ಇವಳು ರೇಣುಕಾ ತಳವಾರ. ಖಾನಾಪುರ ತಾಲ್ಲೂಕಿನ ಹಳ್ಳಿಯಿಂದ ಮದುವೆಯಾಗಿ ಬೈಲಹೊಂಗಲದ ಹಳ್ಳಿಗೆ ಹೋದವಳು. ಅನಕ್ಷರಸ್ಥೆ. ಬ್ಯಾಂಕ್ನಲ್ಲಿ ಖಾತೆ ಇಲ್ಲ. ಅವಳ ಹೆಸರಲ್ಲಿ ಭೂಮಿ ಇಲ್ಲ. ಅಂತ್ಯೋದಯ ಕಾರ್ಡ್, ಆಧಾರ್ ಇವೆ. ಅವುಗಳಲ್ಲಿ ಗಂಡನ ಮನೆಯ ವಿಳಾಸವಿದೆ. ಕುಡುಕ ಗಂಡ ಹೊಡೆದು ಬಡಿದು ಆಕೆಯನ್ನು ಹೊರಹಾಕಿದಾಗ, ಇಬ್ಬರು ಪುಟ್ಟ ಮಕ್ಕಳೊಂದಿಗೆ ತವರಿಗೆ ಹಿಂದಿರುಗಿದ ರೇಣುಕಾ, ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದಾಳೆ. ತವರಿನವರು ಕಟ್ಟಿಕೊಟ್ಟ ಹುಲ್ಲಿನ ಗುಡಿಸಲಿನಲ್ಲಿ ಮಕ್ಕಳೊಂದಿಗೆ ವಾಸ. ಈ ವರ್ಷ ಬಿದ್ದ ಮಳೆಯಲ್ಲಿ ರೇಣುಕಾಳ ಗುಡಿಸಲು ಪೂರ್ತಿ ನಾಶವಾಯಿತು. ಮನೆ ಬಿದ್ದದ್ದಕ್ಕೆ ಪರಿಹಾರ ಏನೇನೂ ಬರಲಿಲ್ಲ. ಕಾರಣ ಅವಳು ಇಲ್ಲಿಯವಳಲ್ಲ. ಅವಳ ನಿಜವಾದ ಮನೆ ಇದಲ್ಲ.

ರೇಶನ್ ಕಾರ್ಡ್, ಆಧಾರ್ ಕಾರ್ಡುಗಳಲ್ಲೆಲ್ಲ ಗಂಡನ ಮನೆಯ ವಿಳಾಸ ಇದೆಯಾದರೂ ಇಂದು ತವರಿನಲ್ಲಿ ವಾಸಿಸುತ್ತಿರುವ ಇವಳು ಎಲ್ಲಿಯವಳು? ಹೇಳಿ, ಏನೆಂದು ದಾಖಲಿಸುತ್ತೀರಿ ಅವಳನ್ನು? ಇದು ಒಬ್ಬ ರೇಣುಕಾಳ ಕತೆಯಲ್ಲ. ಜನಸಂಖ್ಯೆಯ ಅರ್ಧದಷ್ಟಿರುವ ಹೆಣ್ಣುಮಕ್ಕಳ ಪೈಕಿ, ಗ್ರಾಮೀಣ ಭಾಗದ ಮತ್ತು ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಶೇ 90ರಷ್ಟು ಹೆಣ್ಣುಮಕ್ಕಳ ಕತೆ ಇದು. ದೇಶಕ್ಕೆ ಸ್ವಾತಂತ್ರ್ಯ ಬಂದು 72 ವರ್ಷಗಳಾಗಿದ್ದರೂ ಗ್ರಾಮೀಣ ಹೆಣ್ಣುಮಕ್ಕಳ ಶಿಕ್ಷಣದಲ್ಲಿ ಬದಲಾವಣೆ ಆಗದಿರುವುದು, ತಡೆದುಕೊಳ್ಳುವ ಶಕ್ತಿಯನ್ನೇ ಕೊಡದೆ ಅವಳ ಮೇಲೆ ಕೆಂಡ ಸುರಿದಂತಾಗಿದೆ.

ಬಿರುಗಾಳಿಗೆ ಅವಳು ಒಡ್ಡಿಕೊಳ್ಳಬೇಕು. ಆದರೆ, ಅದಕ್ಕಾಗಿ ಅವಳನ್ನು ಸಶಕ್ತ ಮಾಡಿಲ್ಲ. ಸರ್ಕಾರವು ಬಾಲ್ಯವಿವಾಹಗಳನ್ನು ತಡೆಯುತ್ತಿಲ್ಲ. ಗಂಡಸಿಗೆ ಎರಡೆರಡು ಮದುವೆಗಳಾಗುವುದನ್ನು ನಿಲ್ಲಿಸುತ್ತಿಲ್ಲ. ಇವೆರಡರ ಹಿಂದೆಯೂ ಇರುವ ಪುರುಷ ಪ್ರಾಧಾನ್ಯ ಮೌಲ್ಯವನ್ನು ತಗ್ಗಿಸಲಾಗುತ್ತಿಲ್ಲ ಸರ್ಕಾರಕ್ಕೆ. ಹೀಗಾಗಿ, ಎಂಥ ಹೊಸ ನೀರು ಬಂದರೂ ಅದು ಆ ಕೊಚ್ಚೆ ನೀರೊಳಗೇ ಸೇರಿಕೊಳ್ಳಬೇಕು.

ಇತ್ತೀಚಿನ ವರ್ಷಗಳಲ್ಲಿ ಪದೇ ಪದೇ ರೇಶನ್ ಕಾರ್ಡ್ ಬದಲಾಯಿಸುವುದು, ಬ್ಯಾಂಕ್ ಖಾತೆ ಮಾಡಿಸಲು ಆಮಿಷಗಳು, ಆಧಾರ್ ಮಾಡಿಸಲು ಒತ್ತಾಯ, ಕಡ್ಡಾಯ ಇವುಗಳಿಂದಾಗಿ ಹೆಚ್ಚಿನ ಹೆಣ್ಣುಮಕ್ಕಳು ಕೂಡ ಯಾವುದೋ ಒಂದು ಕಾರ್ಡನ್ನು ಹೊಂದಿರುತ್ತಾರೆ. ಅವೆಲ್ಲವೂ ತಾಳಿಭಾಗ್ಯದೊಂದಿಗೆ ಅವಳಿಗೆ ಸಿಗುವ ‘ಭಾಗ್ಯ’ಗಳೇ ಹೊರತು, ಮದುವೆಗೆ ಮೊದಲು ಸರ್ಕಾರ ಕೊಟ್ಟಿರುವ ಯಾವ ದಾಖಲೆಯೂ ಯಾವ ಮಹಿಳೆಯ ಬಳಿಯೂ ಇಲ್ಲ! ಬಾಲ್ಯವಿವಾಹದ ಕಾರಣದಿಂದ, ಚುನಾವಣಾ ಗುರುತಿನ ಚೀಟಿ ಕೂಡ ಇಲ್ಲ!

ಹಳ್ಳಿಗಾಡಿನಲ್ಲಿ ಈಗಲೂ ನಾವು ಅಲೆಮಾರಿಗಳನ್ನು ಕಾಣುತ್ತೇವೆ. ಗ್ರಾಮದ ಒಂದು ಭಾಗದಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗುವ ಈ ಜನ, ಕೆಲವು ಕಾಲ ಅಲ್ಲಿ ಟೆಂಟ್ ಹಾಕಿಕೊಂಡು ತಂಗಿರುತ್ತಾರೆ. ಅವರು ನಿಮ್ಮ ರೇಶನ್ ಕಾರ್ಡ್ ಕೇಳುವುದಿಲ್ಲ, ನಿಮ್ಮ ಬ್ಯಾಂಕ್ ಅವರಿಗೆ ಬೇಡ, ನಿಮ್ಮ ಆಧಾರ್ ಅವರಿಗೆ ಗೊತ್ತಿಲ್ಲ. ಇನ್ನು ಜನನ ಪ್ರಮಾಣ ಪತ್ರ? ಯಾರದ್ದೋ ಹೊಲದಲ್ಲಿ ಕೆಲಕಾಲ ಉಳಿದುಕೊಂಡು, ತಮ್ಮ ಗುಡಚಾಪೆ ಕಿತ್ತುಕೊಂಡು ಹೊರಟು ಬಿಡುವ ಇವರು, ಯಾವ ಊರಿಗೆ ಸಂಬಂಧಪಟ್ಟವರು? ದೇಶದ ತುಂಬೆಲ್ಲ ಹಲವಾರು ಸಮುದಾಯಗಳಿಗೆ ಸೇರಿದ 15 ಕೋಟಿಗೂ ಮಿಕ್ಕಿ ಅಲೆಮಾರಿಗಳಿದ್ದಾರೆ.

