ಆಡಳಿತ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರವನ್ನು ಮಟ್ಟ ಹಾಕಲೆಂದೇ ಕರ್ನಾಟಕದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಸ್ಥಾಪಿಸಲಾಯಿತು. 1984ರಲ್ಲಿ ಈ ಸಂಸ್ಥೆ ಸ್ಥಾಪನೆ ಆದಂದಿನಿಂದಲೂ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಯಾವುದೇ ನಾಚಿಕೆ ಮತ್ತು ಭಯವಿಲ್ಲದೆ ಲಂಚ ಪಡೆಯುವುದರಲ್ಲಿ ನಿರತರಾಗಿದ್ದ ಅಧಿಕಾರಿಗಳು ಹಾಗೂ ನೌಕರರಲ್ಲಿ ಒಂದು ರೀತಿಯ ಭಯ, ಎಚ್ಚರವನ್ನು ಮೂಡಿಸುವ ಕೆಲಸ ಲೋಕಾಯುಕ್ತದಿಂದ ಸಾಧ್ಯವಾಯಿತು ಎನ್ನುವುದೂ ನಿಜ. ಅದರಲ್ಲೂ 2001ರಲ್ಲಿ ನ್ಯಾಯಮೂರ್ತಿ ಎನ್.ವೆಂಕಟಾಚಲ ಅವರು ಲೋಕಾಯುಕ್ತರಾಗಿ ನೇಮಕವಾದ ಬಳಿಕ ಲೋಕಾಯುಕ್ತರಿಗೆ ಇರುವ ಅಪಾರ ಅಧಿಕಾರದ ಬಗ್ಗೆ ಸಾರ್ವಜನಿಕರಲ್ಲೂ ಎಚ್ಚರ ಮೂಡುವಂತೆ ಆ ಸಂಸ್ಥೆ ಕಾರ್ಯ ನಿರ್ವಹಿಸಿತು.

ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆಯವರು ಲೋಕಾಯುಕ್ತರಾದ ಅವಧಿಯಲ್ಲಂತೂ ಅತ್ಯುತ್ತಮ ಪೊಲೀಸ್ ಅಧಿಕಾರಿಗಳ ತಂಡ ಕಟ್ಟಿಕೊಂಡು ಭ್ರಷ್ಟರ ಮೇಲೆ ಮುಗಿಬಿದ್ದರು. ಇಡೀ ದೇಶದಲ್ಲೇ ಅತ್ಯಂತ ದೊಡ್ಡದು ಎನ್ನಲಾದ ಗಣಿಗಾರಿಕೆ ಹಗರಣವನ್ನು ಬಯಲಿಗೆಳೆದರು. ಈ ಹಗರಣದ ಹಿನ್ನೆಲೆಯಲ್ಲಿಯೇ ರಾಜ್ಯದ ಮುಖ್ಯಮಂತ್ರಿಯೊಬ್ಬರು ರಾಜೀನಾಮೆ ನೀಡುವ ಪರಿಸ್ಥಿತಿಯೂ ಉಂಟಾಯಿತು.

ಇಡೀ ದೇಶದಲ್ಲೇ ಅತ್ಯುತ್ತಮ ಲೋಕಾಯುಕ್ತ ವ್ಯವಸ್ಥೆ ಹೊಂದಿರುವ ರಾಜ್ಯವೆಂಬ ಕೀರ್ತಿಗೂ ಕರ್ನಾಟಕ ಆಗ ಪಾತ್ರವಾಯಿತು. 2013ರ ಫೆಬ್ರುವರಿಯಿಂದ ನ್ಯಾಯಮೂರ್ತಿ ಎನ್.ಭಾಸ್ಕರರಾವ್ ಲೋಕಾಯುಕ್ತರಾಗಿ ನೇಮಕವಾದ ಬಳಿಕವೂ ಭ್ರಷ್ಟ ಅಧಿಕಾರಿಗಳು ಮತ್ತು ನೌಕರರ ಮೇಲೆ ದಾಳಿ ಮುಂದುವರಿದಿದೆ. ಆದರೆ ಈಗ ಅದೇ ಲೋಕಾಯುಕ್ತ ಸಂಸ್ಥೆಯ ಮೇಲೆ ಸಂಶಯದ ಮುಳ್ಳು ನೆಟ್ಟಿದೆ.

ಲೋಕಾಯುಕ್ತರ ಮನೆಯಲ್ಲೇ ಹಿರಿಯ ಅಧಿಕಾರಿಯೊಬ್ಬರಿಂದ ಒಂದು ಕೋಟಿ ರೂಪಾಯಿ ಲಂಚ ಕೇಳಲಾಗಿದೆ ಎಂಬ ಆರೋಪ ಇಡೀ ಸಂಸ್ಥೆಯ ಮೇಲೆ ಸಂಶಯದ ಕರಿನೆರಳು ಚಾಚುವಂತೆ ಮಾಡಿದೆ. ಈ ಪ್ರಕರಣದಲ್ಲಿ ಲೋಕಾಯುಕ್ತರ ನಿಕಟ ಸಂಬಂಧಿಕರೂ ಒಳಗೊಂಡಿದ್ದಾರೆ ಎನ್ನುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ. ಈ ‘ಲಂಚ ಬೇಡಿಕೆ’ಯ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಲೋಕಾಯುಕ್ತ ಭಾಸ್ಕರರಾವ್ ಹೇಳಿಕೆ ನೀಡಿದ್ದಾರೆ.

