ನಮ್ಮ ದೇಶದ ಪರಿಸರ ಮತ್ತು ಅರಣ್ಯ ಸಂರಕ್ಷಣಾ ಚಳವಳಿಗಳ ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ‘ರೇಣಿ’, ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ
ರುವ ಒಂದು ಹಳ್ಳಿ. 50 ವರ್ಷಗಳ ಹಿಂದೆ, ಅರಣ್ಯದಲ್ಲಿನ ಮರಗಿಡಗಳನ್ನು ಸಂರಕ್ಷಿಸಿ, ಅರಣ್ಯ ಸಂಪನ್ಮೂಲಗಳ ಮೇಲೆ ಸ್ಥಳೀಯ ಸಮುದಾಯದ ಹಕ್ಕನ್ನು ಸ್ಥಾಪಿಸಲು, ಮಹಿಳೆಯರೇ ಮುಂಚೂಣಿಯಲ್ಲಿದ್ದ ಅಹಿಂಸಾತ್ಮಕ ‘ಚಿಪ್ಕೊ’ ಚಳವಳಿ ಪ್ರಾರಂಭವಾದದ್ದು ಈ ಹಳ್ಳಿಯಿಂದಲೇ.

1974ರ ಮಾರ್ಚ್ 26ರಂದು, ಮರ ಕಡಿಯಲು ಬಂದ ಗುತ್ತಿಗೆದಾರರು ಮತ್ತು ಮರಕಟುಕರನ್ನು ಎದುರಿಸಿ, ಮರಗಳನ್ನು ತಬ್ಬಿ ನಿಂತು, ಅವರೆಲ್ಲರೂ ಅಲ್ಲಿಂದ
ಕಾಲ್ತೆಗೆಯುವಂತೆ ಮಾಡಿದ ಮಹಿಳಾ ಪ್ರತಿಭಟನಕಾರರ ನೇತೃತ್ವ ವಹಿಸಿದ್ದವರು 50 ವರ್ಷದ ಮಹಿಳೆ ಗೌರಾದೇವಿ. ಚಾಂಡಿಪ್ರಸಾದ್ ಭಟ್, ಸುಂದರಲಾಲ್ ಬಹುಗುಣ ಅವರಂತಹ ಖ್ಯಾತನಾಮರ ಅಪರಿಮಿತ ಶ್ರಮದಿಂದಾಗಿ ಚಿಪ್ಕೊ ಆಂದೋಲನ ಇಡೀ ದೇಶಕ್ಕೆ ಸ್ಫೂರ್ತಿಯಾಯಿತು. ಆದರೆ ಹಿಂದಿನ 50 ವರ್ಷಗಳಲ್ಲಿ, ಉತ್ತರಾಖಂಡದ ಹಿಮಾಲಯದ ಶ್ರೇಣಿಯಲ್ಲಿ ಆಗುತ್ತಿರುವ ತ್ವರಿತಗತಿಯ ಬೆಳವಣಿಗೆಗಳ ಪರಿಣಾಮವಾಗಿ ತನ್ನೆಲ್ಲಾ ಮಹತ್ವವನ್ನು ಕಳೆದುಕೊಂಡಿರುವ ರೇಣಿಯಲ್ಲಿ ಇಂದು ಒಂದು ರೀತಿ ಅನಾಥಪ್ರಜ್ಞೆ ಆವರಿಸಿಕೊಂಡಿದೆ.

