ಪದವಿಯ ಮೊದಲ ವರ್ಷದ ಒಬ್ಬ ವಿದ್ಯಾರ್ಥಿನಿಯ ತಂದೆ ಅಧ್ಯಾಪಕರೊಬ್ಬರ ಕೊಠಡಿಗೆ ಬಂದು, ‘ಆಂತರಿಕ ಪರೀಕ್ಷೆಯಲ್ಲಿ ಮಗಳಿಗೆ ಏಕೆ ಅಗತ್ಯವಿರುವಷ್ಟು ಅಂಕಗಳನ್ನು ನೀಡಿಲ್ಲ’ ಎಂದು ಪ್ರಶ್ನಿಸತೊಡಗಿದರು. ಪದವಿ ವಿದ್ಯಾರ್ಥಿಗಳು ಯಾವುದೇ ವಿಷಯದ ಅಂತಿಮ ಪರೀಕ್ಷೆ ಬರೆಯಲು ಅರ್ಹರಾಗಬೇಕಿದ್ದರೆ ಆಂತರಿಕ ಪರೀಕ್ಷೆಯಲ್ಲಿ ನಿಗದಿತ ಅಂಕ ಗಳಿಸಬೇಕಿರುವುದು ಕಡ್ಡಾಯ. ಈ ವಿದ್ಯಾರ್ಥಿನಿ ಆಂತರಿಕ ಪರೀಕ್ಷೆಯಲ್ಲಿ ಗಳಿಸಿದ್ದ ಅಂಕಗಳು ತೀರಾ ಕಡಿಮೆ ಇದ್ದುದರಿಂದ ಆಕೆ ಅಂತಿಮ ಪರೀಕ್ಷೆ ಎದುರಿಸಲು ಅರ್ಹಳಾಗಿರಲಿಲ್ಲ. ಈ ವಿಷಯವನ್ನು ಅಧ್ಯಾಪಕರು ವಿದ್ಯಾರ್ಥಿನಿಗೆ ಖಚಿತಪಡಿಸಿದ ನಂತರ, ಆಕೆ ತನ್ನ ಮನೆಯವರಿಗೆ ವಿಚಾರ ತಿಳಿಸಿದ್ದಳು.

ಮಗಳಿಗೆ ಏಕೆ ಅಗತ್ಯವಿರುವಷ್ಟು ಅಂಕ ಗಳಿಸಲು ಸಾಧ್ಯವಾಗಿಲ್ಲ ಎಂಬುದನ್ನು ತಿಳಿದುಕೊಳ್ಳುವ ಕಾಳಜಿಯಿಂದ ವಿದ್ಯಾರ್ಥಿನಿಯ ತಂದೆ ತಮ್ಮ ಭೇಟಿಗೆ ಬಂದಿರಬಹುದು ಎಂದು ಭಾವಿಸಿದ ಅಧ್ಯಾಪಕರು, ಆಂತರಿಕ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ತೋರಿಸಿ, ವಿದ್ಯಾರ್ಥಿನಿ ಮಾಡಿರುವ ತಪ್ಪುಗಳನ್ನು ವಿವರಿಸತೊಡಗಿದರು.

‘ನನಗೆ ಇದೆಲ್ಲ ಅರ್ಥ ಆಗಲ್ಲ. ಮಗಳು ಅಂತಿಮ ಪರೀಕ್ಷೆ ಬರೆಯಲು ಎಷ್ಟು ಬೇಕೋ ಅಷ್ಟು ಮಾರ್ಕ್ಸ್ ಕೊಟ್ಟುಬಿಡಿ ಸಾಕು’ ಅಂದರು ವಿದ್ಯಾರ್ಥಿನಿಯ ತಂದೆ.

‘ನಿಮ್ಮ ಮಗಳಿಗೆ ತರಗತಿಯಲ್ಲಿ ಮಾಡುವ ಪಾಠ ಅರ್ಥವಾಗದಿದ್ದರೆ ನನ್ನನ್ನು ಬಂದು ಕೇಳಬಹುದಿತ್ತು. ಮೊದಲ ಆಂತರಿಕ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಾಗಲೇ, ಅರ್ಥವಾಗದಿದ್ದಲ್ಲಿ ಬಂದು ಮತ್ತೊಮ್ಮೆ ಹೇಳಿಸಿಕೋ ಎಂದು ತಿಳಿಸಿದ್ದೆ. ಆದರೆ ಅವಳು ಅರ್ಥವಾಗದ್ದನ್ನು ಹೇಳಿಸಿಕೊಂಡು ಕಲಿಯುವ ಆಸಕ್ತಿಯನ್ನು ಒಮ್ಮೆಯೂ ತೋರಲಿಲ್ಲ. ಇದುವರೆಗೂ ಒಂದೇ ಒಂದು ಪ್ರಶ್ನೆಗೂ ಪೂರ್ಣ ಸರಿ ಉತ್ತರ ಬರೆದಿಲ್ಲ. ಹೀಗಿರುವಾಗ ಅಂಕಗಳನ್ನು ನೀಡುವುದಾದರೂ ಹೇಗೆ’ ಎಂದು ಅಧ್ಯಾಪಕರು ಕೇಳಿದರು.

