ಸಂವಿಧಾನ ನೀಡಿದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿಗೆ ಈ ಕಾಯ್ದೆಯಲ್ಲಿನ ಕೆಲವು ಅಂಶಗಳು ಸಂಪೂರ್ಣ ತದ್ವಿರುದ್ಧವಾಗಿವೆ

‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಮಸೂದೆ-2021’ ಅನ್ನು ಸುಗ್ರೀವಾಜ್ಞೆಯ ಮೂಲಕ ಕಾಯ್ದೆಯಾಗಿ ಜಾರಿಗೊಳಿಸಿರುವುದು ದುರದೃಷ್ಟಕರ. ಅಧಿವೇಶನ ನಡೆಯದಿರುವ ಸಮಯದಲ್ಲಿ ‘ತುರ್ತು ಕ್ರಮ ಕೈಗೊಳ್ಳಬೇಕಾದ ಸನ್ನಿವೇಶವೇನಾದರೂ ಸೃಷ್ಟಿಯಾದರೆ’ ಸಚಿವ ಸಂಪುಟದ ಶಿಫಾರಸಿನ ಮೇರೆಗೆ ಸುಗ್ರೀವಾಜ್ಞೆಯನ್ನು ಹೊರಡಿಸುವ ಅಧಿಕಾರವನ್ನು ಸಂವಿಧಾನದ 213ನೇ ವಿಧಿಯು ರಾಜ್ಯಪಾಲರಿಗೆ ಒದಗಿಸುತ್ತದೆ. ಮತಾಂತರ ನಿಷೇಧ ಕಾಯ್ದೆ ಎಂದೇ ಬಿಂಬಿತವಾಗಿರುವ ಈ ಕಾಯ್ದೆಯನ್ನು ಇಷ್ಟೊಂದು ಆತುರದಲ್ಲಿ ತರುವಂತಹ ಯಾವ ತುರ್ತು ಸನ್ನಿವೇಶ ಸೃಷ್ಟಿಯಾಗಿತ್ತು ಎಂಬುದನ್ನು ವಿವರಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೀಗಾಗಿ, ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟ ಮಾಡಿದ ಶಿಫಾರಸು, ಸಂವಿಧಾನದತ್ತವಾದ ಅಧಿಕಾರದ ದುರ್ಬಳಕೆ ಎಂದೇ ವ್ಯಾಖ್ಯಾನಿಸಬೇಕಾಗುತ್ತದೆ. ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಮಸೂದೆಯು 2021ರ ಡಿಸೆಂಬರ್ನಲ್ಲಿಯೇ ವಿಧಾನಸಭೆಯಿಂದ ಅಂಗೀಕಾರವನ್ನು ಪಡೆದುಕೊಂಡಿತ್ತು. ಆದರೆ, ವಿಧಾನ ಪರಿಷತ್ನಲ್ಲಿ ಆಡಳಿತ ಪಕ್ಷ ಬಹುಮತದ ಕೊರತೆ ಎದುರಿಸುತ್ತಿದ್ದರಿಂದ, ಅಲ್ಲಿ ಒಪ್ಪಿಗೆ ಪಡೆಯಲು ಸಾಧ್ಯವಾಗಿರಲಿಲ್ಲ. ಅಲ್ಲಿಂದ ಈಚೆಗೆ ಬಲವಂತದ ಮತಾಂತರದ ಯಾವ ಪ್ರಕರಣವೂ ದಾಖಲಾಗಿರಲಿಲ್ಲ. ಅಲ್ಲದೆ, ಇನ್ನು ಕೆಲವೇ ವಾರಗಳಲ್ಲಿ ವಿಧಾನಮಂಡಲದ ಅಧಿವೇಶನ ಮತ್ತೆ ನಡೆಯಲಿದೆ. ಯಾರಾದರೂ ಬಲವಂತದಿಂದ ಮತಾಂತರ ನಡೆಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಮೊದಲಿದ್ದ ಕಾಯ್ದೆಯಲ್ಲೂ ಅವಕಾಶವಿತ್ತು. ವಸ್ತುಸ್ಥಿತಿ ಹೀಗಿರುವಾಗ ತರಾತುರಿಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಅಗತ್ಯವಾದರೂ ಏನಿತ್ತು? