ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಮಂಡಿಸಿದ 2023–24ನೇ ಸಾಲಿನ ಬಜೆಟ್‌ನಲ್ಲಿ ಎರಡು ಸಂಗತಿಗಳು ಎದ್ದು ಕಾಣುತ್ತಿವೆ. ಒಂದು, ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಸಮತೋಲಿತ ಹಾಗೂ ಜಾಗರೂಕ ಹೆಜ್ಜೆ ಇಡುವಂತಹ ಪ್ರಯತ್ನ. ಮತ್ತೊಂದು, ಪ್ರಸಕ್ತ ವರ್ಷ ನಡೆಯಲಿರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಹಾಗೂ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಮೇಲೆ ನೆಟ್ಟಿರುವ ಕಣ್ಣು. ಬಜೆಟ್‌ನ ಎಲ್ಲ ಕಸರತ್ತುಗಳೂ ಈ ಎರಡು ಸಂಗತಿಗಳ ಮೇಲೆಯೇ ಗಮನವನ್ನು ಕೇಂದ್ರೀಕರಿಸಿರುವುದು ಸುಸ್ಪಷ್ಟ. 2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಮಂಡಿತವಾದ ಪೂರ್ಣಪ್ರಮಾಣದ ಕೊನೆಯ ಬಜೆಟ್ ಇದಾಗಿದೆ. ಹೀಗಾಗಿ ಹಣಕಾಸು ಸಚಿವರಿಗೆ ಬಜೆಟ್ ಮಂಡಿಸುವಾಗ ‘ಮತ ಬುಟ್ಟಿ’ಯೇ ಕಣ್ಮುಂದೆ ಕಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ಹೊಸ ತೆರಿಗೆ ದರ ಪದ್ಧತಿ ಆಯ್ಕೆ ಮಾಡಿಕೊಂಡವರಿಗೆ ಆದಾಯ ತೆರಿಗೆ ವಿನಾಯಿತಿಯ ಮಿತಿಯನ್ನು ಹೆಚ್ಚಿಸುವ ಘೋಷಣೆಯು ಮಧ್ಯಮ ವರ್ಗದವರ ಹೃದಯವನ್ನು ಬೆಚ್ಚಗೆ ಮಾಡಿರುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಹೂಡಿಕೆ– ಉಳಿತಾಯಕ್ಕೆ ಉತ್ತೇಜನ ಕೊಡುವ ಹಳೆ ತೆರಿಗೆ ದರ ಪದ್ಧತಿಯಲ್ಲಿ ಇರುವವರಿಗೆ, ಯಾವುದೇ ಹೊಸ ಉತ್ತೇಜಕ ಕ್ರಮಗಳು ಇಲ್ಲ. ಸರ್ಕಾರದ ಈ ನಿಲುವು ಉಳಿತಾಯಕ್ಕೆ ಉತ್ತೇಜನಕಾರಿಯಾಗದೆ, ಖರ್ಚಿಗೆ ಇಂಬು ನೀಡುವಂತಿದೆ. ಉಳಿತಾಯಕ್ಕಿಂತಲೂ ಹೆಚ್ಚಾಗಿ ಜನರ ಕೈಯಲ್ಲಿ ದುಡ್ಡು ಓಡಾಡಲಿ ಮತ್ತು ಅದು ಮಾರುಕಟ್ಟೆಯಲ್ಲಿ ಹೂಡಿಕೆ ಆಗಲಿ ಎನ್ನುವ ಅಭಿಲಾಷೆಯೇ ಈ ತಂತ್ರದ ಹಿಂದೆ ಕೆಲಸ ಮಾಡಿದಂತಿದೆ. ತನಗೆ ‘ಉಳಿತಾಯ ವಿರೋಧಿ’ ಎಂಬ ಹಣೆಪಟ್ಟಿ ಅಂಟಬಾರದೆಂದು ಮಹಿಳೆಯರಿಗೆ ವಿಶೇಷ ಉಳಿತಾಯ ಯೋಜನೆಯನ್ನು ಘೋಷಿಸುವ ಮೂಲಕ, ಹಿರಿಯ ನಾಗರಿಕರ ಠೇವಣಿ ಮಿತಿಯನ್ನು ಹೆಚ್ಚಿಸುವ ಮೂಲಕ ಸರ್ಕಾರ ಜಾಣತನ ಮೆರೆದಿದೆ. ಮೂಲಸೌಕರ್ಯ ಯೋಜನೆಗಳಿಗೆ ಮಾಡುವ ಬಂಡವಾಳ ವೆಚ್ಚವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಬರೋಬ್ಬರಿ ₹ 10 ಲಕ್ಷ ಕೋಟಿಯನ್ನು ಈ ಬಾಬತ್ತಿಗೆ ಎತ್ತಿಡಲಾಗಿದ್ದು, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಅನುದಾನವನ್ನು