೋಪವನ್ನು ಮುಸ್ಲಿಂ ವ್ಯಾಪಾರಿಗಳಿಬ್ಬರ ಮೇಲೆ ಹೊರಿಸಲಾಗಿದೆ.

ಏಪ್ರಿಲ್ 30, ಅಸ್ಸಾಂ : ಇಲ್ಲಿನ ನಾಗಾಂವ್‌ನಲ್ಲಿ ದನ ಕಳ್ಳತನ ನಡೆಸಿದ ಅನುಮಾನದ ಅಡಿ ಅಬು ಹನೀಫಾ ಮತ್ತು ರಿಯಾಜುದ್ದೀನ್ ಅಲಿ ಎನ್ನುವವರನ್ನು ಗುಂಪೊಂದು ಹತ್ಯೆ ಮಾಡಿದೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಯಾರನ್ನೂ ಬಂಧಿಸಿಲ್ಲ.

ಏಪ್ರಿಲ್ 1, ರಾಜಸ್ಥಾನ : ಇಲ್ಲಿನ ಅಲ್ವಾರ್‌ನ ಹೆದ್ದಾರಿಯ ಬಳಿ ರೈತ ಪೆಹ್ಲು ಖಾನ್ ಮತ್ತು ಇತರ ನಾಲ್ವರು ಮುಸ್ಲಿಮರ ಮೇಲೆ ಉದ್ರಿಕ್ತ ಗುಂಪೊಂದು ಹಲ್ಲೆ ನಡೆಸಿದೆ. ಇದಾದ ಎರಡು ದಿನಗಳ ನಂತರ ಖಾನ್ ಮೃತಪಟ್ಟಿದ್ದಾರೆ.

ಖಾನ್ ಮತ್ತು ಇತರ ನಾಲ್ವರು ದನಗಳ ಕಳ್ಳಸಾಗಣೆದಾರರು ಎಂದು ಗುಂಪು ಸುಳ್ಳು ಆರೋಪ ಹೊರಿಸಿತ್ತು. ಖಾನ್ ಹತ್ಯೆಯ ನಂತರ ಹೇಳಿಕೆ ನೀಡಿದ ರಾಜಸ್ಥಾನದ ಗೃಹ ಸಚಿವರು, ಖಾನ್ ಅವರು ದನಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಕುಟುಂಬಕ್ಕೆ ಸೇರಿದವರು ಎಂದರು - ಕೊಲೆಯನ್ನು ಸಮರ್ಥಿಸುವ ರೀತಿಯಲ್ಲಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.

ಜಾರ್ಖಂಡ್‌ನಲ್ಲಿ ಜೂನ್ 27ರಂದು ನಡೆದ ಹತ್ಯೆಯ ನಂತರ ಜನ ದೇಶದಾದ್ಯಂತ ಪ್ರತಿಭಟನೆ ನಡೆಸಿದರು. ಈ ಹತ್ಯೆಗಳು ಸರ್ಕಾರದ ರಕ್ಷಣೆಯಲ್ಲೇ ನಡೆಯುತ್ತಿವೆ, ಇವುಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಇದಾದ ಎರಡು ದಿನಗಳ ನಂತರ ಟ್ವೀಟ್ ಮಾಡಿದ ಮೋದಿ ಅವರು; ‘ಭಾರತದಲ್ಲಿ ಹಿಂಸೆಗೆ ಜಾಗವಿಲ್ಲ. ಗಾಂಧೀಜಿಯವರಲ್ಲಿ ಹೆಮ್ಮೆ ಮೂಡಿಸುವಂಥ ಭಾರತವನ್ನು ಸೃಷ್ಟಿಸೋಣ’ ಎಂದರು. 2 ನಿಮಿಷ, 16 ಸೆಕೆಂಡ್‌ಗಳಷ್ಟಿರುವ ವಿಡಿಯೊವೊಂದನ್ನು ಈ ಟ್ವೀಟ್ ಜೊತೆಯೇ ಹಾಕಲಾಗಿದೆ. ಇದರಲ್ಲಿ ಮೋದಿ ಅವರು ಜೂನ್ 29ರಂದು ಗುಜರಾತಿನಲ್ಲಿ ಮಾಡಿದ ಭಾಷಣ ಇದೆ.

