ಸತ್ಯಕ್ಕೆ ‘ಅಚ್ಛೇ ದಿನ್’ ಯಾವತ್ತೂ ಇರುವುದಿಲ್ಲ. ‘ಸತ್ಯಮೇವ ಜಯತೇ’ ಎನ್ನುವುದು ಎಂದಿದ್ದರೂ ಅರ್ಧ ಸತ್ಯ. ಆದ್ದರಿಂದ ‘ಸತ್ಯವೇ ಗೆಲ್ಲುತ್ತದೆ’ ಎಂಬ ಘೋಷಣೆ ಇದ್ದರೂ ‘ನ ಬ್ರೂಯಾತ್ ಸತ್ಯಂ ಅಪ್ರಿಯಂ– ಹುಷಾರು, ಬಾಯಿ ಮುಚ್ಚಿಕೊಂಡಿರು, ಅಪ್ರಿಯವಾದ ಸತ್ಯವನ್ನು ಹೇಳಲೇಬೇಡ’ ಎಂದು ನಮ್ಮ ಪೂರ್ವಿಕರು ಕಟ್ಟೆಚ್ಚರಿಕೆ ಕೊಟ್ಟಿದ್ದಾರೆ. ಆದರೆ ಪೆರುಮಾಳ್ ಮುರುಗನ್ ಎಂಬ ನಮ್ಮ ಕಾಲದ ಲೇಖಕ ಯಾಕೋ ಇದನ್ನು ಗಮನಿಸಲು ಮರೆತುಬಿಟ್ಟರು.

ಒಂದು ಅರ್ಧನಾರೀಶ್ವರ ದೇವಾಲಯದ ಪೂರ್ಣಸತ್ಯವನ್ನು ಕುರಿತು ತಮ್ಮ ಕಾದಂಬರಿಯಲ್ಲಿ ಬರೆದುಬಿಟ್ಟರು. ಕೆಲವು ಮನುಷ್ಯರನ್ನು ಮಾತ್ರ ಮುಟ್ಟಿಸಿಕೊಳ್ಳದ ಅಸ್ಪೃಶ್ಯತೆ, ಭಕ್ತಾದಿಗಳ ಎದುರಿಗೆ ಹೆಂಗಸರೇ ಮಾಡುವ ಬೆತ್ತಲೆ ಸೇವೆ, ಮಕ್ಕಳಾಗದಿದ್ದರೆ ದೇವರ ಮಕ್ಕಳನ್ನು ಪಡೆಯುವ ಪದ್ಧತಿ ಇತ್ಯಾದಿ ಇನ್ನೂ ಏನೇನೋ ಹತ್ತಾರು ವಿಶೇಷ ಸಂಗತಿಗಳು ನಮ್ಮ ಸಂಸ್ಕೃತಿಯಲ್ಲಿ ಇರಬಹುದು.

ಇವುಗಳು ಸತ್ಯಸ್ಯಸತ್ಯಗಳೇ ಆಗಿದ್ದರೂ ಇವುಗಳ ಬಗ್ಗೆ ಯಾರೂ ಮಾತನಾಡಬಾರದು ಎನ್ನುವ ‘ಸಂಸ್ಕೃತಿ ಸಂರಕ್ಷಣೆ’ಯ ಮುಖ್ಯ ಪಾಠವನ್ನು, ಆ ಪ್ರಾಧ್ಯಾಪಕ ಮರೆತುಬಿಡುವುದೇ? ಛೇ, ಅವರು ಮರೆತು ಮಾಡಿದ ತಪ್ಪಿನಿಂದಾಗಿ ಇತಿಹಾಸ ಮರುಕಳಿಸಿತು.
‘ಇತಿಹಾಸ ಮರುಕಳಿಸುವುದಿಲ್ಲ’ ಎನ್ನುವ ಮಾತೂ ಅರ್ಧ ಸತ್ಯವೇನೋ. ಇತಿಹಾಸ ಕೆಲವು ವಿಚಾರಗಳಲ್ಲಾದರೂ ಮರುಕಳಿಸುತ್ತದೆ ಅಥವಾ ಇತಿಹಾಸದ ಕೆಲವು ವಿಚಾರಗಳಾದರೂ ಮರುಕಳಿಸುತ್ತವೆ.

