ರಾಜ್ಯದಲ್ಲಿ ಮತ್ತೆ ಬರ. ಈವರೆಗೆ 114 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಿದ್ದು ಇನ್ನೂ ಹಲವು ತಾಲ್ಲೂಕುಗಳು ಸೇರ್ಪಡೆಗೆ ಕಾದಿವೆ. ತಮ್ಮ ತಾಲ್ಲೂಕನ್ನು ಬರಪೀಡಿತವೆಂದು ಘೋಷಿಸಲು ಹಟಕ್ಕೆ ಬಿದ್ದು ಹೋರಾಡುವ ನಮ್ಮ ಜನಪ್ರತಿನಿಧಿಗಳು, ಜನಸಂಘಟನೆಗಳು, ಮಠಾಧೀಶರೆಲ್ಲಾ ಆನಂತರ ಎಲ್ಲವೂ ಸರಿಹೋಯಿತೇನೋ ಎಂಬಂತೆ ಪೂರ್ತಿ ತಣ್ಣಗಾಗಿಬಿಡುತ್ತಾರೆ.

ಬರಪರಿಹಾರ ಕಾರ್ಯದ ವಿಚಾರದಲ್ಲಿ ತಾವು ಮಾಡಬೇಕಾದ್ದೇನೂ ಇಲ್ಲ ಎಂದು ಭಾವಿಸುತ್ತಾರೆ. ದಶಕದಿಂದ ಈಚೆಗಂತೂ ನಮ್ಮ ರಾಜ್ಯದಲ್ಲಿ ಪ್ರತಿ ಎರಡು ಅಥವಾ ಮೂರು ವರ್ಷಕ್ಕೆ ಬರ ತಲೆದೋರುವುದು, ಸರ್ಕಾರ ಕೆಲ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸುವುದು ಮಾಮೂಲು ಎಂಬಂತಾಗಿರುವುದರಿಂದ ಬರಪರಿಹಾರದ ಪ್ಯಾಕೇಜ್ ಸಿದ್ಧವಾಗಿ ಇರುತ್ತದೆ. ಅದರಲ್ಲಿ ಒಂದೇ ಒಂದು ಅಂಶವೂ ಬದಲಾಗುವುದಿಲ್ಲ.

ಜನ-ಜಾನುವಾರಿಗೆ ಕುಡಿಯುವ ನೀರು; ಬೆಳೆ ಪರಿಹಾರ; ಮೇವು ಪೂರೈಕೆ; ಉದ್ಯೋಗ ಖಾತ್ರಿಯಲ್ಲಿ ಕೆಲಸ; ಪರಿಸ್ಥಿತಿ ಇನ್ನೂ ಬಿಗಡಾಯಿಸಿದರೆ ಗಂಜಿ ಕೇಂದ್ರಗಳನ್ನು ತೆರೆಯುವುದು. ಈ ವರ್ಷವೂ ಇದೇ ಪ್ಯಾಕೇಜ್ ಘೋಷಣೆಯಾಗಿದೆ. ಈ ಸಿದ್ಧ ಪ್ಯಾಕೇಜ್ ಸಂತ್ರಸ್ತ ರೈತರ ಬವಣೆಗೆ ನಿಜವಾದ ಪರಿಹಾರವೇ ಎಂಬುದನ್ನು ಸಂಬಂಧಪಟ್ಟ ಎಲ್ಲರೂ ಗಂಭೀರವಾಗಿ ಯೋಚಿಸಿ ಕಾರ್ಯಶೀಲರಾಗಬೇಕಿದೆ. ಮೊದಲನೆಯದಾಗಿ, ಬೆಳೆ ಪರಿಹಾರ. ಈವರೆಗೆ ಒಣಭೂಮಿ ರೈತರಿಗೆ ಅವರು ಹಾಕಿದ ಬೆಳೆಯ ಆಧಾರದ ಮೇಲೆ ಎಕರೆಗೆ ₹ 800ರಿಂದ ₹ 2000 ವರೆಗೆ ಪರಿಹಾರ ಕೊಡಲಾಗುತ್ತಿದೆ. ಈ ವರ್ಷ ಇನ್ನೂ ನೂರಿನ್ನೂರು ಹೆಚ್ಚಾಗಬಹುದು. ಈ ಪರಿಹಾರ ಮೊತ್ತದ ಮಾನದಂಡ ಯಾವ ಮಹಾಶಯರ ಸಂಶೋಧನೆಯೋ ತಿಳಿಯಲೊಲ್ಲದು.