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೀಗೆ ಸುಗ್ರೀವಾಜ್ಞೆಯ ಹಾದಿಯನ್ನು ಹಿಡಿಯಲು ಪಕ್ಷ ಮತ್ತು ‘ಪರಿವಾರ’ದಿಂದ ಬಂದ ಒತ್ತಡವೇ ಕಾರಣ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು, ಕಳೆದ ವರ್ಷ ಜುಲೈನಲ್ಲಿ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಕೋಮು ಸಿದ್ಧಾಂತವು ಆಡಳಿತದ ಮುನ್ನೆಲೆಗೆ ಬಂದಿದ್ದು, ಸದ್ಯದ ಸುಗ್ರೀವಾಜ್ಞೆ ಕೂಡ ಅದರ ಮುಂದುವರಿದ ಭಾಗವೇ ಆಗಿದೆ. ಹಿಜಾಬ್ನಿಂದ ಹಿಡಿದು ಆಜಾನ್ವರೆಗಿನ ವಿವಾದಗಳೇ ಇದಕ್ಕೆ ಸಾಕ್ಷಿ. ರಾಜ್ಯ ವಿಧಾನಸಭೆ ಚುನಾವಣೆ ಬೇರೆ ಹತ್ತಿರವಾಗಿರುವುದು ಆಡಳಿತ ಪಕ್ಷವಾದ ಬಿಜೆಪಿಯ ಅತಿಯಾದ ಆತುರಕ್ಕೆ ಇಂಬು ನೀಡಿದೆ.

ಸಂವಿಧಾನದ 25ನೇ ವಿಧಿ ದೇಶದ ಪ್ರತಿಯೊಬ್ಬ ಪ್ರಜೆಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಕಾನೂನು ಸುವ್ಯವಸ್ಥೆಗೆ ತೊಂದರೆ ಆಗದಂತೆ, ಯಾವುದೇ ವ್ಯಕ್ತಿ ತನಗೆ ಬೇಕಾದ ಧರ್ಮವನ್ನು ಅನುಸರಿಸುವ, ಅದರ ಬಗೆಗೆ ಪ್ರಚಾರ ಮಾಡುವ ಅವಕಾಶವನ್ನು ಸಂವಿಧಾನ ಒದಗಿಸಿದೆ. ‘ಬಲವಂತದ ಮತಾಂತರವನ್ನು ತಡೆಯುವುದು ಮತ್ತು ಇಂತಹ ಕೃತ್ಯವನ್ನು ಜಾಮೀನುರಹಿತ ಅಪರಾಧವನ್ನಾಗಿ ಪರಿಗಣಿಸುವುದು’ ಮುಖ್ಯ ಉದ್ದೇಶ ಎಂದೇನೋಸುಗ್ರೀವಾಜ್ಞೆಯಲ್ಲಿ ವಿವರಿಸಲಾಗಿದೆ. ಆದರೆ, ಕ್ರೈಸ್ತ ಸಮುದಾಯದವರು ಮತ್ತು ಸ್ವಯಂಪ್ರೇರಣೆಯಿಂದ ಮತಾಂತರ ಹೊಂದಲು ಬಯಸಿದವರಿಗೆ ಅಡೆತಡೆ ಉಂಟುಮಾಡುವುದೇ ಈ ಕಾಯ್ದೆಯ ಮುಖ್ಯ ಗುರಿ ಎಂಬ ವಾದ ಇದೆ. ಯಾವುದೇ ವ್ಯಕ್ತಿ ಮತಾಂತರ ಹೊಂದಲು ಬಯಸಿದರೆ ಕನಿಷ್ಠ 30 ದಿನಗಳ ಮುಂಚಿತವಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಎದುರು ಘೋಷಣಾಪತ್ರ ಸಲ್ಲಿಸಬೇಕು. ಸಂವಿಧಾನ ನೀಡಿದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿಗೆ ಈ ಕಾಯ್ದೆಯಲ್ಲಿನ ಹಲವು ಅಂಶಗಳು ಸಂಪೂರ್ಣ ತದ್ವಿರುದ್ಧವಾಗಿವೆ. ‘ಇಂತಹ ವ್ಯಕ್ತಿ’ ಮತಾಂತರವಾಗಲು ಬಯಸಿದ್ದಾನೆ ಎಂಬ ಮಾಹಿತಿ ಹಿಂದುತ್ವದ ಪ್ರಬಲ ಪ್ರತಿಪಾದಕ ಸಂಘಟನೆಗಳಿಗೆ ಮುಂಚಿತವಾಗಿ ತಿಳಿದರೆ ನಂತರದ ಸಂಭಾವ್ಯ ಘಟನಾವಳಿಗಳು ನಿಜಕ್ಕೂ ಕಳವಳಕಾರಿ. ಅದೂ ಅಲ್ಲದೆ, ಈ ಕಾಯ್ದೆ ಅಡಿಯಲ್ಲಿ ತಪ್ಪಿತಸ್ಥರು ಎಂದು ಪರಿಗಣಿಸಲ್ಪಟ್ಟವರಿಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ಇಂತಹದ್ದೊಂದು ಕಾಯ್ದೆಯ ಜರೂರತ್ತು ನಿಜಕ್ಕೂ ಇದ್ದರೆ ವಿಧಾನ ಪರಿಷತ್ನಲ್ಲೂ ಆ ಕುರಿತು ಮನವರಿಕೆ ಮಾಡಿ, ಅಲ್ಲಿ ಅಂಗೀಕಾರ ಪಡೆದ ಬಳಿಕ ಅನುಷ್ಠಾನಕ್ಕೆ ಮುಂದಾಗಬೇಕಿತ್ತು. ಇಷ್ಟೊಂದು ಆತುರಕ್ಕೆ ಯಾವ ಕಾರಣವೂ ಕಾಣುತ್ತಿಲ್ಲ. ಈ ಆತುರದ ಕ್ರಮವು ಉದ್ಯೋಗವನ್ನು ಸೃಷ್ಟಿಸುವುದೇ, ಕೋವಿಡ್ನಿಂದಾಗಿ ಮೃತರಾದವರಿಗೆ ಮರುಜೀವ ಕೊಡುವುದೇ ಎಂಬ ವಿರೋಧ ಪಕ್ಷದ ನಾಯಕರ ಪ್ರಶ್ನೆಗಳಲ್ಲಿ ಹುರುಳಿದೆ. ಕೆಲವು ತಿಂಗಳುಗಳ ಹಿಂದೆ, ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್, ತಮ್ಮ ತಾಯಿಯೂ ಸೇರಿದಂತೆ ದೊಡ್ಡಸಂಖ್ಯೆಯ ಜನರನ್ನು ಬಲವಂತದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ಆರೋಪಿಸಿದ್ದರು. ಸರ್ಕಾರವೇ ಆದೇಶಿಸಿದ್ದ ವಿಚಾರಣೆಯಿಂದ ಆ ಆರೋಪ ಸುಳ್ಳು ಎನ್ನುವುದು ಬಯಲಾಗಿತ್ತು. ಬಲವಂತದ ಮತಾಂತರದ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ದೂರುಗಳ ವಿವರವನ್ನಾಗಲೀ ಬಲವಂತದ ಮತಾಂತರಗಳು ಮಿತಿಮೀರಿವೆ ಎಂಬುದನ್ನು ಸಮರ್ಥಿಸುವ ಅಂಕಿಅಂಶವನ್ನಾಗಲೀ ಒದಗಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ವಾಸ್ತವ ಚಿತ್ರಣ ಹೀಗಿರುವಾಗ, ಸುಗ್ರೀವಾಜ್ಞೆಯ ಉದ್ದೇಶದಲ್ಲಿಯೇ ಹುಳುಕಿದೆ ಎಂದು ಹೇಳದೆ ವಿಧಿಯಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.