ವಿಚಾರಗಳು ಎಂದಿಗೂ ಮನುಷ್ಯರಿಗೇ ಸಂಬಂಧಿಸಿರುವುದರಿಂದ ಹಾಗಾಗುವುದು ಅನಿವಾರ್ಯ. ಜಗತ್ತಿನ ಇತಿಹಾಸದ ಒಂದು ಘಟನೆಯನ್ನು ಸುಮ್ಮನೆ ನೆನಪಿಸಿಕೊಳ್ಳೋಣ. ಕ್ರಿಸ್ತಪೂರ್ವ 48 ರಲ್ಲಿ, ಜೂಲಿಯಸ್ ಸೀಸರ್ ಅನೇಕ ಉದ್ದೇಶಗಳಿಗಾಗಿ ರೋಮ್ನಿಂದ ಅಲೆಗ್ಸಾಂಡ್ರಿಯಕ್ಕೆ ಬಂದಿದ್ದ. ಅವನ ಪಡೆಗಳಲ್ಲಿದ್ದ ಸೈನಿಕರು ಅಲ್ಲಿ ಬಂದರಿನಲ್ಲಿ ನಿಂತಿದ್ದ ಹಡಗುಗಳು, ದವಸಧಾನ್ಯ ತುಂಬಿದ್ದ ಉಗ್ರಾಣಗಳಿಗೆ ಬೆಂಕಿ ಹಚ್ಚುವುದರ ಜೊತೆ, ಲಕ್ಷಾಂತರ (ಅಬ್ಬಾ!) ಕೃತಿಗಳಿದ್ದ ಗ್ರಂಥಭಂಡಾರವನ್ನೂ ಸುಟ್ಟುಹಾಕಿದರಂತೆ.

ಮಹಾಕವಿ ಹೋಮರನಿಗೂ ಹಿಂದಿನ ಕಾಲದ ಅಮೂಲ್ಯ ಜ್ಞಾನ ಭಂಡಾರ ಅದರಲ್ಲಿ ತುಂಬಿತ್ತಂತೆ. ಮುಂದೊಂದು ದಿನ ಸೀಸರ್ ‘ಅದೇನೋ ಆ ಗ್ರಂಥಭಂಡಾರ ಅಕಸ್ಮಾತ್ ಸುಟ್ಟುಹೋಯಿತು ಬಿಡಿ’ ಅಂದನಂತೆ. ಸೀಸರ್ನಂಥ ಮಹಾ ಪರಾಕ್ರಮಿ, ಆ ಬಡಪಾಯಿ ಪ್ರಾಚೀನ ಗ್ರಂಥಗಳಿಗೇಕೆ ಹೆದರಿಕೊಂಡು ಬೆಂಕಿ ಹಚ್ಚಿಸಿದ? ಕೋಟೆಗಳು, ಅರಮನೆಗಳು ಇತ್ಯಾದಿಗಳನ್ನು ಕೆಡವಿದರೆ ಅಲ್ಲಿನವರು ಕೂಡಲೇ ಮತ್ತೆ ಕಟ್ಟಿಬಿಡಬಹುದು. ಆದರೆ ಜ್ಞಾನದ ಮೂಲಗಳನ್ನು ನಾಶ ಮಾಡಿದರೆ ಮುಂದಿನ ಕೆಲವಾದರೂ ಪೀಳಿಗೆಗಳನ್ನು ಬೆದರಿಸಿ ಸುಮ್ಮನಿರಿಸಬಹುದು ಎನ್ನುವುದು ಸೀಸರ್ಗಂತೂ ಚೆನ್ನಾಗಿ ತಿಳಿದಿತ್ತು.