ನಮ್ಮ ರಾಜ್ಯದಲ್ಲಿ ಮಳೆಯಾಶ್ರಿತ ಬೇಸಾಯದಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರು ಹಾಕುವ ಬೆಳೆಗಳನ್ನು ಆಧರಿಸಿ ರಾಸಾಯನಿಕ ಕೃಷಿಯಲ್ಲಿ ಎಕರೆಗೆ ಸರಾಸರಿ ₹ 20 ಸಾವಿರದಿಂದ ₹ 30 ಸಾವಿರದವರೆಗೆ ಆದಾಯ ಬರುತ್ತದೆ. ಇಲ್ಲಿ ಬಿತ್ತನೆ ವೇಳೆಗೆ ರೈತರಿಗೆ ಬೀಜ, ಗೊಬ್ಬರ, ಕೂಲಿಯೆಲ್ಲಾ ಸೇರಿ ₹8000 ವರೆಗೆ ಖರ್ಚಾಗಿರುತ್ತದೆ. ಬಿ.ಟಿ. ಹತ್ತಿಯಾದರೆ ಇನ್ನೂ ಹೆಚ್ಚು. ಹೀಗಿದ್ದಾಗ ಬೆಳೆ ಪರಿಹಾರಕ್ಕೆ ರೈತರಿಗೆ ಆ ವರ್ಷ ಬರಬೇಕಾದ ಆದಾಯವನ್ನು ಪರಿಗಣಿಸಬೇಕು. ಅದಿಲ್ಲದಿದ್ದರೆ ಆ ಹಂಗಾಮಿಗೆ ಮಾಡಿದ ಖರ್ಚನ್ನಾದರೂ ಗಣನೆಗೆ ತೆಗೆದುಕೊಳ್ಳಬೇಕು. ಈಗ ಸರ್ಕಾರ ಕೊಡುತ್ತಿರುವ ಪರಿಹಾರ ರೈತ ಬೀಜಕ್ಕೆ ತೆತ್ತ ದುಡ್ಡಿಗೂ ಸಮವಿಲ್ಲ. ಈ ಬಿಡುಗಾಸಿಗಾಗಿ ದಾಖಲಾತಿಗಳನ್ನೆಲ್ಲಾ ಹೊಂದಿಸಿಕೊಂಡು, ಅರ್ಜಿ ಹಿಡಿದು ದಿನವಿಡೀ ಸಾಲಿನಲ್ಲಿ ನಿಲ್ಲಬೇಕಾದ ರೈತರ ಪಾಡು ಬರಕ್ಕಿಂತಲೂ ಸಂಕಟಕರ. ಅಧಿಕಾರಶಾಹಿಯ ಮುಂದೆ ಪರಿಹಾರಕ್ಕೆ ಕೈಯೊಡ್ಡಬೇಕಾದ ಅಪಮಾನ ರೈತರಿಗಂತೂ ಸಹಿಸಲು ಅಸಾಧ್ಯ.

ಎರಡನೆಯದಾಗಿ, ಜಾನುವಾರಿನ ಮೇವು. ಇಲ್ಲಿ ರೈತರಿಗೆ ಒಂದು ಬಾರಿ ಒಣಹುಲ್ಲಿನ ವಿತರಣೆ ಮಾಡುತ್ತಾರೆ ಅಥವಾ ಕೆಲ ದಿನಗಳ ಕಾಲ ಗೋಶಾಲೆಗಳನ್ನು ತೆರೆಯುತ್ತಾರೆ. ಇಲ್ಲಿ ಸಿಗುವ ಪ್ರಮಾಣದ ಮತ್ತು ಗುಣಮಟ್ಟದ ಮೇವಿನಿಂದ ರೈತರು ತಮ್ಮ ಜಾನುವಾರುಗಳನ್ನು ಉಳಿಸಿಕೊಂಡ ಒಂದೇ ಒಂದು ಉದಾಹರಣೆ ಇಲ್ಲ. ಜಾನುವಾರುಗಳನ್ನು ಉಳಿಸಿಕೊಳ್ಳಲೇಬೇಕೆನ್ನುವವರು ಮನೆಯಲ್ಲಿರುವ ಅಷ್ಟಿಷ್ಟು ಬಂಗಾರ ಒತ್ತೆಯಿಟ್ಟೋ, ಸಾಲಸೋಲ ಮಾಡಿಯೋ ದುಬಾರಿ ಬೆಲೆಗೆ ಮೇವು ತರುತ್ತಾರೆ. ಇಲ್ಲದವರು ಜಾನುವಾರು ಮಾರಿಬಿಡುತ್ತಾರೆ. ಈ ಬಾರಿ ಪಶು ಸಂಗೋಪನಾ ಇಲಾಖೆಗೆ ಬಂದಿರುವ ₹ 5 ಕೋಟಿ ಅನುದಾನದಲ್ಲಿ ರೈತರಿಗೆ ಮೇವಿನ ಬೀಜದ ಕಿಟ್ ವಿತರಿಸುವುದಾಗಿ ಹೇಳಿದ್ದಾರೆ. ಒಣ ಬೇಸಾಯದ ಬೆಳೆಗಳೇ ನೆಲಕಚ್ಚಿರುವಾಗ ನೀರು ಬಯಸುವ ಮೇವಿನ ಬೀಜಗಳನ್ನು ಕೊಡುತ್ತೇವೆ ಎನ್ನುವವರಿಗೆ ಏನೆನ್ನಬೇಕು?

