ಹೊರಗುತ್ತಿಗೆ ಬಗ್ಗೆ ಸಾಕ್ಷ್ಯಚಿತ್ರ ಮಾಡಲು ನಾನು ಹದಿನೈದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದೆ. ಆಗ ನಾವು ಮೊದಲು ಭೇಟಿ ನೀಡಿದ ಕಂಪನಿಗಳ ಪಟ್ಟಿಯಲ್ಲಿ ‘24/7’ ಎಂಬುದೂ ಇತ್ತು. ಅದರ ಮುಖ್ಯ ಕೆಲಸ ಅಮೆರಿಕದ ಕಂಪನಿಗಳಿಂದ ಬರುವ ಕರೆಗಳಿಗೆ ಉತ್ತರಿಸುವುದು, ಕ್ರೆಡಿಟ್ ಕಾರ್ಡ್ಗಳಂತಹ ಹಣಕಾಸು ಉತ್ಪನ್ನಗಳನ್ನು ಮಾರುವುದಾಗಿತ್ತು.

ಆ ಕಂಪನಿಯ ಚಟುವಟಿಕೆಗಳ ಕೇಂದ್ರವಾಗಿದ್ದುದು ಯುವ ಟೆಲಿಫೋನ್ ಆಪರೇಟರ್ಗಳ ದೊಡ್ಡ ಕೋಣೆ. ಅವರಲ್ಲಿ ಬಹುತೇಕರು ಡಿಪ್ಲೊಮಾ ವಿದ್ಯಾರ್ಹತೆ ಮಾತ್ರ ಹೊಂದಿದ್ದರು. ಅವರು ಅತ್ಯುತ್ತಮ ರೀತಿಯಲ್ಲಿ ಅಮೆರಿಕನ್ ಇಂಗ್ಲಿಷ್ ಮಾತನಾಡಬಲ್ಲವರಾಗಿದ್ದರು. ಏಕಕಾಲದಲ್ಲಿ ನಡೆಯುತ್ತಿದ್ದ ನೂರಾರು ದೂರವಾಣಿ ಸಂಭಾಷಣೆಗಳ ಪರಿಣಾಮವಾಗಿ ಕಂಪನಿಯ ಕೆಲಸದ ಕೋಣೆ ಗದ್ದಲಮಯವಾಗಿತ್ತು.

ಈ ಕಂಪನಿಯ ಸಂಸ್ಥಾಪಕರಾದ ಪಿ.ವಿ. ಕಣ್ಣನ್ ಮತ್ತು ಷಣ್ಮುಗಂ ನಾಗರಾಜನ್ ಅವರು ಈಚೆಗೆ ನನ್ನನ್ನು ಆಹ್ವಾನಿಸಿದ್ದರು. ಅವರ ಕಂಪನಿಯ ಈಗಿನ ಹೆಸರು [24]7.ಎಐ. ಈಗ ಅಲ್ಲಿನ ಉದ್ಯೋಗಿಗಳ ಕೆಲಸದ ಕೋಣೆ ಶಾಂತವಾಗಿದೆ. ಅಲ್ಲಿ ಈಗ ಕೇಳಿಸುವ ಶಬ್ದ ಕಂಪ್ಯೂಟರ್ ಕೀಲಿಮಣೆಗಳದ್ದು ಮಾತ್ರ. ಏಕೆಂದರೆ ಅಮೆರಿಕದ ಬ್ಯಾಂಕುಗಳು, ಮಾಧ್ಯಮ ಸಂಸ್ಥೆಗಳು, ಇತರ ಕಂಪನಿಗಳಿಂದ ಬರುವ ಪ್ರಶ್ನೆಗಳೆಲ್ಲ ಪಠ್ಯದ ರೂಪದಲ್ಲಿರುತ್ತವೆ. ಆ ಪ್ರಶ್ನೆಗಳನ್ನು ಸ್ಮಾರ್ಟ್ಫೋನ್, ಲ್ಯಾಪ್ಟಾಪ್ ಮೂಲಕ ಕಳುಹಿಸಲಾಗುತ್ತದೆ.