ಹಿಮಾಲಯದ ಆಂತರಿಕ ರಚನೆ, ಅಸ್ಥಿರತೆ ಮತ್ತು ನಿರಂತರ ಸ್ಥಿತ್ಯಂತರಗಳಿಂದಾಗಿ, 12,200 ಅಡಿಗಳ ಎತ್ತರದಲ್ಲಿ ಋಷಿಗಂಗಾ ಮತ್ತು ಧೌಲಿಗಂಗಾ ನದಿಗಳ ಸಂಗಮದ ತುದಿಯಲ್ಲಿರುವ ರೇಣಿ ಹಳ್ಳಿಗೆ ಭೂಕಂಪನ, ಭೂಕುಸಿತದಂತಹ ಅವಘಡಗಳು ಅಪರೂಪವೇನಲ್ಲ. ಉತ್ತರಾಖಂಡದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿ
ರುವ ಜಲವಿದ್ಯುತ್ ಯೋಜನೆಗಳು, ಮೂಲ ಸೌಕರ್ಯ ನಿರ್ಮಾಣದಂಥವು ಪರಿಸರ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಮತ್ತಷ್ಟು ಅನಾಹುತಗಳಿಗೆ ಕಾರಣವಾಗುತ್ತಿವೆ. ಆದರೆ ಹಿಂದಿನ ಒಂದು ದಶಕದಲ್ಲಿ ಇವುಗಳ ಜೊತೆಗೆ ಬದಲಾಗುತ್ತಿರುವ ವಾಯುಗುಣದ ಪರಿಣಾಮವೂ ಸೇರಿ, ಅವಘಡಗಳ ತೀವ್ರತೆ ಗಾಬರಿ ಹುಟ್ಟಿಸುವಂತಿದೆ.

2021ರ ಫೆಬ್ರುವರಿಯಲ್ಲಿ, ಹಿಮಸರೋವರದ ಬಿರಿತದಿಂದ ಉಂಟಾದ ದಿಢೀರ್ ಪ್ರವಾಹದಿಂದ, ರೇಣಿ ಸೇರಿದಂತೆ ಚಮೋಲಿ ಜಿಲ್ಲೆಯಲ್ಲಿ 80 ಜನ ಸಾವಿಗೀಡಾಗಿ, 200 ಮಂದಿ ಕಣ್ಮರೆಯಾದರು. ಅದೇ ವರ್ಷ ಜೂನ್ನಲ್ಲಿ 5 ದಿನಗಳ ಕಾಲ ಎಡೆಬಿಡದೆ ಸುರಿದ ಧಾರಾಕಾರ ಮಳೆಯಿಂದ, ರೇಣಿಯ ಕೆಳಭಾಗದ ಇಳಿಜಾರಿನಲ್ಲಿದ್ದ 14 ಮನೆಗಳು ಕೊಚ್ಚಿಹೋದವು. ಮನೆಗಳ ನೆಲ, ಗೋಡೆ, ಚಾವಣಿಗಳ ಜೊತೆಗೆ ರಸ್ತೆ, ಕೃಷಿ ಭೂಮಿಯಲ್ಲಿ ಬಿರುಕುಗಳುಂಟಾದವು.

ಈ ಅವಘಡಗಳ ಅಧ್ಯಯನ ನಡೆಸಿದ ‘ಉತ್ತರಾಖಂಡ್ ಡಿಸಾಸ್ಟರ್ ರಿಕವರಿ ಇನಿಶಿಯೇಟಿವ್’ ಯೋಜನೆಯಡಿ ಭೂವೈಜ್ಞಾನಿಕ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು. ‘ರೇಣಿ ಹಳ್ಳಿಯಿರುವುದು ಸಡಿಲವಾದ ಮಣ್ಣಿನ ಇಳಿಜಾರಿನ ನೆಲದ ಮೇಲೆ. ಈ ಮಣ್ಣಿಗೆ ಹೆಚ್ಚಿನ ಧಾರಣಾ ಸಾಮರ್ಥ್ಯ ಇಲ್ಲದಿರುವುದರಿಂದ ಭೂಕುಸಿತ ಉಂಟಾಗುತ್ತದೆ. ಋಷಿಗಂಗಾ ನದಿಯ ನೀರು ರೇಣಿಯ ಕೆಳಗಿನ ಮಣ್ಣನ್ನು ಕೊಚ್ಚಿ ಇಳಿಜಾರಿನ ಅಸ್ಥಿರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇಡೀ ಹಳ್ಳಿಯನ್ನು ಆದ್ಯತೆಯ ಮೇರೆಗೆ ಬೇರೆಡೆಗೆ ಸ್ಥಳಾಂತರಿಸಬೇಕು’ ಎಂದು ಶಿಫಾರಸು ಮಾಡಿತು.

