ಪ್ಲಾಸ್ಟಿಕ್ ಹಾವಳಿಯ ಕುರಿತು ಮಾತು ಬಂದಾಗಲೆಲ್ಲ ಅದರ ನಿಯಂತ್ರಣ, ರೀಸೈಕಲಿಂಗ್ ಬಗ್ಗೆಯೂ ಪ್ರಸ್ತಾಪವಾಗುತ್ತದೆ. ಇಂಥಿಂಥ ಬಗೆಯ ಪ್ಲಾಸ್ಟಿಕ್ ಉತ್ಪನ್ನಗಳಿಂದ ಭೂಮಿಗೆ, ವಾತಾವರಣಕ್ಕೆ, ಜೀವಿಲೋಕಕ್ಕೆ ತೊಂದರೆಯಾಗುತ್ತದೆ ಎಂಬ ಮಾಹಿತಿ ನಮಗೆ ಗೊತ್ತೇ ಇದೆ. ಇದು ಕಾಣುವ ಪ್ಲಾಸ್ಟಿಕ್ನ ಬಗ್ಗೆ ನಮಗಿರುವ ತಿಳಿವಳಿಕೆ ಮತ್ತು ಕಾಳಜಿ. ಆದರೆ ನಮ್ಮ ಬರಿಗಣ್ಣಿಗೆ ಕಾಣಿಸದೆ ಸೃಷ್ಟಿಯ ಚರಾಚರಗಳಲ್ಲೂ ಇರುವ ಮೈಕ್ರೊ ಪ್ಲಾಸ್ಟಿಕ್ನ ಬಗ್ಗೆ ನಮಗೆ ಹೆಚ್ಚು ಗೊತ್ತಿಲ್ಲ.

ಈಗ ಮೈಕ್ರೊ ಪ್ಲಾಸ್ಟಿಕ್ ಇರದಿರುವ ಸ್ಥಳವೇ ಇಲ್ಲ. ಗಾಳಿ, ನೀರು, ಮಣ್ಣಿನಲ್ಲೆಲ್ಲಾ ಸಮೃದ್ಧವಾಗಿ ಜಾಗ ಮಾಡಿಕೊಂಡಿರುವ ಮೈಕ್ರೊಪ್ಲಾಸ್ಟಿಕ್ ಎಲ್ಲ ಬಗೆಯ ಜೀವಿಗಳ ಜೀವನ ಕ್ರಮದ ಮೇಲೆ ಅಡ್ಡ ಪರಿಣಾಮಗಳನ್ನು ಮಾಡುತ್ತಿದೆ. 25 ಮೈಕ್ರಾನ್ನಿಂದ ಐದು ಮಿಲಿಮೀಟರ್ ವ್ಯಾಸವಿರುವ ಪ್ಲಾಸ್ಟಿಕ್ ಅನ್ನು ಮೈಕ್ರೊಪ್ಲಾಸ್ಟಿಕ್ ಎನ್ನುತ್ತೇವೆ. ಕೃತಕ ಎಳೆಗಳನ್ನು ತೊಳೆದು ಒಣಗಿಸುವಾಗ (ಯಂತ್ರಗಳಲ್ಲಿ) ಅಥವಾ ಪ್ಲಾಸ್ಟಿಕ್ ವಸ್ತುಗಳು ಸೂರ್ಯನ ಶಾಖ, ಬೆಳಕು, ಗಾಳಿ ಮತ್ತು ಮಳೆಗೆ ಒಡ್ಡಿಕೊಂಡಾಗ ಮೈಕ್ರೊ ಪ್ಲಾಸ್ಟಿಕ್ಗಳು ವಾತಾವರಣಕ್ಕೆ ಬಿಡುಗಡೆಗೊಳ್ಳುತ್ತವೆ. ಹಸಿ ಪೈಪುಗಳು, ಚಹಾ ಚೀಲಗಳು, ಸಿಗರೇಟ್ ತುದಿ, ಟಯರ್, ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ ಯಂತ್ರಗಳಿಂದ ಹೊಮ್ಮುವ ಮೈಕ್ರೊ ಪ್ಲಾಸ್ಟಿಕ್ ಕಣಗಳು ಕೆರೆ– ಕಾಲುವೆ, ನದಿ, ಗಾಳಿ, ಆಹಾರ, ಮಣ್ಣು ಮತ್ತು ಅಂತರ್ಜಲಕ್ಕೂ ಸೇರಿಕೊಂಡು ಮನುಷ್ಯನ ಆರೋಗ್ಯದ ಮೇಲೆ ನೇರ ದಾಳಿ ಮಾಡುತ್ತವೆ.