ಹಾಗೆ ಬರುವ ಪಠ್ಯ ರೂಪದ ಪ್ರಶ್ನೆಗಳಿಗೆ ಮೊದಲ ಉತ್ತರ ನೀಡುವ ಕೆಲಸವನ್ನು ಸಾಮಾನ್ಯವಾಗಿ ಕೃತಕ ಬುದ್ಧಿಮತ್ತೆಯ ರೋಬೊ ನಿಭಾಯಿಸುತ್ತದೆ. ಅದಕ್ಕೆ ಉತ್ತರ ನೀಡಲು ಸಾಧ್ಯವಾಗದಿದ್ದರೆ ಮಾತ್ರ ಆ ಪ್ರಶ್ನೆ ‘ಮಾನವ ಬುದ್ಧಿಮತ್ತೆ’ಯನ್ನು ಉಪಯೋಗಿಸುವ ಮನುಷ್ಯನಿಗೆ ವರ್ಗಾವಣೆ ಆಗುತ್ತದೆ. [24]7.ಎಐ ಕಂಪನಿಯು ಇಂಗ್ಲಿಷ್ ಉಚ್ಚಾರಣೆ ಸರಿಪಡಿಸಿಕೊಳ್ಳಲು ಯತ್ನಿಸುತ್ತಿದ್ದ ಸ್ಥಿತಿಯಿಂದ ಚಿಕಿತ್ಸಕ ಮನಸ್ಸು ಬೆಳೆಸಿಕೊಳ್ಳಲು ಯತ್ನಿಸುವವರೆಗೆ ಆಗಿರುವ ಬದಲಾವಣೆಯು ಕೆಲಸದ ಸ್ಥಳಗಳಲ್ಲಿ ‘ಕೃತಕ ಬುದ್ಧಿಮತ್ತೆ’ ತಂದಿರುವ ಸ್ಥಿತ್ಯಂತರವನ್ನು ತೋರಿಸುತ್ತದೆ.

ಚುಟುಕಾಗಿ ಹೇಳಬೇಕೆಂದರೆ, ಭಾರತದ ಹಾಗೂ ಅಮೆರಿಕದ ಮಧ್ಯಮ ವರ್ಗ ಹೆಚ್ಚಿನ ವೇತನದ, ಮಧ್ಯಮ ಪ್ರಮಾಣದ ಕೌಶಲದ ಕೆಲಸಗಳ ಮೇಲೆ ನೆಲೆ ಕಂಡುಕೊಂಡಿತ್ತು. ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಅಂತಹ ಉದ್ಯೋಗಗಳು ಸಾಯುತ್ತಿವೆ. ಈಗ ಇರುವ ಕೆಲಸಗಳಲ್ಲಿ ಹೆಚ್ಚಿನವು ‘ಹೆಚ್ಚು ಸಂಬಳದ, ಹೆಚ್ಚು ಕೌಶಲ ಕೇಳುವ’ ಹಾಗೂ ‘ಕಡಿಮೆ ಕೌಶಲದ, ಕಡಿಮೆ ವೇತನ’ದವು. [24]7.ಎಐ ಕಂಪನಿಯಲ್ಲಿ ಕೆಲಸ ಮಾಡುವ ಎಲ್ಲರೂ ಪದವಿ ಶಿಕ್ಷಣ ಪಡೆದಿದ್ದಾರೆ. ಏಕೆಂದರೆ, ಇಂಗ್ಲಿಷ್ನಲ್ಲಿ ವ್ಯಾಕರಣ ದೋಷವಿಲ್ಲದೆ ಉತ್ತರ ಬರೆಯಬೇಕು, ಸೇವೆ ಪಡೆಯುತ್ತಿರುವ ವ್ಯಕ್ತಿ ಹಾಗೂ ಕೃತಕ ಬುದ್ಧಿಮತ್ತೆಯ ರೋಬೊ ನಡುವೆ ನಡೆಯುವ ಸಂಭಾಷಣೆ ಅರ್ಥ ಮಾಡಿಕೊಳ್ಳಬೇಕು, ರೋಬೊಗೆ ಉತ್ತರಿಸಲು ಆಗದಿದ್ದಾಗ ಸೇವೆ ಪಡೆಯುವ ವ್ಯಕ್ತಿಗೆ ಉತ್ತರ ನೀಡುವ ಸಾಮರ್ಥ್ಯ ಇರಬೇಕು.