ಈ ವರದಿಯನ್ನು ಪರಿಶೀಲಿಸಿದ ಸರ್ಕಾರ, ರೇಣಿ ಹಳ್ಳಿಯ ಇಳಿಜಾರಿನಲ್ಲಿದ್ದ 55 ಕುಟುಂಬಗಳನ್ನು ಅಲ್ಲಿಂದ ದಕ್ಷಿಣಕ್ಕೆ, ರೇಣಿಗಿಂತ ಕೆಳಗಿರುವ ಸುಭಾಯ್ ಎಂಬ ಹಳ್ಳಿಗೆ ಸ್ಥಳಾಂತರಿಸಲು ನಿರ್ಧರಿಸಿತು. ಆದರೆ ಆ ವೇಳೆಗಾಗಲೇ ಬೇರೆಡೆಯಿಂದ 60 ಕುಟುಂಬಗಳನ್ನು ಸುಭಾಯ್ಗೆ ಸ್ಥಳಾಂತರಿಸಿದ್ದರಿಂದ, ಮತ್ತೆ 55 ಕುಟುಂಬಗಳಿಗೆ ಅಲ್ಲಿ ಪುನರ್ವಸತಿ ಕಲ್ಪಿಸುವುದನ್ನು ಸುಭಾಯ್ನ ಸ್ಥಳೀಯರು ತೀವ್ರವಾಗಿ ವಿರೋಧಿಸಿದರು. ಪರ್ವತ ಪ್ರದೇಶದ ಹಳ್ಳಿಗಳಲ್ಲಿ ಸೀಮಿತ ಪ್ರಮಾಣದಲ್ಲಿರುವ ಉರುವಲು ಸೌದೆ, ಬೇರು ನಾರು, ಹೂಹಣ್ಣು, ಜಾನುವಾರುಗಳಿಗೆ ಮೇವು, ವ್ಯವಸಾಯಕ್ಕೆ ಕೃಷಿ ಭೂಮಿಯಂತಹವುಗಳನ್ನು ಹೊರಗಿನಿಂದ ಬಂದ ಮತ್ತಷ್ಟು ಜನರೊಂದಿಗೆ ಹಂಚಿಕೊಳ್ಳುವುದು ಸಾಧ್ಯವಿರಲಿಲ್ಲ. ಅಲ್ಲದೆ ಬೇರೆಯ ಹಳ್ಳಿಗಳಲ್ಲೂ ರೇಣಿ ನಿವಾಸಿಗಳ ದನಕರುಗಳಿಗೆ ಮತ್ತು ಕೃಷಿಗೆ ಜಾಗವಿರಲಿಲ್ಲ. ಪುನರ್ವಸತಿಗಾಗಿ ಸೂಕ್ತ ಸ್ಥಳವನ್ನು ಹುಡುಕುವವರೆಗೂ ತಾತ್ಕಾಲಿಕವಾಗಿ ಬೇರೆ ಹಳ್ಳಿಗಳಲ್ಲಿ ಅವಕಾಶ ಕಲ್ಪಿಸುವ ಪ್ರಯತ್ನವೂ ನಡೆಯಿತು. ಆದರೆ ಈ ಹಿಂದೆ ಬೇರೆ ಹಳ್ಳಿಗಳ ಶಾಲೆಯ ಕೊಠಡಿಗಳಲ್ಲಿ ತಾತ್ಕಾಲಿಕವೆಂದು ಆಶ್ರಯ ಪಡೆದಿದ್ದ ಕುಟುಂಬಗಳು ನಾಲ್ಕೈದು ವರ್ಷಗಳ ನಂತರವೂ ಅಲ್ಲೇ ಉಳಿದಿರುವ ಉದಾಹರಣೆಗಳಿರುವುದರಿಂದ ಆ ಪ್ರಸ್ತಾಪವನ್ನು ರೇಣಿಯ ನಿವಾಸಿಗಳು ಒಪ್ಪಲಿಲ್ಲ.

