ಶಿವಸೇನಾ ಪಕ್ಷವು 2022ರಲ್ಲಿ ಹೋಳಾಯಿತು. ಇದಾದ ನಂತರದಲ್ಲಿ, ಏಕನಾಥ ಶಿಂದೆ ನೇತೃತ್ವದ ಬಣವೇ ನಿಜವಾದ ಶಿವಸೇನಾ, ಪಕ್ಷ ವಿಭಜನೆಯಾದ ನಂತರದಲ್ಲಿ ಈ ಬಣದ ಶಾಸಕರಿಗೆ ಅನರ್ಹತೆ ಅನ್ವಯವಾಗುವುದಿಲ್ಲ ಎಂದು ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ರೂಲಿಂಗ್ ನೀಡಿರುವುದು ನಿರೀಕ್ಷಿತವೇ ಆಗಿತ್ತು. ಶಿಂದೆ ಮತ್ತು ಅವರ ಬಣವು ಬಂಡಾಯವೆದ್ದು, ಅಂದಿನ ಮಹಾರಾಷ್ಟ್ರ ವಿಕಾಸ ಆಘಾಡಿ ಸರ್ಕಾರವನ್ನು ಉರುಳಿಸಿ, ಬಿಜೆಪಿ ಜೊತೆ ಸೇರಿ ಹೊಸ ಸರ್ಕಾರ ರಚಿಸಿದಾಗ ಅವರನ್ನು ಪಕ್ಷದಿಂದ ಹೊರಹಾಕುವ ಅಧಿಕಾರವು ಪಕ್ಷದ ಅಂದಿನ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಇರಲಿಲ್ಲ ಎಂದು ಸ್ಪೀಕರ್ ರೂಲಿಂಗ್ ನೀಡಿದ್ದಾರೆ. ಶಿಂದೆ ಬಣದ ಶಾಸಕರನ್ನು ಅನರ್ಹಗೊಳಿಸಲು ಠಾಕ್ರೆ ಬಣವು ಪರಿಗಣಿಸಬಹುದಾದಂತಹ ಯಾವುದೇ ಆಧಾರವನ್ನು ಒದಗಿಸಿಲ್ಲ ಎಂದು ಸ್ಪೀಕರ್ ಹೇಳಿದ್ದಾರೆ. 2018ರಲ್ಲಿ ತಿದ್ದುಪಡಿ ಮಾಡಲಾದ ಪಕ್ಷದ ಸಂವಿಧಾನವು ಪಕ್ಷದ ಮುಖ್ಯಸ್ಥನಿಗೆ ಹೆಚ್ಚಿನ ಅಧಿಕಾರ ನೀಡಿದೆ. ಆದರೆ ಈ ಸಂವಿಧಾನವು ಚುನಾವಣಾ ಆಯೋಗದ ದಾಖಲೆಗಳಲ್ಲಿ ಇರಲಿಲ್ಲ. ಹೀಗಾಗಿ ಈ ಸಂವಿಧಾನವನ್ನು ಪರಿಗಣಿಸಲು ಆಗದು ಎಂದು ಸ್ಪೀಕರ್ ತಿಳಿಸಿದ್ದಾರೆ.

ಯಾವುದೇ ಸ್ಪೀಕರ್ ಪಕ್ಷಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ, ತಾನು ಪ್ರತಿನಿಧಿಸುವ ಆಡಳಿತಾರೂಢ ಪಕ್ಷದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ರೂಲಿಂಗ್ ನೀಡಿದ ನಿದರ್ಶನ ಈಚಿನ ವರ್ಷಗಳಲ್ಲಿ ಇಲ್ಲ. ನಾರ್ವೇಕರ್ ಅವರು ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾದವರು. ಅವರು ಮಹಾರಾಷ್ಟ್ರದ ಈಗಿನ ಸರ್ಕಾರದ ಹಿತಾಸಕ್ತಿಗಳಿಗೆ ಅನುಗುಣವಾಗುವ ರೀತಿಯಲ್ಲಿ ಮಾತ್ರ ರೂಲಿಂಗ್ ನೀಡುವುದು ನಿರೀಕ್ಷಿತವೇ ಆಗಿತ್ತು. ಸ್ಪೀಕರ್ ಹುದ್ದೆಯು ಸಾಂವಿಧಾನಿಕ ಮಾನ್ಯತೆ ಹೊಂದಿದ್ದರೂ ಸ್ಪೀಕರ್ ಸ್ಥಾನದಲ್ಲಿ ಇರುವವರು ಪಕ್ಷಪಾತಿ ಧೋರಣೆಗಳಿಂದ ಆಚೆ ನಿಂತು, ಪೂರ್ವಗ್ರಹಗಳನ್ನು ಮೀರಿ ನಿರ್ಣಯ ಕೈಗೊಳ್ಳಬೇಕಿದ್ದರೂ ವಾಸ್ತವದಲ್ಲಿ ಆ ರೀತಿ ಆಗುತ್ತಿಲ್ಲ. ರೂಲಿಂಗ್ ನೀಡಲು ಸುಪ್ರೀಂ ಕೋರ್ಟ್ ನೀಡಿದ್ದ ಗಡುವಿನ ಕೊನೆಯ ದಿನ ನಾರ್ವೇಕರ್ ಆ ಕೆಲಸ ಮಾಡಿದ್ದಾರೆ. ನಿರ್ಣಯವನ್ನು ತ್ವರಿತವಾಗಿ ಕೈಗೊಳ್ಳಲು ನಾರ್ವೇಕರ್ ಅವರಿಗೆ ಸುಪ್ರೀಂ ಕೋರ್ಟ್ ಮತ್ತೆ ಮತ್ತೆ ಸೂಚನೆ ನೀಡಿತ್ತು. ‘ಸ್ಪೀಕರ್ ನಿಷ್ಪಕ್ಷಪಾತಿಯಾಗಿ ಇರಬೇಕಿರುವುದು ಸಾಂವಿಧಾನಿಕ ಕರ್ತವ್ಯ. ಆದರೆ ಸ್ಪೀಕರ್ ಸ್ಥಾನದಲ್ಲಿ ಇರುವವರು ಇದಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವ ಪ್ರವೃತ್ತಿ ಹೆಚ್ಚುತ್ತಿದೆ’ ಎಂದು ಸುಪ್ರೀಂ ಕೋರ್ಟ್ ಹಿಂದೊಮ್ಮೆ ಹೇಳಿತ್ತು. ಮಣಿಪುರದಲ್ಲಿ ಸಚಿವರೊಬ್ಬರ ವಿರುದ್ಧ ಸಲ್ಲಿಕೆಯಾಗಿದ್ದ ಅನರ್ಹತೆಗೆ ಸಂಬಂಧಿಸಿದ ಅರ್ಜಿಯನ್ನು ಅಲ್ಲಿನ ಸ್ಪೀಕರ್ ವರ್ಷಗಳ ಕಾಲ ಹಾಗೇ ಉಳಿಸಿಕೊಂಡ ಕಾರಣ, ಸುಪ್ರೀಂ ಕೋರ್ಟ್ ಆ ಸಚಿವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿದ್ದ ನಿದರ್ಶನವೂ ಇದೆ.