ಮೂರನೆಯದಾಗಿ, ಜನ ಜಾನುವಾರಿಗೆ ಕುಡಿಯುವ ನೀರು. ಇಲ್ಲಿ ಪ್ರತಿ ಗ್ರಾಮ ಅಥವಾ ಗೊಂಚಲು ಗ್ರಾಮಗಳಿಗೆ ಒಂದು ಬೋರ್‌ವೆಲ್ ಕೊರೆಸಿ ನೀರು ಪೂರೈಕೆ ಮಾಡುತ್ತಾರೆ. ಕೆಲಕಡೆ ಡ್ಯಾಮ್‌ಗಳಿಂದ ನೀರನ್ನು ಒದಗಿಸುವುದೂ ಉಂಟು. ಇದಕ್ಕಾಗಿ ಈ ವರ್ಷ ಈಗಾಗಲೇ ಬಿಡುಗಡೆಯಾಗಿರುವ ₹ 149 ಕೋಟಿಯಲ್ಲಿ ₹ 75 ಕೋಟಿ ಎತ್ತಿರಿಸಲಾಗಿದೆಯೆಂದು ವರದಿಯಾಗಿದೆ. 2011–12ರಿಂದ ಈವರೆಗೆ ಒಂದಿಲ್ಲಾ ಒಂದು ವರ್ಷ ಇದೇ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದಾಗ ಬಹುತೇಕ ಗ್ರಾಮಗಳಲ್ಲಿ ಹೊಸ ಬೋರ್‌ವೆಲ್ ಕೊರೆಸಲಾಗಿದೆ. ಹಾಗಾದರೆ ಆ ಬೋರ್‌ವೆಲ್‌ಗಳೆಲ್ಲ್ಲಾ ಈಗ ನಿಷ್ಕ್ರಿಯವಾಗಿವೆಯೇ? ಒಂದುವೇಳೆ ಅವು ಚಾಲೂ ಇದ್ದರೂ ಈಗ ಮತ್ತೊಂದು ಬೋರ್‌ವೆಲ್ ಕೊರೆಸುತ್ತಾರೆಯೇ? ಕೊರೆಸದಿದ್ದರೆ ಆ ಹಣ ಏನಾಗುತ್ತದೆ? ಈ ವಿಚಾರಗಳು ಯಾವುದೇ ವಸ್ತುನಿಷ್ಠ ಪರಿಶೀಲನೆಗೆ ಒಳಪಡದೆ ತಾಲ್ಲೂಕಿನ ತಹಶೀಲ್ದಾರರ ಯೋಚನಾ ಲಹರಿ ಎಂತಿರುತ್ತದೆಯೋ ಅಂತೆಯೇ ಅನುಷ್ಠಾನವಾಗುತ್ತದೆ. ಎಷ್ಟಾದರೂ ಬರ ಎಂದರೆ ಇವರಿಗೆ ಬಲು ಇಷ್ಟ ತಾನೆ.

