ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ, ‘ಸ್ವಾತಂತ್ರ್ಯ’ದ ಕುರಿತಂತೆ ಜನರಿಗೆ, ವಿಶೇಷವಾಗಿ ಯುವಜನರಿಗೆ ಎಂತಹ ಕಲ್ಪನೆಯಿದೆ ಎನ್ನುವುದರ ಬಗ್ಗೆ ಚರ್ಚಿಸಬೇಕಾದ ಅಗತ್ಯವಿದೆ ಎನಿಸುತ್ತದೆ.
ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಬ್ರಿಟಿಷರಿಂದ ರಾಜಕೀಯ ಸ್ವಾತಂತ್ರ್ಯ ಪಡೆಯುವುದು ದೇಶಭಕ್ತರ ಮುಖ್ಯ ಧ್ಯೇಯವಾಗಿದ್ದುದು ಸಹಜವಾಗಿತ್ತು. ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು, ಗತಿಸಿದ ಆ ದೇಶಭಕ್ತರ ಸ್ಮರಣೆ ಮಾಡುತ್ತಾ ಸಾಂಕೇತಿಕವಾಗಿ ಆಚರಿಸಿದರಷ್ಟೇ ಸಾಕೆ ಅಥವಾ ವರ್ತಮಾನದ ಜಗತ್ತಿಗೆ ಅನ್ವಯವಾಗುವಂತೆ ಸ್ವಾತಂತ್ರ್ಯದ ಬಗ್ಗೆ ಹೊಸ ವ್ಯಾಖ್ಯಾನಗಳನ್ನು ಕಂಡುಕೊಳ್ಳಬೇಕೆ?

ಸ್ವಾತಂತ್ರ್ಯವನ್ನು ತಮ್ಮ ತಮ್ಮ ವೈಯಕ್ತಿಕ ನೆಲೆಯಲ್ಲಿಯೇ ಅರ್ಥ ಮಾಡಿಕೊಳ್ಳುವುದು ಈಗ ಸಾಮಾನ್ಯವಾಗುತ್ತಿದೆ. ಅಂದರೆ, ಸ್ವಾತಂತ್ರ್ಯವು ವೈಯಕ್ತಿಕ ಪ್ರಶ್ನೆಯಾದಾಗ, ಅದೊಂದು ಹಕ್ಕು ಎನ್ನುವುದು ಹೆಚ್ಚು ಪ್ರಸ್ತುತವಾಗಿ, ಜವಾಬ್ದಾರಿ ಎನ್ನುವ ಅಂಶ ಅರ್ಥ ಕಳೆದುಕೊಳ್ಳುತ್ತದೆ. ಯಾರಿಗೂ ಕ್ಯಾರೇ ಎನ್ನದೆ ಬೇಜವಾಬ್ದಾರಿಯಿಂದ ಬದುಕುವುದು, ಮೋಜು ಮಸ್ತಿಯಲ್ಲಿ ಕಾಲಹರಣ ಮಾಡುವುದು, ಹೆಚ್ಚು ಶ್ರಮವಿಲ್ಲದೆ ಸುಲಭ ಮಾರ್ಗಗಳ ಮೂಲಕ ಹಣ, ಪ್ರಸಿದ್ಧಿ ಗಳಿಸುವುದೇ ಈಗ ವ್ಯಕ್ತಿ ಸ್ವಾತಂತ್ರ್ಯ ಎನಿಸಿಕೊಂಡಿದೆ. ಹಾಗಾದರೆ, ನಿಜವಾದ ಸ್ವಾತಂತ್ರ್ಯ ಏನೆಂದು ಮಕ್ಕಳಿಗೆ ತಿಳಿಹೇಳುವುದು ಹೇಗೆ?