ಶೇಕಡ 33ರಷ್ಟು ಹೆಚ್ಚಿಸಲಾಗಿದೆ. ಆ ಮೂಲಕ ‘ಬೆಳವಣಿಗೆಗೆ ಪೂರಕವಾದ ಬಜೆಟ್’ ಎಂಬಂತೆ ಬಿಂಬಿಸಲಾಗಿದೆ. ಆದರೆ, ‘ಸಾಲ ಮಾಡಿಯಾದರೂ ತುಪ್ಪ ತಿನ್ನು’ ಎನ್ನುವ ಧೋರಣೆಯು ಬಜೆಟ್‌ನಲ್ಲಿ ಕಾಣುತ್ತಿದೆ. ಮುಂಬರುವ ಆರ್ಥಿಕ ವರ್ಷದಲ್ಲಿ ₹ 15 ಲಕ್ಷ ಕೋಟಿಯಷ್ಟು ಹಣವನ್ನು ಸಾಲದ ರೂಪದಲ್ಲಿ ತರುವುದಾಗಿ ಹೇಳಲಾಗಿದೆ. ವಿತ್ತೀಯ ಕೊರತೆಯನ್ನು ತಗ್ಗಿಸುವ ಮಾತು ಕೊಟ್ಟು, ದಾಖಲೆಯ ಮಟ್ಟದಲ್ಲಿ ಸಾಲ ಮಾಡುವುದು ಎಷ್ಟು ಸರಿ ಎಂಬುದು ಮರುಪರಿಶೀಲನೆಗೆ ಯೋಗ್ಯವಾದ ಅಂಶ. ಖಾಸಗಿ ವಲಯದಿಂದ ನಿರೀಕ್ಷಿತ ಪ್ರಮಾಣದಲ್ಲಿ ಹೂಡಿಕೆ ಆಗದಿರುವುದು, ಸರ್ಕಾರವೇ ಸಾಲ ಮಾಡಿ ಹಣ ಹೊಂದಿಸಬೇಕಾದ ಸಂದರ್ಭವನ್ನು ಸೃಷ್ಟಿಸಿತೇ? ಇದು ಯೋಚಿಸಬೇಕಾದಂತಹ ವಿದ್ಯಮಾನ.

ಕೃಷಿ ಆಧಾರಿತ ಗ್ರಾಮೀಣ ಆರ್ಥಿಕತೆಗೆ ಬಜೆಟ್‌ನಲ್ಲಿ ವಿಶೇಷ ಒತ್ತು ನೀಡಿದರೂ ಕೆಲವು ಹಾಲಿ ಯೋಜನೆಗಳಿಗೆ ಅನುದಾನ ಕಡಿತ ಮಾಡಿರುವುದು ಗಮನಾರ್ಹ. ಕೃಷಿಗೆ ‘ಬಲ’ ನೀಡುವಂತಹ ಡಿಜಿಟಲ್ ತಂತ್ರಜ್ಞಾನದ ವಿಸ್ತರಣೆ, ನೈಸರ್ಗಿಕ ಕೃಷಿಗೆ ಉತ್ತೇಜನ, ಬೀಜ–ರಸಗೊಬ್ಬರ ಪೂರೈಕೆಯ ಸರಪಳಿ ಬಲವರ್ಧನೆ, ಗ್ರಾಮೀಣ ನವೋದ್ಯಮಗಳ ನೆರವಿಗಾಗಿ ನಿಧಿ ಸ್ಥಾಪನೆಯಂತಹ ಘೋಷಣೆಗಳು ಕೇಳಲು ಹಿತವಾಗಿವೆ. ಆದರೆ, ಅವುಗಳು ಕಾರ್ಯರೂಪಕ್ಕೆ ಬಂದರೆ ಮಾತ್ರ ಗ್ರಾಮೀಣ ಆರ್ಥಿಕತೆ ಚೇತರಿಕೆಯ ಹಾದಿ ಹಿಡಿಯಲು ಸಾಧ್ಯ. ಗ್ರಾಮಭಾರತಕ್ಕೆ ಒಂದು ಕೈಯಿಂದ ಕೊಟ್ಟು, ಮತ್ತೊಂದು ಕೈಯಿಂದ ಕಿತ್ತುಕೊಳ್ಳಲು ಹಣಕಾಸು ಸಚಿವರು ಹೊರಟಂತಿದೆ. ಏಕೆಂದರೆ, ಗ್ರಾಮಾಂತರ ಭಾಗದಲ್ಲಿ ಉದ್ಯೋಗವನ್ನು ಖಾತರಿಗೊಳಿಸುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆಯ ಅನುದಾನದಲ್ಲಿ ಭಾರಿ ಕಡಿತ ಮಾಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಈ ಯೋಜನೆಗೆ ಮಾಡಲಾಗುತ್ತಿರುವ ಪರಿಷ್ಕೃತ ವೆಚ್ಚ ₹ 89,400 ಕೋಟಿ. ಆದರೆ, ಮುಂದಿನ ಹಣಕಾಸು ವರ್ಷದಲ್ಲಿ ‘ಮನರೇಗಾ’ಕ್ಕೆ ₹ 60 ಸಾವಿರ ಕೋಟಿಯನ್ನಷ್ಟೇ ಎತ್ತಿಡಲಾಗಿದೆ. ಹಾಗೆಯೇ ಕೃಷಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವ ಯಾವ ಭರವಸೆಯನ್ನೂ ನೀಡಲಾಗಿಲ್ಲ. ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ ದೊಡ್ಡಪ್ರಮಾಣದ ಅನುದಾನ ಘೋಷಿಸಲಾಗಿದೆ.