ಆಳುವ ಜನ– ಆಳುವ ಮನ ಸಾಮಾನ್ಯವಾಗಿ ಜ್ಞಾನಕ್ಕೆ, ವಿಜ್ಞಾನಕ್ಕೆ, ವಿಚಾರಕ್ಕೆ, ಸತ್ಯಕ್ಕೆ, ತರ್ಕಕ್ಕೆ ಹೆದರುವುದರಿಂದ ಅವುಗಳನ್ನು ನಾಶ ಮಾಡುವುದು ಖಚಿತ; ಅವುಗಳ ಪ್ರತಿಪಾದನೆ ಮಾಡುವವರನ್ನು ಹೆದರಿಸುವುದು ಖಚಿತ. ಜಗತ್ತಿನ ಇತಿಹಾಸದ ಪ್ರತೀ ಅಧ್ಯಾಯದಲ್ಲೂ ಇಂಥ ಉದಾಹರಣೆಗಳು ಕಿಕ್ಕಿರಿದು ತುಂಬಿವೆ. ಹಾಗಾಗಿ ಸೀಸರ್ ಮಹಾಶಯ ಹಚ್ಚಿಸಿದ ಬೆಂಕಿ ಈಗಲೂ ಉರಿಯುತ್ತಿದೆ; ಒಂದಲ್ಲಾ ಒಂದು ಕಡೆ ಸತ್ಯವನ್ನು ಸುಡುತ್ತಿದೆ.

ಸೀಸರ್ ಹಿಂದುಮುಂದಿಲ್ಲದ ಅನಾಥನಲ್ಲ. ಅಂಥ ಮಹಾಪ್ರಭುಗಳ ಜೊತೆ ಧರ್ಮಾಧಿಕಾರ ಎನ್ನುವುದು ಕೆಲವೊಮ್ಮೆ ಅಣ್ಣನಾಗಿ ಕೆಲವೊಮ್ಮೆ ತಮ್ಮನಾಗಿ ಸದಾ ಜೊತೆಗಿರುತ್ತದೆ. ನಿರಂತರವಾಗಿ ಯುದ್ಧಗಳನ್ನು ಮಾಡುತ್ತಿದ್ದ ರಾಜರ ಆಶ್ರಯದಲ್ಲೇ ಧರ್ಮಗಳು ಬೆಳೆದು ಅಹಿಂಸೆಯನ್ನು ಬೋಧಿಸಿವೆ. ಇನ್ನೊಂದು ಧರ್ಮಕ್ಕೆ ಸೇರಿದವರನ್ನು ತಮ್ಮ ಉದ್ದೇಶಗಳಿಗೆ ಬಾಗಿಸಿಕೊಳ್ಳಲು ಅವರ ಧರ್ಮಗ್ರಂಥವನ್ನು ತಮ್ಮ ಸಿಂಹಾಸನದ ಪಕ್ಕದಲ್ಲಿ ಇಟ್ಟುಕೊಂಡ ಸಾಮ್ರಾಟರ ‘ಧರ್ಮರಾಜಕಾರಣ’ ವನ್ನು ಅರಗಿಸಿಕೊಂಡ ಸುವರ್ಣಯುಗವೂ ನಮ್ಮಲ್ಲಿದೆ.