ಪಾಶ್ಚಿಮಾತ್ಯ ಸಂಸ್ಕೃತಿಗಳಲ್ಲಿ, ಮಕ್ಕಳು ತಪ್ಪು ಮಾಡಿದಾಗ ಹೆತ್ತವರಿಗೆ ದಂಡಿಸುವ ಅಧಿಕಾರವಿಲ್ಲ. ನಮ್ಮ ಸಂಸ್ಕೃತಿಯಲ್ಲಿ ಹೆತ್ತವರ ಎದುರು ನಿಂತು ವಾದಿಸಿದರೆ ಅದು ಅಗೌರವ ಎನಿಸುತ್ತದೆ. ಇವುಗಳ ನಡುವೆ, ಮಕ್ಕಳ ಸ್ವಾತಂತ್ರ್ಯವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಇಂದು, ಕೆಲವು ದೇಶಗಳಲ್ಲಿ ಎಳೆಯ ವಯಸ್ಸಿನ ಮಕ್ಕಳು ಡ್ರಗ್ಸ್ ಜಾಲದಲ್ಲಿ, ಗನ್ ಮಾಫಿಯಾದಲ್ಲಿ, ಸುಲಭವಾಗಿ ಹಣ ಗಳಿಸುವ ದಂಧೆಗಳಲ್ಲಿ ಒತ್ತಾಯಪೂರ್ವಕವಾಗಿ ಅಥವಾ ಸ್ವಪ್ರೇರಣೆಯಿಂದ ತೊಡಗಿರುವುದನ್ನು ನಾವು ಕಾಣುತ್ತೇವೆ. ನಮ್ಮ ದೇಶದಲ್ಲಿಯೂ ಮಕ್ಕಳು ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡು ಸ್ವೇಚ್ಛಾಚಾರದಿಂದ ವರ್ತಿಸುವ ಪ್ರವೃತ್ತಿ ಹೆಚ್ಚುತ್ತಿದೆ.

ಅತಿಯಾದ ಕಟ್ಟುಪಾಡುಗಳಿಂದ ಬೆಳೆಸುತ್ತಾ ಮಕ್ಕಳ ಮೇಲೆ ನಮ್ಮ ಆಸೆ ಆಕಾಂಕ್ಷೆಗಳನ್ನು ಹೇರುವುದು ಒಂದು ರೀತಿಯ ಸ್ವಾತಂತ್ರ್ಯಹರಣ ಎನಿಸಿದರೆ, ಮಕ್ಕಳನ್ನು ಸಂಪೂರ್ಣವಾಗಿ ಅವರಿಚ್ಛೆಯಂತೆ ಜವಾಬ್ದಾರಿಯಿಲ್ಲದೆ ಬದುಕಲು ಬಿಡುವುದು ಕೂಡ ಅಷ್ಟೇ ಅಪಾಯಕಾರಿ ಎನ್ನಬಹುದು. ಆದ್ದರಿಂದ, ನಾವು ನಮ್ಮ ಮಕ್ಕಳಿಗೆ ಸ್ವಾತಂತ್ರ್ಯದ ಉನ್ನತ ಮಾದರಿಯಾಗಿ ಬಾಳುವುದು ಹೆಚ್ಚು ಉಪಯುಕ್ತ. ತೇಜಸ್ವಿ ಅವರಿಗೆ ಕುವೆಂಪು ಇದ್ದಂತೆ.

ಇಂದಿನ ಹೆತ್ತವರು ತಮ್ಮ ಮಕ್ಕಳಿಗೆ ವೈಯಕ್ತಿಕ ಸ್ವಾತಂತ್ರ್ಯದ ಕುರಿತು ಸ್ಪಷ್ಟತೆ ಕೊಡುವಲ್ಲಿ ಸೋತಿದ್ದಾರೆ ಎಂಬುದಕ್ಕೆ ನಿದರ್ಶನಗಳು ಹೇರಳವಾಗಿ ಸಿಗುತ್ತವೆ. ಯಾಕೆಂದರೆ, ನಾವು ಈ ಪ್ರಪಂಚಕ್ಕೆ ಕಣ್ಣು ತೆರೆಯು
ತ್ತಿದ್ದಂತೆಯೇ ಪರಿಸರ, ಮನೆ, ಜಾತಿ, ಧರ್ಮ, ಭಾಷೆ, ಪ್ರದೇಶ, ದೇಶ, ಸಂಸ್ಕೃತಿ, ಆರ್ಥಿಕ ಸ್ಥಿತಿ, ಹೆತ್ತವರ ಸಿದ್ಧಾಂತ, ಜೀವನದೃಷ್ಟಿಯಂತಹ ಅಂಶಗಳಿಂದ ರೂಪಿಸಲಾದ ವ್ಯವಸ್ಥೆಯೊಂದನ್ನು ಕಿಂಚಿತ್ತೂ ಪ್ರಶ್ನಿಸದೆ ಸಂಪೂರ್ಣವಾಗಿ ಒಪ್ಪಿಕೊಂಡು, ಬದುಕನ್ನು ಕಟ್ಟಿಕೊಳ್ಳುವಂತೆ ಪ್ರೇರೇಪಿಸಲಾಗುತ್ತದೆ. ಇವುಗಳಿಗೆ ನಿಷ್ಠರಾಗಿ ಬದುಕುವವರಿಗೆ ಪ್ರೋತ್ಸಾಹ, ಸವಲತ್ತುಗಳು ಸಿಗುತ್ತವೆ. ವಿಸ್ಮಯವೆಂದರೆ, ಈ ರೀತಿ ವ್ಯವಸ್ಥೆಗೆ ಒಗ್ಗಿ ನಡೆಯುವವರಿಗೂ ಒಂದು ಹಂತದಲ್ಲಿ ಬದುಕು ಸರಿಯಾಗಿಲ್ಲ ಎಂದು ಅನ್ನಿಸುವುದು ಯಾಕೆ? ಇದನ್ನು ನಾವು ‘ಮಧ್ಯ ವಯಸ್ಸಿನ ಬಿಕ್ಕಟ್ಟು’ ಎಂದು ಹೆಸರಿಸಿದ್ದೇವೆ. ಇರುವುದೆಲ್ಲವ ಬಿಟ್ಟು ಇರದುದನ್ನು ನೆನೆದು ಪರಿತಪಿಸುವ, ನಿಟ್ಟುಸಿರುಬಿಡುವ, ಬದುಕಿಗೊಮ್ಮೆ ಹಿನ್ನೋಟ ಬೀರುವ ಈ ಅವಸ್ಥೆ ಬಹುತೇಕರ ಸ್ವಅನುಭವ. ಈ ವಿದ್ಯಮಾನದ ಕುರಿತಂತೆ ಅನೇಕ ಸಾಹಿತಿಗಳು, ದಾರ್ಶನಿಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇಂಗ್ಲಿಷ್ ಕವಿ ರಾಬರ್ಟ್ ಫ್ರಾಸ್ಟ್ನ ಪ್ರಸಿದ್ಧ ಕವನ, ‘ದಿ ರೋಡ್ ನಾಟ್ ಟೇಕನ್’, ಮಾಡದ ಆಯ್ಕೆ ಮತ್ತು ಕಳೆದುಹೋದ ದಿನಗಳನ್ನು ಮರುವಿಮರ್ಶೆಗೆ ಒಡ್ಡುತ್ತದೆ.

