ಸಿನಿಮಾ ತಂಡಗಳ ಹುಂಬ ಸಾಹಸಗಳಿಗೆ ಅಮೂಲ್ಯ ಜೀವಗಳು ಬಲಿಯಾಗುತ್ತಲೇ ಇವೆ. ಇದಕ್ಕೆ ಹೊಸ ಉದಾಹರಣೆ ‘ರಣಂ’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ನಡೆದಿರುವ ದುರ್ಘಟನೆ. ಬೆಂಗಳೂರಿನ ಬಾಗಲೂರು ಬಳಿಯ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿದ್ದ ಶೂಟಿಂಗ್‌ನಲ್ಲಿ, ಸಿಲಿಂಡರ್ ಸ್ಫೋಟದಿಂದ ಸುಮೇರಾ ಬಾನು ಹಾಗೂ ಆಯೇರಾ ಬಾನು ಎನ್ನುವ ತಾಯಿ–ಮಗಳು ಜೀವ ಕಳೆದುಕೊಂಡಿದ್ದಾರೆ. ತಮ್ಮ ದಾರಿಯನ್ನು ಹಿಡಿದುಹೋಗದೆ ಶೂಟಿಂಗ್ ನೋಡಲು ನಿಂತದ್ದೇ ಈ ನತದೃಷ್ಟ ಹೆಣ್ಣುಮಕ್ಕಳು ಮಾಡಿದ ತಪ್ಪು. ಕಾರಿನ ಸ್ಫೋಟದ ಸಾಹಸದೃಶ್ಯದ ಚಿತ್ರೀಕರಣ ನಡೆಯುತ್ತಿದ್ದಾಗ, ಸ್ಫೋಟಕ್ಕೆ ಬಳಸುತ್ತಿದ್ದ ಸಿಲಿಂಡರ್ ಗುರಿತಪ್ಪಿ ಜನರ ಕಡೆಗೆ ಬಂದುಬಿದ್ದು ಸಿಡಿದಿದೆ. ತೀವ್ರ ಸ್ಫೋಟದಿಂದಾಗಿ ತಾಯಿ–ಮಗಳ ದೇಹಗಳು ಛಿದ್ರವಾಗಿವೆ. ಅನಾಹುತ ಸಂಭವಿಸಿದ ಕೂಡಲೇ ಸಿನಿಮಾದ ನಿರ್ದೇಶಕ, ನಿರ್ಮಾಪಕ ಹಾಗೂ ಸಾಹಸ ನಿರ್ದೇಶಕ ತಲೆಮರೆಸಿಕೊಂಡಿದ್ದಾರೆ. ಈ ಪ್ರಮಾದದಲ್ಲಿ ಸಾಹಸ ನಿರ್ದೇಶಕ ವಿಜಯನ್ ಅವರ ನಿರ್ಲಕ್ಷ್ಯ ಎದ್ದುಕಾಣುವಂತಿದೆ. ಚೆನ್ನೈಗೆ ಹಿಂತಿರುಗುವ ಅವರ ಆತುರ ಅನಾಹುತಕ್ಕೆ ಪ್ರಮುಖ ಕಾರಣ ಎಂದು ವರದಿಯಾಗಿದೆ. ಪ್ರಮುಖ ರಸ್ತೆಯ ನಡುವೆ ಸಿಲಿಂಡರ್ ಮತ್ತು ಕಾರನ್ನು ಸ್ಫೋಟಿಸುವ ಪ್ರಯತ್ನ ಹುಂಬತನದ್ದು. ಸಾಮಾನ್ಯ ದೃಶ್ಯಗಳನ್ನು ಚಿತ್ರೀಕರಿಸುತ್ತೇವೆಂದು ಚುನಾವಣಾ ಅಧಿಕಾರಿಯಿಂದ ಅನುಮತಿ ಪಡೆದಿರುವ ಚಿತ್ರತಂಡ, ಕಾನೂನು ಬಾಹಿರವಾಗಿ ಸ್ಫೋಟಕಗಳನ್ನು ಬಳಸಿದೆ. ಶೂಟಿಂಗ್ ನಡೆಸುವ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನು ನೀಡುವ ಗೋಜಿಗೂ ಚಿತ್ರತಂಡ ಹೋಗಿಲ್ಲ. ಕಾರು ಸ್ಫೋಟಿಸಲು ಉದ್ದೇಶಿಸಿದ್ದ ಸ್ಥಳ ಅತ್ಯಂತ ಸೂಕ್ಷ್ಮಪ್ರದೇಶವಾಗಿದ್ದು, ಅದರ ಸುತ್ತಮುತ್ತ 30ಕ್ಕೂ ಹೆಚ್ಚು ಕೈಗಾರಿಕೆಗಳಿವೆ. ಇಂಥ ಪರಿಸರದಲ್ಲಿ ಸ್ಫೋಟಕಗಳನ್ನು ಬಳಸುವುದು ಸಾವಿನೊಂದಿಗೆ ಆಟವಾಡಿದಂತೆಯೇ ಸರಿ.

