ಹೊಸ ವರ್ಷದ ಪ್ರಾರಂಭದಲ್ಲೇ ಪಶ್ಚಿಮ ಬಂಗಾಳದ ಐದು ಉತ್ಪನ್ನಗಳಿಗೆ ಭಾರತ ಸರ್ಕಾರದ ‘ಪ್ರಮೋಷನ್ ಆಫ್ ಇಂಡಸ್ಟ್ರಿ ಆ್ಯಂಡ್ ಇಂಟರ್ನಲ್ ಟ್ರೇಡ್’ ಇಲಾಖೆಯು ಭೌಗೋಳಿಕ ಪ್ರದೇಶ ಸೂಚಿಯ (ಜಿಯೊಗ್ರಾಫಿಕಲ್ ಇಂಡಿಕೇಷನ್ ಟ್ಯಾಗ್- ಜಿ.ಐ) ಮನ್ನಣೆಯನ್ನು ಘೋಷಿಸಿದೆ. ಸುಂದರಬನದ ಜೇನುತುಪ್ಪ; ಜಲಪಾಯ್‍ಗುರಿಯ ‘ಕಾಲೋನ್ಯೂನಿಯ’ ಬಾಸ್ಮತಿ ಅಕ್ಕಿ; ನಾಡಿಯಾ, ಪೂರ್ವಬರ್ಧಮಾನ್, ಮುರ್ಷಿದಾಬಾದ್ ಮತ್ತು ಬೀರ್‍ಭೂಮ್ ಜಿಲ್ಲೆಗಳಲ್ಲಿ ತಯಾರಾಗುವ ಟ್ಯಾಂಗೈಲ್, ಕೋರಿಯಲ್ ಮತ್ತು ಗರಾಡ್ ಸೀರೆಗಳಿಗೆ ಈ ಗೌರವ ಸಂದಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಬೆಳವಣಿಗೆಯನ್ನು ಮೆಚ್ಚುಗೆಯಿಂದ ಸ್ವಾಗತಿಸಿದ್ದರೆ, ಈ ಕ್ಷೇತ್ರದಲ್ಲಿನ ಅನೇಕ ಪರಿಣತರು, ಈಗಾಗಲೇ ನಮ್ಮ ದೇಶದಲ್ಲಿರುವ 500 ಉತ್ಪನ್ನಗಳ, ಬಹುತೇಕ ನಿರರ್ಥಕ ಭೌಗೋಳಿಕ ಪ್ರದೇಶ ಸೂಚಿಗಳ ಉದ್ದನೆಯ ಪಟ್ಟಿಗೆ ಮತ್ತೆ ಐದು ವಸ್ತುಗಳ ಸೇರ್ಪಡೆ ಎಂದಿದ್ದಾರೆ.

ಉತ್ಪನ್ನವೊಂದರ ಗುಣಮಟ್ಟ ಮತ್ತು ಖ್ಯಾತಿ, ಅದು ಉತ್ಪಾದನೆಯಾಗುವ ಭೌಗೋಳಿಕ ಸ್ಥಾನದ ಮಹತ್ವದಿಂದ ಬಂದಂತಹ ಸಂದರ್ಭಗಳಲ್ಲಿ ಅದಕ್ಕೆ ಭೌಗೋಳಿಕ ಪ್ರದೇಶ ಸೂಚಿಯ ಪಟ್ಟ ನೀಡುವುದು ಜಾಗತಿಕವಾಗಿ, ವಿಶ್ವ ವ್ಯಾಪಾರ ಸಂಘಟನೆಯ ಎಲ್ಲ ಸದಸ್ಯ ರಾಷ್ಟ್ರಗಳಲ್ಲಿರುವ ಪರಿಪಾಟ. ಭಾರತದಲ್ಲಿ ಮೊದಲ ಜಿ.ಐ ದೊರೆತದ್ದು ಡಾರ್ಜಿಲಿಂಗ್ ಟೀಗೆ, 2004ರಲ್ಲಿ. ಡಾರ್ಜಿಲಿಂಗ್ ಟೀಗೆ ವಿಶಿಷ್ಟ ಪರಿಮಳ, ಅಸಾಮಾನ್ಯ ಸ್ವಾದ, ವಿಶೇಷವಾದ ಹೊಂಬಣ್ಣ, ನಾಲಗೆಯ ಮೇಲೆ ಬಹಳಷ್ಟು ಕಾಲ ಉಳಿಯುವ ಹದವಾದ ರುಚಿಯಂತಹ ಗುಣಗಳಿವೆ. ವಾರ್ಷಿಕ 250ರಿಂದ 300 ಸೆ.