ನೆರೆರಾಜ್ಯ ಕೇರಳದಲ್ಲಿ ಕೆಲವೇ ದಿನಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆ ಆಗಿರುವುದರಿಂದ ಕರ್ನಾಟಕದಲ್ಲೂ ಎಚ್ಚರಿಕೆಯ ಹಾಗೂ ಮುಂಜಾಗ್ರತೆಯ ಕ್ರಮಗಳನ್ನು ಕೈಗೊಳ್ಳ ಲಾಗುತ್ತಿದೆ. ನಿಗಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದ್ದು, ಕೋವಿಡ್ ಪರೀಕ್ಷೆಯ ಪ್ರಮಾಣವನ್ನೂ ನಿತ್ಯ ಐದು ಸಾವಿರಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. 60 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು, ಹೃದಯ ಹಾಗೂ ಮೂತ್ರಪಿಂಡದ ಸಮಸ್ಯೆಗೆ ಒಳಗಾದವರು, ಗರ್ಭಿಣಿಯರು, ಬಾಣಂತಿಯರು ಮತ್ತು ಕೊರೊನಾ ಸೋಂಕಿನ ವಿವಿಧ ಲಕ್ಷಣಗಳನ್ನು ಹೊಂದಿರುವವರು ಮುಖಗವಸು ಧರಿಸಬೇಕು ಎಂಬ ಸಲಹೆಯನ್ನು ಆರೋಗ್ಯ ಇಲಾಖೆ ನೀಡಿದೆ. ಹೆಚ್ಚಿನ ನಿಗಾ ವಹಿಸಬೇಕು ಹಾಗೂ ಸೋಂಕಿತರ ಗಂಟಲು ಮತ್ತು ಮೂಗಿನ ದ್ರವದ ಮಾದರಿಯನ್ನು ವೈರಾಣುವಿನ ವಂಶವಾಹಿ ಸಂರಚನಾ ಪರೀಕ್ಷೆಗೆ ಕಳುಹಿಸಬೇಕು ಎಂದು ಕೇಂದ್ರ ಸರ್ಕಾರ ಸಹ ಮಾರ್ಗಸೂಚಿಯನ್ನು ಹೊರಡಿಸಿದೆ. ಆಸ್ಪತ್ರೆಗಳ ಸನ್ನದ್ಧ ಸ್ಥಿತಿಯನ್ನು ಪರಿಶೀಲಿಸುವಂತೆಯೂ ನಿರ್ದೇಶನ ನೀಡಿದೆ. ಈಗ ಹರಡುತ್ತಿರುವುದು ಕೊರೊನಾ ಸೋಂಕಿನ ಹೊಸ ಉಪತಳಿ ‘ಜೆಎನ್.1’ ಎಂಬ ಕಾರಣಕ್ಕಾಗಿಯೇ ಇಷ್ಟೆಲ್ಲ ಧಾವಂತ. ಈ ಸೋಂಕು ಮಾನವನ ರೋಗನಿರೋಧಕ ಶಕ್ತಿಗೆ ಸಡ್ಡು ಹೊಡೆಯುವ ಸಾಮರ್ಥ್ಯ ಹೊಂದಿದ್ದು, ಲಸಿಕೆ ಪಡೆದವರನ್ನೂ ಬಾಧಿಸಬಲ್ಲದು ಎನ್ನುವುದು ತಜ್ಞರ ಅಭಿಮತ. ಅಲ್ಲದೆ, ಬಹುತೇಕರು ಲಸಿಕೆ ಹಾಕಿಸಿಕೊಂಡು ಹಲವು ತಿಂಗಳುಗಳೇ ಆಗಿರುವುದರಿಂದ ಈ ಹೊಸ ಉಪತಳಿಯ ಉಪಟಳ ಹೆಚ್ಚಾಗಬಹುದು ಎಂದೂ ವಿಶ್ಲೇಷಿಸಲಾಗಿದೆ. ಆದರೆ, ಭಾರತದಲ್ಲಿ ಜೆಎನ್.1 ಅಷ್ಟೊಂದು ಅಪಾಯಕಾರಿ ಏನೂ ಆಗಲಾರದು. ಹೊಸತಳಿಯ ಸೋಂಕಿಗೆ ತಕ್ಕಂತೆ ಅದರ ನಿಯಂತ್ರಣಕ್ಕೆ ಲಸಿಕೆಗಳಲ್ಲೂ ಮಾರ್ಪಾಡು ಮಾಡಲಾಗಿದ್ದು, ಚಿಕಿತ್ಸೆ ಸಹ ಲಭ್ಯವಿದೆ ಎನ್ನುವುದು ನಿರಾಳ ಭಾವವನ್ನು ಮೂಡಿಸುವಂತಹ ಸಂಗತಿ.