ಇನ್ನೂ ಒಳಹೊಕ್ಕು ನೋಡಿದಂತೆಲ್ಲಾ ಬರಪರಿಹಾರದಲ್ಲಿ ರೈತರೆಲ್ಲಿದ್ದಾರೆ ಎಂದು ಹುಡುಕುವ ಪರಿಸ್ಥಿತಿ ಬರುತ್ತದೆ. ನಡುವೆ ಉಂಡ ಅಧಿಕಾರಶಾಹಿ ಮತ್ತು ಮಧ್ಯವರ್ತಿಗಳು ಮಾತ್ರ ನಮ್ಮ ಮುಂದೆ ಗಹಗಹಿಸುತ್ತಾರೆ. ಇದೆಲ್ಲವನ್ನೂ ಅರಿತಿರುವ ಸರ್ಕಾರ ಕುರುಡಾಗಿರುವುದನ್ನು ಬಿಟ್ಟು ಈ ಕೆಳಕಂಡ ಅಂಶಗಳತ್ತ ತಕ್ಷಣ ಗಮನ ಹರಿಸಲಿ.

ಬೆಂಬಲ ಬೆಲೆ ಘೋಷಿಸಿ: ಈಗಿರುವ ಅವೈಜ್ಞಾನಿಕ ಬೆಳೆ ಪರಿಹಾರದ ಮೊತ್ತವನ್ನು ಪರಿಷ್ಕರಿಸುವ ಜೊತೆಗೆ ಈ ಹಂಗಾಮಿನಲ್ಲಿ ಆದ ಬೆಳೆ ನಷ್ಟವನ್ನು ಮುಂದಿನ ಹಂಗಾಮಿನ ಬೆಳೆಗೆ ಸೂಕ್ತ ಬೆಲೆ ಒದಗಿಸುವ ಮೂಲಕ ತುಂಬಿಕೊಡುವ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳಬೇಕು. ರಾಜ್ಯದ ಅನೇಕ ಜಿಲ್ಲೆಗಳಲ್ಲಿ, ಅದರಲ್ಲೂ ಕಪ್ಪು ಮಣ್ಣು ಪ್ರದೇಶದಲ್ಲಿ ಹಿಂಗಾರಿ ಬೇಸಾಯವೇ ಪ್ರಧಾನ. ಹಿಂಗಾರಲ್ಲಿ ಜೋಳ, ಕಡಲೆ, ಗೋಧಿ, ಕುಸುಬಿ, ಹುರುಳಿ ಇನ್ನೂ ಅನೇಕ ಮಿಶ್ರ ಬೆಳೆಗಳು ಇರುತ್ತವೆ. ಜೊತೆಗೆ ತಡವಾದ ಮುಂಗಾರಿಗೆ ಹಾಕಿದ ಈರುಳ್ಳಿ, ಶೇಂಗಾಗಳಲ್ಲಿನ ಮಿಶ್ರ/ ರಿಲೇ ಬೆಳೆಗಳೂ ಹಿಂಗಾರಿಗೆ ಮುಂದುವರೆಯುತ್ತವೆ. ಈ ವರ್ಷ ಕರ್ನಾಟಕದ ಬಹುತೇಕ ಕಡೆ ಮೃಗಶಿರಾದಿಂದ ಆಶ್ಲೇಷದವರೆಗೆ ಮಳೆಗಳು ಕೈಕೊಟ್ಟದ್ದರಿಂದ ರೋಹಿಣಿ ಮಳೆಗೆ ಬಿತ್ತನೆಯಾದ ಬೆಳೆಗಳು ಒಣಗಿವೆ.

