ಸಂಯುಕ್ತ ಜನತಾದಳ (ಜೆಡಿಯು) ನಾಯಕ ನಿತೀಶ್ ಕುಮಾರ್ ಅವರು ಬಿಜೆಪಿ ಸಖ್ಯದೊಂದಿಗೆ ಸರ್ಕಾರವನ್ನು ರಚಿಸಿದಾಗ, ಅದು ಹೆಚ್ಚು ಕಾಲ ಬಾಳುವ ಸರ್ಕಾರವಲ್ಲ ಎನ್ನುವುದು ಮೊದಲ ದಿನದಿಂದಲೂ ಗೊತ್ತಿದ್ದ ಸಂಗತಿಯಾಗಿತ್ತು. ಏಕೆಂದರೆ, ‘ಬಾಲವೇ ನಾಯಿಯನ್ನು ಅಲ್ಲಾಡಿಸುತ್ತದೆ’ ಎನ್ನುತ್ತಾರಲ್ಲ, ಅಂತಹ ಸನ್ನಿವೇಶವು ಆ ವ್ಯವಸ್ಥೆಯಲ್ಲಿ ಸೃಷ್ಟಿಯಾಗಿತ್ತು. ಬಿಹಾರದಲ್ಲಿ 2020ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು 43 ಕ್ಷೇತ್ರಗಳಲ್ಲಿ ಗೆದ್ದರೆ, ಬಿಜೆಪಿ 74 ಸ್ಥಾನ ಪಡೆಯಿತು. ತನ್ನ ಮುಂದೆ ಬೇರೆ ಆಯ್ಕೆ ಇಲ್ಲದಿದ್ದ ಕಾರಣ, ಬಿಜೆಪಿಯು ನಿತೀಶ್ ನೇತೃತ್ವದಲ್ಲಿಯೇ ಸಮ್ಮಿಶ್ರ ಸರ್ಕಾರದ ರಚನೆಗೆ ಅವಕಾಶ ಮಾಡಿಕೊಟ್ಟಿತ್ತು.

ಚುನಾವಣೆಯಲ್ಲಿ ಚಿರಾಗ್ ಪಾಸ್ವಾನ್ ಅವರನ್ನು ಬಳಸಿಕೊಂಡು ಜೆಡಿಯು ಮತಬುಟ್ಟಿಗೆ ಕೈಹಾಕಿದ್ದಲ್ಲದೆ ಆ ಪಕ್ಷವನ್ನು ದುರ್ಬಲಗೊಳಿಸುವ ಪ್ರಯತ್ನವನ್ನೂ ಅದು ಮಾಡಿತ್ತು. ಚುನಾವಣೋತ್ತರ ಸಂದರ್ಭದಲ್ಲಿ ನಿತೀಶ್ ಅವರಿಗೆ ತಕ್ಷಣದ ಬೇರೆ ಆಯ್ಕೆಗಳು ಇರಲಿಲ್ಲ. ಬಿಜೆಪಿಯೊಂದಿಗೇ ಅವರು ಹೋಗಬೇಕಿತ್ತು. ಲಾಲೂ ಪ್ರಸಾದ್ ಅವರ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಪಕ್ಷವು ಅವರ ಪುತ್ರ ತೇಜಸ್ವಿ ಯಾದವ್ ನೇತೃತ್ವದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ಚುನಾವಣೆಗಿಂತ ಮೊದಲು ಆರ್‌ಜೆಡಿಯೊಂದಿಗಿನ ಮೈತ್ರಿಯನ್ನು ಮುರಿದುಕೊಂಡಿದ್ದ ನಿತೀಶ್ ಅವರಿಗೆ ತಕ್ಷಣವೇ ಆ ಪಕ್ಷದೊಂದಿಗೆ ಮರುಹೊಂದಾಣಿಕೆ ಮಾಡಿಕೊಳ್ಳುವುದು ಸಾಧ್ಯವಿರಲಿಲ್ಲ. ಹಾಗೊಂದು ವೇಳೆ ಮೈತ್ರಿ ಏರ್ಪಟ್ಟಿದ್ದರೂ ನಿತೀಶ್ ಅವರೇ ಮುಖ್ಯಮಂತ್ರಿಯಾಗುವ ಖಾತರಿ ಸಹ ಇರಲಿಲ್ಲ. ಹೀಗಾಗಿ, ನಿತೀಶ್ ನೇತೃತ್ವದ ಎನ್‌ಡಿಎ ಸರ್ಕಾರ ಆಗ ಅಸ್ತಿತ್ವಕ್ಕೆ ಬಂತು ಮತ್ತು ಆ ಮೈತ್ರಿ ಮುರಿದು ಬೀಳುವುದು ಕೂಡ ಆ ದಿನವೇ ಖಚಿತವಾಗಿತ್ತು.