ಜೀವನದ ಸಂಧಿಕಾಲದಲ್ಲಿ, ಬದುಕನ್ನು ಇನ್ನಷ್ಟು ಹಸನಾಗಿಸಬಹುದಾದ ಆಯ್ಕೆಗಳ ಸ್ವಾತಂತ್ರ್ಯಕ್ಕಿರುವ ನಿರ್ಬಂಧಗಳ ಕುರಿತು ಹಪಹಪಿಸುವಾಗ, ನಮ್ಮ ಮುಂದೆ ಎರಡು ಸಾಧ್ಯತೆಗಳು ಎದುರಾಗುತ್ತವೆ- ಒಂದು, ಬದುಕಿನ ಉಳಿದ ದಿನಗಳನ್ನು ಮುಕ್ತವಾಗಿ ಜೀವಿಸುವ ದೃಢ ನಿರ್ಧಾರ ಕೈಗೊಳ್ಳುವುದು. ಬಹುಶಃ, ಬುದ್ಧ ಕೂಡ ಈ ಪರ್ವಕಾಲದಲ್ಲಿಯೇ ತನ್ನ ಅರಮನೆಯ ಅತಿಯಾದ ವೈಭೋಗ, ಸಂಸಾರ ಜೀವನ ಎಲ್ಲದರಲ್ಲೂ ಅತೃಪ್ತಿ ಅನುಭವಿಸಿ, ನಿಜವಾದ ಸ್ವಾತಂತ್ರ್ಯದ ಹುಡುಕಾಟದಲ್ಲಿ ಪ್ರಾಪಂಚಿಕ ಪರ್ಯಟನೆಗಿಳಿದ ಮತ್ತು ಬದುಕಿನ ಸತ್ಯದರ್ಶನವನ್ನು ತನ್ನೊಳಗೆ, ಪ್ರಕೃತಿಯ ಮಡಿಲಲ್ಲಿ ಕಂಡುಕೊಂಡ ಎನ್ನಬಹುದು.