ಕಳೆದ ಕೆಲ ದಿನಗಳಿಂದ ಮಖೆ ಮಳೆ ಚೆನ್ನಾಗಿ ಬೀಳುತ್ತಿರುವುದರಿಂದ ನವಣೆ, ರಾಗಿ, ಶೇಂಗಾ (ಕೆಲಕಡೆ), ರಾಗಿ, ತೊಗರಿ (ಅಕ್ಕಡಿ) ಬಿತ್ತನೆ ಹುರುಪಿನಿಂದ ನಡೆದಿದೆ. ಹಿಂಗಾರಿ ಬಿತ್ತನೆ ಅಕ್ಟೋಬರ್‌ವರೆಗೂ ನಡೆಯುತ್ತದೆ. ಮುಂದೆ ಇರುವ ಪುಬ್ಬ, ಉತ್ತರ, ಹಸ್ತ, ಚಿತ್ತ ಮಳೆಗಳು ಈ ಬೆಳೆಗಳಿಗೆ ವಿವಿಧ ಹಂತದಲ್ಲಿ ಉಣಿಸುತ್ತವೆ. ಮುಂದೆ ಇಬ್ಬನಿಗೆ ಹೊಂದಿಕೊಂಡು ಬೆಳೆಯುವ ಹಿಂಗಾರಿ ಬೆಳೆಗಳು ಸಾಮಾನ್ಯವಾಗಿ ರೈತರನ್ನು ಕೈಬಿಡುವುದಿಲ್ಲ. ಆದ್ದರಿಂದ ಸರ್ಕಾರ ಈಗಿಂದೀಗಲೇ ಈ ಎಲ್ಲಾ ಬೆಳೆಗಳಿಗೆ ಉತ್ತಮ ಬೆಂಬಲ ಬೆಲೆಯನ್ನು ಘೋಷಿಸಿದರೆ ರೈತರು ನೆಮ್ಮದಿಯಿಂದ ಮುಂದಿನ ಬೆಳೆಗಳ ಬೇಸಾಯದಲ್ಲಿ ತೊಡಗಿಕೊಳ್ಳುತ್ತಾರೆ. ರೈತರು ಅಪೇಕ್ಷಿಸುವುದು ಬಿಡುಗಾಸಿನ ಪರಿಹಾರವನ್ನಲ್ಲ, ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಎಂದು ಕೂಗಿ ಹೇಳುತ್ತಿದ್ದರೂ ಕಿವಿಗೊಡದಿರುವ ಸರ್ಕಾರದ ಧೋರಣೆ ಬದಲಾಗಲೇಬೇಕು.

ಗಂಜಿ ಕೇಂದ್ರವಲ್ಲ, ಧಾನ್ಯ ಇರಲಿ: ಮುಂಗಾರು ಮಳೆಗಳು ಹೋದರೆ ಯಾವಾಗ ಧಾನ್ಯ ಮತ್ತು ಮೇವಿನ ಕೊರತೆ ಉಂಟಾಗುತ್ತದೆ ಎನ್ನುವುದನ್ನು ಅರಿತು ಸರ್ಕಾರ ಧಾನ್ಯ, ಮೇವುಗಳಿಗೆ ಏರ್ಪಾಡು ಮಾಡಬೇಕು. ‘ಈಗ ಬರ ಬಿದ್ದಿದೆ, ಮೇವಿಲ್ಲ, ಧಾನ್ಯವಿಲ್ಲ ಅನ್ನುವವರು ರೈತರೇ ಅಲ್ಲ’ ಎನ್ನುವ ಹೆಸರಾಂತ ಸಾವಯವ ಕೃಷಿಕ ಡಿ.ಡಿ.ಭರಮಗೌಡ್ರ ಅವರ ಮಾತು ತುಂಬಾ ಪ್ರಸ್ತುತ. ಈ ಹಂಗಾಮಿನಲ್ಲಿ ಉಂಟಾದ ಬೆಳೆ ಹಾನಿಯಿಂದ ಮುಂಬರುವ ದಿನಗಳಲ್ಲಿ ಧಾನ್ಯ ಮತ್ತು ಮೇವಿನ ಕೊರತೆಯಾಗುತ್ತದೆಯೇ ಹೊರತು ಈ ತಕ್ಷಣ ಅಲ್ಲ ಎಂಬ ಕನಿಷ್ಠ ತಿಳಿವಳಿಕೆ ಬರ ಪರಿಹಾರದ ರೂವಾರಿಗಳಿಗೇಕಿಲ್ಲ?