ನಾನು ಬೆಂಗಳೂರಿಗೆ ಹೋಗಿದ್ದಾಗ ನಡೆಯುತ್ತಿದ್ದ ತರಬೇತಿಯಲ್ಲಿ, ಸೇವಾ ಗ್ರಾಹಕರ ಉದ್ದೇಶ ಏನೆಂಬುದನ್ನು ಅರ್ಥ ಮಾಡಿಕೊಳ್ಳಲು ರೋಬೊ ಯಾವಾಗ ವಿಫಲ ಆಗುತ್ತದೆ, ಗ್ರಾಹಕರು ಏನನ್ನು ಕೇಳುತ್ತಿದ್ದಾರೆ ಎಂಬುದನ್ನು ಯಾರು ತಕ್ಷಣಕ್ಕೆ ಗ್ರಹಿಸಬಲ್ಲರು ಎಂಬ ವಿಚಾರದಲ್ಲಿ ತರಬೇತಿ ನಿರತರ ನಡುವೆ ಸ್ಪರ್ಧೆ ನಡೆದಿತ್ತು. ಪ್ರಶ್ನೆಗಳಿಗೆ ಉತ್ತರಿಸಲು ರೋಬೊಗೆ ಆಗದಿದ್ದಾಗ ಮನುಷ್ಯ ಆ ಪ್ರಶ್ನೆಯನ್ನು ಗುರುತುಹಾಕಿ, ಕಂಪನಿಯ ಡಾಟಾ ವಿಜ್ಞಾನಿಗಳಿಗೆ ರವಾನಿಸಬೇಕು. ಅವರು ಅಂತಹ ಪ್ರಶ್ನೆಗಳಿಗೆ ಉತ್ತರಿಸಲು ಬೇಕಿರುವ ವ್ಯವಸ್ಥೆ ಮಾಡುತ್ತಾರೆ.

ನಾನು ಈ ಸಂದರ್ಭದಲ್ಲಿ ಡಿಜಿಟಲ್ ಲೋಕದ ‘ತೃಪ್ತಿ’ ಎಂಬ ಪದವನ್ನು ಕಲಿತೆ. ರೋಬೊ ತನಗೆ ಎದುರಾದ ಪ್ರಶ್ನೆಯನ್ನು ಮನುಷ್ಯನಿಗೆ ವರ್ಗಾವಣೆ ಮಾಡದೆ, ಎಷ್ಟು ಸುದೀರ್ಘವಾಗಿ ಮಾತುಕತೆ ನಡೆಸಬಲ್ಲದು ಎಂಬುದನ್ನು ಇದು ಅಳೆಯುತ್ತದೆ. [24]7.ಎಐ ಕಂಪನಿಯ ‘ತೃಪ್ತಿ’ಯ ಮಟ್ಟ ಒಟ್ಟು ಪ್ರಶ್ನೆಗಳ ಶೇಕಡ 20ರಷ್ಟರಿಂದ 50ರ ನಡುವೆ ಇದೆ. ‘ತೃಪ್ತಿ’ಯ ಮಟ್ಟವನ್ನು ಶೇಕಡ 80ರಷ್ಟಕ್ಕೆ ತಲುಪಿಸುವ ಉದ್ದೇಶ ಕಂಪನಿಯದ್ದು. ರೋಬೊಗಳು ಸೇವಾ ಗ್ರಾಹಕರ ಬಯಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಅರ್ಥ ಮಾಡಿಕೊಳ್ಳಲು ಆರಂಭಿಸಿ
ದಂತೆಲ್ಲ, ಮಾನವ ಸಂಪನ್ಮೂಲವನ್ನು ಇನ್ನಷ್ಟು ಸಂಕೀರ್ಣ ಸೇವೆ ಹಾಗೂ ಮಾರಾಟ ಕ್ಷೇತ್ರಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ‘ಇದರಿಂದ ಮಾರಾಟ ವೃದ್ಧಿ ಆಗುತ್ತದೆ. ಗ್ರಾಹಕರಿಗೆ ಇನ್ನಷ್ಟು ತೃಪ್ತಿ ಸಿಗುತ್ತದೆ’ ಎನ್ನುತ್ತಾರೆ ಕಣ್ಣನ್.