ಸ್ವಂತ ಹಿತಾಸಕ್ತಿಗಳ ಪ್ರಶ್ನೆ ಬಂದಾಗ, ಪ್ರಭುತ್ವ ಮತ್ತು ಧರ್ಮ ಪರಸ್ಪರ ಭೀಕರವಾಗಿ ಕಿತ್ತಾಡಿರಬಹುದು. ಆದರೆ ಸಾಮಾನ್ಯವಾಗಿ ಪ್ರಭುತ್ವದ ಪ್ರತಿಯೊಂದು ನಡೆಗೂ ರಾಜಕೀಯ ಇಲ್ಲಾಂದರೆ ಧಾರ್ಮಿಕ ಹಿನ್ನೆಲೆ ಇದ್ದೇ ಇರುತ್ತದೆ ಮತ್ತು ರಾಜಕೀಯ ಕಾರಣಕ್ಕೆ ಧರ್ಮದ ಬಳಕೆ ಸತತವಾಗಿ ಆಗುತ್ತಲೇ ಇರುತ್ತದೆ ಎನ್ನುವುದೂ ನಮಗೆಲ್ಲಾ ತಿಳಿದಿದೆ. ಪ್ರತಿಯೊಂದು ದೇಶವೂ ಹೆಮ್ಮೆ ಪಟ್ಟುಕೊಳ್ಳುವ ಅದರ ‘ಸಂಸ್ಕೃತಿ’, ಆಯಾ ಕಾಲದ ರಾಜಕಾರಣ ಮತ್ತು ಧರ್ಮದ ಚೌಕಟ್ಟಿನಲ್ಲೇ ಪೋಷಣೆ ಪಡೆದಿರುವುದೂ ಗೊತ್ತಿದೆ.

ಇವೆರಡೂ ತಮ್ಮ ಆಶಯಗಳನ್ನು ರಕ್ಷಿಸಿಕೊಂಡಿರುವುದನ್ನು ರಕ್ಷಿಸಿಕೊಳ್ಳುವುದನ್ನೇ ‘ಸಂಸ್ಕೃತಿ ಸಂರಕ್ಷಣೆ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಅದನ್ನು ರಕ್ಷಿಸುವುದು ಒಬ್ಬ ಲೇಖಕನ ಕರ್ತವ್ಯ. ಪಾಪ, ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರೂ ಮುರುಗನ್ ಮೇಷ್ಟರು ‘ಸಂಸ್ಕೃತಿ ಪ್ರಾಥಮಿಕ ಶಾಲೆ’ ಹೇಳುವ ಈ ಮೊದಲ ಪಾಠದ ಮೊದಲ ಪ್ಯಾರಾವನ್ನೇ ಮರೆತು ನೆಮ್ಮದಿ ಕಳೆದುಕೊಂಡರು.

ಮುರುಗನ್ ಮೇಷ್ಟರು ಕಳೆದುಕೊಂಡದ್ದರ ಮೇಲೆ, ಬೇರೆಯವರು ತಮ್ಮ ಲೆಕ್ಕಾಚಾರಗಳನ್ನು ಹೇಗೆ ಗುಣಾಕಾರ ಮಾಡಿಕೊಳ್ಳುತ್ತಿದ್ದಾರೆ! ಧರ್ಮಸಂರಕ್ಷಣೆಗೂ ಕಾಲ ಮತ್ತು ಭಾಷೆ ಇರುತ್ತವೆ ಎನ್ನುವುದು ನಮಗೆ ಗೊತ್ತೇ ಇರಲಿಲ್ಲ. ನಾಲ್ಕು ವರ್ಷಗಳ ಹಿಂದೆಯೇ ಅವರ ತಮಿಳು ಕಾದಂಬರಿ ‘ಮಾಧೊರುಬಾಗನ್’ ಪ್ರಕಟವಾಗಿ ಹಲವು ಮುದ್ರಣಗಳನ್ನು ಕಂಡಿತ್ತು.