ಈ ಮುಂಗಾರಿನಲ್ಲಿ ಜೋಳದ ನಷ್ಟವಾಗಿರುವುದರಿಂದ ಮುಂದಿನ ದಿನಗಳಲ್ಲಿ ರೈತರಿಗೆ ಊಟಕ್ಕೆ ಕೊರತೆಯಾಗುವ ಪರಿಸ್ಥಿತಿಯಿದೆ. ಸರ್ಕಾರ ಈಗ ಗಂಜಿ ಕೇಂದ್ರ ತೆರೆಯುವ ಪ್ರಸ್ತಾಪವನ್ನು ಬಿಟ್ಟು ರೈತರಿಗೆ ಧಾನ್ಯ ಒದಗಿಸುವ ಬಗ್ಗೆ ಯೋಚಿಸಲಿ. ಪಡಿತರದಲ್ಲಿ ರಾಗಿ, ಜೋಳಗಳನ್ನು ವಿತರಿಸುವ ತನ್ನ ಯಾವತ್ತೂ ತೀರ್ಮಾನವನ್ನು ಈಗಲಾದರೂ ಕಾರ್ಯರೂಪಕ್ಕೆ ತರಲಿ. ಜೋಳದ ಬೇಸಾಯಕ್ಕೆ ಖರ್ಚು ಹೆಚ್ಚು, ಬೆಲೆ ಕಡಿಮೆ ಎಂಬ ಕಾರಣಕ್ಕೆ ರಾಜ್ಯದಲ್ಲಿ ಪ್ರಧಾನವಾಗಿ ಜೋಳ ಬೆಳೆಯುವ ಜಿಲ್ಲೆಗಳಲ್ಲಿ ಜೋಳದ ಬೇಸಾಯವೇ ತುಂಬಾ ಕಡಿಮೆಯಾಗಿದೆ. ಸರ್ಕಾರ ಈಗಿಂದೀಗಲೇ ಜೋಳಕ್ಕೆ ಉತ್ತಮ ಬೆಂಬಲ ಬೆಲೆ ಘೋಷಿಸಿದರೆ ರೈತರು ಉತ್ಸುಕರಾಗಿ ಬರುವ ಹಂಗಾಮಿನಲ್ಲಿ ಬೆಳೆಯಲು ಮುಂದಾಗುತ್ತಾರೆ. ಇದರಿಂದ ಮುಂದೆ ಪಡಿತರದಲ್ಲಿ ಜೋಳದ ವಿತರಣೆಗೂ ಅವಕಾಶವಾಗುತ್ತದೆ. ಅದೇ ರೀತಿ ರಾಗಿ ಕೂಡ. ರಾಜ್ಯದಲ್ಲಿ ಕಳೆದ ಹಂಗಾಮಿನಲ್ಲಿ ಬೆಳೆದ ರಾಗಿಯ 10% ಕೂಡ ಸರ್ಕಾರ ಖರೀದಿಸಿಲ್ಲ.

ಈಗಲೂ ರಾಜ್ಯದ ರೈತರಲ್ಲಿ ಒಂದು ಲಕ್ಷ ಟನ್ನಿಗೂ ಹೆಚ್ಚು ಉತ್ಕೃಷ್ಟ ರಾಗಿ ಇದೆ. ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕೊಂದರಲ್ಲೇ 40 ಸಾವಿರ ಟನ್‌ವರೆಗೂ ರಾಗಿ ರೈತರ ಬಳಿ ಇದೆ. ಈ ತಕ್ಷಣ ಸರ್ಕಾರ ಇದನ್ನು ಬೆಂಬಲ ಬೆಲೆಗೆ ಖರೀದಿಸಿ ಪಡಿತರಕ್ಕೆ ಸೇರಿಸಿದರೆ ಬೆಳೆಗಾರರು ಸಿಕ್ಕ ಬೆಲೆಗೆ ರಾಗಿ ಮಾರಾಟ ಮಾಡುವುದು ತಪ್ಪುವುದಲ್ಲದೆ ಕಷ್ಟದಲ್ಲಿರುವ ಎಲ್ಲರಿಗೂ ಪಡಿತರದಲ್ಲಿ ರಾಗಿ ಪಡೆಯುವ ಅವಕಾಶ ದೊರಕುತ್ತದೆ.

ಉದ್ಯೋಗಖಾತ್ರಿಯಲ್ಲಿ ಕೆಲಸ. ಇದು ನಿರಂತರ ನಡೆಯುವ ಕಾರ್ಯಕ್ರಮ. ಆದರೂ ಬರಪರಿಹಾರದಡಿ ಇದನ್ನು ತರುವುದು ಸರ್ಕಾರದ ವಾಡಿಕೆ. ಅದೇನೆಯಾದರೂ, ಇಂಥ ಕಷ್ಟದ ಸಮಯದಲ್ಲಿ ಯಾವುದೇ ಒತ್ತಾಸೆ ಇಲ್ಲದ ಅತಿ ಸಣ್ಣ, ಮಳೆಯಾಶ್ರಿತ ರೈತರು, ಭೂರಹಿತರು ಕೆಲಸ ಹುಡುಕಿ ವಲಸೆ ಹೋಗಿಬಿಡುತ್ತಾರೆ. ಅಂಥವರಿಗೆ ಮತ್ತು ದುಡಿಯುವ ಮಹಿಳೆಯರಿಗೆ ಇದರ ಅಗತ್ಯ ಬಹಳಷ್ಟಿದೆ. ಈಗ ಜನ ಕೆಲಸ ಕೇಳುತ್ತಿದ್ದರೆ ಪಂಚಾಯಿತಿಗಳು ಆರು ತಿಂಗಳ ಹಿಂದೆ ಸಲ್ಲಿಸಿದ ಕ್ರಿಯಾಯೋಜನೆಗೆ ಆತುಕೊಂಡು ಈ ತುರ್ತಿನ ಸಂದರ್ಭಕ್ಕೆ ಪರಿಷ್ಕರಿಸಲು ನಿರಾಕರಿಸುತ್ತಿವೆ. ಆಧಾರ್ ಕಾರ್ಡನ್ನು ಕಡ್ದಾಯಗೊಳಿಸಿ ಕೆಲಸದ ಅವಶ್ಯಕತೆ ಇರುವವರನ್ನು ದೂರ ತಳ್ಳುತ್ತಿವೆ.

