ಬೆಂಗಳೂರಿನ ರಾಜಾಜಿನಗರದ ಬಟ್ಟೆ ವ್ಯಾಪಾರಿ ಜೈಕುಮಾರ್ ಜೈನ್ ಅವರು ತಮ್ಮ ಮಗಳಿಂದಲೇ ಹತ್ಯೆಗೀಡಾಗಿದ್ದಾರೆ ಎನ್ನಲಾದ ಘಟನೆ (ಪ್ರ.ವಾ., ಆ. 20) ನಾಗರಿಕರ ಮನ ಕಲಕುವಂತೆ ಮಾಡಿದೆ. ತನ್ನ ಸ್ವಚ್ಛಂದ ಬದುಕಿಗೆ ಅಡ್ಡಿಪಡಿಸುತ್ತಿದ್ದ ತಂದೆಯನ್ನು, ಪ್ರಿಯಕರನ ಜೊತೆಗೂಡಿ ಕೊಂದ ಆರೋಪ 15 ವರ್ಷದ ಈ ಬಾಲಕಿಯ ಮೇಲಿದೆ. ಈ ಘಟನೆಯು ಮಕ್ಕಳಲ್ಲಿ, ಅದರಲ್ಲೂ ಹದಿಹರೆಯದವರಲ್ಲಿ ಜೀವನ ಕೌಶಲ ಬೆಳೆಸಬೇಕಾದ ಅಗತ್ಯವನ್ನು ಮನದಟ್ಟು ಮಾಡುವುದರ ಜೊತೆಗೆ, ಬದಲಾದ ಆಧುನಿಕ ಜೀವನಶೈಲಿಯು ಉಂಟುಮಾಡುವ ತಲ್ಲಣಗಳನ್ನು ಎದುರಿಸಲು ಕುಟುಂಬಗಳು ಮಾಡಿಕೊಳ್ಳಬೇಕಾದ ಸಿದ್ಧತೆಯ ಕುರಿತೂ ತಿಳಿಸುತ್ತದೆ.

ಪೀಳಿಗೆಗಳ ನಡುವಿನ ಅಂತರ ತಂದೊಡ್ಡುವ ಮಾನಸಿಕ ತಾಕಲಾಟ, ಮಕ್ಕಳು ಮೊಬೈಲ್ ಮಾಯೆಗೆ ಸಿಲುಕುವುದರಿಂದ ಉಂಟಾಗುವ ಸಮಸ್ಯೆಗಳು, ಹದಿಹರೆಯದ ಒತ್ತಡ ಸೃಷ್ಟಿಸುವ ಸಂದಿಗ್ಧಗಳು ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧವನ್ನು ಹೈರಾಣಾಗಿಸಿಬಿಡುತ್ತವೆ. ಜೀವನ ಕೌಶಲಗಳ ಅಭಾವ ಹಾಗೂ ವಿವೇಚನೆಯ ಕೊರತೆಯು ಕೆಲವು ಸನ್ನಿವೇಶಗಳನ್ನು ವಿಪರೀತದ ಪರಿಣಾಮಗಳ ಕಡೆಗೆ ಕೊಂಡೊಯ್ಯುತ್ತವೆ. ಜೈಕುಮಾರ್ ಅವರ ಹತ್ಯೆಯ ಘಟನೆಯನ್ನು ಎಚ್ಚರಿಕೆಯ ಗಂಟೆಯಾಗಿ ಪರಿಗಣಿಸಬೇಕಿದೆ. ಆ ಮೂಲಕ ಕೌಟುಂಬಿಕ ಮತ್ತು ಶೈಕ್ಷಣಿಕ ನೆಲೆಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಒಂದಷ್ಟು ಚಿಂತನ– ಮಂಥನ ನಡೆಸಿ, ಸೂಕ್ತ ಕಾರ್ಯಸೂಚಿಯನ್ನು ರೂಪಿಸಬೇಕಿದೆ.