ತಮಿಳಿನಲ್ಲಿ ಹುದುಗಿದ್ದ ಸತ್ಯವನ್ನು ಇಂಗ್ಲಿಷ್ ಅನುವಾದ ಹೊರಗೆ ತಂದ ಮೇಲೆ ಎಷ್ಟೊಂದು ಜನರಿಗೆ ಎಷ್ಟೊಂದು ಥರ ಜ್ಞಾನೋದಯವಾಗಿದ್ದು ನೋಡಿದರೆ, ಆಹಾ ಈಗಲೂ ಇಂಗ್ಲೀಷೇ ನಮ್ಮ ಜ್ಞಾನದ ಮೂಲ ಎನ್ನುವುದು ಮತ್ತೊಮ್ಮೆ ಶ್ರುತಪಟ್ಟಿತು. ಒಂದು ಸೃಜನಶೀಲ ಕಾದಂಬರಿ ಹಲವು ಬಗೆಯ ವ್ಯಾಖ್ಯಾನಗಳನ್ನು ಗರ್ಭೀಕರಿಸಿಕೊಂಡಿರುತ್ತದೆ ಎಂಬ ಸಾಹಿತ್ಯ ಮೀಮಾಂಸೆ, ಈ ಕಾದಂಬರಿಯ ನಾಯಕಿಯ ಗರ್ಭದ ಪ್ರಸಂಗದಲ್ಲಿ ಹೆಂಗೆ ನಿಜವಾಗಿಬಿಟ್ಟಿತು!

ತಮ್ಮ ಶಿಕ್ಷಣ ವ್ಯಾಪಾರದ ದುರಾಚಾರಗಳನ್ನು ಟೀಕಿಸುತ್ತಿದ್ದ ಈ ಮೇಷ್ಟರಿಗೆ ಎಂದೂ ಮರೆಯಲಾಗದ ತಕ್ಕ ಪಾಠ ಕಲಿಸುತ್ತೇವೆ ಎಂದು ತಮಿಳುನಾಡಿನ ಶಿಕ್ಷಣ ಸಂಸ್ಥೆಗಳು ಕೋಲು ಕೈಗೆತ್ತಿಕೊಂಡಿವೆ. ಟೀಕಾಕಾರರ ಬಾಯಿ ಮುಚ್ಚಿಸಲು ಅವರ ಮೇಲೆ ಕೋಲು ಕೈಗೆತ್ತಿಕೊಳ್ಳುವುದಿರಲಿ, ಅವರ ಕೊಲೆ ಮಾಡಿಸಿಯೇ ಪಾಠ ಕಲಿಸುವ ‘ಟೀಚಿಂಗ್ ಮೆಥೆಡ್’ ನಮ್ಮ ದೇಶದ ಕೆಲವಾದರೂ ಶಿಕ್ಷಣ ಸಂಸ್ಥೆಗಳ ಮಾಲೀಕರಿಗೆ ಹೇಗೂ ಗೊತ್ತಿದೆಯಲ್ಲ.

ಅರ್ಧನಾರೀಶ್ವರ ದೇವಾಲಯದ ಸತ್ಯ ಸಂಗತಿಯನ್ನು ಲೋಕದೆದುರು ಬಿಚ್ಚಿಟ್ಟ ಲೇಖಕನಿಗೆ ಧರ್ಮದೇಟು ಕೊಟ್ಟು ಅವನಿಗೆ ಸರಿಯಾದ ಕೈಲಾಸ ಕಾಣಿಸಲೆಂದು ಧರ್ಮ–ಸಂಸ್ಕೃತಿ ಸಂರಕ್ಷಿಸುವ ಸಂಘಟನೆಗಳು ಧಿಗ್ಗನೆ ಎಚ್ಚೆತ್ತದ್ದಂತೂ ಗೊತ್ತೇ ಇದೆ. ಈ ಕಲಿಯುಗದಲ್ಲಿ ಧರ್ಮ ಸಂಸ್ಥಾಪನೆ ಅಥವಾ ಧರ್ಮ ಸಂರಕ್ಷಣೆಯನ್ನು ಈ ಕಲಿಗಳಲ್ಲದೆ ಇನ್ನಾರು ತಾನೇ ಮಾಡಲು ಸಾಧ್ಯ? ರಕ್ತಬೀಜಾಸುರರಂತೆ ಇವರು ಅವತಾರ ಎತ್ತಿರುವುದೇ ದೇವರನ್ನು ರಕ್ಷಿಸಲಿಕ್ಕಲ್ಲವೇ? ತಮಿಳುನಾಡಂತೂ ಮೊದಲೇ ಅಪಾರ ದೇವರುಗಳ ರಾಜ್ಯ.