ಮೀ. ಮಳೆ, ಪ್ರತಿದಿನ 2-3 ಗಂಟೆಗಳ ಬಿಸಿಲು, ಹಗುರವಾದ ಕಾವಳ, ಇಬ್ಬನಿ, ಮೋಡ, ವರ್ಷವಿಡೀ ಬೀಸುವ ಕುಳಿರ್ಗಾಳಿ, ಫಲವತ್ತಾದ ಸಾವಯವ ಪದಾರ್ಥಗಳಿಂದ ತುಂಬಿದ ಮಣ್ಣಿನಿಂದ ಕೂಡಿದ, ಡಾರ್ಜಿಲಿಂಗ್ ಜಿಲ್ಲೆಯ 200ರಿಂದ 2000 ಮೀಟರ್ ಎತ್ತರದ ಏಳು ಕಣಿವೆಗಳ, 87 ಟೀ ತೋಟಗಳಲ್ಲಿ ಬೆಳೆಯುವ ಟೀಗೆ ಮಾತ್ರ ಮೇಲಿನ ವಿಶಿಷ್ಟ ಗುಣಗಳಿವೆ. ಡಾರ್ಜಿಲಿಂಗ್ ಟೀಗೆ ಜಿ.ಐ ದೊರೆತದ್ದು ಈ ಕಾರಣಗಳಿಂದ.

ಭೌಗೋಳಿಕ ಪ್ರದೇಶ ಸೂಚಿ ಮೂಲಭೂತವಾಗಿ ವಿಶೇಷ ಅನುಕೂಲಗಳಿರುವ ‘ಟ್ರೇಡ್ ಮಾರ್ಕ್’ ಇದ್ದಂತೆ. ಅದು ವಿಶಿಷ್ಟ ಪದಾರ್ಥವನ್ನು ಉತ್ಪಾದಿಸುವ, ಅಲ್ಲಿನ ಸಮುದಾಯಕ್ಕೆ ನೀಡುವ ಸಾಮೂಹಿಕ ಹಕ್ಕು. ಪ್ರಸ್ತುತ ಸುಮಾರು 66,000 ಉತ್ಪನ್ನಗಳಿಗೆ ಜಾಗತಿಕವಾಗಿ ಜಿ.ಐ ದೊರೆತಿದೆ. ಅದರಲ್ಲಿ ಶೇ 51ರಷ್ಟು ಭಾಗ ದ್ರಾಕ್ಷಾರಸ ಮತ್ತು ಮದ್ಯಗಳಿಗೆ ದೊರೆತಿದ್ದರೆ, ಕೃಷಿ ಮತ್ತು ಆಹಾರ ಉತ್ಪನ್ನಗಳಿಗೆ ಶೇ 43.6, ಕರಕುಶಲ ವಸ್ತುಗಳಿಗೆ ಶೇ 3.9, ಇತರ ಪದಾರ್ಥ ಮತ್ತು ಸೇವೆಗಳಿಗೆ ಶೇ 1.5ರಷ್ಟು ಜಿ.ಐಗಳು ಲಭಿಸಿವೆ. ಭೌಗೋಳಿಕ ಪ್ರದೇಶ ಸೂಚಿ ಪರಿಕಲ್ಪನೆಯ ಮುಖ್ಯ ಉದ್ದೇಶ ಅಂತಹ ವಿಶಿಷ್ಟ ಉತ್ಪನ್ನಗಳಿಗೆ ರಾಷ್ಟ್ರ ಮತ್ತು ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆಯನ್ನು ಕಲ್ಪಿಸಿ, ಅದರಿಂದ ದೊರೆಯುವ ಆರ್ಥಿಕ ಪ್ರಯೋಜನವನ್ನು ಸ್ಥಳೀಯ ಸಮುದಾಯಕ್ಕೆ ದೊರೆಯುವಂತೆ ಮಾಡುವುದು. ಉತ್ಪನ್ನದ ಗುಣಮಟ್ಟವನ್ನು ರಕ್ಷಿಸಿ, ಅದೇ ವಸ್ತುವನ್ನು ಬೇರೆ ಪ್ರದೇಶದ ಜನ ಉತ್ಪಾದಿಸದಂತೆ, ನಕಲಿ ಮಾಲುಗಳ ಹಾವಳಿಯನ್ನು ತಡೆಯುವುದು ಇತ್ಯಾದಿ.