ಮಕ್ಕಳು, ಅದರಲ್ಲೂ ಹದಿಹರೆಯದವರು ಸ್ವಂತಿಕೆ, ಸ್ವಾತಂತ್ರ್ಯಕ್ಕಾಗಿ ಸದಾ ತುಡಿಯುತ್ತಿರುತ್ತಾರೆ. ಶೈಕ್ಷಣಿಕ ಮತ್ತು ಕೌಟುಂಬಿಕ ಒತ್ತಡದಿಂದ ಪಾರಾಗಲು ಹಾಗೂ ನೀತಿ– ನಿಯಮಗಳನ್ನು ಮುರಿದು ಮುನ್ನುಗ್ಗಲು ಪ್ರಯತ್ನಿಸುತ್ತಿರುತ್ತಾರೆ. ಆ ಪ್ರಯತ್ನದಲ್ಲಿ ಅವರಿಗೆ ಉಂಟಾಗಬಹುದಾದ ಸೋಲನ್ನು ಅವಮಾನವೆಂದೇ ಭಾವಿಸಿ, ಅದಕ್ಕೆ ಪ್ರತೀಕಾರ ತೆಗೆದುಕೊಳ್ಳಲೂ ಮುಂದಾಗುತ್ತಾರೆ. ನೀತಿ–ನಿಯಮಗಳನ್ನು ಮನಃಪೂರ್ವಕವಾಗಿ ಒಪ್ಪಿಕೊಂಡು ಮುಂದುವರಿದರೆ ಸಮಸ್ಯೆ ಉಂಟಾಗದು. ಪೋಷಕರ ನಿರಂತರ ಒಡನಾಟ, ಬೆಂಬಲ, ಒಂದಷ್ಟು ಸಂಘರ್ಷ, ಹೊಂದಾಣಿಕೆ, ಚೌಕಾಸಿಯ ಮಧ್ಯೆಯೇ ಅನೇಕರು ಹದಿಹರೆಯದ ತಲ್ಲಣಗಳನ್ನು ಯಶಸ್ವಿಯಾಗಿ ದಾಟಿಯೇ ಬಿಡುತ್ತಾರೆ.

ಪೋಷಕರು ಮತ್ತು ಮಕ್ಕಳ ಮಧ್ಯೆ ತಪ್ಪು ಯಾರದು ಎಂಬುದನ್ನು ನಿರ್ಧರಿಸುವುದಕ್ಕಿಂತ, ಹದಿಹರೆಯದವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ಕೊಟ್ಟು, ಅವರಿಗೆ ಪೋಷಕರು ಆಸರೆಯಾಗಿ ನಿಲ್ಲಬೇಕು ಎಂಬುದು ಮುಖ್ಯ. ಈ ವಿಚಾರದಲ್ಲಿ ಪೋಷಕರಲ್ಲೂ ಒಂದಷ್ಟು ಜಾಗೃತಿ, ತಿಳಿವಳಿಕೆ ಅಗತ್ಯ. ಮಕ್ಕಳು ಭಾವನಾತ್ಮಕವಾಗಿ ಸಬಲರಾಗುವಂತೆ ಮಾಡುವ, ಅವರಿಗೆ ಜೀವನಕೌಶಲ ಪಾಠಗಳನ್ನು ಹೇಳಿಕೊಡುವ ನಿಟ್ಟಿನಲ್ಲಿ ಶಾಲೆ, ಕಾಲೇಜುಗಳಲ್ಲೂ ಕ್ರಮಗಳಾಗಬೇಕು.

ಚಿಕ್ಕ ವಯಸ್ಸಿನಲ್ಲೇ ತಂತ್ರಜ್ಞಾನದ ಪರಿಚಯ ಸೂಕ್ತವಾಗದು. ತಂತ್ರಜ್ಞಾನವು ಮಕ್ಕಳ ಮನಸ್ಸಿನ ಮೇಲೆ ಉಂಟುಮಾಡುವ ಪರಿಣಾಮಗಳು ಹೇಳತೀರದಂತಹವು. ಮಕ್ಕಳಿಗೆ ಕಂಪ್ಯೂಟರ್, ಮೊಬೈಲ್ ಪರಿಚಯಿಸುವುದು, ಟಿ.ವಿ. ನೋಡಲು ಅವಕಾಶ ಕೊಡುವುದು ನಿಧಾನವಾದಷ್ಟೂ ಉತ್ತಮ. ಆದರೆ, ಪೋಷಕರೇ ಇಂಥ ಸಾಧನಗಳನ್ನು ಅತಿಯಾಗಿ ಅವಲಂಬಿಸಿ, ಅವುಗಳ ಸುಳಿಯಲ್ಲಿ ಸಿಲುಕಿರುವಾಗ ಮಕ್ಕಳನ್ನು ಅವುಗಳಿಂದ ದೂರವಿಡುವುದು ಸುಲಭವಲ್ಲ. ಮಕ್ಕಳಿಗೆ ಹಿರಿಯ ಪ್ರಾಥಮಿಕ ಶಾಲಾ ಹಂತದಲ್ಲಿ ಕಂಪ್ಯೂಟರ್ ಬಳಕೆಯ ಪಾಠ ಪ್ರಾರಂಭಿಸಿದರೂ ಅದರ ಸ್ವತಂತ್ರ ಬಳಕೆಯ ತರಬೇತಿಯು ಪ್ರೌಢಶಾಲಾ ಹಂತದಿಂದ ಆಗುವುದು ಒಳ್ಳೆಯದು. ಕೆಲವು ಪಾಶ್ಚಾತ್ಯ ದೇಶಗಳಲ್ಲಿ ಕಂಪ್ಯೂಟರ್ ಬಳಕೆಯನ್ನು ಪ್ರೌಢಶಾಲಾ ಹಂತದ ನಂತರವೇ ಪ್ರಾರಂಭಿಸಲಾಗುತ್ತದೆ.

