ಗದಗ ಜಿಲ್ಲೆಯ ಕಪ್ಪತಗುಡ್ಡ ಪರ್ವತಶ್ರೇಣಿಯ ಸುತ್ತ ಮತ್ತೊಮ್ಮೆ ವಿವಾದದ ಹೊಗೆ ಎದ್ದಿದೆ. ನೈಸರ್ಗಿಕ ಸಂಪತ್ತು ಎಲ್ಲೇ ಇದ್ದರೂ ಅಭಿವೃದ್ಧಿಯ ಭರಾಟೆಯ ಈ ದಿನಮಾನಗಳಲ್ಲಿ ಅದು ನಾನಾ ಬಗೆಯ ವಿವಾದಗಳನ್ನು ತನ್ನತ್ತ ಸೆಳೆದುಕೊಳ್ಳುವುದು ಸಹಜವೇ ಹೌದು. ಕಪ್ಪತಗುಡ್ಡದ ಒಡಲಲ್ಲಿ ಖನಿಜ ಸಂಪತ್ತಿದೆ, ಅದರ ಮೇಲ್ಮಣ್ಣಿನಲ್ಲಿ ಅಪರೂಪದ ಸಸ್ಯ ಸಂಪತ್ತಿದೆ. ಗುಡ್ಡದತ್ತ ಢಾಳಾಗಿ ಬೀಸಿ ಬರುವ ಗಾಳಿಯೂ ಶಕ್ತಿಯ ಆಗರವಾಗಿರುವುದರಿಂದ ಅದನ್ನೂ ಬಾಚಿಕೊಳ್ಳುವ ಯತ್ನಗಳು ನಡೆಯುತ್ತವೆ. ಕಬ್ಬಿಣ ಮತ್ತು ಚಿನ್ನದ ಅದಿರಷ್ಟೇ ಅಲ್ಲ, ಈಗಂತೂ ತೀರಾ ಸಾಮಾನ್ಯ ಕಲ್ಲುಬಂಡೆಗಳಿಗೂ ಬೇಡಿಕೆ ಬಂದಿರುವುದರಿಂದ ಅವಕ್ಕೂ ಲಗ್ಗೆ ಹಾಕಲು ಪೈಪೋಟಿ ನಡೆಯುತ್ತದೆ. ಅವೆಲ್ಲ ಬಿಡಿ, ಉತ್ತರ ಕರ್ನಾಟಕದಲ್ಲಿ ಕಣ್ಮನ ಸೆಳೆಯುವ ಭೂದೃಶ್ಯಗಳು, ಆಹ್ಲಾದಕರ ತಂಗಾಳಿ ಕೂಡ ಪ್ರವಾಸೋದ್ಯಮದ ದೃಷ್ಟಿಯಿಂದ ಬೆಲೆಬಾಳುವ ಸಂಪನ್ಮೂಲವೇ ಆಗುತ್ತವೆ. ಇಷ್ಟೆಲ್ಲ ಒಂದೇ ಕಡೆ ಸೇರಿರುವಾಗ ಅವುಗಳನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ನಾನಾ ಬಗೆಯ ಶಕ್ತಿಗಳು ಲಗ್ಗೆ ಹಾಕುತ್ತವೆ. ಅದನ್ನು ತಡೆಯುವ ಯತ್ನವೂ ನಡೆಯುತ್ತದೆ. ಅಂತಹ ಸಂದರ್ಭದಲ್ಲಿ ವಿವಾದ ಸಹಜವಾಗಿಯೇ ಏಳುತ್ತಿರು ತ್ತದೆ. ಕಳೆದ ಶತಮಾನದ ಆದಿಯಲ್ಲೇ ಅಲ್ಲಿರಬಹುದಾದ ಚಿನ್ನವನ್ನು ಎತ್ತಲು ಜಾನ್ ಟೇಲರ್ ಗಣಿ ಕಂಪನಿ ಹತ್ತಾರು ವರ್ಷ ಅಗೆತ ನಡೆಸಿ, ನಷ್ಟ ಅನುಭವಿಸಿ ಕಾಲ್ತೆಗೆದಿತ್ತು. ನಂತರವೂ ಹಳ್ಳಕೊಳ್ಳದ ಮರಳಿನಲ್ಲಿ ಚಿನ್ನದ ಕಣಗಳಿಗಾಗಿ ಹುಡುಕಾಡುವುದು ನಡೆದಿತ್ತು. ಮೃಗಪಕ್ಷಿಗಳ ಬೇಟೆಯೂ ಸದ್ದಿಲ್ಲದೆ ನಡೆಯುತ್ತಿತ್ತು. ಅಲ್ಪ ಪ್ರಮಾಣದ ಚಿನ್ನವನ್ನೂ ಆಧುನಿಕ ತಂತ್ರಜ್ಞಾನದಿಂದ ಲಾಭದಾಯಕವಾಗಿ ಎತ್ತಲು ಸಾಧ್ಯವೆಂದು ಗೊತ್ತಾದ ನಂತರ ದೊಡ್ಡ ಪ್ರಮಾಣದ ಗಣಿಗಾರಿಕೆಯ ಸನ್ನಾಹವೂ ಮತ್ತೆ ಮತ್ತೆ ನಡೆದಾಗ ಸಮಾಜದಲ್ಲಿ ಪರಿಸರ ಪ್ರಜ್ಞೆ ಜಾಗೃತವಾಗಿತ್ತು. ಇಡೀ ಕಪ್ಪತಗುಡ್ಡ ಪ್ರದೇಶವನ್ನು ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಬೇಕೆಂದು ಸ್ಥಳೀಯ ಧಾರ್ಮಿಕ ನಾಯಕರ ನೇತೃತ್ವದಲ್ಲಿ ಪರಿಸರ ಹಿತಚಿಂತಕರು, ರೈತರು, ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರು ಚಳವಳಿ ನಡೆಸಿ ಒತ್ತಾಯ ಹೇರಿದ್ದರಿಂದ ಕೊನೆಗೂ ಆರು ವರ್ಷಗಳ ಹಿಂದೆ ಈ ಗುಡ್ಡಶ್ರೇಣಿಗೆ ಕಾನೂನಿನ ಬೇಲಿಯೊಂದು ಸೃಷ್ಟಿಯಾಯಿತು. ಅರಣ್ಯ ಇಲಾಖೆ ಹಾಗೂ ವನ್ಯಪ್ರೇಮಿ ಗಳು ವಹಿಸಿದ ಮುತುವರ್ಜಿಯಿಂದಾಗಿ ಅಲ್ಲಿ ವನ್ಯಜೀವಿಧಾಮವನ್ನೂ ಘೋಷಿಸಲಾಯಿತು. 1986ರ ಅಧಿನಿಯಮಗಳ ಪ್ರಕಾರ, ವನ್ಯಧಾಮದ ಸುತ್ತಲಿನ ಹತ್ತು ಕಿಲೊಮೀಟರ್ ವ್ಯಾಪ್ತಿಯ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿತ್ತು.

ಇನ್ನೇನು, ಕಪ್ಪತಗುಡ್ಡದ ಐಸಿರಿಗೆ ಸರ್ಕಾರಿ ಭದ್ರತೆ ಸಿಕ್ಕಿತೆಂದು ನೆಮ್ಮದಿಯಲ್ಲಿದ್ದವರಿಗೆ ಪಟ್ಟಭದ್ರ ಹಿತಾಸಕ್ತಿಗಳ ಹೊಸ ಹೊಸ ಪಟ್ಟುಗಳು ಅರಿವಿಗೆ ಬರುತ್ತಿವೆ. ವನ್ಯಜೀವಿಧಾಮಕ್ಕೆ ನೀಡಿದ ಕಾನೂನಿನ ರಕ್ಷಣೆಯನ್ನು ಹಿಂಪಡೆದು ಅಲ್ಲಿ ಮತ್ತೆ ಚಿನ್ನದ ಗಣಿಗಾರಿಕೆಗೆ ಅನುಮತಿ ನೀಡುವಂತೆ, ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಒತ್ತಡ ಬಂದಿತ್ತು. ಸಂರಕ್ಷಿತ ಪ್ರದೇಶವೆಂಬ ಘೋಷಣೆಯನ್ನೇ ಹಿಂಪಡೆಯುವಂತೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಒತ್ತಡ ಬಂದಿತ್ತು. ಅವರಿಬ್ಬರೂ ಬಗ್ಗಿರಲಿಲ್ಲ ಎಂಬುದು ಶ್ಲಾಘನೀಯವೇ ಹೌದಾದರೂ ಅವರು ಬಾಗದಂತೆ ನೋಡಿಕೊಂಡ ಶ್ರೇಯ ಗದಗ ಜಿಲ್ಲೆಯ ಪರಿಸರ ಹೋರಾಟಗಾರರಿಗೆ ಹಾಗೂ ಅವರ ಬೆಂಬಲಕ್ಕಿದ್ದ ಅರಣ್ಯಾಧಿಕಾರಿಗಳಿಗೆ ಸೇರುತ್ತದೆ. ಈಗ ವಿವಾದ ಬೇರೊಂದು ಮುಖಕ್ಕೆ ಹೊರಳಿದೆ. ವನ್ಯಧಾಮದ ಸುತ್ತಲಿನ ಘೋಷಿತ 10 ಕಿಲೊಮೀಟರ್ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಕುಗ್ಗಿಸಿ ಕೇವಲ ಒಂದು ಕಿ.ಮೀ.