ಈ ಭಾಷಣದಲ್ಲಿ ಅವರು ಗೋಹತ್ಯೆಯ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ 1 ನಿಮಿಷ 45 ಸೆಕೆಂಡುಗಳ ಕಾಲ ಮೋದಿ ಅವರು ಗೋರಕ್ಷಣೆಯನ್ನು ಹೊಗಳಿದ್ದಾರೆ. ಕೊನೆಯ ಮೂವತ್ತು ಸೆಕೆಂಡುಗಳ ಅವಧಿಯಲ್ಲಿ ಅವರು ಹಿಂಸೆಯ ಬಗ್ಗೆ ಮಾತನಾಡಿದ್ದಾರೆ, ಹತ್ಯೆ ಮಾಡುವುದನ್ನು ಒಪ್ಪಲಾಗದು ಎಂದಷ್ಟೇ ಹೇಳಿದ್ದಾರೆ. ಅದು ನಿಜ. ಆದರೆ ಈ ಮಾತು ಹೇಳಲು ನಮಗೆ ಪ್ರಧಾನಿಯವರೇ ಆಗಬೇಕೆಂದಿಲ್ಲ. ಕೊಲೆಗಳು ಏಕೆ ಆಗುತ್ತಿವೆ ಎಂದು ಅವರು ನಮಗೆ ಹೇಳಬೇಕು, ಅವುಗಳನ್ನು ತಡೆಯಲು ಏನು ಮಾಡಲಾಗುವುದು ಎಂಬುದನ್ನೂ ಅವರು ಹೇಳಬೇಕು.

ಆ ಎರಡು ನಿಮಿಷ, 16 ಸೆಕೆಂಡುಗಳ ಭಾಷಣದಲ್ಲಿ ಆದ್ಯತೆ ನೀಡಿದ್ದು ಯಾವುದಕ್ಕೆ ಎಂಬುದು ಸಮಸ್ಯೆ ಎಲ್ಲಿದೆ ಎನ್ನುವುದನ್ನು ತೆರೆದಿಡಬಲ್ಲದು. ಮೋದಿ ಮತ್ತು ಬಿಜೆಪಿ ಗೋರಕ್ಷಣೆಯ ಬಗ್ಗೆ ಒತ್ತು ನೀಡುವಷ್ಟು ಕಾಲ ಭಾರತದಲ್ಲಿ ಗೋರಕ್ಷಕರು ಸೃಷ್ಟಿಯಾಗುತ್ತಿರುತ್ತಾರೆ. ಇಷ್ಟನ್ನು ಅರ್ಥ ಮಾಡಿಕೊಳ್ಳಲು ಕಷ್ಟಪಡಬೇಕಾಗಿಲ್ಲ. ಇಲ್ಲಿ ಇನ್ನೊಂದು ಸಮಸ್ಯೆ ಇದೆ. ಅದು; ತಮ್ಮ ಕೃತ್ಯಗಳಿಗೆ ಕೋಮುವಾದಿ ದೃಷ್ಟಿಕೋನವೊಂದು ಇದೆ ಎಂಬುದನ್ನು ಮೋದಿ ಮತ್ತು ಬಿಜೆಪಿ ಒಪ್ಪಿಕೊಳ್ಳದಿರುವುದು. ಮಾಂಸ ಮತ್ತು ಚರ್ಮೋದ್ಯೋಗವು ದಲಿತರು ಹಾಗೂ ಮುಸ್ಲಿಮರ ಉದ್ಯೋಗ. ಗೋರಕ್ಷೆಯ ಹೆಸರಿನಲ್ಲಿ ತೊಂದರೆಗೆ ಒಳಗಾಗಿರುವ ಸಮುದಾಯಗಳು ಇವು. ಇದನ್ನು ನಿರಾಕರಿಸುವುದು ಆಷಾಢಭೂತಿತನವಾಗುತ್ತದೆ.

