ಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಮುಂದುವರಿದುಕೊಂಡು ಬಂದಿರುವ ಗೊಂದಲಗಳಿಗೆ ಮುಕ್ತಿಯೇ ಇದ್ದಂತಿಲ್ಲ. ಪ್ರತೀ ವರ್ಷ ವಿವಾದಕ್ಕೆ ಕಾರಣವಾಗುತ್ತಿದ್ದ ವರ್ಗಾವಣೆ ಪ್ರಕ್ರಿಯೆಯನ್ನು ಈ ಸಲ ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದೆ ಹೆಚ್ಚು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಶಿಕ್ಷಣ ಇಲಾಖೆಯು ಇಡೀ ಪ್ರಕ್ರಿಯೆಗೆ ಹೊಸರೂಪ ನೀಡಿದೆ. ಅದಕ್ಕಾಗಿ ‘ಶಿಕ್ಷಕಮಿತ್ರ’ ಎಂಬ ಆ್ಯಪ್ ಅನ್ನೂ ಪರಿಚಯಿಸಿದೆ. ಅರ್ಜಿ ಸಲ್ಲಿಕೆಯಿಂದ ಹಿಡಿದು ಎಲ್ಲ ಹಂತದ ಪ್ರಕ್ರಿಯೆಗಳು ಈ ಆ್ಯಪ್ ಮೂಲಕವೇ ನಡೆದಿವೆ. ಕೌನ್ಸೆಲಿಂಗ್ ಮೂಲಕ ಸ್ಥಳ ಆಯ್ಕೆಗೆ ಅವಕಾಶ ಮಾಡಿಕೊಡುವ ಅಂತಿಮಘಟ್ಟದ ಪ್ರಕ್ರಿಯೆ ಮಾತ್ರ ಬಾಕಿ ಇದೆ. ಈ ಹಂತದಲ್ಲಿ, ವರ್ಗಾವಣೆಗೆ ಸಂಬಂಧಿಸಿದ ಕಾಯ್ದೆಯಲ್ಲಿನ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡದೆ ‘ಯಥಾಸ್ಥಿತಿ’ಯನ್ನು ಕಾಯ್ದುಕೊಳ್ಳುವಂತೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ), ಶಿಕ್ಷಣ ಇಲಾಖೆಗೆ ಆದೇಶಿಸಿದೆ. ಕೋರಿಕೆ ಹಾಗೂ ಪರಸ್ಪರ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ್ದ 75 ಸಾವಿರಕ್ಕೂ ಅಧಿಕ ಶಿಕ್ಷಕರಲ್ಲಿ ಇದರಿಂದ ಮತ್ತೆ ಆತಂಕ ಮನೆಮಾಡಿದೆ. ಎಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆ ನನೆಗುದಿಗೆ ಬೀಳುವುದೋ ಎನ್ನುವ ದುಗುಡವೂ ಅವರನ್ನು ಕಾಡುತ್ತಿದೆ. 2019–20ರ ಸಾಲಿನಲ್ಲಿ ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣೆಗೆ ಒಳಗಾಗಿರುವ ಶಿಕ್ಷಕರ ಕೋರಿಕೆಗೆ ಈ ಸಲದ ವರ್ಗಾವಣೆಯಲ್ಲಿ ‘ವಿಶೇಷ ಆದ್ಯತೆ’ಯನ್ನು ನೀಡಲು ಕೈಗೊಂಡ ತೀರ್ಮಾನವೇ ಈಗ ವಿವಾದಕ್ಕೆ ಒಳಗಾಗಿದೆ. ‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ–2020’ರಲ್ಲಿ ಅವಕಾಶ ಇಲ್ಲದಿದ್ದರೂ ಈ ಸಲದ ವರ್ಗಾವಣೆಯಲ್ಲಿ, 2019–20ರ ಸಾಲಿನಲ್ಲಿ ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣೆಗೆ ಒಳಗಾಗಿರುವ ಶಿಕ್ಷಕರಿಗೆ ಆದ್ಯತೆ ನೀಡುತ್ತಿರುವುದು ಏಕೆ ಎನ್ನುವುದು ಕೆಎಟಿ ಮೊರೆ ಹೋದವರ ಪ್ರಶ್ನೆ. 2016–17ರ ಅವಧಿಯಲ್ಲಿ ಹೆಚ್ಚುವರಿ ವರ್ಗಾವಣೆಗೆ ಒಳಗಾದವರಿಗೂ ಇದೇ ರೀತಿ ವಿಶೇಷ ಆದ್ಯತೆಯನ್ನು ನೀಡಬೇಕು ಎನ್ನುವುದು ಅವರ ಆಗ್ರಹ.

