ಈಗ ವೇಗದ ಯುಗ, ಅವಸರದ ಯುಗ, ಯಾಂತ್ರಿಕ ಯುಗ. ಬಹುತೇಕ ಜನರಲ್ಲಿ ತಾಳ್ಮೆಯಿಲ್ಲ. ಯಾವುದಕ್ಕೂ ವ್ಯವಧಾನವಿಲ್ಲ. ಎಲ್ಲೆಡೆ ಓಟ. ಪ್ರತಿಯೊಂದರಲ್ಲೂ ಕಾರ್ಯಭಾರ ವಿಪರೀತ. ಹೀಗಾಗಿ ನಿಧಾನವಿಲ್ಲ.

ಬಸ್ಸಿಗಾಗಿ ಓಟ, ಮೆಟ್ರೊಗಾಗಿ ಓಟ... ನಿಂತರೆ ಬಾಳಿನಲ್ಲಿ ಏಳಿಗೆಯಿಲ್ಲ ಎಂಬ ಭಾವನೆ. ಅವನಿಗಿಂತ ತಾನು ಮುಂದುವರಿಯಬೇಕು ಎಂಬ ಛಲ. ಮುನ್ನಡೆಯತ್ತ ಏಕಮುಖ. ಯಾರಿಗೂ ಪುರಸತ್ತಿಲ್ಲ. ಹಿರಿಯರು, ವಯೋವೃದ್ಧರು ಪಾರ್ಕಿನಲ್ಲೋ ಮೈದಾನದಲ್ಲೋ ಹರಟೆ ಹೊಡೆಯಬಹುದು ಅಷ್ಟೇ!

ಹಾಗೆ ನೋಡಿದರೆ ಹಿಂದೆಂದಿಗಿಂತ ಈಗ ಧ್ಯಾನದ ಅಗತ್ಯ ಹೆಚ್ಚಾಗಿದೆ. ಧ್ಯಾನಕ್ಕೆ ಏಕಾಂತ ಬೇಕು. ವ್ಯಕ್ತಿ ಅಂತರ್ಮುಖಿಯಾಗಬೇಕು. ಅದು ಇಂದಿನ ದಿನಮಾನ
ಗಳಲ್ಲಿ ಅತ್ಯಂತ ಅವಶ್ಯ. ಧ್ಯಾನಮಾರ್ಗಿಯಾದವನು ಲೋಕಾಂತದ ನಡುವಿನಿಂದಲೇ ಏಕಾಂತ ಸೃಷ್ಟಿಸಿಕೊಳ್ಳಬೇಕು. ಗಲಿಬಿಲಿ, ಗೋಜಲು ತುಂಬಿದ ಯಾಂತ್ರಿಕ ಜೀವನವನ್ನು ನಿಯಂತ್ರಿಸಲು ತನ್ನ ಸುತ್ತ ತಾನೇ ವಲ್ಮೀಕ ಕಟ್ಟಿಕೊಳ್ಳುವ ಧ್ಯಾನದ ಪರಿಸರಕ್ಕೆ ಈಗ ಬೇಡಿಕೆ ಅಪಾರ.

ಬದುಕುವ ಕಲೆಗೆ, ನೆಲೆಗೆ ಬೆಲೆ ಹೆಚ್ಚು. ಬೇಕೆಂದೇ ಮನುಷ್ಯ ದುಡ್ಡು ಕೊಟ್ಟು ಏಕಾಂತವನ್ನು ಕೊಂಡುಕೊಂಡು ಧ್ಯಾನಲೀನವಾಗುವ ಕಾಲ ಇದು. ಪ್ರಾರ್ಥನೆಗೆ ಮಹತ್ವ ಬಂದಿರುವುದೇ ಈ ಕಾರಣಕ್ಕೆ! ನೆಮ್ಮದಿ ಬೇಕು, ಶಾಂತಿ ಬೇಕು. ಅವ್ಯಕ್ತದ ಕಡೆ ಅಭಿಮುಖ ಆಗುವ ಉಪಾಯ ಇದು. ಜಂಜಡಗಳಿಂದ ಬಿಡಿಸಿಕೊಂಡು ಮನಸ್ಸಿಗೆ ಶಾಂತತೆಯ ಮುಕ್ತಿ ಇರುವುದೇ ಧ್ಯಾನದಲ್ಲಿ!

ಬಾಹ್ಯ ಜಗತ್ತಿನಲ್ಲಿ ಇದ್ದೂ ಇಲ್ಲದ ಹಾಗೆ ಮಾಡಿಕೊಳ್ಳುವ ತಂತ್ರದಲ್ಲಿದೆ ಧ್ಯಾನ. ಅದು ಕ್ಷಣಿಕವಾದ ಮುಕ್ತಿ. ಪದ್ಮಪತ್ರದ ಜಲಬಿಂದುವಿನಂತೆ ಅಂಟಿಯೂ ಅಂಟದ ರೀತಿ ಇರುವುದು ಕೂಡ ಒಂದು ಸಾಧನೆಯೇ!