ಎರಡನೆಯದು, ಇನ್ನುಳಿದಿರುವ ದಿನಗಳಲ್ಲಿ ತಾನೇನೂ ಮಾಡಲು ಸಾಧ್ಯವಿಲ್ಲ ಎಂದುಕೊಂಡು ಸಂಪೂರ್ಣ ಹತಾಶೆಯಲ್ಲಿ ಮುಳುಗಿ, ನಿಶ್ಶಕ್ತಿಯಿಂದ ಜೀವನದ ಸಂಧ್ಯಾಕಾಲದತ್ತ ಮೌನವಾಗಿ ಹೆಜ್ಜೆಯಿಡುವುದು. ಸಾಮಾನ್ಯವಾಗಿ, ಹೆಚ್ಚಿನವರು ಎರಡನೆಯ ಮಾರ್ಗದಲ್ಲಿಯೇ ಮುಂದುವರಿಯುತ್ತಾರೆ ಮತ್ತು
ಅದನ್ನೇ ಉಳಿದವರಿಗೂ ಬೋಧಿಸುವುದರಿಂದಲೇ ನಿಜವಾದ ಸ್ವಾತಂತ್ರ್ಯದ ಅರಿವಿನ ದರ್ಶನ ಹೊಸ ತಲೆಮಾರುಗಳಿಗೆ ಬೇಗ ಆಗದೇ ಇರುವುದು.

ಈ ಕಾರಣದಿಂದ, ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಮಾತುಗಳು ಬಹಳ ಅರ್ಥಪೂರ್ಣ ಎನಿಸುತ್ತವೆ. ‘ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ವಿನಾ ಸುಲಭಕ್ಕೆ ಸಿಗುವುದಿಲ್ಲ’. ಸಾಮಾನ್ಯವಾಗಿ ನಾವು ಪ್ರಾಪಂಚಿಕ ವ್ಯವಸ್ಥೆಗಳಿಂದ ಶಹಬಾಷ್ಗಿರಿ ಪಡೆಯುವುದಕ್ಕಾಗಿ, ಜೀವನದ ಸುಂದರ ಕ್ಷಣಗಳನ್ನು ಅನುಭವಿಸುವುದನ್ನು ಮರೆತು ಬಿಡುತ್ತೇವೆ. ಇಂತಹ ಸ್ವಾತಂತ್ರ್ಯ ಪಡೆಯುವುದು ಮುಖ್ಯ ಎನ್ನುವ ಅರಿವು, ಎಲ್ಲರಿಗೂ ನಿಲುಕದ ಜೀವನದರ್ಶನ. ಇದು ಸಾಮಾಜಿಕ ಕಾಳಜಿ ಮತ್ತು ಜವಾಬ್ದಾರಿಯಿಂದ ಪಕ್ವವಾದ ವೈಯಕ್ತಿಕ ಸ್ವಾತಂತ್ರ್ಯ.

ಜವಾಬ್ದಾರಿಯಿಂದ ಕೂಡಿದ ಸ್ವಾತಂತ್ರ್ಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಾದರೆ, ನಿಷ್ಠುರದ ಪ್ರಶ್ನೆ
ಯೊಂದನ್ನು ನಾವು ಹಾಕಿಕೊಳ್ಳಬೇಕಾಗುತ್ತದೆ- ವ್ಯವಸ್ಥೆ ಕೆಟ್ಟು ಹೋಗಿದೆಯೆಂದು, ಅದನ್ನು ದುರುಪಯೋಗ ಮಾಡಿಕೊಂಡು ಇನ್ನಷ್ಟು ಆರ್ಥಿಕ ಸ್ವಅಭಿವೃದ್ಧಿಗೆ ಮುಂದಾಗುವುದು, ಉಳಿದ ಜೀವಿಗಳ ಬದುಕುವ ಹಕ್ಕನ್ನು ಕಿತ್ತುಕೊಳ್ಳುವುದನ್ನು ಸ್ವಾತಂತ್ರ್ಯ ಎನ್ನಬಹುದೇ?