ಉತ್ತರಾಖಂಡ ಸರ್ಕಾರದ ಪುನರ್ವಸತಿ ನೀತಿಯಂತೆ, ಸ್ಥಳಾಂತರಗೊಂಡ ಪ್ರತಿ ಕುಟುಂಬಕ್ಕೂ ₹ 3.6 ಲಕ್ಷ ಪರಿಹಾರಧನ ಮತ್ತು 100 ಚದರ ಅಡಿಗಳಷ್ಟು ಜಾಗ ದೊರೆಯುತ್ತದೆ. ಈ ಎರಡರ ಬಗೆಗೂ ಜನರಲ್ಲಿ ತೀವ್ರ ಅಸಮಾಧಾನವಿದೆ. ಸ್ಥಳೀಯ ನಿವಾಸಿಗಳ ಬದುಕಿಗೆ ಆಸರೆಯಾದ ದನಕರುಗಳಿಗೆ, ಕೃಷಿಭೂಮಿಗೆ ಪರಿಹಾರದ ಪ್ಯಾಕೇಜಿನಲ್ಲಿ ಆದ್ಯತೆಯೇ ಇಲ್ಲ. ದನಕರುಗಳನ್ನು ಬಿಟ್ಟು ಇಲ್ಲಿಯ ಜನ ಬೇರೆಡೆಗೆ ಹೋಗಲು ಸಿದ್ಧರಿಲ್ಲ. ಪರ್ವತ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲು ಅಗತ್ಯವಾದ ಜಾಗದ ತೀವ್ರ ಕೊರತೆಯಿರುವುದು ಸರ್ಕಾರದ ಪಾಲಿಗೆ ದೊಡ್ಡ ಸಮಸ್ಯೆಯಾಗಿದೆ.

ರೇಣಿಯ ಸಮೀಪವೇ 300ರಿಂದ 500 ಮೀಟರ್ ಸುತ್ತಳತೆಯಲ್ಲಿ ಪುನರ್ವಸತಿ ಕಲ್ಪಿಸಲು ಸಾಧ್ಯವಾದರೆ, ಜನ ಮಾತ್ರ ಹೊಸ ಸ್ಥಳದಲ್ಲಿದ್ದು ದನಕರುಗಳನ್ನು ಈಗಿರುವ ಜಾಗದಲ್ಲಿಯೇ ಉಳಿಸಿಕೊಳ್ಳಬಹುದೆಂಬ ಯೋಚನೆಯಿದೆ. ಉತ್ತರಾಖಂಡದ ಗ್ರಾಮೀಣ ಅಭಿವೃದ್ಧಿ ಮತ್ತು ವಲಸೆ ಆಯೋಗದ ಮೂಲಗಳಂತೆ, 2011- 17ರ ಅವಧಿಯಲ್ಲಿ ಆ ರಾಜ್ಯದ 734 ಹಳ್ಳಿಗಳನ್ನು ಅಲ್ಲಿನ ಜನ ವಿವಿಧ ಕಾರಣಗಳಿಂದಾಗಿ ಸಂಪೂರ್ಣವಾಗಿ ತೊರೆದುಹೋಗಿದ್ದಾರೆ. 535 ಹಳ್ಳಿಗಳಲ್ಲಿ ಜನಸಂಖ್ಯೆ ಶೇ 50ರಷ್ಟು ಕಡಿಮೆಯಾಗಿದೆ. ಇಂತಹ ಸುಮಾರು 1,000 ಹಳ್ಳಿಗಳಲ್ಲಿ ಮನೆಗಳು, ಕೃಷಿಭೂಮಿ ಮತ್ತು ದನಕರುಗಳಿಗೆ ಮೇವಿನತಾಣವನ್ನು ಒದಗಿಸಬಹುದೆಂಬ ಸಲಹೆಯನ್ನು ಸರ್ಕಾರ ಪರಿಶೀಲಿಸುತ್ತಿದೆ.