2014ರಲ್ಲಿ ನಡೆದ ಅಧ್ಯಯನದ ಪ್ರಕಾರ ಆ ವರ್ಷ 51 ಸಹಸ್ರಕೋಟಿ ಮೈಕ್ರೊಪ್ಲಾಸ್ಟಿಕ್ ತುಂಡುಗಳು ವಿಶ್ವದ ಸಾಗರಗಳನ್ನು ಪ್ರವೇಶಿಸಿದ್ದವಂತೆ. ಇದು ನಮ್ಮ ಆಕಾಶಗಂಗೆಯ ನಕ್ಷತ್ರಗಳ ಸಂಖ್ಯೆಗಿಂತ 500 ಪಟ್ಟು ಹೆಚ್ಚು! ಇದು ಕೇವಲ ಒಂದು ವರ್ಷದ ಲೆಕ್ಕ. ಪ್ಲಾಸ್ಟಿಕ್ ಬಳಕೆ ಶುರುವಾಗಿ 400 ವರ್ಷಗಳಾಗಿವೆ. ಅಂದರೆ ನೀವೇ ಲೆಕ್ಕ ಮಾಡಿಕೊಳ್ಳಿ. ಇದುವರೆಗೆ ಅದೆಷ್ಟು ಮೈಕ್ರೊಪ್ಲಾಸ್ಟಿಕ್ ಕಣಗಳನ್ನು ನಾವು ಸಾಗರದೊಡಲಿಗೆ ಸುರಿದಿದ್ದೇವೆ ಎಂಬುದು ತಿಳಿಯುತ್ತದೆ. ಪ್ಲಾಸ್ಟಿಕ್ನ ಉತ್ಪಾದನೆ ಮತ್ತು ಬಳಕೆ ಹೆಚ್ಚಿದಂತೆಲ್ಲ ಮೆಕ್ರೊಪ್ಲಾಸ್ಟಿಕ್ನ ಹಾವಳಿಯೂ ಏರುತ್ತಿದೆ. ಈಗಾಗಲೇ ನಡೆದಿರುವ ಹಲವು ಅಧ್ಯಯನಗಳ ಪ್ರಕಾರ ಸಾಗರ ಸೇರುವ ಮೈಕ್ರೊಪ್ಲಾಸ್ಟಿಕ್ ಕಣಗಳು ಮೀನುಗಳ ದೇಹ ಪ್ರವೇಶಿಸಿ ಅತ್ಯಂತ ಹಾನಿಕಾರಕ ವಿಷಮಯ ರಾಸಾಯನಿಕಗಳನ್ನು ಉತ್ಪಾದಿಸುತ್ತಿವೆ. ಅದರಲ್ಲೂ ಸಾಗರದ ಮೀನು ಸೇರುವ ಪಾಲಿಬ್ರೊಮೈಡ್ ಡೈ ಫೀನೈಲ್ ಈಥರ್ ಎನ್ನುವ ರಾಸಾಯನಿಕವು ಮನುಷ್ಯನ ಕಿಣ್ವ ಮತ್ತು ವರ್ಣತಂತುಗಳನ್ನು ಜಖಂಗೊಳಿಸುವ ಸಾಧ್ಯತೆ ಇದೆ.