ಮಕ್ಕಳನ್ನು ಸುಮ್ಮನಿರಿಸಲು, ಊಟ ಮಾಡುವಂತೆ ಪುಸಲಾಯಿಸಲು ಮೊಬೈಲ್ ಅನ್ನು ಅವರ ಕೈಗಿಡಲಾಗುತ್ತದೆ. ಹೀಗೆ ಆರಂಭವಾಗುವ ಅಭ್ಯಾಸವು ನಿಧಾನವಾಗಿ ಅವರನ್ನು ಮೊಬೈಲ್ ದಾಸರನ್ನಾಗಿಸುತ್ತದೆ. ಮಕ್ಕಳ ಜೊತೆ ಮೋಜಿಗಾಗಿ ಮಾಡುವ ಟಿಕ್ ಟಾಕ್ನಂತಹ ಚಟುವಟಿಕೆಗಳು, ಮೊಬೈಲ್ ಬಳಕೆಗೆ ಅವರಿಗೆ ಉತ್ತೇಜನ ನೀಡುತ್ತವೆ. ಮಕ್ಕಳೊಂದಿಗೆ ಸಮಯ ಕಳೆಯಲು ಪಾಲಕರಿಗೆ ಸಾಧ್ಯವಾಗದ ಸಂದರ್ಭದಲ್ಲಿ ಮೊಬೈಲ್ ತಂದೊಡ್ಡಬಹುದಾದ ಅಪಾಯ ಹೇಳತೀರದು. ಸಾಮೂಹಿಕ ಜಾಲತಾಣಗಳ ಆಕರ್ಷಣೆಗೆ ಒಳಗಾಗುವ ಮಕ್ಕಳು ಮತ್ತು ಹದಿಹರೆಯದವರು ವಿಡಿಯೊಗಳನ್ನು ಹರಿಯಬಿಡುವ ಮೂಲಕ ಈ ಮಾರ್ಗದಲ್ಲಿ ಹಣ ಗಳಿಸಲು ಆರಂಭಿಸುತ್ತಾರೆ. ಮಾಡೆಲ್ ಅಥವಾ ಚಿತ್ರನಟರಾಗಿ ಸಿರಿ–ಸಂಪತ್ತು ಗಳಿಸಲು ಬಯಸುವವರ ಸಂಖ್ಯೆ ಜಾಸ್ತಿಯಾಗಿದೆ. ಇದೆಲ್ಲದರ ಪರಿಣಾಮವಾಗಿ, ಮೊಬೈಲ್ ಬಳಕೆ ಅಪಾಯಕಾರಿ ಎನ್ನುವಷ್ಟರ ಮಟ್ಟಿಗೆ ಹೆಚ್ಚಾಗಿದೆ.

ಪ್ರೇಮದ ಸುಳಿಗೆ ಸಿಲುಕುವ ಹದಿಹರೆಯದವರ ಮನಃಸ್ಥಿತಿಯನ್ನು ಪೋಷಕರು ಅರ್ಥ ಮಾಡಿಕೊಂಡು, ತಾಳ್ಮೆಯಿಂದ ಅವರನ್ನು ಸರಿದಾರಿಗೆ ತರುವ ಕೆಲಸ ಮಾಡಬೇಕು. ಶಾಲೆಗಳಲ್ಲಿ ಪ್ರತಿನಿತ್ಯ ಪ್ರಾರ್ಥನೆಯ ಸಮಯದಲ್ಲಿ ಒಂದಷ್ಟು ಹೊತ್ತು ಧ್ಯಾನವನ್ನು ಅಭ್ಯಾಸ ಮಾಡಿಸುವುದು ಪರಿಣಾಮಕಾರಿ. ಇದರ ಜೊತೆ, ಬೆವರಿಳಿಯುವಂತೆ ದೈಹಿಕ ಚಟುವಟಿಕೆಗಳು ಮತ್ತು ಆಟಗಳಲ್ಲಿ ತೊಡಗಿಸಬೇಕು. ಮನದಲ್ಲಿ ಮೂಡುವ ಉದ್ವೇಗ, ಭಾವನೆಗಳನ್ನು ಅರ್ಥ ಮಾಡಿಕೊಂಡು, ಪ್ರೌಢವಾಗಿ ನಿರ್ವಹಣೆ ಮಾಡುವ ಭಾವನಾತ್ಮಕ ಬುದ್ಧಿಶಕ್ತಿಯನ್ನು ಬೆಳೆಸುವುದು ಪರಿಣಾಮಕಾರಿ ಆಗಬಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.