ಚಿಪ್ಕೊ ಚಳವಳಿಯ ಜನ್ಮಸ್ಥಾನವಾದ ಕಾರಣ ರೇಣಿಗೆ ವಿಶೇಷ ಸ್ಥಾನವಿದ್ದು, ಪುನರ್ವಸತಿಯ ಸಂದರ್ಭದಲ್ಲಿ ತಮಗೆ ಆದ್ಯತೆ ದೊರೆಯಲಿದೆಯೆಂಬ ಭಾವನೆ ಅಲ್ಲಿಯ ಜನರಲ್ಲಿತ್ತು. ಆದರೆ ಅಂತಹ ನಿರೀಕ್ಷೆಗೆ ಯಾವ ಆಧಾರವೂ ಇಲ್ಲವೆಂಬುದು ಈಗ ಸಾಬೀತಾಗಿದೆ. ಉತ್ತರಾಖಂಡದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಗಳಂತೆ, 2021ರ ಜೂನ್ವರೆಗೆ 465 ಹಳ್ಳಿಗಳನ್ನು ಸ್ಥಳಾಂತರಕ್ಕಾಗಿ ಗುರುತಿಸಲಾಗಿದೆ. ಈ ಹಳ್ಳಿಗಳ ಪೈಕಿ 302 ಹಳ್ಳಿಗಳು ಪಿಥೋರ್ಗಢ, ಚಮೋಲಿ ಮತ್ತು ಉತ್ತರಕಾಶಿ ಜಿಲ್ಲೆಗಳ ವ್ಯಾಪ್ತಿಗೆ ಒಳಪಡುತ್ತವೆ. ಈ ಮೂರು ಜಿಲ್ಲೆಗಳಲ್ಲಿ 30 ಕಾರ್ಯನಿರತ ಜಲವಿದ್ಯುತ್ ಸ್ಥಾವರಗಳಿದ್ದು, 2016- 21ರ ನಡುವೆ ಸಂಭವಿಸಿರುವ ಅವಘಡಗಳಲ್ಲಿ ಶೇ 50ಕ್ಕೂ ಹೆಚ್ಚು ಈ ಮೂರು ಜಿಲ್ಲೆಗಳಲ್ಲಾಗಿವೆ. 302 ಹಳ್ಳಿಗಳಲ್ಲಿ 70 ಹಳ್ಳಿಗಳನ್ನು ಅತಿ ಸೂಕ್ಷ್ಮವೆಂದು ಗುರುತಿಸಲಾಗಿದ್ದು ಅವುಗಳನ್ನು ತಕ್ಷಣವೇ ಸ್ಥಳಾಂತರಿಸಬೇಕಾಗಿದೆ. 2021ರ ನಂತರ ರೇಣಿಯಲ್ಲಿ ಸಂಭವಿಸಿದ ಅವಘಡಗಳಿಂದ ಇದು ಸಹ ಈ ಅತಿಸೂಕ್ಷ್ಮ ವರ್ಗಕ್ಕೆ ಸೇರಿದೆ.