ಜತೆಗೆ ಈ ಭ್ರಷ್ಟಾಚಾರ ಆರೋಪದ ಬಗ್ಗೆ ಸ್ವತಂತ್ರ ಸಂಸ್ಥೆಯೊಂದರಿಂದ ತನಿಖೆಗೆ ಆದೇಶಿಸುವಂತೆ ರಾಜ್ಯ ಸರ್ಕಾರವನ್ನು ಕೋರಲೂ ನಿರ್ಧರಿಸಿದ್ದಾರೆ. ಈ ಮಧ್ಯೆ ಲೋಕಾಯುಕ್ತ ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಅದರ ಮೇಲಿನ ಭ್ರಷ್ಟಾಚಾರ ಆರೋಪವನ್ನು ಸಿಬಿಐಗೆ ವಹಿಸುವ ಯಾವುದೇ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಭ್ರಷ್ಟತೆಯನ್ನು ಮಟ್ಟ ಹಾಕಲು ಸ್ಥಾಪಿಸಲಾಗಿರುವ ಸಂಸ್ಥೆಯಲ್ಲೇ ಭ್ರಷ್ಟಾಚಾರದ ದುರ್ವಾಸನೆ ಹರಡಿದರೆ ಇಡೀ ವ್ಯವಸ್ಥೆಯ ಬಗ್ಗೆಯೇ ಜನರಿಗೆ ನಂಬಿಕೆ ಹೊರಟುಹೋಗುವ ಅಪಾಯವಿದೆ. ದೇಶದಲ್ಲೇ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಲೋಕಾಯುಕ್ತ ಎಂಬ ಹೆಗ್ಗಳಿಕೆ ಹೊಂದಿರುವ ಸಂಸ್ಥೆಯನ್ನು ಹೀಗೆ ಹಾದಿ ತಪ್ಪಲು ರಾಜ್ಯ ಸರ್ಕಾರ ಖಂಡಿತ ಬಿಡಬಾರದು. ಈ ಭ್ರಷ್ಟಾಚಾರ ಆರೋಪದ ಬಗ್ಗೆ ಸ್ವತಂತ್ರ ಸಂಸ್ಥೆಯೊಂದರಿಂದ ನಿರ್ದಿಷ್ಟ ಕಾಲಮಿತಿಯೊಳಗೆ ತನಿಖೆ ಮಾಡಿಸಬೇಕು.

ಸ್ವತಃ ಲೋಕಾಯುಕ್ತ ಸಂಸ್ಥೆಯೇ ಸ್ವತಂತ್ರ ಸಂಸ್ಥೆಯ ತನಿಖೆಗೆ ಕೋರಿರುವಾಗ, ರಾಜ್ಯ ಸರ್ಕಾರ ಸ್ವಾಯತ್ತತೆಯ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಹಿಂಜರಿಯಬೇಕಾದ ಅಗತ್ಯವಿಲ್ಲ. ಈ ಸ್ವತಂತ್ರ ತನಿಖಾ ಸಂಸ್ಥೆ ಸಿಬಿಐ ಆಗುವುದಾದರೂ ಸ್ವಾಗತಾರ್ಹವೇ. ಈಗಾಗಲೆ ಡಿ.ಕೆ.ರವಿ ಸಾವಿನ ಪ್ರಕರಣ ಸಹಿತ ರಾಜ್ಯದಲ್ಲಿ ಹಲವು ನಿಗೂಢ ಪ್ರಕರಣಗಳನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗಿದ್ದು ತನಿಖೆಯೂ ನಡೆದಿದೆ.

ಲೋಕಾಯುಕ್ತದ ಪಾವಿತ್ರ್ಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಸಿಬಿಐ ತನಿಖೆ ನೆರವಾಗುವುದಾದಲ್ಲಿ ಅದಕ್ಕೆ ಹಿಂದೆ ಸರಿಯಬೇಕಿಲ್ಲ. ಲೋಕಾಯುಕ್ತ ಸಂಸ್ಥೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ನೇಮಿಸುವಾಗ ಜಾತಿ, ಸ್ವಜನ ಪಕ್ಷಪಾತ ನಡೆಯುತ್ತಿದೆಯೆಂಬ ಆರೋಪದ ಬಗ್ಗೆಯೂ ತನಿಖೆಯಾಗಲಿ. ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕೆಂದರೆ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್ ರಾಜೀನಾಮೆ ನೀಡಬೇಕೆಂದು ಈಗಾಗಲೆ ಹಲವು ಗಣ್ಯರು ಒತ್ತಾಯಿಸಿದ್ದಾರೆ.

ಲೋಕಾಯುಕ್ತ ಸಂಸ್ಥೆಯ ಪಾವಿತ್ರ್ಯವನ್ನು ಉಳಿಸುವಲ್ಲಿ ಭಾಸ್ಕರರಾವ್ ಅವರ ಮೇಲೆ ಈಗ ಮಹತ್ತರ ಹೊಣೆಗಾರಿಕೆಯಿದೆ. ಸ್ವತಃ ತಮ್ಮ ಮಗನೇ ಈ ಪ್ರಕರಣದಲ್ಲಿ ಮಧ್ಯವರ್ತಿಯ ಪಾತ್ರ ವಹಿಸಿದ್ದಾರೆಂಬ ಆರೋಪದ ಗಂಭೀರತೆಯನ್ನು ಅರ್ಥ ಮಾಡಿಕೊಂಡು ತನಿಖೆಗೆ ನಿಷ್ಪಕ್ಷಪಾತ ವಾತಾವರಣ ಸೃಷ್ಟಿಸುವ ಧೈರ್ಯದ ನಿರ್ಧಾರವನ್ನು ಅವರು ಪ್ರಕಟಿಸಬೇಕಿದೆ. ಲೋಕಾಯುಕ್ತದ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ಉಳಿಸುವ ಹೊಣೆಗಾರಿಕೆ ಸರ್ಕಾರ ಮತ್ತು ಸಮಾಜದ ಮೇಲೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.