ಪಶ್ಚಿಮಘಟ್ಟ ಪ್ರದೇಶ ಹಾಗೂ ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಹತ್ತಾರು ಬಗೆಯ ಬುಡಕಟ್ಟು ಜನರಿದ್ದಾರೆ. ಇನ್ನುಳಿದ ರಾಜ್ಯಗಳದ್ದೂ ಸೇರಿದರೆ 2011ರ ಜನಗಣತಿಯ ಪ್ರಕಾರ, 8 ಕೋಟಿಗೂ ಮಿಕ್ಕಿ ಆದಿವಾಸಿಗಳಿದ್ದಾರಂತೆ. ಅವರ ಬಳಿ ಏನಾದರೂ ತಾವು ಇದೇ ನೆಲದವರು ಎನ್ನಲು ಸರ್ಕಾರಿ ದಾಖಲೆ ಇರಬಹುದೇ? ಬ್ಯಾಂಕ್ ಕಾರ್ಡು? ಜನನ ಪ್ರಮಾಣಪತ್ರ? ಆಧಾರ್? ಪ್ಯಾನ್? ಹಾಗೆಯೇ ಭೂಹೀನರು, ವಸತಿರಹಿತರು ಹೀಗೆ ಹೆಸರೇ ಇಲ್ಲದ, ಯಾವೊಂದು ದಾಖಲೆಯೂ ಇಲ್ಲದ ಅಸಂಖ್ಯ ಜನರಿದ್ದಾರೆ ನಮ್ಮೀ ಬಡಜನರ ನಿಜ ಭಾರತದಲ್ಲಿ. ಮನೆಯಿದ್ದೂ ಇಲ್ಲದ, ಭೂಮಿಯಿದ್ದೂ ಇಲ್ಲದ ಸ್ಥಿತಿಯಲ್ಲಿ ಇರುವುದರಿಂದಲೇ ನೆರೆ ಪರಿಹಾರ ಕೂಡ ಸಿಗದವರ ಸಂಖ್ಯೆ ಅಪಾರ.

ನಮಗೆ ಶಿಕ್ಷಣ ಕೊಡಿ, ಉದ್ಯೋಗ ಕೊಡಿ, ಆರೋಗ್ಯ ಕೊಡಿ ಎಂಬ ಬೇಡಿಕೆಗಳನ್ನು ಮುಂದಿಟ್ಟು ಜನರು ಮತ ಹಾಕಿದ್ದರಿಂದ ಆಯ್ಕೆಯಾದ ಸರ್ಕಾರವು ಇಂದು ಅವುಗಳನ್ನೆಲ್ಲ ಕೇಳುವ ನಿಮ್ಮ ಮೂಲಭೂತ ಹಕ್ಕನ್ನೇ ಕಿತ್ತುಕೊಳ್ಳಹೊರಟಿದೆ. ಮೊದಲು ‘ಪೌರತ್ವ (ತಿದ್ದುಪಡಿ) ಕಾಯ್ದೆ’ ಎಂದ ನಮ್ಮ ಭಾರತ ಸರ್ಕಾರ, ಅದರ ಹಿಂದೆಯೇ ‘ರಾಷ್ಟ್ರೀಯ ಪೌರತ್ವ ನೋಂದಣಿ’ ಎಂದಿತು. ಅದರ ಬಗ್ಗೆ ಚರ್ಚೆ, ವಿರೋಧ ಶುರುವಾಗುವುದರೊಳಗೆ ‘ರಾಷ್ಟ್ರೀಯ ಜನಸಂಖ್ಯಾ ನೋಂದಣಿ’ ಎನ್ನುತ್ತಿದೆ.