ಇಂದು ರೇಣಿಯಲ್ಲಿ ಬರೀ 135 ಜನ ವಾಸಿಸುತ್ತಿದ್ದಾರೆ. ಅವರಲ್ಲಿ 1974ರಲ್ಲಿ ಗೌರಾದೇವಿಯೊಡನೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆಲವು ಮಹಿಳೆಯರೂ ಇದ್ದಾರೆ. ಯುವಜನರೆಲ್ಲ ಉದ್ಯೋಗ ಅರಸಿ ರೇಣಿಯಿಂದ ದೂರಹೋಗಿದ್ದಾರೆ. ವಾಯುಗುಣ ಬದಲಾವಣೆಯ ಪರಿಣಾಮಗಳು ಎದ್ದು ಕಾಣುತ್ತಿವೆ. ಚಳಿಗಾಲದ ಅವಧಿ ಕಡಿಮೆಯಾಗಿ ತೀವ್ರತೆ ಹೆಚ್ಚುತ್ತಿದೆ. ಬೇಸಿಗೆಯ ಅವಧಿ ಹೆಚ್ಚಿ ಬಿಸಿಲು ಪ್ರಖರವಾಗುತ್ತಿದೆ. ಅನಿರೀಕ್ಷಿತ ಮಳೆ, ಮೇಘ ಸಿಡಿತದ ಪ್ರಕರಣಗಳು ಏರುತ್ತಿವೆ. ಕಾಲ ಕೆಳಗಿನ ನೆಲ ಸರಿದಂತೆ ಭಾಸವಾಗಿ ಬಿರುಕುಗಳು ಕಾಣುತ್ತಿವೆ. ಮಳೆಗಾಲ ಹತ್ತಿರವಾದಂತೆ 2021ರ ಅವಘಡಗಳ ಕರಾಳ ನೆನಪು ಇಲ್ಲಿನ ನಿವಾಸಿಗಳನ್ನು ಕಾಡುತ್ತದೆ. ಆದಷ್ಟು ಬೇಗ ಸುರಕ್ಷಿತ ಸ್ಥಳದಲ್ಲಿ ತಮಗೆ ಪುನರ್ವಸತಿ ಕಲ್ಪಿಸಬೇಕೆಂದು ಸರ್ಕಾರವನ್ನು ಈ ಜನ ಒತ್ತಾಯಿಸುತ್ತಿದ್ದಾರೆ.

ನಮ್ಮ ದೇಶದ ಮೊದಲ ‘ಎಕೊ ಫೆಮಿನಿಸ್ಟ್ ಮೂವ್ಮೆಂಟ್’ ಎಂಬ ಹೆಗ್ಗಳಿಕೆಯಿರುವ ಚಿಪ್ಕೊ ಆಂದೋಲನವನ್ನು ಮುನ್ನಡೆಸಿದ ನಾಯಕಿ ಗೌರಾದೇವಿಯ ಪುತ್ಥಳಿ ಈಗ ರೇಣಿಯಲ್ಲಿಲ್ಲ. 2021ರಲ್ಲಿ ಅದನ್ನು ಜೋಶಿಮಠಕ್ಕೆ ಸ್ಥಳಾಂತರಿಸಲಾಯಿತು. ಚಿಪ್ಕೊ ಚಳವಳಿಯನ್ನು ನೆನಪಿಸುವ ರೇಣಿಯಲ್ಲಿರುವ ಏಕಮಾತ್ರ ಸ್ಮಾರಕವೆಂದರೆ ಅಲ್ಲಿನ ಉದ್ಯಾನದಲ್ಲಿರುವ, ಗೌರಾದೇವಿ ಮತ್ತು ಇತರ ಮಹಿಳೆಯರು ಮರಗಳನ್ನು ತಬ್ಬಿನಿಂತ ಪ್ರತಿಮೆ. ಆದಷ್ಟು ಬೇಗ ರೇಣಿಯಿಂದ ಹೊರಟು, ಸುರಕ್ಷಿತ ಸ್ಥಾನದಲ್ಲಿ ಹೊಸ ಬದುಕು ಕಟ್ಟಿಕೊಳ್ಳಲು ತುದಿಗಾಲಿನಲ್ಲಿ ನಿಂತಿರುವ ಅಳಿದುಳಿದ ನಿವಾಸಿಗಳಿಗೆ, ಅನಾಥವಾಗಿ ನಿಂತಿರುವ ಈ ಪ್ರತಿಮೆಯ ಬಗ್ಗೆ ಅಂತಹ ವಿಶೇಷ ಕಾಳಜಿಯೇನಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.