ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಮಹಿಳೆಯರ ಮೇಲೆ ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣವು ರಾಜ್ಯ ಹಿಂದೆಂದೂ ಕಾಣದಂಥದ್ದು. ಪ್ರಜ್ವಲ್ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಲೈಂಗಿಕ ದೃಶ್ಯಾವಳಿಯ ವಿಡಿಯೊಗಳ ಪ್ರಮಾಣವನ್ನು ಮತ್ತು ಅವುಗಳಿಂದ ಆಗಬಹುದಾದ ಪರಿಣಾಮಗಳನ್ನು ಗಮನಿಸಿದರೆ, ಇಡೀ ಪ್ರಕರಣವು ಆಘಾತಕಾರಿಯೂ ಹೌದು, ಮನಸ್ಸನ್ನು ತೀವ್ರವಾಗಿ ಕಲಕುವಂಥದ್ದೂ ಹೌದು ಎಂದು ಅನ್ನಿಸುತ್ತದೆ. ಪ್ರಜ್ವಲ್ ಅವರು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್–ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರು ಇದ್ದಾರೆ ಎನ್ನಲಾದ ಲೈಂಗಿಕ ದೃಶ್ಯಗಳಿರುವ ವಿಡಿಯೊಗಳನ್ನು ಸರಿಸುಮಾರು ಒಂದು ವಾರದಿಂದ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವಾಸ್ತವದಲ್ಲಿ ಈ ವಿಡಿಯೊಗಳು ಇರುವ ಪೆನ್ಡ್ರೈವ್ಗಳನ್ನು ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯುವುದಕ್ಕೂ ಕೆಲವು ದಿನಗಳ ಮೊದಲೇ ಹಾಸನ ಕ್ಷೇತ್ರದಲ್ಲಿ ಬಹಳ ವ್ಯಾಪಕ ಪ್ರಮಾಣದಲ್ಲಿ ಹಂಚಲಾಗಿತ್ತು ಎಂದು ವರದಿಯಾಗಿದೆ. ಈಗ ಪ್ರಜ್ವಲ್ ಅವರು ದೇಶದಿಂದ ಹೊರಗಿದ್ದಾರೆ. ಅವರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮೇ 7ರಂದು ನಡೆಯುವ ಮತದಾನದಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಹಿನ್ನಡೆ ಆಗದಿರಲಿ ಎಂಬ ಉದ್ದೇಶದಿಂದ ತ್ವರಿತವಾಗಿ ಅಮಾನತು ಕ್ರಮ ಕೈಗೊಂಡಿರಬಹುದು. ಪ್ರಜ್ವಲ್ ಅವರ ತಂದೆ, ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರ ವಿರುದ್ಧವೂ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ದೂರು ದಾಖಲಾಗಿದೆ. ಈ ದೂರುಗಳ ತನಿಖೆಗೆ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿದೆ.

ಹಲವು ರಾಜಕಾರಣಿಗಳಲ್ಲಿ ‘ನಾವು ಪ್ರಶ್ನಾತೀತರು’ ಎಂಬ ಮನೋಭಾವ ಇರುತ್ತದೆ. ದುರಹಂಕಾರವೂ ಇರುತ್ತದೆ ಎಂಬ ಮಾತಿದೆ. ಪ್ರಜ್ವಲ್ ರೇವಣ್ಣ ಅವರ ಮೇಲಿನ ಆರೋಪಗಳು ಸಾಬೀತಾದಲ್ಲಿ ಇಂತಹ ಮಾತುಗಳಿಗೆ ಮತ್ತಷ್ಟು ಪುಷ್ಟಿ ಸಿಗುತ್ತದೆ. ಆರೋಪ ದೃಢಪಟ್ಟರೆ, ಅಧಿಕಾರ ಹಾಗೂ ಹಣದ ತಾಕತ್ತು ಇರುವ, ದೊಡ್ಡವರ ಮನೆಯ ದಾರಿ ತಪ್ಪಿದ ಮಗ ಎಂದಷ್ಟೇ ಪ್ರಜ್ವಲ್ ಬಗ್ಗೆ ಹೇಳಲು ಸಾಧ್ಯವಿಲ್ಲ. ಇಂತಹ ಕೃತ್ಯ ಎಸಗುವವರು ಪುರುಷಪ್ರಧಾನ ಹಾಗೂ ಸ್ತ್ರೀದ್ವೇಷದ ಮನಃಸ್ಥಿತಿ ಹೊಂದಿರುತ್ತಾರೆ, ಮಹಿಳೆಯರಿಗೆ ಇರುವ ಗೌರವಯುತವಾದ ಸ್ಥಾನದ ಬಗ್ಗೆ ಬಾಯುಪಚಾರಕ್ಕೆ ಒಂದಿಷ್ಟು ಮಾತನಾಡಿದರೂ ಮಹಿಳೆಯರನ್ನು ಭೋಗದ ವಸ್ತುಗಳನ್ನಾಗಿ ಕಾಣುವ ಮನಃಸ್ಥಿತಿ ಹೊಂದಿರುತ್ತಾರೆ. ಅದೇನೇ ಇದ್ದರೂ ಪ್ರಜ್ವಲ್ ಮೇಲೆ ಬಂದಿರುವ ಆರೋಪಗಳು ಗಂಭೀರ ಸ್ವರೂಪದವು. ಆರೋಪಗಳೆಲ್ಲ ನಿಜವೇ ಆಗಿದ್ದಲ್ಲಿ, ಅಧಿಕಾರದಲ್ಲಿ ಇರುವ ಮನುಷ್ಯ ಕೆಲವು ಸಂದರ್ಭಗಳಲ್ಲಿ ಅದೆಷ್ಟರಮಟ್ಟಿಗೆ ವಿಕೃತನಾಗಬಲ್ಲ ಎಂಬುದನ್ನು ಅವು ತೋರಿಸುತ್ತವೆ. ಅಲ್ಲದೆ, ಅಷ್ಟೊಂದು ಸಂಖ್ಯೆಯ ವಿಡಿಯೊಗಳು, ಆ ವಿಡಿಯೊಗಳಲ್ಲಿ ಇರುವ ಮಹಿಳೆಯರನ್ನು ಬ್ಲ್ಯಾಕ್ಮೇಲ್ಗೆ ಗುರಿಪಡಿಸುವ ಅತ್ಯಂತ ಅಪಾಯಕಾರಿ ಸಾಧ್ಯತೆಯನ್ನೂ ಹೇಳುತ್ತವೆ.

ಆರೋಪಗಳ ಸ್ವರೂಪವನ್ನು ಗಮನಿಸಿದರೆ, ಯಾವ ರಾಜಕೀಯ ಪಕ್ಷವೂ ಈಗ ಪ್ರಜ್ವಲ್ ಅವರ ಸಮರ್ಥನೆಗೆ ಮುಂದಾಗಲಾರದು, ಅವರನ್ನು ತನ್ನವ ಎಂದು ಹೇಳಿಕೊಳ್ಳಲಾರದು. ಪ್ರಜ್ವಲ್ ಅವರನ್ನು ಮೈತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸುವಲ್ಲಿ ಇರುವ ಅಪಾಯದ ಬಗ್ಗೆ ಬಿಜೆಪಿಯ ಹಾಸನ ಜಿಲ್ಲಾ ಪ್ರಮುಖರೇ ಪಕ್ಷದ ರಾಜ್ಯ ನಾಯಕತ್ವವನ್ನು ಎಚ್ಚರಿಸಿದ್ದರು, ಆದರೆ ಬಿಜೆಪಿಯ ರಾಜ್ಯ ಘಟಕದ ನಾಯಕರು ಆ ಎಚ್ಚರಿಕೆಯನ್ನು ಉಪೇಕ್ಷಿಸಿದರು ಎನ್ನಲಾಗಿದೆ. ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜ್ವಲ್ ಅವರ ಪರವಾಗಿ ಪ್ರಚಾರವನ್ನೂ ನಡೆಸಿದರು. ಬಿಜೆಪಿಯು ರಾಜಕಾರಣವನ್ನು ಮಹಿಳೆಯರ ಘನತೆ, ಗೌರವಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರಿಸಿದ್ದು ಇದೇ ಮೊದಲೇನೂ ಅಲ್ಲ. ಮಹಿಳಾ ಕುಸ್ತಿಪಟು
ಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಪಕ್ಷದಲ್ಲಿ ಇಂದಿಗೂ ಪ್ರಭಾವಿಯಾಗಿಯೇ ಇದ್ದಾರೆ. ಈ ವಿಚಾರದಲ್ಲಿ ಬೇರೆ ಪಕ್ಷಗಳ ಹಿನ್ನೆಲೆಗಳೇನೂ ಬಹಳ ಉತ್ತಮವಾಗಿಲ್ಲ. ಈಗ ಕೆಲವು ಮಹಿಳೆಯರು ತಾವು ಪ್ರಜ್ವಲ್ ಅವರಿಂದ ದೌರ್ಜನ್ಯಕ್ಕೆ ಗುರಿಯಾಗಿರುವುದಾಗಿ ದೂರು ನೀಡಿದ್ದಾರೆ. ದೌರ್ಜನ್ಯಕ್ಕೆ ಗುರಿಯಾದ ಹಲವು ಮಹಿಳೆಯರು ಯಾವುದೇ ದೂರು ನೀಡದೆ ಇರುವ ಸಾಧ್ಯತೆಯೂ ಇದೆ. ಈಗ ಸರ್ಕಾರವು ದೂರುಗಳ ಬಗ್ಗೆ ಸೂಕ್ತವಾದ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಿ, ದೌರ್ಜನ್ಯಕ್ಕೆ ಗುರಿಯಾದವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ತ್ವರಿತವಾಗಿ ಮಾಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.