ಈ ದಿಸೆಯಲ್ಲಿ, ಪ್ರಸಕ್ತ ನಮಗೆ ಅಗತ್ಯವಾಗಿರುವ ಸ್ವಾತಂತ್ರ್ಯವೆಂದರೆ- ತನ್ನ ಇಷ್ಟದಂತೆ ಬದುಕುವ ಮತ್ತು ವೈಯಕ್ತಿಕ ಗುರಿಗಳನ್ನು ನಿರ್ವಿಘ್ನವಾಗಿ ಮುಟ್ಟುವ ಸ್ವಾತಂತ್ರ್ಯ. ತನ್ನ ಹವ್ಯಾಸವನ್ನೇ ವೃತ್ತಿಯಾಗಿಸುವ ಆರ್ಥಿಕ ಸ್ವಾತಂತ್ರ್ಯ. ಆಮಿಷಕ್ಕೆ ಒಳಗಾಗದೆ ಜವಾಬ್ದಾರಿಯಿಂದ ಮತ ಚಲಾಯಿಸಿ, ಸರ್ಕಾರ ಜೀವಪರವಾಗಿ ಕೆಲಸ ಮಾಡುವಂತೆ ಒತ್ತಾಯಿಸುವ ಸಂಘಟಿತ ಸ್ವಾತಂತ್ರ್ಯ. ಅನ್ಯಾಯ, ದೌರ್ಜನ್ಯದ ವಿರುದ್ಧ ಧ್ವನಿಯೆತ್ತುವ ಸ್ವಾತಂತ್ರ್ಯ. ವ್ಯವಸ್ಥೆಯಲ್ಲಿ ಪಳಗಿದ ಲೂಟಿಕೋರರು ಸ್ವಹಿತಾಸಕ್ತಿಗಾಗಿ ಪರಿಸರವನ್ನು ಲೂಟಿ ಮಾಡಿ, ಜನಸಾಮಾನ್ಯರ ಬದುಕು ಮತ್ತು ಜೀವವೈವಿಧ್ಯವನ್ನು ನಿರ್ನಾಮಗೊಳಿಸದಂತೆ ಜನಜಾಗೃತಿ ಮೂಡಿಸುವ ಸ್ವಾತಂತ್ರ್ಯ. ಜಾತಿ, ಧರ್ಮ ಮತ್ತು ಲಿಂಗ ತಾರತಮ್ಯಗಳನ್ನು ಮೀರಿ ಬದುಕುವ ಸ್ವಾತಂತ್ರ್ಯ. ಪ್ರಾಪಂಚಿಕ ವೈಭೋಗಗಳಿಗೆ ಸಡ್ಡು ಹೊಡೆದು ಸರಳವಾಗಿ ಬದುಕುವ ಸ್ವಾತಂತ್ರ್ಯ...

ಹೀಗೆ, ಸ್ವಾತಂತ್ರ್ಯವು ಪ್ರತಿಯೊಬ್ಬರ ವೈಯಕ್ತಿಕ ಅನುಭವ ಆಗಬೇಕಾದುದು ಇಂದಿನ ಅಗತ್ಯ. ಅದು ಸಾಧ್ಯವೇ ಎನ್ನುವುದನ್ನು ಅವರವರೇ ಕಂಡುಕೊಳ್ಳಬೇಕಾಗಿದೆ. ಇಂದು, ನಮ್ಮನ್ನಾಳುವ ನಾಯಕರು ಸ್ವಹಿತ ಸಾಧನೆಗಾಗಿ ಇಂತಹ ಸ್ವಾತಂತ್ರ್ಯಕ್ಕೆ ನಾವು ತೆರೆದುಕೊಳ್ಳುವುದನ್ನು ಇಚ್ಛಿಸದೇ ಇರಬಹುದು. ಆದರೆ, ನಮ್ಮನ್ನು ಪ್ರೀತಿಸುವ ಹೆತ್ತವರು ನಮಗೇಕೆ ನಿಜಾರ್ಥದ ಸ್ವಾತಂತ್ರ್ಯವನ್ನು ಪರಿಚಯಿಸದೆ, ವ್ಯವಸ್ಥೆಯ ಮಿತಿಯೊಳಗೆ ಬದುಕು ಕಟ್ಟಿಕೊಳ್ಳುವುದೇ ಮುಖ್ಯ ಎನ್ನುತ್ತಾರೆ? ಇದು ಪ್ರೀತಿಪಾತ್ರರಿಗೆ ಮಾಡುವ ಆತ್ಮವಂಚನೆ ಎನಿಸಿಕೊಳ್ಳುವುದಿಲ್ಲವೇ? ಒಂದರ್ಥದಲ್ಲಿ, ನಮ್ಮ ಪೋಷಕರು ವ್ಯವಸ್ಥೆಯ ಪೋಷಕರು ಕೂಡ. ಹಾಗಾಗಿಯೇ, ವ್ಯವಸ್ಥೆಗಳುಉಸಿರುಗಟ್ಟಿದರೂ ಸುಭದ್ರವಾಗಿ ಉಳಿದು ಸ್ವಾತಂತ್ರ್ಯ ಹರಣ ಮಾಡುವುದನ್ನು ಮುಂದುವರಿಸಿವೆ. ಕೆಲವೇ ಮಂದಿ ಮಾತ್ರ ಬದುಕಿಡೀ ವ್ಯವಸ್ಥೆಯೊಂದಿಗೆ ಗುದ್ದಾಡುತ್ತಾ ನಿಜ ಸ್ವಾತಂತ್ರ್ಯದ ಆತ್ಮತೃಪ್ತಿ ಅನುಭವಿಸುತ್ತಾರೆ. ಇವರೇ ಸ್ವಾತಂತ್ರ್ಯದ ಹರಿಕಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.