ಮೈಕ್ರೊಪ್ಲಾಸ್ಟಿಕ್ ಹಾವಳಿ ಮೀನುಗಳಿಗಷ್ಟೇ ಸೀಮಿತವಾಗಿಲ್ಲ. ನಾವು ತಿನ್ನುವ ಉಪ್ಪು, ಚಹಾ, ಬಿಯರ್, ವೈನ್, ಸಕ್ಕರೆ, ಗಜ್ಜರಿ, ಸೇಬು, ಅಕ್ಕಿ, ಶೇಂಗಾ, ಜೇನುತುಪ್ಪ, ಮೂಲಂಗಿ, ಸೊಪ್ಪು, ಚಿಕನ್, ಪ್ರಾನ್ ಮತ್ತು ಏಡಿಗಳಲ್ಲೆಲ್ಲಾ ಮೈಕ್ರೊಪ್ಲಾಸ್ಟಿಕ್ ಪ್ರವೇಶಿಸಿದೆ. ಇಟಲಿಯ ಕಟಾನಿಯ ವಿಶ್ವವಿದ್ಯಾಲಯದ ಸಂಶೋಧಕರು ಸೇಬು, ನೆಲಗಡಲೆ, ಬ್ರಕೋಲಿ, ಕ್ಯಾರೆಟ್, ಉಪ್ಪಿನಲ್ಲಿ ಮೈಕ್ರೊ ಪ್ಲಾಸ್ಟಿಕ್ ಪದಾರ್ಥವನ್ನು ಪತ್ತೆ ಹಚ್ಚಿದ್ದಾರೆ. ನಾವು ಬಳಸುವ ಬಾಟಲಿ ನೀರಿನಲ್ಲಿ ಮೈಕ್ರೊ ಪ್ಲಾಸ್ಟಿಕ್ ತುಂಡುಗಳಿರುವುದು ಪತ್ತೆಯಾಗಿದೆ.

ನಮ್ಮ ಸಾಮಾನ್ಯ ಆಹಾರ ಕ್ರಮದಂತೆ ಪ್ರತಿ ವಾರ 5 ರಿಂದ 10 ಗ್ರಾಂ ಮೈಕ್ರೊ ಪ್ಲಾಸ್ಟಿಕ್ ಪದಾರ್ಥ ನಮ್ಮ ದೇಹ ಸೇರುತ್ತಿದೆ. ಕಳೆದ ವರ್ಷ ಎನ್ವಿರಾನ್ಮೆಂಟಲ್ ಇಂಟರ್ನ್ಯಾಷನಲ್ನವರು ನೀಡಿರುವ ವರದಿ ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ. ತಮ್ಮ ಸಂಶೋಧನಾ ಸಂಸ್ಥೆಯ ಸದಸ್ಯರ ರಕ್ತ ಪರೀಕ್ಷೆ ನಡೆಸಿದಾಗ ಶೇ 77ಕ್ಕಿಂತ ಹೆಚ್ಚು ಜನರ ದೇಹದಲ್ಲಿ ಹೆಚ್ಚಿನ ಪ್ರಮಾಣದ ಮೈಕ್ರೊಪ್ಲಾಸ್ಟಿಕ್ ಇರುವುದು ಪತ್ತೆಯಾಗಿತ್ತು.