ಕೇರಳದಲ್ಲಿ ಒಂದೇ ವಾರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಅಲ್ಲಿ, ಮೊದಲ ಜೆಎನ್.1 ಪ್ರಕರಣ ಪತ್ತೆಯಾಗಿದ್ದು ಡಿಸೆಂಬರ್ 8ರಂದು. ಸೋಂಕಿನಿಂದ ಬಳಲಿದ ವ್ಯಕ್ತಿ ಈಗ ಚೇತರಿಸಿಕೊಂಡಿದ್ದಾರೆ. ಆದರೆ, ಸೋಂಕುಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಕೆಲವು ಪ್ರಕರಣಗಳಲ್ಲಿ ಸಾವುಗಳು ಸಂಭವಿಸಿದ ಕುರಿತೂ ವರದಿಯಾಗಿದೆ. ಆದರೆ, ಕಾಯಿಲೆಪೀಡಿತರು ಸೋಂಕಿನ ಜತೆಗೆ ಗಂಭೀರವಾದ ಇತರ ಆರೋಗ್ಯ ಸಮಸ್ಯೆಗಳಿಂದಲೂ ಬಳಲುತ್ತಿದ್ದರು ಎನ್ನುವುದನ್ನು ಕೂಡ ಗಣನೆಗೆ ತೆಗೆದುಕೊಳ್ಳಬೇಕು. ಸದ್ಯದ ಸಕ್ರಿಯ ಪ್ರಕರಣಗಳಲ್ಲಿ ಬಹುತೇಕ ಸೋಂಕುಪೀಡಿತರಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ಅಗತ್ಯ ಕಂಡುಬಂದಿಲ್ಲ. ಶೀತಜ್ವರ ಮಾದರಿಯ ಅನಾರೋಗ್ಯ (ಐಎಲ್ಐ) ಪ್ರಕರಣಗಳಲ್ಲಿ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಿದ್ದು ಕೂಡ ಸೋಂಕಿನ ಪ್ರಕರಣಗಳು ಹೆಚ್ಚು ವರದಿಯಾಗಲು ಕಾರಣ. ಅಷ್ಟಾಗಿ ಚಿಕಿತ್ಸೆ ಕೂಡ ಬೇಕಾಗದೆ ಬಹುತೇಕರು ಗುಣಮುಖರಾಗಿದ್ದಾರೆ. ಕೊರೊನಾದ ಹಿಂದಿನ ಅಲೆಗಳಷ್ಟು ದೊಡ್ಡ ಪ್ರಮಾಣದಲ್ಲಿ ಜೆಎನ್.1 ಹರಡುವುದಿಲ್ಲ ಎಂದು ತಜ್ಞರು, ವೈದ್ಯರು ಹೇಳುತ್ತಿದ್ದರೂ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿರುವುದು ಸಣ್ಣ ಕಳವಳವನ್ನು ಉಂಟುಮಾಡಿದೆ. ಅಲ್ಲದೆ, ಸೋಂಕು ರೂಪಾಂತರಗೊಳ್ಳುತ್ತಲೇ ಇರುವುದರಿಂದ ಬಲಿಷ್ಠ ಹೊಸತಳಿ ರೂಪುಗೊಂಡರೆ ಹೇಗೆ ಎಂಬ ಪ್ರಶ್ನೆಯೂ ಕಾಡುತ್ತಿದೆ. ಎಷ್ಟೇ ಆದರೂ ಕೊರೊನಾದಿಂದ ಅನುಭವಿಸಿದ ಕಹಿನೆನಪುಗಳು ಜನಮಾನಸದಲ್ಲಿ ಇನ್ನೂ ಮುದುಡಿ ಕುಳಿತಿವೆ.

ಕೇರಳ ಮಾತ್ರವಲ್ಲದೆ ಬೇರೆ ಕೆಲವು ರಾಜ್ಯಗಳಲ್ಲೂ ಜೆಎನ್.1 ಪ್ರಕರಣಗಳು ವರದಿಯಾಗಿವೆ. ಸಿಂಗಪುರದಿಂದ ಮರಳಿದವರ ಪೈಕಿ ದೇಶದ ವಿವಿಧ ಭಾಗಗಳ ಕನಿಷ್ಠ 15 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಸೋಂಕು ಮೊದಲು ಕಾಣಿಸಿಕೊಂಡಿದ್ದು ಅಮೆರಿಕದಲ್ಲಿ. ನಂತರ ಚೀನಾದಲ್ಲೂ ಹರಡಿದೆ. ಅಲ್ಲಿಂದ ಸಿಂಗಪುರದಲ್ಲಿ ಸಹ ಕಾಣಿಸಿಕೊಂಡಿದೆ. ಈಗ ನಮ್ಮಲ್ಲೂ ಹರಡುತ್ತಿದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ಈ ಸಂದರ್ಭದಲ್ಲಿ ಸೋಂಕು ಹರಡುವ ಪ್ರಮಾಣ ಇನ್ನೂ ಹೆಚ್ಚಾಗಬಹುದು. ಚಳಿಗಾಲದ ವಾತಾವರಣ ಸಹ ಸೋಂಕಿಗೆ ಇನ್ನಷ್ಟು ಬಲ ತುಂಬಬಹುದು. ವೈದ್ಯಕೀಯ ಸನ್ನದ್ಧ ಸ್ಥಿತಿಯನ್ನು ರಾಜ್ಯ ಸರ್ಕಾರ ಖಾತರಿಪಡಿಸಿಕೊಳ್ಳಬೇಕು. ಮುಂಜಾಗ್ರತೆ ವಹಿಸುವಲ್ಲಿ, ಸಮುದಾಯದ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇಡುವಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಜನರೂ ಅಷ್ಟೆ. ಸೋಂಕು ನಿಯಂತ್ರಿಸುವುದು ಸರ್ಕಾರದ ಕೆಲಸವೆಂದು ಮೈಮರೆಯದೆ ಜವಾಬ್ದಾರಿಯಿಂದ ವರ್ತಿಸಬೇಕು. ಸರ್ಕಾರ ನೀಡುವ ಸೂಚನೆಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಹಿಂದಿನ ಕಹಿ ಅನುಭವಗಳಿಂದ ನಾವು ಕಲಿಯಬೇಕಾದ ಪಾಠ ಕೂಡ ಇದೇ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.