ಹಸಿರು ಇಂಧನಕ್ಕೆ ಹೆಚ್ಚಿನ ಒತ್ತು ನೀಡಿರುವುದು ಸ್ವಾಗತಾರ್ಹ ನಿರ್ಧಾರ. ಹವಾಮಾನ ಬದಲಾವಣೆಯ ಈ ಕಾಲಘಟ್ಟದಲ್ಲಿ ಪರಿಸರಕ್ಕೆ ಪೂರಕವಾದ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯ ಕೂಡ. ಜಗತ್ತಿನ ಹಲವೆಡೆ ಕಂಡುಬಂದಿರುವ ಆರ್ಥಿಕ ಬಿಕ್ಕಟ್ಟಿನ ಕರಿನೆರಳಿನಿಂದ ಪಾರಾಗುವ ಯತ್ನ ಕೂಡ ಬಜೆಟ್‌ನ ಹೆಗ್ಗುರುತಾಗಿದೆ. ವಸತಿ ಯೋಜನೆಗೆ ಹೆಚ್ಚಿಸಿರುವ ಅನುದಾನ, ರೈಲ್ವೆ ಯೋಜನೆಗಳಿಗೆ ನೀಡಿರುವ ದೊಡ್ಡ ಮೊತ್ತದ ನೆರವು, ಮೂಲಸೌಕರ್ಯ ಯೋಜನೆಗಳಲ್ಲಿ ಭಾರಿ ಪ್ರಮಾಣದ ಬಂಡವಾಳ ಹೂಡಿಕೆಯಂತಹ ಕ್ರಮಗಳೆಲ್ಲ ಆ ಯತ್ನದ ಭಾಗಗಳಾಗಿಯೇ ಕಾಣುತ್ತವೆ. ಆರ್ಥಿಕತೆಗೆ ಬಲ ತುಂಬುವಲ್ಲಿ ತಯಾರಿಕಾ ವಲಯದ ಕೊಡುಗೆಯೇ ಮಹತ್ವದ್ದು ಎಂದು ನಿರ್ಮಲಾ ಅವರು ಭಾವಿಸಿದಂತಿದೆ. ಸಾಮಾಜಿಕ ವಲಯದತ್ತ ಮಾನವೀಯ ದೃಷ್ಟಿಕೋನದಿಂದ ಗಮನ ನೀಡುವುದು ಅನಿವಾರ್ಯವಾದ ಕೋವಿಡ್ ನಂತರದ ಈ ಕಾಲಘಟ್ಟದಲ್ಲಿ ‘ಅಮೃತಕಾಲ’ದ ಬಜೆಟ್ ಈ ದಿಸೆಯಲ್ಲಿ ಇನ್ನಷ್ಟು ಗಮನ ಹರಿಸಬೇಕಿತ್ತು. ಇತ್ತೀಚಿನ ವರ್ಷಗಳಲ್ಲಿ ಜನರ ಕಿವಿಗೆ ಬೀಳುತ್ತಿರುವ ಅಂಕಿ–ಅಂಶಗಳು ಅವರ ವಿಶ್ವಾಸ ಗಳಿಸುವಲ್ಲಿ ಸಂಪೂರ್ಣವಾಗಿ ಸೋತಿವೆ. ಬರೀ ಘೋಷಣೆಗಳು ಕ್ಷಣಿಕ ಹಿತಾನುಭವ ನೀಡಬಹುದೇ ವಿನಾ ಅವುಗಳಿಂದ ಹೆಚ್ಚೇನೂ ಪ್ರಯೋಜನವಿಲ್ಲ. ಬಜೆಟ್‌ನ ಘೋಷಣೆಗಳೆಲ್ಲ ಅನುಷ್ಠಾನಕ್ಕೆ ಬಂದರಷ್ಟೇ ಅವುಗಳಿಗೆ ಕಿಮ್ಮತ್ತು. ಆ ದಿಕ್ಕಿನಲ್ಲಿ ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.