ಜಾರ್ಖಂಡ್‌ನಲ್ಲಿ ನಡೆದ ಹತ್ಯೆಯ ನಂತರ ಹೇಳಿಕೆ ನೀಡಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಇದನ್ನು ಧರ್ಮದ ಜೊತೆ ಸಮೀಕರಿಸಬಾರದು ಎಂದಿದ್ದಾರೆ. ಆದರೆ ನಾಯ್ಡು ಹೇಳಿದ್ದು ತಪ್ಪು ಎಂಬುದನ್ನು ಅಂಕಿ-ಅಂಶಗಳೇ ಹೇಳುತ್ತಿವೆ. ಗೋರಕ್ಷಾ ಕಾರ್ಯಕ್ರಮದ ಅಡಿ ಮುಸ್ಲಿಮರ ಮೇಲೆ ದಾಳಿಯಾಗುತ್ತಿದ್ದರೆ, ಅವರನ್ನು ಮಾತ್ರ ಹತ್ಯೆ ಮಾಡಲಾಗುತ್ತಿದೆ ಎಂದಾದರೆ ಅದು ಧರ್ಮದ ಜೊತೆ ಸಂಬಂಧ ಹೊಂದಿದೆ ಎಂದರ್ಥ.

ಈ ವಿಚಾರದಲ್ಲಿ ಕಾಂಗ್ರೆಸ್ಸಿಗೆ ತನ್ನದೇ ಆದ ನಿಲುವು ಇಲ್ಲ. ಪಕ್ಷವು ಗುಜರಾತಿನಲ್ಲಿ ಗೋರಕ್ಷಣೆಯ ಪರವಾಗಿ ಮಾತನಾಡಿದೆ. ಪಕ್ಷದ ಕೆಲವರು ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಮೋದಿ ಅವರ ಭಾಷಣದ ನಂತರ ಪ್ರತಿಕ್ರಿಯೆ ನೀಡಿರುವ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರು, ‘ಗೋರಕ್ಷಕರಿಗೆ ಪ್ರಧಾನಿಯವರು ಎಚ್ಚರಿಕೆ ನೀಡಿದ ದಿನವೇ ಜಾರ್ಖಂಡ್‌ನಲ್ಲಿ ಮೊಹಮ್ಮದ್ ಅಲೀಮುದ್ದೀನ್‌ನನ್ನು ಗುಂಪೊಂದು ಹತ್ಯೆ ಮಾಡಿದೆ. ಹೊಡೆದು ಸಾಯಿಸುವ ಇವರಿಗೆ ಪ್ರಧಾನಿಯವರ ಬಗ್ಗೆ ಭಯವಿಲ್ಲ ಎಂಬುದು ಸ್ಪಷ್ಟ’ ಎಂದು ಹೇಳಿದ್ದಾರೆ. ‘

ಗೋರಕ್ಷಕರಿಗೆ ಹಾಗೂ ಹೊಡೆದು ಸಾಯಿಸುವವರಿಗೆ ಪ್ರಧಾನಿಯವರು ಎಚ್ಚರಿಕೆ ನೀಡಿದರು. ಒಳ್ಳೆಯದು. ತಮ್ಮ ಆದೇಶವನ್ನು ಹೇಗೆ ಜಾರಿಗೆ ತರಲಾಗುವುದು ಎಂಬುದನ್ನೂ ಅವರು ದೇಶಕ್ಕೆ ತಿಳಿಸಲಿ’ ಎಂದೂ ಚಿದಂಬರಂ ಹೇಳಿದ್ದಾರೆ.

2016ರಲ್ಲಿ 25 ದಾಳಿಗಳು ನಡೆದಿವೆ ಎಂದು ಇಂಡಿಯಾಸ್ಪೆಂಡ್ ಹೇಳಿದೆ. 2017ರಲ್ಲಿ ಆರೇ ತಿಂಗಳ ಅವಧಿಯಲ್ಲಿ 21 ದಾಳಿಗಳು ನಡೆದಿವೆ. ಸಮಸ್ಯೆ ಉಲ್ಬಣಿಸುತ್ತಿದೆ. ಮೋದಿ ಅವರು ಇದನ್ನು ಹೇಗೆ ಕೊನೆಗಾಣಿಸುತ್ತಾರೆ ಎಂಬುದನ್ನು ನೋಡಲು ಇಡೀ ವಿಶ್ವ ಕಾಯುತ್ತಿದೆ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.