‘ರೋಬೊಗಳು ನಮ್ಮ ಮೇಲೆ ಸವಾರಿ ಮಾಡಲಿವೆ ಎಂಬ ಭಾವನೆಯನ್ನು ಈಚಿನ ದಿನಗಳಲ್ಲಿ ಹಾಲಿವುಡ್ ಹಾಗೂ ಬಾಲಿವುಡ್ ಸಿನಿಮಾಗಳು ಬಿತ್ತಿವೆ’ ಎನ್ನುತ್ತಾರೆ ತರಬೇತುದಾರೆ ಐರೀನ್ ಕ್ಲಾರಾ. ‘ಆದರೆ, ಈ ಭಾವನೆಯಲ್ಲಿ ಹುರುಳಿದೆ ಎಂದು ನನಗೆ ಅನಿಸುವುದಿಲ್ಲ. ಮನುಷ್ಯ ಮತ್ತು ರೋಬೊ ಒಟ್ಟಾಗಿ ಬೆಳೆಯುತ್ತಾರೆ. ರೋಬೊಗೆ ತರಬೇತಿ ನೀಡುವವನ ಕೌಶಲವು ತರಬೇತಿ ನೀಡುವಾಗ ಹೆಚ್ಚುತ್ತದೆ. ತರಬೇತಿ ನೀಡುವವನಿಗೆ ಕೌಶಲ ಇಲ್ಲದಿದ್ದರೆ ರೋಬೊ ಅಸಮರ್ಥ ಆಗುತ್ತದೆ’ ಎನ್ನುವುದು ಕ್ಲಾರಾ ಹೇಳಿಕೆ. ಅಂದರೆ, ವಿಶ್ಲೇಷಣಾತ್ಮಕ ಆಲೋಚನೆಗಳು ಇರುವ ವ್ಯಕ್ತಿಯ ಪಾಲಿಗೆ ರೋಬೊ ಎಂಬುದು ಸ್ನೇಹಿತ ಇದ್ದಂತೆ. ಆದರೆ, ಸುಲಭವಾಗಿ ಮಾಡಬಹುದಾದ ಮಾಮೂಲಿ ಕೆಲಸ ಮಾಡುವ ವ್ಯಕ್ತಿಯ ಪಾಲಿಗೆ ರೋಬೊಗಳು ಸ್ನೇಹಿತರಲ್ಲ.

ಕೌಶಲ ಇಲ್ಲದ ಕಾರ್ಮಿಕರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ಭಾರತದಂತಹ ದೇಶಗಳು ಇನ್ನು ಮಾಡುವುದು ಏನು? ಈ ಸವಾಲನ್ನು ಅವು ಹೇಗೆ ಎದುರಿಸಬೇಕು? ತಂತ್ರಜ್ಞಾನವು ಮನುಷ್ಯನ ಕೈಯಿಂದ ಏನನ್ನೋ ಕಿತ್ತುಕೊಳ್ಳುವ ಸಂದರ್ಭದಲ್ಲಿ, ಇನ್ನೇನನ್ನೋ ಕೊಡುವ ಕೆಲಸವನ್ನೂ ಮಾಡುತ್ತದೆ. ಭಾರತದ ಮೊಬೈಲ್ ಸೇವಾದಾತ ಕಂಪನಿ ಜಿಯೊ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮೊಬೈಲ್ ಸೇವಾ ಶುಲ್ಕಗಳನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ. ಇದರ ಪರಿಣಾಮವಾಗಿ, ಭಾರತೀಯ ಸಮಾಜದಲ್ಲಿ ಮೊಬೈಲ್ ದೂರವಾಣಿ ಬಳಕೆ ಪ್ರಮಾಣ ಹಿಂದೆಂದಿಗಿಂತ ಹೆಚ್ಚಾಗಿದೆ. ಈಗ, ದಿನಕ್ಕೆ ಕೆಲವೇ ಕೆಲವು ರೂಪಾಯಿಗಳನ್ನು ಸಂಪಾದಿಸುವವರು ಕೂಡ ಮೊಬೈಲ್ ಹೊಂದಿದ್ದಾರೆ. ಇದು ಅವರನ್ನು ಬಡತನದಿಂದ ಮೇಲೆತ್ತಲು ಸಲಕರಣೆಯ ರೂಪದಲ್ಲಿ ಒದಗಿಬಂದಿದೆ.