ಬಿಜೆಪಿಯ ಆಧಿಪತ್ಯದ ಹಂಬಲ ಮತ್ತು ನಿತೀಶ್ ಅವರ ಅವಕಾಶವಾದದ ನಡುವಿನ ಪೈಪೋಟಿಯ ಫಲ ಇದು ಎಂಬಂತೆ ಗೋಚರಿಸಿದರೂ ಸದ್ಯ ನಿತೀಶ್ ಅವರು ತಮ್ಮ ಹಳೆಯ ಜೊತೆಗಾರನನ್ನೇ ಮತ್ತೆ ನೆಚ್ಚಿಕೊಂಡಿದ್ದಾರೆ. ಬಿಜೆಪಿ ಜತೆ ಸಖ್ಯ ಬೆಳೆಸಿದ ಎಲ್ಲ ಪ್ರಾದೇಶಿಕ ಪಕ್ಷಗಳು ದುರ್ಬಲಗೊಂಡಿರುವುದು, ಸಂಖ್ಯಾಬಲದ ದೃಷ್ಟಿಯಿಂದಲೂ ಅವು ಕೃಶವಾಗಿರುವುದು ಅಥವಾ ಆ ಪಕ್ಷಗಳೂ ಬಿಜೆಪಿಯದೇ ಭಾಗದಂತಾಗಿರುವುದು ನಿತೀಶ್ ಅವರಲ್ಲಿ ಕಳವಳ ಉಂಟುಮಾಡಿದ್ದುದು ಸುಳ್ಳಲ್ಲ.

ಪ್ರಾದೇಶಿಕ ಪಕ್ಷಗಳನ್ನೇ ಏಣಿ ಮಾಡಿಕೊಂಡು ಬೆಳೆದ ಬಿಜೆಪಿ, ಅವುಗಳ ನೆಲೆಯನ್ನೇ ಬಳಸಿಕೊಂಡು ವಿಸ್ತಾರವಾಗಿ ಹರಡಿರುವುದು ಎದ್ದು ಕಾಣುತ್ತಿದೆ. ಮಹಾರಾಷ್ಟ್ರದಲ್ಲಿ ಶಿವಸೇನಾವನ್ನು ವಿಭಜನೆ ಮಾಡಿರುವ ಇತ್ತೀಚಿನ ಪ್ರಸಂಗವು ಬಿಜೆಪಿಯ ಆಕ್ರಮಣಶೀಲ ಮನೋಭಾವಕ್ಕೆ ಹೊಸ ಸಾಕ್ಷಿ. ಬಿಹಾರದಲ್ಲೂ ಆ ಪಕ್ಷ ಇಂತಹದ್ದೇ ತಂತ್ರವನ್ನು ಅನುಸರಿಸಬಹುದು ಎಂದು ನಿತೀಶ್ ಅವರು ಭಾವಿಸಲು ಕಾರಣಗಳಿವೆ. ‘ಎಲ್ಲ ಪ್ರಾದೇಶಿಕ ಪಕ್ಷಗಳು ನಿರ್ನಾಮವಾಗಲಿವೆ ಮತ್ತು ರಾಷ್ಟ್ರಮಟ್ಟದಲ್ಲಿ ಬಿಜೆಪಿಯೊಂದೇ ಉಳಿಯಲಿದೆ’ ಎಂದು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಇತ್ತೀಚೆಗೆ ಪಟ್ನಾದಲ್ಲಿ ನೀಡಿದ ಹೇಳಿಕೆಯು ಜೆಡಿಯು ನಾಯಕನ ಪಾಲಿಗೆ ಕೊನೆಯ ಎಚ್ಚರಿಕೆಯಂತಾಗಿತ್ತು.