ಗೆ ಇಳಿಸಬೇಕೆಂದು ಕೆಲವು ಜನಪ್ರತಿನಿಧಿಗಳು ಹಾಗೂ ಕಲ್ಲುಗಣಿ ಗುತ್ತಿಗೆದಾರರು ಒತ್ತಾಯಿಸುತ್ತಿದ್ದಾರೆ. ಪರಿಧಿಯಿಂದ ಹತ್ತು ಕಿಲೊಮೀಟರ್ ದೂರ ಎಂಬುದು ಅಷ್ಟೇನೂ ಕಟ್ಟುನಿಟ್ಟಿನ ನಿಯಮವೇನಲ್ಲ ನಿಜ. ಮುಂಬೈ ನಗರದಲ್ಲೇ ಇರುವ ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನ, ಚೆನ್ನೈನಲ್ಲಿರುವ ಗಿಂಡಿ ರಾಷ್ಟ್ರೀಯ ಉದ್ಯಾನ, ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸುತ್ತ ಅಲ್ಲಲ್ಲಿನ ಅಗತ್ಯಕ್ಕೆ ತಕ್ಕಂತೆ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಕಿರಿದುಗೊಳಿಸಲಾಗಿದೆ. ಸೂಕ್ಷ್ಮ ಪ್ರದೇಶದ ವ್ಯಾಪ್ತಿ ಹತ್ತು ಕಿ.ಮೀ. ಇರಬೇಕೊ, ಐದಿದ್ದರೆ ಸಾಕೊ ಅಥವಾ ಒಂದೇ ಕಿ.ಮೀ. ಇರಬೇಕೊ ಎಂಬುದು ಆಯಾ ಗ್ರಾಮ ಪಂಚಾಯಿತಿ, ವನ್ಯ ವಾರ್ಡನ್ ಹಾಗೂ ಅರಣ್ಯಾಧಿಕಾರಿಗಳ ಒಮ್ಮತದೊಂದಿಗೆ ನಿರ್ಧಾರವಾಗಬೇಕು. ಅದಕ್ಕೆಂದು ಗ್ರಾಮಮಟ್ಟದಲ್ಲಿ ಪರಿಸರ ಪ್ರಜ್ಞೆಯನ್ನು ಮತ್ತು ಕಾನೂನಿನ ಗ್ರಹಿಕೆಯನ್ನು ಸರಳ ಕನ್ನಡದ ಮೂಲಕ ನೆಲೆಗೊಳಿಸಬೇಕಿತ್ತು. ಆ ಕೆಲಸವನ್ನು ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಮಾಧವ ಗಾಡ್ಗೀಳ್– ಕಸ್ತೂರಿರಂಗನ್ ವರದಿಗಳ ಸಂದರ್ಭದಲ್ಲೂ ಮಾಡಿಲ್ಲ; ಇಲ್ಲೂ ಅದನ್ನು ಮಾಡಿದಂತಿಲ್ಲ. ಸ್ಥಳೀಯ ಪ್ರಜೆಗಳನ್ನು ಕತ್ತಲಲ್ಲಿಟ್ಟೇ ಉನ್ನತಮಟ್ಟದಲ್ಲಿ ನಿರ್ಧಾರ ಕೈಗೊಂಡಾಗಲೆಲ್ಲ ಬಲಾಢ್ಯರ ಹಿತಾಸಕ್ತಿಯೇ ಮೇಲುಗೈ ಪಡೆದು ಘರ್ಷಣೆ ಹೆಚ್ಚುತ್ತದೆ. ಕಪ್ಪತಗುಡ್ಡದ ರಕ್ಷಣೆ, ಸುಸ್ಥಿರ ನಿರ್ವಹಣೆ ಮತ್ತು ಬಲವರ್ಧನೆಯ ಕೆಲಸಗಳಲ್ಲಿ ಸ್ಥಳೀಯರನ್ನು, ಶಿಕ್ಷಕರನ್ನು, ಎಳೆಯರನ್ನು ತೊಡಗಿಸಿಕೊಂಡರೆ ನಿಸರ್ಗ ರಕ್ಷಣೆಗೆ ಅದಕ್ಕಿಂತ ಭದ್ರವಾದ ಬೇಲಿ ಬೇರೊಂದಿರಲಾರದು. ಇಡೀ ಪ್ರದೇಶವನ್ನೇ ಚಿನ್ನವಾಗಿಸುವ ಅಂಥ ಆದರ್ಶವನ್ನು ನಾವಿಲ್ಲಿ ಕಾಣುತ್ತೇವೆಯೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.