ಎಲ್ಲರೂ ವೇಗಗಾಮಿ ಬದುಕಿಗೆ ಹೊರಳಿರುವುದರಿಂದ ಹೆಚ್ಚಿನವರು ಧ್ಯಾನಾಸಕ್ತರಾಗುವುದು ಕಡಿಮೆ. ಆದರೆ ಚಿತ್ತದ ಕೇಂದ್ರೀಕರಣ ಎಲ್ಲರಿಗೂ ಅಗತ್ಯ. ಹುಚ್ಚು ಕುದುರೆಯ ಹಾಗೆ ಓಡುವ ವೇಗದೂತನನ್ನು ಹಿಡಿದು ಕಟ್ಟಿಹಾಕಿ ಅದಕ್ಕೊಂದು ತಾತ್ವಿಕ ನಿಲುವು ಕೊಟ್ಟು ಬಿನ್ನಹದತ್ತ ಸರಿಯುವ ಮನದಲ್ಲಿ ಪ್ರಾರ್ಥನೆಯ ಅಭೀಪ್ಸೆ ಇದೆ. ಆ ಹಂಬಲದಲ್ಲಿ ಶಾಂತಚಿತ್ತ ಇದೆ. ಇದೊಂದು ರೀತಿ ಮೌನಕ್ರಾಂತಿ! ಶಾಂತಿ ಬೇಕೆಂದರೆ ಇದು ಅತ್ಯಗತ್ಯ.

ಧ್ಯಾನವು ಮನಸ್ಸಿನ ಸಹಜ ಸ್ಥಿತಿ. ಅದು ಹುಡುಕಿಕೊಂಡು ಅಲೆದರೆ ಸಿಗದು. ನಮ್ಮ ಮನೋರಿಂಗಣದಲ್ಲಿದೆ ಧ್ಯಾನಗಾನ. ಅದೊಂದು ನಿತಾಂತ ಬದುಕಿನ ಸಿಹಿ ಹೂರಣ. ಆ ಕಾರಣದಿಂದ ಅದಕ್ಕೆ ನಗರದಲ್ಲಿ ಬೆಲೆ ಹೆಚ್ಚು. ಧ್ಯಾನ ಎಂಬುದು ಒಂದು ಯೋಗ. ಅದೊಂದು ತಪಸ್ಸು. ಇಂದ್ರಿಯ ನಿಗ್ರಹದ ಸಾಧಕರಿಗೆ ಧ್ಯಾನ ಒಂದು ಅಪೂರ್ವ ಕಲೆ. ಅದು ಒಂದು ದಿನದಲ್ಲಿ ಸಾಧಿಸುವಂಥದ್ದಲ್ಲ. ಚಿತ್ತವನ್ನು ಪಳಗಿಸಬೇಕು. ಅದೊಂದು ಅಧ್ಯಾತ್ಮ ವಿದ್ಯೆ. ನಮ್ಮ ಋಷಿ ಮುನಿಗಳಿಗೆ ಅದು ಸಾಧಿತವಾಗಿತ್ತು. ಯೋಗಿಗಳಲ್ಲಿ ಅದು ರೂಢಿಯಲ್ಲಿತ್ತು. ಗಿರಿ ಗಹ್ವರಗಳ ಗುಹಾಂತರದಲ್ಲಿ ಧ್ಯಾನಕ್ಕೆ ಪರಿಸರ ಇಂಬು ನೀಡಿತ್ತು. ಪರಿಸರ, ವಯೋಧರ್ಮ ಎಲ್ಲ ಮೀರಿದ ನಿಗ್ರಹವೇ ಧ್ಯಾನದ ನಿಜ ಇಂಧನ. ಅದರಿಂದ ವ್ಯಕ್ತಿತ್ವಕ್ಕೆ ಚಂದನ!