ನಿತೀಶ್ ಮತ್ತು ತೇಜಸ್ವಿ ಯಾದವ್ ಅವರ ನಡುವಿನ ಮೈತ್ರಿಯ ಷರತ್ತುಗಳು ಏನೆಂಬುದು ಇನ್ನೂ ಬಹಿರಂಗಗೊಂಡಿಲ್ಲ. ನಿತೀಶ್ ಮುಖ್ಯಮಂತ್ರಿಯಾಗಿ, ತೇಜಸ್ವಿ ಉಪ ಮುಖ್ಯಮಂತ್ರಿಯಾಗಿ ಅಧಿಕಾರವನ್ನೇನೋ ಸ್ವೀಕರಿಸಿದ್ದಾರೆ. ಬಹುಮತದ ಸರ್ಕಸ್‌ನಲ್ಲಿ ಈ ಹಿಂದೆ ಬಿಜೆಪಿಯ ಋಣದಲ್ಲಿದ್ದಂತೆ ಈಗ ಮಹಾಮೈತ್ರಿಕೂಟದ ಮರ್ಜಿಯಲ್ಲಿ ಇರಬೇಕಾದುದು ನಿತೀಶ್ ಅವರಿಗೆ ಅನಿವಾರ್ಯ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಪರಸ್ಪರ ಅಲ್ಲಿ ಪೈಪೋಟಿಗಿಳಿದಿದ್ದ ಎರಡು ಪಕ್ಷಗಳು ಈಗ ಸಹಬಾಳ್ವೆ ನಡೆಸಲು ಆರಂಭಿಸಿವೆ.

ಎರಡೂ ಪಕ್ಷಗಳಿಗೆ ತಾವು ಸಮಾನ ವೈರಿಯನ್ನು ಎದುರಿಸಬೇಕಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಿದೆ. ನಿತೀಶ್ ಅವರು ಸುದೀರ್ಘ ರಾಜಕೀಯ ಅನುಭವವನ್ನು ಹೊಂದಿರುವುದು ನಿಜವಾದರೂ ಅವರ ಒಳ್ಳೆಯ ಆಡಳಿತದ ಖ್ಯಾತಿಗೆ ಇತ್ತೀಚಿನ ದಿನಗಳಲ್ಲಿ ಧಕ್ಕೆ ಉಂಟಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಬಿಹಾರದ ಬೆಳವಣಿಗೆಗಳು ರಾಷ್ಟ್ರ ರಾಜಕಾರಣದ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರಲಿವೆ ಎಂಬುದನ್ನು ಈಗಲೇ ಊಹಿಸುವುದು ಕಷ್ಟ.

ಆದರೆ, 2024ರ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಒಗ್ಗೂಡಿ ಹೋರಾಟ ನಡೆಸಲು ಸದ್ಯದ ಬೆಳವಣಿಗೆ ಇನ್ನಷ್ಟು ಇಂಬು ನೀಡಿರುವುದು, ಹುರುಪು ತುಂಬಿರುವುದು ಸ್ಪಷ್ಟ. ಬಿಹಾರದಂತಹ ಪ್ರಮುಖ ರಾಜ್ಯದ ಅಧಿಕಾರ ಕೈತಪ್ಪಿರುವುದು ಬಿಜೆಪಿಯ ಪಾಲಿಗೆ ಖಂಡಿತವಾಗಿಯೂ ಹಿನ್ನಡೆ. ಆ ಪಕ್ಷದ ರಾಜಕೀಯ ತಂತ್ರಗಾರರು ಕತ್ತಿಯನ್ನು ಮತ್ತೆ ಹರಿತಗೊಳಿಸಲು, ಹೊಸತಂತ್ರ ಹೆಣೆಯಲು ಯತ್ನಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.