ಜಾಗತಿಕ ಮಾರುಕಟ್ಟೆಯಲ್ಲಿ ಕೋಟ್ಯಂತರ ಡಾಲರ್‌ಗಳ ವ್ಯವಹಾರವಿರುವ ದುಬಾರಿ ಉತ್ಪನ್ನಗಳಾದ ಸ್ಕಾಚ್, ಶಾಂಪೇನ್, ಬ್ಲೂಚೀಸ್‌ನಂತಹವುಗಳ ಗುಣಮಟ್ಟವನ್ನು ಕಾಪಾಡಲು ಯುರೋಪಿಯನ್ ಒಕ್ಕೂಟವು ಜಿ.ಐ ಮಾನ್ಯತೆಯ ಪದ್ಧತಿಯನ್ನು ಬಳಕೆಗೆ ತಂದುದರಲ್ಲಿ ಅರ್ಥವಿದೆ. ಆದರೆ, ಭಾರತದಲ್ಲಿ ಯಾವುದೇ ರೀತಿಯ ಮಾರುಕಟ್ಟೆಯ ಸ್ಪರ್ಧೆಯಿಲ್ಲದ ವಸ್ತುಗಳಿಗೂ ಈ ಮಾನ್ಯತೆ ದೊರೆಯುತ್ತಿದ್ದು, ಇಂದು ಸುಮಾರು 500 ಉತ್ಪನ್ನಗಳಿಗೆ ಜಿ.ಐ ದೊರೆತಿದೆ. ಇವುಗಳಲ್ಲಿ ಅನೇಕ ಉತ್ಪನ್ನಗಳಿಗೆ ಯಾವುದೇ ತರ್ಕ, ನಿಯಮ, ಆರ್ಥಿಕ ವಿವೇಚನೆಯಿಲ್ಲದೇ ಜಿ.ಐ ಪಟ್ಟವನ್ನು ನೀಡಲಾಗಿದೆ ಎಂಬ ಟೀಕೆಯಿದೆ.