ಭಾರತೀಯ ಪ್ರಜೆಗಳಿಗೆ ಆಧಾರ್ ಕಾರ್ಡ್ ಕಡ್ದಾಯವಲ್ಲ ಎಂದು ಸುಪ್ರೀಂಕೋರ್ಟ್ ಮೂರು ಬಾರಿ ಸತತವಾಗಿ ಹೇಳಿದ್ದರೂ, ದೊಡ್ಡ ಸಂಖ್ಯೆಯ ಬೋಗಸ್ ಕೆಲಸಗಾರರನ್ನು ಹೊರಗಿಡಲು ಆಧಾರ್ ಕಾರ್ಡನ್ನು ಕಡ್ದಾಯ ಮಾಡುವುದರಿಂದ ಮಾತ್ರ ಸಾಧ್ಯ ಎಂದು ಆಂಧ್ರಪ್ರದೇಶ, ತೆಲಂಗಾಣದ ಉದಾಹರಣೆಯನ್ನು ಮುಂದಿಡುತ್ತಿವೆ. ಅಲ್ಲಿ ಒಟ್ಟು ಕೆಲಸಗಾರರಲ್ಲಿ 4% ಬೋಗಸ್ ಕೆಲಸಗಾರರಿದ್ದರು ಎಂಬುದನ್ನು ಮಾತ್ರ ಹೇಳುತ್ತಾರೆಯೇ ಹೊರತು ಅದರಲ್ಲಿ 2% ಮರಣ ಹೊಂದಿದ್ದರಿಂದ ಮತ್ತು ಇನ್ನು 2% ಜನ ಬೇರೆ ಕಡೆ ವಲಸೆ ಹೋಗಿಬಿಟ್ಟಿದ್ದರಿಂದ ಬೋಗಸ್ ಪಟ್ಟಿಯಲ್ಲಿದ್ದರು ಎಂಬುದನ್ನು ಮಾತ್ರ ಹೇಳುತ್ತಿಲ್ಲ.

ಪಂಚಾಯಿತಿಗಳು ಈಗಿನ ಸಂಕಷ್ಟದ ಪರಿಸ್ಥಿತಿಯಲ್ಲಿ ಜಾಬ್ ಕಾರ್ಡ್ ಹೊಂದಿದ ಎಲ್ಲರಿಗೂ ಕೆಲಸ ಸಿಗುವ ರೀತಿಯಲ್ಲಿ ಕ್ರಿಯಾಯೋಜನೆಯನ್ನು ಪರಿಷ್ಕರಿಸಿ, ರೈತರ ಹೊಲಗಳಿಗೆ ಬೇಕಾದ ಕಾಮಗಾರಿಗಳಿಗೆ ಅವಕಾಶ ಮಾಡಿಕೊಟ್ಟರೆ ಪ್ರಯೋಜನವಾದೀತು. ತಕ್ಷಣ ಎಲ್ಲಾ ಕಡೆ ಗ್ರಾಮಸಭೆಗಳನ್ನು ಕರೆದು ಜನಕೇಂದ್ರಿತವಾದ ಕಾರ್ಯಕ್ರಮವನ್ನು ಸರ್ಕಾರ ರೂಪಿಸಲಿ ಎಂದು ಆಶಿಸೋಣ.

ಲೇಖಕಿ ಸಾಮಾಜಿಕ ಕಾರ್ಯಕರ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.