ಹಿಂದಿನ ವರ್ಷಗಳಲ್ಲಿ ನಡೆದ ‘ಕಡ್ಡಾಯ ವರ್ಗಾವಣೆ’ಗಳು ಹಲವು ಗೊಂದಲಗಳಿಂದ ಕೂಡಿದ್ದವು. ಶಿಕ್ಷಕ ವಲಯದಲ್ಲಿ ತೀವ್ರ ಅಸಮಾಧಾನವನ್ನೂ ಮೂಡಿಸಿದ್ದವು. ಅಲ್ಲದೆ, ಗೊಂದಲದಿಂದ ಕೂಡಿದ್ದ ನಿಯಮಗಳ ಲಾಭವನ್ನು, ಸಂಘಟನೆಗಳ ಹೆಸರಿನಲ್ಲಿ ಒಂದೇ ಕಡೆ ಬೇರೂರಿದವರು ಹಾಗೂ ರಾಜಕಾರಣಿಗಳ ನಂಟುಳ್ಳ ಶಿಕ್ಷಕರು ಪಡೆಯುತ್ತಿದ್ದರು. ವರ್ಗಾವಣೆ ನಿರೀಕ್ಷೆಯಲ್ಲಿದ್ದ ಉಳಿದ ಶಿಕ್ಷಕರಿಗೆ ಅವಕಾಶ ಸಿಗದೆ ಹತಾಶೆ ಅನುಭವಿಸಬೇಕಾಗುತ್ತಿತ್ತು. ವರ್ಗಾವಣೆಗಾಗಿ ವರ್ಷಗಳವರೆಗೆ ಕಾಯ್ದು, ಗೊಂದಲಗಳೆಲ್ಲ ದೂರವಾಗಿ, ಎಲ್ಲ ಅಡೆತಡೆಗಳನ್ನು ದಾಟಿ ಇನ್ನೇನು ಕೋರಿಕೆಯ ಸ್ಥಳದ ನಿಯುಕ್ತಿ ಪತ್ರ ಸಿಗಲಿದೆ ಎಂದು ಸಾವಿರಾರು ಶಿಕ್ಷಕರು ನಿಟ್ಟುಸಿರು ಬಿಡುತ್ತಿರುವಾಗ ಮತ್ತೊಂದು ಕಂಟಕ ಎದುರಾಗಿದೆ. ವರ್ಗಾವಣೆಗೆ ಸಂಬಂಧಿಸಿದ ಎಲ್ಲ ಗೊಂದಲಗಳನ್ನೂ ಬಗೆಹರಿಸಲಾಗಿದೆ ಎಂದು ಹೆಮ್ಮೆಯಿಂದ ಬೀಗುತ್ತಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ನಿಯಮ ರೂಪಿಸುವಾಗ ಯಾವುದೇ ರೀತಿಯಲ್ಲಿ ವಿವಾದಕ್ಕೆ ಆಸ್ಪದವಾಗದಂತೆ ಎಚ್ಚರಿಕೆಯನ್ನು ವಹಿಸಬೇಕಿತ್ತು. ‘ವಿಶೇಷ ಆದ್ಯತೆ’ಯ ನಿಯಮದ ಕುರಿತು ಅಸಮಾಧಾನ ಹೊಂದಿದ್ದ ಶಿಕ್ಷಕರ ಅಹವಾಲು ಆಲಿಸಿ, ಸೂಕ್ತ ಪರಿಹಾರೋಪಾಯವನ್ನೂ ಕಂಡುಕೊಳ್ಳಬೇಕಿತ್ತು. ಈ ದಿಸೆಯಲ್ಲಿ ಆಗಿರುವ ಸಣ್ಣ ನಿರ್ಲಕ್ಷ್ಯದಿಂದ ಇಡೀ ಪ್ರಕ್ರಿಯೆಯೇ ನನೆಗುದಿಗೆ ಬೀಳುವಂತಾಗಿರುವುದು ಇಲಾಖೆಯ ಕಾರ್ಯವೈಖರಿಗೆ ಶೋಭೆ ತರುವಂಥದ್ದಲ್ಲ. ಕೊರೊನಾ ಕಾರಣದಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲಾ ಶಿಕ್ಷಣ ಎಷ್ಟೊಂದು ಏರುಪೇರು ಆಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ತರಗತಿಗಳಿಗೆ ಯಾವುದೇ ತೊಂದರೆ ಆಗದಂತೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ನಡೆಸುವುದು ಇಲಾಖೆಯ ಆದ್ಯತೆ ಆಗಬೇಕಿದೆ. ಇಡೀ ವರ್ಗಾವಣೆ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಿದೆ. ಹೀಗಾಗಿ, ‘ಯಥಾಸ್ಥಿತಿ’ ಕಾಯ್ದುಕೊಳ್ಳಬೇಕೆಂಬ ಕೆಎಟಿಯ ಆದೇಶವನ್ನು ತೆರವುಗೊಳಿಸಲು, ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಶೀಘ್ರ ಆರಂಭಿಸಲು ಅಗತ್ಯವಾದ ದಾರಿಯನ್ನು ಕಂಡುಕೊಳ್ಳಲು ಶಿಕ್ಷಣ ಇಲಾಖೆಯು ವಿಳಂಬವಿಲ್ಲದೆ ಕಾರ್ಯಪ್ರವೃತ್ತವಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.