2015ರಲ್ಲಿ ದೋಸೆ, ಇಡ್ಲಿ, ಅಪ್ಪಂನಂತಹವುಗಳಿಗೆ ಹಿಟ್ಟು ಕಲಸುವ ‘ಕೊಯಂಬತ್ತೂರ್ ವೆಟ್ ಗ್ರೈಂಡರ್’ಗೆ ಜಿ.ಐ ದೊರೆತರೆ, ದೇಶದ ಮೂಲೆಮೂಲೆಗಳಲ್ಲೂ ಸಿದ್ಧವಾಗುವ ರಸಗುಲ್ಲಾಗೆ 2017ರಲ್ಲಿ ಪಶ್ಚಿಮ ಬಂಗಾಳಕ್ಕೆ ಜಿ.ಐ ದೊರೆತಿದೆ! ಇದನ್ನು ವಿರೋಧಿಸಿದ ಒಡಿಶಾ ರಾಜ್ಯಕ್ಕೆ, ‘ಒಡಿಶಾ ರೂಪಾಂತರದ ರಸಗುಲ್ಲಾ’ಗೆ 2019ರಲ್ಲಿ ಜಿ.ಐ ದೊರೆತಿದೆ. ಎರಡೂ ಸಿಹಿ ಪದಾರ್ಥಗಳಾದರೂ, ಚೆನ್ನೈನಲ್ಲಿರುವ ಜಿ.ಐ ರಿಜಿಸ್ಟ್ರಿ ಕಚೇರಿ ಮೂಲದ ಮಾಹಿತಿಯಂತೆ, ಒಡಿಶಾದ ರಸಗುಲ್ಲಾಗೆ ಜಿ.ಐ ಮಾನ್ಯತೆ ದೊರೆತಿರುವುದು ‘ಹಲ್ಲಿನಿಂದ ಒತ್ತಡ ಹೇರಿ, ಕಚ್ಚದಂತೆ ನೇರವಾಗಿ ನುಂಗಬಹುದಾದ ಅದರ ವಿಶಿಷ್ಟ ಗುಣಕ್ಕೆ’! ಮಧ್ಯಪ್ರದೇಶದ ಅರಣ್ಯ ಇಲಾಖೆ ಐತಿಹಾಸಿಕ ಮಾಡು ಪ್ರದೇಶದಲ್ಲಿನ ಆನೆಹುಣಿಸೆ (ಬಾವೋಬ್ಯಾಬ್) ಮರಗಳಿಗೆ ಜಿ.ಐ ಪಡೆಯುವ ಪ್ರಯತ್ನದಲ್ಲಿದೆ! ನಮ್ಮ ದೇಶದಲ್ಲಿ ಅನೇಕ ಬಾರಿ ಜಿ.ಐ ಮಾನ್ಯತೆ ದೊರೆತಿರುವುದು ಸರ್ಕಾರಿ ಸಂಸ್ಥೆಗಳಿಗೇ ವಿನಾ ಅಂತಹ ವಸ್ತುಗಳನ್ನು ಉತ್ಪಾದಿಸುವ ಸಮುದಾಯಗಳಿಗಲ್ಲ!

ಉತ್ಪನ್ನವೊಂದಕ್ಕೆ ಜಿ.ಐ ಮಾನ್ಯತೆ ದೊರೆತ ಕೂಡಲೇ ಮಾರುಕಟ್ಟೆಯಲ್ಲಿ ಅದಕ್ಕೆ ಉತ್ತಮ ಬೆಲೆ ದೊರೆತು, ಅದನ್ನು ಉತ್ಪಾದಿಸುವ ಸಮುದಾಯದ ಆರ್ಥಿಕ ಪರಿಸ್ಥಿತಿ ತಾನೇತಾನಾಗಿ ಸುಧಾರಿಸುವುದಿಲ್ಲ. ಅದು ಸಾಧ್ಯವಾಗಬೇಕಾದರೆ ಸರ್ಕಾರದ ಸಕ್ರಿಯ ಮಧ್ಯಪ್ರವೇಶ, ಸಮುದಾಯದ ಸಂಘಟನೆ, ತಂತ್ರಜ್ಞಾನದ ಬೆಂಬಲ, ಮಧ್ಯವರ್ತಿಗಳಿಂದ ಮುಕ್ತವಾದ ಮಾರುಕಟ್ಟೆ ವ್ಯವಸ್ಥೆಯಂತಹವುಗಳು ಅಗತ್ಯ. ಆದರೆ ನಮ್ಮ ದೇಶದ ಬಹುತೇಕ ರಾಜ್ಯಗಳಿಗೆ, ಸ್ಥಳೀಯ ಉತ್ಪನ್ನಗಳಿಗೆ ಭೌಗೋಳಿಕ ಪ್ರದೇಶ ಸೂಚಿ ಮಾನ್ಯತೆಯನ್ನು ಪಡೆದುಕೊಳ್ಳುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆಯೇ ವಿನಾ, ಮಾನ್ಯತೆ ದೊರೆತ ನಂತರದ ಕ್ರಮಗಳ ಬಗ್ಗೆ ಅಂತಹ ಆಸಕ್ತಿಯಿಲ್ಲ. ಚನ್ನಪಟ್ಟಣದ ಆಟದ ಸಾಮಾನು, ಕಿನ್ನಾಳ ಗೊಂಬೆ, ಮೈಸೂರು ಸಿಲ್ಕ್, ಇಳಕಲ್ ಸೀರೆ, ನಂಜನಗೂಡಿನ ರಸಬಾಳೆ, ಕೊಡಗಿನ ಕಿತ್ತಳೆ, ಧಾರವಾಡದ ಪೇಢದಂತಹ 42 ಉತ್ಪನ್ನಗಳಿಗೆ ಜಿ.ಐ ಮಾನ್ಯತೆ ಪಡೆದು ದೇಶದಲ್ಲಿಯೇ ಮೊದಲನೆಯ ಸ್ಥಾನದಲ್ಲಿ ಇರುವ ಕರ್ನಾಟಕದಲ್ಲೂ, ಅವುಗಳನ್ನು ಉತ್ಪಾದಿಸುವ ಸ್ಥಳೀಯ ಸಮುದಾಯಗಳ ಆರ್ಥಿಕ ಪರಿಸ್ಥಿತಿ ಎದ್ದು ಕಾಣುವಂತೆ ಬದಲಾಗಿಲ್ಲ ಎಂಬುದು ಪರಿಣತರ ಅಭಿಪ್ರಾಯ.

2019ರಲ್ಲಿ ಕರ್ನಾಟಕ ಸರ್ಕಾರ ತನ್ನ ಭೌಗೋಳಿಕ ಪ್ರದೇಶ ಸೂಚಿ ನೀತಿಯನ್ನು ಪ್ರಕಟಿಸಿತು. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಭಾಗವಾಗಿರುವ ವಿಶ್ವೇಶ್ವರಯ್ಯ ಟ್ರೇಡ್ ಪ್ರಮೋಷನ್ ಸೆಂಟರ್ (ವಿ.ಟಿ.ಪಿ.ಸಿ) ಈ ನೀತಿಯನ್ನು ಅನುಷ್ಠಾನಗೊಳಿಸಬೇಕಿದೆ. ಜಿ.ಐ ಮಾನ್ಯತೆ ಪಡೆದಿರುವ ಉಡುಪಿ ಮಲ್ಲಿಗೆ, ಉಡುಪಿ ಸೀರೆ, ಉಡುಪಿ ಮಟ್ಟುಗುಳ್ಳ ಬದನೆ, ಬಿದರಿ ಕಲೆ, ಗಂಜೀಫಾ ಮತ್ತು ಮೈಸೂರಿನ ಸಾಂಪ್ರದಾಯಿಕ ಚಿತ್ರಕಲೆಗಳಿಗೆ ಸಂಬಂಧಿಸಿದಂತೆ, ಮಾನ್ಯತೆ ಪಡೆದ ನಂತರ ಆಗಬೇಕಾದ ಕೆಲಸಗಳ ಬಗ್ಗೆ ವಿ.ಟಿ.ಪಿ.ಸಿ ವಿವರವಾದ ವರದಿಗಳನ್ನು ಸಿದ್ಧಪಡಿಸಿದೆ. ಉಡುಪಿ ಮಲ್ಲಿಗೆಗೆ ಸಂಬಂಧಿಸಿದ ವರದಿಯನ್ನು ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಿದ್ಧಪಡಿಸಿದ್ದರೆ, ಬಿದರಿ ಕಲೆಗೆ ಸಂಬಂಧಿಸಿದ ವರದಿಯನ್ನು ಎಂ.ಎಸ್.ರಾಮಯ್ಯ ಕಾನೂನು ಕಾಲೇಜು ಸಿದ್ಧಪಡಿಸಿದೆ. ಈ ಆರೂ ವರದಿಗಳು ಆಯಾ ಉತ್ಪನ್ನಗಳಿಗೆ ಸಂಬಂಧಿಸಿದ ಸಮಸ್ತ ವಿಷಯಗಳನ್ನೂ ಕೂಲಂಕಷವಾಗಿ ಅಧ್ಯಯನ ಮಾಡಿ, ಅವುಗಳಿಗೆ ದೊರೆತಿರುವ ಜಿ.