‘ನಿಮ್ಮ ಸ್ಟೂಡೆಂಟ್ನ ನೀವೇ ಫೇಲ್ ಮಾಡೋದು ಸರೀನಾ’ ಎಂಬ ಪ್ರಶ್ನೆ ಅಧ್ಯಾಪಕರೆಡೆಗೆ ತೂರಿ ಬಂತು. ‘ನಾನು ಬೋಧಿಸುವ ವಿಷಯದಲ್ಲಿ ಯಾವುದೇ ವಿದ್ಯಾರ್ಥಿ ಫೇಲಾದರೂ ನನಗೆ ಬೇಸರವಾಗುತ್ತದೆ. ಅವರಿಗೆ ಅರ್ಥವಾಗುವ ಹಾಗೆ ಹೇಳಿಕೊಡಲು ನನ್ನಿಂದ ಏಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಯೂ ಕಾಡುವುದು. ನಾನು ಬೇಕು ಅಂತ ಫೇಲ್ ಮಾಡ್ತಿಲ್ಲ. ನಿಮ್ಮ ಮಗಳು ಸರಿಯಾದ ಉತ್ತರಗಳನ್ನು ಬರೆಯದಿರುವ ಕಾರಣಕ್ಕೆ ಫೇಲ್ ಆಗಿದ್ದಾಳೆ. ಅವಳು ಬರೆದಿರುವ ಉತ್ತರಗಳನ್ನು ಇದೇ ವಿಷಯ ಬೋಧಿಸುವ ಬೇರೆ ಪ್ರಾಧ್ಯಾಪಕರಿಗೂ ಒಮ್ಮೆ ತೋರಿಸಿ. ಅವರೇನಾದರೂ ಉತ್ತರಗಳು ಸರಿ ಇವೆ ಎಂದರೆ, ಆನಂತರ ನನ್ನ ಕಡೆಯಿಂದಲೇ ತಪ್ಪಾಗಿದೆ ಎಂಬುದನ್ನು ಒಪ್ಪಿಕೊಳ್ಳುವೆ’ ಎಂದು ಹೇಳುವ ಮೂಲಕ ತಮ್ಮ ನಿಲುವಿಗೆ ಅಧ್ಯಾಪಕರು ಅಂಟಿಕೊಂಡರು.

‘ನೀವು ಮನುಷ್ಯರಾ? ನಿಮಗೆ ಮಾನವೀಯತೆ ಅನ್ನೋದೆ ಇಲ್ವಾ? ನಿಮಗಿಂತ ವಯಸ್ಸಿನಲ್ಲಿ ಹಿರಿಯರಾದವರು ಒಂದು ಸಣ್ಣ ಸಹಾಯ ಮಾಡುವಂತೆ ಇಷ್ಟೆಲ್ಲ ಬೇಡಿಕೊಂಡರೂ ನಿಮ್ದೇ ಸರಿ ಅಂತ ವಾದಿಸ್ತಾ ಇದ್ದೀರಲ್ಲ, ನಿಮ್ಗೆ ಹೇಗೆ ಬುದ್ಧಿ ಕಲಿಸ್ಬೇಕು ಅಂತ ನನಗೆ ಗೊತ್ತು. ನಿಮ್ಮನ್ನ ಮಾತ್ರ ಮರೆಯಲ್ಲ’ ಅಂತ ವಿದ್ಯಾರ್ಥಿನಿಯ ತಂದೆ ಸಿಟ್ಟು ಹಾಗೂ ಅಸಮಾಧಾನ ಹೊರಹಾಕಿದರು.

‘ಉತ್ತರ ಪತ್ರಿಕೆಯಲ್ಲಿ ಬರೆದಿರುವ ಉತ್ತರಗಳಿಗೆ ಅಂಕ ನೀಡಬಹುದೇ ವಿನಾ ನೀವು ಮಾಡುವ ಮನವಿಗೆ ಅಂಕ ನೀಡಲು ಅವಕಾಶವಿಲ್ಲ’ ಎನ್ನುವ ಮೂಲಕ ಅಧ್ಯಾಪಕರು ಮಾತುಕತೆಗೆ ತೆರೆ ಎಳೆದರು.

ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಅಳೆಯಲು ನಾವು ಅಳವಡಿಸಿಕೊಂಡಿರುವ ಪರೀಕ್ಷಾ ವಿಧಾನ ಸೂಕ್ತವೋ ಅಲ್ಲವೋ ಎನ್ನುವುದು ಚರ್ಚಾಸ್ಪದ. ಆದರೆ, ಫಲಿತಾಂಶ ಸುಧಾರಣೆಗಾಗಿ ಶೈಕ್ಷಣಿಕ ವಲಯ ಆತುಕೊಂಡಿರುವ ಅನೈತಿಕ ಮಾದರಿಗಳನ್ನು ಅವಲೋಕಿಸುವ ಅಗತ್ಯವಿದೆ.

ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯ ಮೂಲಕ ನಡೆಯುವ ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ತಮ್ಮ ಶಾಲೆ, ಕಾಲೇಜಿಗೆ ಉತ್ತಮ ಫಲಿತಾಂಶ ದೊರೆಯಲಿ ಎನ್ನುವ ಕಾರಣಕ್ಕೆ ಆಂತರಿಕ ಪರೀಕ್ಷಾ ಅಂಕಗಳನ್ನು ತೀರಾ ಧಾರಾಳವಾಗಿ ನೀಡುವುದು, ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ಕಲ್ಪಿಸುವಂತಹ ನಾನಾ ಕಸರತ್ತುಗಳಿಗೆ ಶಿಕ್ಷಕರು ಕೈ ಹಾಕುವುದು ಗುಟ್ಟಿನ ವಿಚಾರವೇನಲ್ಲ.

ಕಲಿಸುವ ಗುರುವಿನ ಸ್ಥಾನದಲ್ಲಿ ಇದ್ದುಕೊಂಡು ಹೀಗೆಲ್ಲ ಮಾಡಬಾರದು ಎನ್ನುವ ನಿಲುವಿಗೆ ಜೋತುಬಿದ್ದವರು, ವಿದ್ಯಾರ್ಥಿಗಳಿಗೆ ಒಳ್ಳೆಯದು ಮಾಡಬೇಕೆನ್ನುವ ಕಾಳಜಿ ಇಲ್ಲದವರೆಂದೋ ಮಾನವೀಯತೆ ಇಲ್ಲದ ದುಷ್ಟರೆಂದೋ ದೂಷಣೆಗೆ ಒಳಗಾಗಲು ಸಿದ್ಧರಿರಬೇಕು.

ಫಲಿತಾಂಶ ಹೆಚ್ಚಿಸುವ ಕಡೆಗೆ ತೋರುವಷ್ಟೇ ಕಾಳಜಿಯನ್ನು ಗುರಿ ಸಾಧನೆಗಾಗಿ ಅಡ್ಡದಾರಿ ಹಿಡಿಯುವ ಪರಿಪಾಟಕ್ಕೆ ತಡೆಯೊಡ್ಡಲೂ ತೋರಬೇಕಲ್ಲವೇ? ಮೌಲ್ಯಮಾಪನ ಮಾಡಿದವರು ಕಡಿಮೆ ಅಂಕ ನೀಡಿರುವ ನಿದರ್ಶನಗಳು ಮಾಧ್ಯಮಗಳಲ್ಲಿ ಸುದ್ದಿಯಾದಂತೆ, ಹೆಚ್ಚು ಅಂಕ ನೀಡಿರುವ ಪ್ರಕರಣಗಳು ಸುದ್ದಿ ಆಗುವುದಿಲ್ಲ, ಅಷ್ಟಾಗಿ ಚರ್ಚೆಗೂ ಒಳಪಡುವುದಿಲ್ಲ. ಮೌಲ್ಯಮಾಪನ ವ್ಯವಸ್ಥೆಯಲ್ಲಿ ಯಾವುದೇ ಉತ್ತರಕ್ಕೆ ನೀಡಬೇಕಿರುವ ಅಂಕಗಳಿಗಿಂತ ಕಡಿಮೆ ಅಂಕಗಳನ್ನು ನೀಡಿದ್ದರೆ ಅದನ್ನು ಪತ್ತೆ ಹಚ್ಚಿ ಸರಿಪಡಿಸಲು ಇರುವಷ್ಟು ಅವಕಾಶ, ಹೆಚ್ಚು ಅಂಕ ನೀಡಿದ್ದರೆ ಅದನ್ನು ಸರಿಪಡಿಸುವ ದಿಸೆಯಲ್ಲಿ ಇಲ್ಲ.

‘ನನಗೆ ಹೆಚ್ಚು ಅಂಕ ಬಂದಿದೆ. ನ್ಯಾಯಯುತವಾಗಿ ಬರಬೇಕಿರುವಷ್ಟು ಅಂಕಗಳನ್ನು ಮಾತ್ರ ನೀಡಿ’ ಎಂದು ಕೋರುವ ವಿದ್ಯಾರ್ಥಿಗಳು ನಮ್ಮಲ್ಲಿ ಕಾಣಸಿಗುವುದು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.