ಈಗ ನಾರ್ವೇಕರ್ ಅವರು ನೀಡಿರುವ ರೂಲಿಂಗ್, ಠಾಕ್ರೆ ಬಣಕ್ಕೆ ಆಗಿರುವ ರಾಜಕೀಯ ಹಿನ್ನಡೆ. ಶಿಂದೆ ಬಣಕ್ಕೆ ಸಿಕ್ಕಿರುವ ಇನ್ನೊಂದು ಜಯ. ಚುನಾವಣಾ ಆಯೋಗವು ಶಿಂದೆ ಬಣವನ್ನೇ ಶಿವಸೇನಾ ಎಂದು ಗುರುತಿಸಿದೆ. ಈ ಬಣಕ್ಕೆ ಶಿವಸೇನಾ ಪಕ್ಷದ ಚಿಹ್ನೆಯನ್ನು ಬಳಸುವ ಅವಕಾಶ ನೀಡಿದೆ. ಚುನಾವಣಾ ಆಯೋಗದ ತೀರ್ಮಾನವನ್ನು ಠಾಕ್ರೆ ಬಣವು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದೆ. ಅನರ್ಹತೆಗೆ ಸಂಬಂಧಿಸಿದ ನಿರ್ಣಯವನ್ನು ಕೂಡ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಠಾಕ್ರೆ ಬಣ ಹೇಳಿದೆ. ಇದರ ಬಗ್ಗೆ ತೀರ್ಮಾನ ಕೈಗೊಳ್ಳಲು ಕೋರ್ಟ್ಗೆ ಕೆಲವು ಸಮಯ ಬೇಕಾಗಬಹುದು. ಈ ವರ್ಷದಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಕಾರಣ, ಈ ಅರ್ಜಿಯು ಪ್ರಸ್ತುತತೆಯನ್ನು ಕಳೆದುಕೊಳ್ಳಲೂಬಹುದು. ಮಹಾರಾಷ್ಟ್ರದ ಸ್ಪೀಕರ್ ಈಗ ಎನ್ಸಿಪಿ ಬಣಗಳ ಅನರ್ಹತೆಗೆ ಸಂಬಂಧಿಸಿದ ಅರ್ಜಿಗಳ ಬಗ್ಗೆ ತೀರ್ಮಾನವನ್ನು ಜನವರಿ 31ಕ್ಕೆ ಮೊದಲು ಹೇಳಬೇಕಿದೆ. ಮಹಾರಾಷ್ಟ್ರದ ರಾಜಕಾರಣವು ಎರಡು ಪ್ರಮುಖ ಪಕ್ಷಗಳಾದ ಶಿವಸೇನಾ ಮತ್ತು ಎನ್ಸಿಪಿ ಹೋಳಾಗಿದ್ದನ್ನು ಈಚೆಗೆ ಕಂಡಿದೆ. ಎರಡೂ ಪಕ್ಷಗಳ ತಲಾ ಒಂದು ಬಣವು ಬಿಜೆಪಿ ಜೊತೆ ಕೈಜೋಡಿಸಿವೆ. ಪಕ್ಷಗಳ ವಿಭಜನೆಗೆ ಸಂಬಂಧಿಸಿದ ಕಾನೂನಿನ ಅಂಶವನ್ನು ಸ್ಪೀಕರ್ ಮತ್ತು ಕೋರ್ಟ್ಗಳು ತೀರ್ಮಾನಿಸುತ್ತವೆಯಾದರೂ, ಇಲ್ಲಿ ಅಡಗಿರುವ ನಿಜವಾದ ಸಂಗತಿಯನ್ನು ಆಯಾ ಪಕ್ಷಗಳ ಕಾರ್ಯಕರ್ತರು ತಳಮಟ್ಟದಲ್ಲಿ ಹಾಗೂ ಮತದಾರರು ಚುನಾವಣೆಯಲ್ಲಿ ತೀರ್ಮಾನಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.