ಮೈಕ್ರೊ ಪ್ಲಾಸ್ಟಿಕ್ ಯಾವ ಮೂಲಗಳಿಂದ ಉತ್ಪತ್ತಿ ಗೊಳ್ಳುತ್ತದೆ ಎಂಬುದನ್ನು ಆಧರಿಸಿ ಅದರಲ್ಲಿನ ರಾಸಾಯನಿಕ ಪದಾರ್ಥಗಳು ವ್ಯತ್ಯಾಸಗೊಳ್ಳುತ್ತವೆ. ಕೆಲವು ಹಾನಿಕಾರಕ ರಾಸಾಯನಿಕಗಳು ಮಾನವನ ಮೆದುಳು, ಮೂತ್ರ ಜನಕಾಂಗ, ಯಕೃತ್ತಿನ ಕಾರ್ಯ ಕ್ಷಮತೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು. ಮಹಿಳೆ- ಪುರುಷ ಇಬ್ಬರಲ್ಲೂ ಬಂಜೆತನ ತರಬಲ್ಲವು ಎಂದು ಅಧ್ಯಯನಗಳಿಂದ ಗೊತ್ತಾಗಿದೆ. ಸಕ್ಕರೆ ಕಾಯಿಲೆ (ಟೈಪ್ 2), ಹೃದಯ ಬೇನೆ, ಕ್ಯಾನ್ಸರ್, ಹಾರ್ಮೋನುಗಳ ಅಸಮತೋಲನ, ಡಿಎನ್ಎ ಗಾಸಿ, ಉರಿಯೂತ ಮತ್ತು ಭ್ರೂಣ ಬೆಳವಣಿಗೆಯಲ್ಲಿನ ನ್ಯೂನತೆಗಳಿಗೂ ಮೈಕ್ರೊಪ್ಲಾಸ್ಟಿಕ್ ಕಾರಣವಾಗುತ್ತಿದೆ. ಪ್ಲಾಸ್ಟಿಕ್ನಿಂದ ಬಚಾವಾಗುವ ಯಾವುದೇ ಸೂಚನೆಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ. ಅದರ ಬದಲಿಗೆ ಪ್ಲಾಸ್ಟಿಕ್ ಅವಲಂಬನೆ ದಿನೇ ದಿನೇ ಹೆಚ್ಚುತ್ತಿದೆ. ಇದು, ನಿಜಕ್ಕೂ ಕಳವಳಪಡುವಂಥ ವಿದ್ಯಮಾನ.

ಇದರಿಂದ ತಪ್ಪಿಸಿಕೊಳ್ಳಲು ಮೈಕ್ರೊವೇವ್ನಲ್ಲಿ ಆಹಾರ ಸಂಸ್ಕರಿಸದಿರುವುದು, ಮೈಕ್ರೊ ಪ್ಲಾಸ್ಟಿಕ್ ಯುಕ್ತ ಸೌಂದರ್ಯ ಸಾಧನಗಳನ್ನು ಬಳಸದಿರುವುದು, ಪ್ಲಾಸ್ಟಿಕ್ಬಾಟಲಿಯಲ್ಲಿ ಶೇಖರಿಸಿದ ನೀರನ್ನು ಕುಡಿಯದಿರುವುದು, ಏಕಬಳಕೆಯ ಪ್ಲಾಸ್ಟಿಕ್ ಕೈಚೀಲ, ವಸ್ತುಗಳನ್ನು ಸಂಪೂರ್ಣ ನಿಷೇಧಿಸುವುದು, ಸಾಮಾನ್ಯ ಒಗೆತಕ್ಕಿಂತ 40 ಪಟ್ಟು ಹೆಚ್ಚು ಮೈಕ್ರೊ ಪ್ಲಾಸ್ಟಿಕ್ ಬಿಡುಗಡೆ ಮಾಡುವ ವಾಷಿಂಗ್ ಮಷೀನ್ಗಳನ್ನು ಬಳಸದೆ ಕೈಯಲ್ಲಿ ಬಟ್ಟೆ ಒಗೆಯುವುದು, ಮನೆಯ ಒಳಾಂಗಣ ಮತ್ತು ಪೀಠೋಪಕರಣಗಳ ದೂಳನ್ನು ಆಗಾಗ ತೆಗೆಯುವುದು, ಸಾವಯವ ಬಟ್ಟೆಗಳನ್ನು ಧರಿಸುವುದು ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.