ಶಾಲೆಗಳು ಆರಂಭವಾಗಿ ಒಂದು ತಿಂಗಳು ತುಂಬುವ ವೇಳೆಗೆ ಸರಿಯಾಗಿ ಕೊರೊನಾ ಸೋಂಕಿನ ಆತಂಕ ಮಕ್ಕಳನ್ನು ಕಾಡತೊಡಗಿರುವುದು, ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸಲು ಒತ್ತಾಯಿಸುವಂತಿದೆ. ಬೆಂಗಳೂರಿನ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿರುವುದು ವರದಿಯಾಗಿದೆ.

ಶಾಲೆಗಳಲ್ಲಿ ಲಸಿಕೆ ಹಾಕುವ ಸಂದರ್ಭದಲ್ಲಿ ರೋಗಲಕ್ಷಣ ಇದ್ದ ಮಕ್ಕಳಿಗೆ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಮಾಡಿದಾಗ, ಎರಡು ಶಾಲೆಗಳ 31 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಇರುವುದು ಪತ್ತೆಯಾಗಿದೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದರೂ, ಸೋಂಕು ತಗುಲಿದವರು ಹೆಚ್ಚಿನ ತೊಂದರೆಯಿಲ್ಲದೆ ಗುಣಮುಖರಾಗುತ್ತಿರುವುದು ಸಮಾಧಾನಕರ ಸಂಗತಿ. ಮಕ್ಕಳಲ್ಲಿ ಕೋವಿಡ್ನ ಸೌಮ್ಯ ಲಕ್ಷಣಗಳಷ್ಟೇ ಕಾಣಿಸುತ್ತಿರುವುದರಿಂದ ಹಾಗೂ ಎಳೆಯರಲ್ಲಿ ರೋಗನಿರೋಧಕ ಶಕ್ತಿ ಪ್ರಬಲವಾಗಿರುವುದರಿಂದ ಪಾಲಕರು ಧೈರ್ಯಗೆಡುವ ಅಗತ್ಯವಿಲ್ಲ.

ಎರಡು ವರ್ಷಗಳಲ್ಲಿ ಕಲಿತ ‘ಕೋವಿಡ್ ಪಾಠ’ಗಳನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಸಂದರ್ಭ ಇಂದಿನದು. ಎರಡು ಅಮೂಲ್ಯ ಶೈಕ್ಷಣಿಕ ವರ್ಷಗಳು ಕೊರೊನಾ ಬಾಧೆಗೆ ಒಳಗಾದುದು ಮಕ್ಕಳ ಕಲಿಕೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಆ ಹಿನ್ನಡೆಯನ್ನು ತುಂಬುವ ಉದ್ದೇಶದಿಂದ 2022–23ನೇ ಶೈಕ್ಷಣಿಕ ವರ್ಷವನ್ನು ‘ಕಲಿಕಾ ಚೇತರಿಕೆ ವರ್ಷ’ವೆಂದು ರಾಜ್ಯ ಸರ್ಕಾರ ಪ್ರಕಟಿಸಿದೆ. ಮಕ್ಕಳ ಕಲಿಕೆಗೆ ಶಕ್ತಿ ತುಂಬುವ ಪ್ರಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲೇ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದು ಮಕ್ಕಳು ಮತ್ತು ಪಾಲಕರ ಚೈತನ್ಯವನ್ನು ಸಹಜವಾಗಿಯೇ ಕುಗ್ಗಿಸುವಂತಿದೆ. ಆದರೆ, ಮಕ್ಕಳನ್ನು ಮನೆಯಲ್ಲಿಯೇ ಇರಿಸಿಕೊಳ್ಳುವಷ್ಟು ಪರಿಸ್ಥಿತಿ ಬಿಗಡಾಯಿಸಿಲ್ಲ.

ಕೊರೊನಾದೊಂದಿಗೆ ಹೊಂದಿಕೊಂಡು ಜೀವನ ನಿರ್ವಹಣೆ ನಡೆಸುವುದು ಅನಿವಾರ್ಯವಾಗಿರುವುದರಿಂದ, ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದುವರಿಸುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಗತ್ಯ. ಸೋಂಕನ್ನು ನಿಯಂತ್ರಿಸುವ ದಿಸೆಯಲ್ಲಿ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಸದ್ಯಕ್ಕೆ ಕನಿಷ್ಠಗೊಳಿಸಿ, ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ.

ಲಾಕ್ಡೌನ್ ಅವಧಿಯಲ್ಲಿ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿರುವುದು ಮಾತ್ರವಲ್ಲದೆ, ದೈಹಿಕವಾಗಿ ಹಾಗೂ ಮಾನಸಿಕವಾಗಿಯೂ ಸಮಸ್ಯೆಗಳನ್ನು ಅನುಭವಿಸಿದ್ದರು. ಕಹಿ ಘಟನೆಗಳ ಅನುಭವದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಶಾಲೆಗಳನ್ನು ಮುಚ್ಚುವ ಸ್ಥಿತಿಯನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಶಾಲೆಗಳಲ್ಲಿ ಸುರಕ್ಷಿತ ವಾತಾವರಣವನ್ನು ಕಲ್ಪಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಧೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು.

ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿಯೇ ಉಚಿತ ಲಸಿಕೆಯನ್ನು ಆದಷ್ಟು ಬೇಗ ನೀಡಲು ವ್ಯವಸ್ಥೆ ಮಾಡಬೇಕು. ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಗೆ ಮುನ್ನೆಚ್ಚರಿಕೆ ಡೋಸ್ ಪಡೆಯುವುದಕ್ಕೂ ಅವಕಾಶ ಕಲ್ಪಿಸಬೇಕು. ಸೋಂಕು ತಗುಲಿದ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆಗೆ ಅವಕಾಶ ಕಲ್ಪಿಸಿ, ಉಳಿದ ಮಕ್ಕಳಿಗೆ ತರಗತಿಗಳನ್ನು ಮುಂದುವರಿಸಬೇಕು. ಮುಂಗಾರಿನ ಆರಂಭದಿಂದಾಗಿ ಹವಾಮಾನದಲ್ಲಿ ಉಂಟಾಗುವ ಬದಲಾವಣೆಗಳು ಕೂಡ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ, ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.

ಕೊರೊನಾ ಲಾಕ್ಡೌನ್ ಸಮಯದಲ್ಲಿ ಮಕ್ಕಳೊಂದಿಗೆ ಹೆಚ್ಚಿನ ತೊಂದರೆ ಅನುಭವಿಸಿದ್ದು ಜನಸಾಮಾನ್ಯರು. ರೋಗಭೀತಿಯ ಜೊತೆಗೆ, ದುಡಿಮೆಯ ಅವಕಾಶಗಳೂ ಇಲ್ಲದೆ ಜನಸಾಮಾನ್ಯರು ಪಡಿಪಾಟಲು ಅನುಭವಿಸುವಂತಾಗಿ ಆರ್ಥಿಕತೆಗೆ ಬಿದ್ದ ಪೆಟ್ಟಿನಿಂದ ದೇಶ ಇನ್ನೂ ಚೇತರಿಸಿಕೊಂಡಿಲ್ಲ. ಕೊರೊನಾ ತೀವ್ರತೆ ಇಳಿಮುಖವಾದ ನಂತರ ಜನಜೀವನ ಬಹುತೇಕ ಯಥಾಸ್ಥಿತಿಗೆ ಮರಳಿದ್ದರೂ ಆರ್ಥಿಕ ವ್ಯವಸ್ಥೆ ಸುಧಾರಿಸಲು ಬಹಳಷ್ಟು ಸಮಯ ಬೇಕು.

ಇಂಥ ಸಂದಿಗ್ಧ ಸಂದರ್ಭದಲ್ಲಿ ಕೊರೊನಾದ ನಾಲ್ಕನೇ ಅಲೆ ಕೈಮೀರದಂತೆ ನೋಡಿಕೊಳ್ಳಬೇಕಾದ ಸವಾಲು ನಮ್ಮೆದುರಿಗಿದೆ. ರಾಜ್ಯದಲ್ಲಿ ನಾಲ್ಕು ತಿಂಗಳ ಬಳಿಕ ಗರಿಷ್ಠ ಪ್ರಕರಣಗಳು ದಾಖಲಾಗುತ್ತಿರುವುದು ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಬೇಕು. ಉದಾಸೀನ ಮಾಡದೆ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಸೋಂಕನ್ನು ನಿಯಂತ್ರಿಸುವ ಹೋರಾಟದಲ್ಲಿ ಪರಿಣಾಕಾರಿಯಾದ ತಂತ್ರ. ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು ಹಾಗೂ ಶುಚಿತ್ವದ ಪಾಠಗಳ ಅನುಸರಣೆಯು ಕೊರೊನಾ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲವು ಎನ್ನುವುದು ಈಗಾಗಲೇ ಸಾಬೀತಾಗಿದೆ.

ಈ ಸರಳ ಸಂಗತಿಗಳನ್ನು ನಿರ್ಲಕ್ಷ್ಯ ಮಾಡದೆ ಪಾಲಿಸುವುದು ವೈಯಕ್ತಿಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯವಾದುದು. ಮತ್ತೊಂದು ಲಾಕ್ಡೌನ್ ವಿದ್ಯಾರ್ಥಿಗಳನ್ನು ಮಾತ್ರವಲ್ಲ, ಜನಸಮೂಹವನ್ನೂ ಕಂಗೆಡಿಸಬಲ್ಲದು. ಆ ಸ್ಥಿತಿಯನ್ನು ತಂದುಕೊಳ್ಳದಿರುವುದು ನಮ್ಮ ಕೈಯಲ್ಲೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.