ಇನ್ನು ನಾಮಕ್ಕಲ್ ಎಂಬ ಹೆಸರಿನ ಆ ಊರಿನ ಆಡಳಿತ, ತನ್ನ ಊರಿನ ಒಬ್ಬ ಪ್ರಜೆಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾಮಕಾವಾಸ್ತೆಗಾದರೂ ರಕ್ಷಿಸಬೇಡವೇ? ಬದಲಿಗೆ ಮುರುಗನ್ ಮೇಷ್ಟರನ್ನು ಹೆದರಿಸಿಬೆದರಿಸಿ ಅದು ‘ಇನ್ನುಮೇಲೆ ಹಿಂಗೆ ಬರೆಯುವುದಿಲ್ಲ, ಸುಮ್ಮನಿರುತ್ತೇನೆ’ ಎಂದು ಒತ್ತಾಯದಿಂದ ಬರೆಸಿಕೊಂಡಿದೆಯಂತೆ.

ನಮ್ಮ ದೇಶದಲ್ಲಿ ಸಂವಿಧಾನ, ಅಭಿವ್ಯಕ್ತಿ ಸ್ವಾತಂತ್ರ್ಯ, ಸುಪ್ರೀಂ ಕೋರ್ಟ್ ಇತ್ಯಾದಿಗಳೂ ಇವೆ ಎಂಬುದೇ ಗೊತ್ತಿಲ್ಲದ ಆ ಅನಕ್ಷರಸ್ಥ ಆಡಳಿತ, ಈ ಅಕ್ಷರ ಜ್ಞಾನಿಯನ್ನು ಇನ್ನು ಹೇಗೆ ತಾನೇ ನಡೆಸಿಕೊಂಡೀತು? ಇನ್ನು ಆ ಊರಿನ ಪೊಲೀಸರೋ ಮುರುಗನ್ ಕುಟುಂಬವನ್ನು ಊರು ಬಿಡಿಸಿ ತಮ್ಮ ಧರ್ಮ ಪಾಲಿಸಿದ್ದಾರಂತೆ. ಹೀಗೆ ಎಲ್ಲರೂ ಕೈಜೋಡಿಸಿದ ಮೇಲೆ ತಾವು ಕೈಕಟ್ಟಿಕೊಂಡು ಸುಮ್ಮನಿದ್ದರೆ ತಮ್ಮ ಜಾತಿಗೇ ಅವಮಾನ ಎನ್ನುವುದು ಜಾತಿ ಸಂಘಟನೆಗಳಿಗೆ ಗೊತ್ತೇ ಇರುತ್ತದೆ.

ಮುರುಗನ್ ಮೇಷ್ಟರ ‘ಒನ್ ಪಾರ್ಟ್ ವುಮನ್’ ಎಂಬ ಹೆಸರಿನ ಕಾದಂಬರಿಯ ಕಥೆ ಇವಿಷ್ಟು ಭಾಗಗಳಿಗೇ ಮುಗಿಯುವುದಿಲ್ಲ. ಅದಕ್ಕೆ ಇನ್ನೂ ದೊಡ್ಡ ಭಾಗವಿದೆ. ತಮಿಳುನಾಡಿನಲ್ಲಿ ನಾವು ಕಾಲು ಊರಲು ತಲೈವಾ ಹೆಗಲ ಮೇಲೆ ಕೈಹಾಕಿಬಿಟ್ಟರೆ ಸಾಲದು, ಅದಕ್ಕೆ ಇನ್ನಷ್ಟು ತಲೆ ಓಡಿಸಬೇಕು, ಅದಕ್ಕೆ ಈ ‘ಒನ್ ಪಾರ್ಟ್ ವುಮನ್’ ಬಳಸಿಕೊಳ್ಳಬೇಕು ಎಂದು ಭಾರತೀಯ ಜನತಾ ಪಾರ್ಟಿ ಅಮಿತೋತ್ಸಾಹ ತಳೆದಿದೆಯಂತೆ. ಧರ್ಮದೇವರುಗಳು ಇರುವುದೇ ರಾಜಕಾರಣದ ಬಳಕೆಗೆ.