ನಾನು ಲೀನ್ಅಗ್ರಿ ಎಂಬ ಕಂಪನಿಯ ಪ್ರತಿನಿಧಿಗಳನ್ನು ಭೇಟಿ ಮಾಡಿದೆ. ಅವರು ಕೃತಕ ಬುದ್ಧಿಮತ್ತೆ ಬಳಸಿ ಸರಳವಾದ ಮೊಬೈಲ್ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಭಾರತದ ಬಡ ರೈತರನ್ನು ಇನ್ನಷ್ಟು ಯಶಸ್ವಿ ರೈತರನ್ನಾಗಿಸುವ ಉದ್ದೇಶದ್ದು. ಈ ಆ್ಯಪ್ ಮೂಲಕ ಒಂದು ಕ್ಯಾಲೆಂಡರ್ ಸಿದ್ಧಪಡಿಸಲಾಗಿದೆ. ಅದು ರೈತರಿಗೆ ಹವಾಮಾನ ಬದಲಾವಣೆ ಆಧರಿಸಿ, ಎಷ್ಟು ಬೀಜ ಬಿತ್ತನೆ ಮಾಡಬೇಕು, ಎಷ್ಟು ಗೊಬ್ಬರ ಉಣಿಸಬೇಕು ಎಂಬುದನ್ನು ಹೇಳುತ್ತದೆ. ಯಾವಾಗ ಮತ್ತು ಎಷ್ಟು ನೀರುಣಿಸಬೇಕು ಎಂಬುದನ್ನೂ ಹೇಳುತ್ತದೆ. ಈ ಕಂಪನಿಯ ಪ್ರಾಯೋಗಿಕ ಯೋಜನೆಯು ಮೂರು ರಾಜ್ಯಗಳ ಮೂರು ಸಾವಿರ ರೈತರಿಗೆ ನೆರವಾಗುತ್ತಿದೆ. ಕೆಲವು ರೈತರ ಆದಾಯದಲ್ಲಿ ಈಗಾಗಲೇ ಹತ್ತು ಪಟ್ಟು ಹೆಚ್ಚಳ ಆಗಿದೆ ಎಂದು ಕಂಪನಿ ಹೇಳಿದೆ.

ಹಾಗಾಗಿ, ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಕಥೆ ಇಷ್ಟೇ ಎಂಬ ತೀರ್ಮಾನಕ್ಕೆ ಈಗಲೇ ಬರುವಂತಿಲ್ಲ. ಕೃತಕ ಬುದ್ಧಿಮತ್ತೆಯ ನೆರವಿನ ಕಾರಣದಿಂದಾಗಿ, ಭಾರತೀಯ ಸಮಾಜದ ಮೇಲಿನ ಸಾಲಿನಲ್ಲಿ ಕುಳಿತವರು ಮಾತ್ರವಲ್ಲದೆ, ಕೆಳಗಿನ ಸಾಲುಗಳಲ್ಲಿ ಕುಳಿತವರಿಗೂ
ಒಳ್ಳೆಯದಾಗುತ್ತದೆ.

ದಿ ನ್ಯೂಯಾರ್ಕ್ ಟೈಮ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.