ಪಟ್ಟಣಗಳಲ್ಲಿ, ಶಹರಗಳಲ್ಲಿ ಇದರ ವಿರುದ್ಧ ಸಾಕಷ್ಟು ವಿರೋಧದ ಅಲೆ ಎದ್ದಿದ್ದರೂ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿದ್ದರೂ ಟಿ.ವಿ ಚಾನೆಲ್ಗಳಲ್ಲಿ ಬಿಸಿಬಿಸಿ ಚರ್ಚೆ ತಾರಕಕ್ಕೇರಿದ್ದರೂ ಹಳ್ಳಿಗಳಿಗೆ ವಿಷಯ ತಲುಪಿಲ್ಲ. ಇವಷ್ಟೇ ಏನು, ಯಾವುದೇ ಮಾಹಿತಿಯೂ ಅಲ್ಲಿಯವರೆಗೆ ತಲುಪುವುದಿಲ್ಲ. ಯಾಕೆಂದರೆ, ಆ ಗ್ರಾಮಭಾರತವೇ ಬೇರೆ. ಅಲ್ಲಿ ಪ್ರಕ್ರಿಯೆಯೇ ಸೀದಾ ಆರಂಭವಾಗುತ್ತದೆ ಹೊರತು ಮೊದಲು ಮಾಹಿತಿ ಹೋಗುವುದಿಲ್ಲ.

ಒಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಜನರು ಮೈಕೊಡವಿಕೊಂಡು ಸಂದೂಕದಲ್ಲಿನ ತಮ್ಮ ಆಧಾರ್ ಕಾರ್ಡ್ ಸಮೇತ ಹೋಗಿ ಕ್ಯೂನಲ್ಲಿ ನಿಲ್ಲುತ್ತಾರಷ್ಟೇ. ಅದು ರೂಢಿಯಾಗಿಬಿಟ್ಟಿದೆ ಈಗ. ಪ್ರತಿ ಆರು ತಿಂಗಳಿಗೊಮ್ಮೆ ಹೊಸದೊಂದು ನಿಯಮ, ಕಾನೂನು ತಂದಾಗಲೂ ಹೀಗೆ ಬಂದವರು ಕ್ಯೂನಲ್ಲಿ ನಿಂತಿದ್ದಾರೆ. ಇನ್ನೂವರೆಗೆ ನಿಲ್ಲುತ್ತಲೇ ಇದ್ದಾರೆ. ಈ ಕ್ಷಣದಲ್ಲಿ ಕೂಡ, ಮತ್ತೊಮ್ಮೆ ಬಯೊಮೆಟ್ರಿಕ್ ಕೊಡಬೇಕೆಂದು ಮನೆಮಂದಿಯೆಲ್ಲ ವಾರಗಟ್ಟಲೆಯಿಂದ ಕ್ಯೂನಲ್ಲಿ ನಿಂತುಕೊಂಡಿದ್ದಾರೆ.

ಅತ್ತ ಶಹರಗಳಲ್ಲಿ ಎನ್ಆರ್ಸಿ ಬಗ್ಗೆ ಜೋರು ಸಂಘರ್ಷ, ವಿವಾದ ನಡೆದಿರುವಾಗ, ಇತ್ತ ಹಳ್ಳಿಗಳ ಜನ ಕ್ಯೂಗಳಲ್ಲಿ ನಿಂತು ಬಸವಳಿಯುತ್ತಿದ್ದಾರೆ. ಆ ದಿನದ ಕೂಲಿ ಕೇಳಬೇಡಿ, ಖರ್ಚು ಕೇಳಬೇಡಿ. ಕ್ಯೂನಲ್ಲಿ ನಿಂತ ಕಾರಣಕ್ಕೆ ಮಕ್ಕಳಿಗೆ ಶಾಲೆಯಲ್ಲಿ ಎಷ್ಟು ದಿನಗಳ ಗೈರುಹಾಜರಿ ಆಯಿತೆಂದೂ ಕೇಳಬೇಡಿ.

ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಕ್ರಿಯೆಯು ಹಿಂದೆಯೂ ಇತ್ತೆಂದು ಸರ್ಕಾರದವರು ವಾದ ಮಾಡುತ್ತಾರೆ. ಆದರೆ 2010ರಲ್ಲಿ ಇದ್ದ ನೋಂದಣಿಗೂ ಈಗಿನದಕ್ಕೂ ಬಹಳ ವ್ಯತ್ಯಾಸವಿದೆ. ನಿಮ್ಮ ಜನ್ಮದಾಖಲೆಯ ಜೊತೆಗೆ ನಿಮ್ಮ ತಂದೆ, ತಾಯಿಯ ಜನ್ಮದಾಖಲೆ, ಅವರು ಯಾವ ಊರಲ್ಲಿ ಹುಟ್ಟಿದವರು ಎನ್ನುವ ದಾಖಲೆಗಳನ್ನೂ ತೋರಿಸಬೇಕು.

ಸ್ವತಃ ತಮ್ಮ ದಾಖಲೆ ಸಿಗುವುದೇ ದುರ್ಲಭವಿರುವ, ನಮ್ಮ ರೇಣುಕಾಳಂಥ ಕೋಟ್ಯಂತರ ಮಹಿಳೆಯರು, ಅವರ ತಂದೆ ತಾಯಿಯ ಹುಟ್ಟಿದೂರಿಗೆ ಹೋಗಿ ದಾಖಲೆಗಳನ್ನು ತರಲು ಪ್ರಯತ್ನ ಆರಂಭಿಸಿದರು ಎನ್ನಿ. ನಮ್ಮ ಮಹಿಳೆಯರಿಗೆಲ್ಲ ಶಿಕ್ಷಣವಿದ್ದಿದ್ದರೆ, ನಮ್ಮ ಅಧಿಕಾರಸ್ಥರು ಜನಸ್ನೇಹಿ ಆಗಿದ್ದರೆ ಕತೆ ಬೇರೆ ಆಗಿರುತ್ತಿತ್ತು. ರೆವಿನ್ಯೂ ಇಲಾಖೆಯ ಅಧಿಕಾರಿಗಳೊಂದಿಗೆ, ಅಫಿಡವಿಟ್ ಮಾಡಿಸಲು ವಕೀಲರೊಂದಿಗೆ, ಒಂದೊಂದು ದಾಖಲೆ ಪಡೆಯಲು ಒಬ್ಬೊಬ್ಬರೂ ಎಷ್ಟು ಬಾರಿ ಓಡಾಡಬೇಕಾದೀತು?

ಅಧಿಕಾರಸ್ಥರು, ಪೊಲೀಸರಿಗೆ ಪರಮಾಧಿಕಾರ. ತಮ್ಮನ್ನು ಆರಿಸಿ ತಂದ ಜನರ ಹಿತ ಮರೆತು, ಜನಾಭಿಪ್ರಾಯಕ್ಕೆ ಮನ್ನಣೆ ಕೊಡದೆ, ಜನರ ಕೈಯಲ್ಲಿರುವ ಅಧಿಕಾರವನ್ನು ಕಿತ್ತು ಪೊಲೀಸ್ ಲಾಠಿಗೆ ಕೊಡುತ್ತಿರುವ ಸರ್ಕಾರಕ್ಕೆ ತನ್ನ ಅಧಿಕಾರ ಹೋದಾಗಲೇ ಬಹುಶಃ ತಾನು ಮಾಡಿದ ಪ್ರಮಾದದ ಬಗ್ಗೆ ಅರಿವಾಗಬಹುದು. ಆದರೆ ಅಷ್ಟೊತ್ತಿಗೆ ಕಾಲ ಕೈಮೀರಿರುತ್ತದೆ.

ಶಾರದಾ ಗೋಪಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.