ಜನರನ್ನು ಒಂದುಗೂಡಿಸಲು ರಾಮನನ್ನು ಬಳಸಿಕೊಂಡ ಮೇಲೆ ಶಿವನನ್ನು ಬಿಡುವುದುಂಟೇ? ಶಿವಶಿವಾ ಸಲ್ಲದು ಎಂದು ಅವರು ಭಾವಿಸಿದ್ದಾರಂತೆ. ತಮಿಳುನಾಡಿನಲ್ಲಿ ಬೇರೂರಲಾರದ ಅವರ ಕಷ್ಟಕ್ಕೆ ದೇವರು ತಾನೇ ಸಹಾಯ ಮಾಡಬೇಕು?
ದೇವರು ತಂದಿಟ್ಟ ಕಷ್ಟದ ಕಾರಣದಿಂದಾಗಿ, ಮುರುಗನ್ ತಮ್ಮ ಪ್ರಾಣ ಉಳಿಸಿಕೊಳ್ಳಲು ಊರಿನಿಂದ ಹಾರಿ ಹೋಗುವುದು ಅನಿವಾರ್ಯವಾಯಿತು. ಇನ್ನು ಆ ಪೆಂಗ್ವಿನ್ ಅನ್ನುವ ಹಕ್ಕಿ–ಪ್ರಾಣಿ ಹೆಸರಿನ ಪ್ರಕಾಶನ ಸಂಸ್ಥೆ ದೇಶದ ಎಲ್ಲ ಅಂಗಡಿಗಳಿಂದ ಆ ಪುಸ್ತಕವನ್ನು ಹಾರಿಸಿ ಯಾರ ಕಣ್ಣಿಗೂ ಬೀಳದಂತೆ ಮಾಡುವುದೊಂದು ಬಾಕಿಯಿದೆ.

ಆದರೆ ‘ಯಾರೂ ತನ್ನ ರಕ್ಷಣೆಗಿಲ್ಲ, ತನಗಿನ್ನು ಪೆರುಮಾಳೇ ಗತಿ’ ಎಂದು ಮುರುಗನ್ ಹತಾಶರಾಗಬೇಕಿಲ್ಲ. ಆಳುವ ಶಕ್ತಿಗಳು ಬರಹಗಾರರ ಬಾಯಿ ಮುಚ್ಚಿದರೆ, ಅವರು ಮೂಗಿನಲ್ಲಿ ಮಾತನಾಡುವುದನ್ನೂ ಚರಿತ್ರೆ ಕೇಳಿಸಿಕೊಂಡಿದೆ. ಪ್ಯಾರಿಸ್ನ ಚಾರ್ಲಿಗಿದ್ದ ಹಾಗೆ ಮುರುಗನ್ ಅವರ ಸ್ಥಿತಿಗೂ ಮರುಗುವ, ಕೆರಳುವ ಕೋಟ್ಯಂತರ ಮನಗಳಿವೆ. ಮೊನ್ನೆ ತಾನೇ ಮುಗಿದ ‘ದಿ ಹಿಂದು ಲಿಟ್ ಫಾರ್ ಲೈಫ್– 2015’ ಎಂಬ ಸಾಹಿತ್ಯ– ಸಾಂಸ್ಕೃತಿಕ ಉತ್ಸವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಜೀವ ರಕ್ಷಿಸುವ ಜಗತ್ತಿನ ಕಳಕಳಿಯ ಪರವಾಗಿ ಪ್ರತಿರೋಧದ ಹಿಲಾಲು ಹಚ್ಚಲಾಗಿದೆ.