ಐ ಮಾನ್ಯತೆಯನ್ನು ಸಾರ್ಥಕಗೊಳಿಸುವ ದಿಸೆಯಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಅನೇಕ ಉಪಯುಕ್ತ ಸಲಹೆಗಳನ್ನು ನೀಡಿವೆ. ಈ ವಿಷಯದಲ್ಲಿ ಕೇರಳ ನಮಗಿಂತ ಮುಂದಿದೆ. ಕೇರಳ ವಿಶ್ವವಿದ್ಯಾಲಯವು ಜಿ.ಐ ಮಾನ್ಯತೆ ಪಡೆದ ಏಳು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಸ್ಥಳೀಯ ಸಮುದಾಯದ ಜೊತೆಗೆ ಕೈಜೋಡಿಸಿದೆ. ಸೆಂಟ್ರಲ್ ಕಾಯರ್ ರಿಸರ್ಚ್ ಇನ್‌ಸ್ಟಿಟ್ಯೂಟ್, ಜಿ.ಐ ದೊರೆತಿರುವ ಅಲೆಪ್ಪಿ ತೆಂಗಿನ ನಾರಿನ ಕರಕುಶಲ ವಸ್ತುಗಳಲ್ಲಿ ನಾವೀನ್ಯ ತರುವ ಕೆಲಸದಲ್ಲಿ ಸ್ಥಳೀಯ ಸಮುದಾಯಕ್ಕೆ ನೆರವು ನೀಡುತ್ತಿದೆ.

ರಾಜಸ್ಥಾನದ ಕೋಟಾ ದೊರಿಯಾ ಮತ್ತು ಮಧ್ಯಪ್ರದೇಶದ ಚಾಂದೇರಿ ರೇಷ್ಮೆಗಳಲ್ಲಿ ಹೊಸ ವಿನ್ಯಾಸಗಳನ್ನು ತರಲು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಶ್ರಮಿಸುತ್ತಿದ್ದಾರೆ. ಈ ಎಲ್ಲವೂ ಸ್ವಾಗತಾರ್ಹ ಕ್ರಮಗಳೇ. ಆದರೆ ಇಂತಹ ನಿದರ್ಶನಗಳು ಬೆರಳೆಣಿಕೆಯಷ್ಟು ಮಾತ್ರ.

ಭೌಗೋಳಿಕ ಪ್ರದೇಶ ಸೂಚಿಯ ಮಾನ್ಯತೆಯನ್ನು ಪಡೆಯಲು ವಿವಿಧ ರಾಜ್ಯಗಳ ನಡುವೆ ಇಂದು ತೀವ್ರ ಪೈಪೋಟಿ ನಡೆಯುತ್ತಿದೆ. ಅದನ್ನು ಪ್ರೋತ್ಸಾಹಿಸುತ್ತಿರುವ ಕೇಂದ್ರ ವಾಣಿಜ್ಯ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು ತನ್ನ ಗಮನವನ್ನು ಅಷ್ಟಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳದೆ, ಜಿ.ಐ ಪರಿಕಲ್ಪನೆಯನ್ನು ಅರ್ಥಪೂರ್ಣವಾಗಿಸುವತ್ತ ಹರಿಸುವ ಅಗತ್ಯವಿದೆ. ರಾಜ್ಯ ಸರ್ಕಾರಗಳೂ ಈ ದಿಕ್ಕಿನಲ್ಲಿ ತಮ್ಮ ಪ್ರಯತ್ನವನ್ನು ತ್ವರಿತಗೊಳಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.