2016ರಲ್ಲಿ ನಾಗಶೇಖರ್ ನಿರ್ದೇಶನದ ‘ಮಾಸ್ತಿಗುಡಿ’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಹೆಲಿಕಾಪ್ಟರ್‌ನಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಬಿದ್ದು ಅನಿಲ್ ಕುಮಾರ್ ಮತ್ತು ರಾಘವ್ ಉದಯ್ ಎನ್ನುವ ಇಬ್ಬರು ಯುವನಟರು ದುರ್ಮರಣ ಹೊಂದಿದ್ದರು. ಇಬ್ಬರೂ ಜೀವರಕ್ಷಕ ಕವಚವನ್ನು ಧರಿಸಿರಲಿಲ್ಲ. ಆಗ ಕೂಡ ಚಿತ್ರತಂಡ ಸೂಕ್ತ ಸುರಕ್ಷಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಸಾಹಸ ನಿರ್ದೇಶಕ ರವಿವರ್ಮ ಅವರ ಕರ್ತವ್ಯಲೋಪದಿಂದಾಗಿ ಇಬ್ಬರು ಯುವಕಲಾವಿದರು ಸಾವಿಗೀಡಾಗಿದ್ದರು. ‘ಲಾಕಪ್ ಡೆತ್’, ‘ಮಿಂಚಿನ ಓಟ’, ‘ಕಾಳಿ’, ‘ಟಿಕೆಟ್ ಟಿಕೆಟ್’, ‘ಕಿರಣ್ ಬೇಡಿ’ ಚಿತ್ರಗಳ ಶೂಟಿಂಗ್ ಸಂದರ್ಭದಲ್ಲೂ ಅನಾಹುತಗಳು ಸಂಭವಿಸಿದ್ದವು. ಈ ಎಲ್ಲ ದುರ್ಘಟನೆಗಳ ಹಿನ್ನೆಲೆಯಲ್ಲಿ ಎದ್ದುಕಾಣಿಸುವುದು ಸುರಕ್ಷಾ ಕ್ರಮಗಳ ಕೊರತೆ ಹಾಗೂ ಸಾಹಸ ನಿರ್ದೇಶಕರ ನಿರ್ಲಕ್ಷ್ಯ. ‘ಮಾಸ್ತಿಗುಡಿ’ ದುರ್ಘಟನೆಯ ಸಂದರ್ಭದಲ್ಲಿ ಇಬ್ಬರು ಕಲಾವಿದರು ಸಾವಿಗೀಡಾದ ಸುದ್ದಿಯಂತೂ ಚಿತ್ರರಂಗದಲ್ಲಿ ಸಂಚಲನವನ್ನೇ ಮೂಡಿಸಿತ್ತು. ಆದರೆ, ಆ ಘಟನೆಯಿಂದ ಚಿತ್ರರಂಗ ಯಾವ ಪಾಠವನ್ನೂ ಕಲಿತಿಲ್ಲ ಎನ್ನುವುದನ್ನು ಈಗಿನ ‘ರಣಂ’ ದುರಂತ ಸಾಬೀತುಪಡಿಸುವಂತಿದೆ. ಸಿನಿಮಾ ಮಂದಿ ತಮ್ಮ ಖಯಾಲಿಗಳಿಗಾಗಿ ಅಮಾಯಕರ ಜೀವಗಳೊಂದಿಗೆ ಆಟವಾಡುತ್ತಲೇ ಇದ್ದಾರೆ. ರವಿವರ್ಮ, ವಿಜಯನ್‌ರಂಥ ಬೇಡಿಕೆಯ ಸಾಹಸ ನಿರ್ದೇಶಕರೇ ಪೊಳ್ಳು ಆತ್ಮವಿಶ್ವಾಸದಿಂದ ಕೆಲಸ ಮಾಡಿರುವಾಗ, ಉಳಿದವರಿಂದ ವೃತ್ತಿಪರತೆಯನ್ನು ನಿರೀಕ್ಷಿಸುವುದು ಹೇಗೆ? ತಾರಾ ವರ್ಚಸ್ಸಿನ ಕಲಾವಿದರಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ನಿರ್ಮಾಪಕರು, ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಚೌಕಾಸಿಗಿಳಿಯುವುದನ್ನು ನೋಡಿದರೆ ಜನಸಾಮಾನ್ಯರ ಜೀವಗಳ ಬಗ್ಗೆ ಅವರಿಗೆ ಕಾಳಜಿಯೇ ಇದ್ದಂತಿಲ್ಲ. ‘ಮಾಸ್ತಿಗುಡಿ’ ಪ್ರಕರಣದ ವಿಚಾರಣೆ ಇನ್ನೂ ಮುಗಿದಿಲ್ಲ. ಆ ಸಾಲಿಗೆ ‘ರಣಂ’ ಕೂಡ ಸೇರಿಕೊಳ್ಳಲಿದೆ. ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ಇಂತಹ ಪ್ರಾಣಹಾನಿ ತಪ್ಪಿಸಲು ಸೂಕ್ತ ಮಾರ್ಗಸೂಚಿ ರಚಿಸುವ ಹೊಣೆ ಸರ್ಕಾರದ ಮೇಲಿದೆ. ಮಾರ್ಗಸೂಚಿ ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಬೇಕು. ಇಲ್ಲದೇ ಹೋದರೆ ಸಿನಿಮಾ ಮಂದಿ ತಮ್ಮ ಜಡತ್ವದಿಂದ ಎಚ್ಚರಗೊಳ್ಳಲಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.