ಲೇಖಕರು, ಓದುಗರು, ಪ್ರಕಾಶಕರು, ಪತ್ರಕರ್ತರು ಮತ್ತು ಸಾಂಸ್ಕೃತಿಕ ರಂಗಕ್ಕೆ ಸೇರಿದ ಎಲ್ಲ ಜನರ ಪರವಾಗಿ ಅಲ್ಲಿದ್ದ ಸಾವಿರಾರು ಸಾಹಿತ್ಯಾಭಿಮಾನಿಗಳು ಈ ಕುಕೃತ್ಯವನ್ನು ಕಟುಶಬ್ದಗಳಲ್ಲಿ ಖಂಡಿಸಿದ್ದಾರೆ. ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ಹಿಂದುತ್ವ ಕಾರ್ಯಕರ್ತರು, ಜಾತಿ ಸಂಘಟನೆಗಳು ಮತ್ತು ಇತರ ವಿಕೃತ ಶಕ್ತಿಗಳು ಒಂದುಗೂಡಿರುವುದನ್ನು, ಸ್ಥಳೀಯ ಆಡಳಿತದ ಸಂವಿಧಾನ ವಿರೋಧಿ ಕ್ರಮಗಳನ್ನು ಬಾಯ್ತುಂಬಾ ಬೈದಿದ್ದಾರೆ.

‘ಐ ಆ್ಯಮ್ ಚಾರ್ಲಿ’ ಎಂಬಂತೆ ಬೇರೆ ರೀತಿಗಳಲ್ಲಿ ಸವಾಲು ಎದುರಿಸುವ ಪಣ ತೊಟ್ಟಿದ್ದಾರೆ. ಮುರುಗನ್ ಜೊತೆ ನಾವೆಲ್ಲ ಇದ್ದೇವೆ ಎಂದು ಸಾರಿ ಹೇಳುವ ನಿರ್ಣಯ ಕೈಗೊಂಡಿದ್ದಾರೆ. ಒತ್ತಡಗಳಿಂದ ಬೇಸತ್ತ ಬರಹಗಾರ ‘ಮುರುಗನ್ ಎಂಬ ಲೇಖಕ ಸತ್ತ’ ಎಂದು ಫೇಸ್ಬುಕ್ನಲ್ಲಿ ಜೋರಾಗಿ ಕೂಗಿದೊಡನೆ ಲೋಕಕ್ಕೆ ಸೂತಕ ಬಂತು. ಆದರೆ ಇತ್ತೀಚೆಗೆ ಸಾಹಿತ್ಯ ಸಂಭ್ರಮದಲ್ಲಿ ಮುಳುಗಿಹೋಗಿದ್ದ ನಮಗೆಲ್ಲಾ ಈ ಕೂಗು ಕೇಳಿಸಲೇ ಇಲ್ಲ.

ಇತ್ತೀಚೆಗೆ ನಿಧನರಾದ ನಮ್ಮ ನಾಡಿನ ಲೇಖಕರಿಗೆ ಸಂತಾಪ ಅರ್ಪಿಸುವ ಕರ್ತವ್ಯವನ್ನು ಸರಿಯಾಗಿಯೇ ಪಾಲಿಸಿದ ನಮಗೆ, ‘ಲೇಖಕ ಮುರುಗನ್ ಸತ್ತ ಸುದ್ದಿ’ಯ ಸೂತಕ ಸೋಂಕಲಿಲ್ಲ! ನಮ್ಮ ವಚನಕಾರರು ನಮಗೆ ಮೊದಲೇ ಹೇಳಿಕೊಟ್ಟಿರುವಂತೆ (ನಿರ್ಣಯ, ಖಂಡನೆ ಇತ್ಯಾದಿ) ಶಬ್ದಸೂತಕ ನಮಗಿಲ್ಲ.
ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.