ಪ್ರಶಾಂತ ವಾತಾವರಣದ ಗೌರಿಶಂಕರದಲ್ಲಿದೆ ಧ್ಯಾನ. ಗಂಭೀರ ಕಾನನಗಳ ಅಂತರಾಳದಲ್ಲಿದೆ ಧ್ಯಾನ. ಅಲೆಗಳೇ ಇಲ್ಲದ ಕಡಲ ಆಹ್ಲಾದಕರ ಜಲಸಾಗರದಲ್ಲಿದೆ ಧ್ಯಾನ (ಮಾರಿಷಸ್ ದ್ವೀಪಗಳ ಒಡಲು). ಅಮೆಜಾನ್ ಕಾಡಿನ ನಡುವೆ ಹರಿವ ನದಿಗಳ ಮಡಿಲಲ್ಲಿ ಇಂಥ ಹೆಪ್ಪುಗಟ್ಟಿದ ಮೌನದ ಸಹಜ ಸೌಂದರ್ಯದಲ್ಲಿದೆ ಧ್ಯಾನ. ತುಂಗಾ ತರಂಗಗಳ ಜಲತರಂಗದ ನಡುವೆ ನೆಲೆಸಿದೆ ಧ್ಯಾನ. ಎಲ್ಲಿ ಸದ್ದಿಲ್ಲವೋ ಎಲ್ಲಿ ಗದ್ದಲ ಇಲ್ಲವೋ ಅಲ್ಲಿ ಧ್ಯಾನದ ಆವರ್ತನ. ಅನುಭವಿಸುವ ಮನಃಸ್ಥಿತಿ ಬೇಕಷ್ಟೇ.

ಆತ್ಮನಿರೀಕ್ಷಣವೇ ಧ್ಯಾನ. ಅದು ಏಕಮುಖಿ! ಬಾಹ್ಯ ಜಗತ್ತನ್ನು ಬಿಟ್ಟು ಅಂತರ್ಲೀನವಾಗುವಲ್ಲಿ ಧ್ಯಾನದ ಮಹತ್ವದ ಪಾತ್ರವಿದೆ. ಚಿತ್ತೈಕ್ಯವು ಆಳದಾಳಕ್ಕೆ ಇಳಿದಾಗ ಧ್ಯಾನವಾಗುತ್ತದೆ.

ಚಂಚಲತೆಯನ್ನು ನಿವಾಳಿಸಿ ಪ್ರಶಾಂತತೆಯ ಕಡೆಗೆ ನಡೆಯುವಲ್ಲಿದೆ ಧ್ಯಾನ ಮಾರ್ಗ. ಅದು ಅರವಿಂದರ ಮಾರ್ಗ, ರಾಮಕೃಷ್ಣ ಪರಮಹಂಸರ ಮಾರ್ಗ. ಅದೇ ಅಲ್ಲಮಪ್ರಭುವಿನ ಮಾರ್ಗ. ಸ್ವಾಮಿ ವಿವೇಕಾನಂದರ ಹಾದಿಯೂ ಅದೇ. ದಾಸವರೇಣ್ಯರು, ಶರಣರ ಇಂಗಿತ ಕೂಡ ಅದೇ. ಗುರು ರಾಘವೇಂದ್ರ ಶ್ರೀಗಳ ನಿಜಮಾರ್ಗವೂ ಅದೇ. ಮಹಾಕವಿ ಹರಿಹರ ಅಂಥ ಹಾದಿಯಲ್ಲಿ ಸಾಗಿ ಸಾಧಕನಾದವನು. ಜೈನ ಮುನಿ ಪುರು ಪರಮೇಶನ ನಡೆಯೂ ಅಂಥದ್ದೇನೆ. ಆ ಸಾಲಿನಲ್ಲಿ ಬಾಹುಬಲಿಯೂ ಬರುತ್ತಾನೆ. ಆಶ್ಚರ್ಯವೇನಿಲ್ಲ! ಲೌಕಿಕರು ಕಾಯಕದಲ್ಲೇ ಧ್ಯಾನ ಕಾಣುತ್ತಾರೆ. ಅದು ಸಿದ್ಧಿಯಲ್ಲದಿದ್ದರೂ ನೆಮ್ಮದಿಗೆ ಬುನಾದಿ. ಪರಮ ಪರಂಜ್ಯೋತಿ ಕೋಟಿ ಚಂದ್ರಾದಿತ್ಯ ಕಿರಣ ಸುಜ್ಞಾನ ಪ್ರಕಾಶ! ಅಕ್ಕನ ಮಾರ್ಗವೂ ಅದೇನೆ.

ಇಹದ್ದಲ್ಲ ಧ್ಯಾನ. ಇಹದಲ್ಲಿ ಇದ್ದುಕೊಂಡೇ ಪರದ್ದು ಸಾಧಿಸುವುದೇ ಧ್ಯಾನ. ಇಹ–ಪರಗಳ ಸುವರ್ಣ ಮಾಧ್ಯಮದಲ್ಲಿದೆ ಧ್ಯಾನ.

ಹಿಮಾಲಯದ ಗುಹೆಗಳಲ್ಲಿ ತಪಸ್ಸು ಮಾಡುವ ಯೋಗಿಗಳ ಮೌನ ವಲ್ಮೀಕಗಳಲ್ಲಿದೆ ಧ್ಯಾನ. ಆದರೆ ಬರ್ಟ್ರಂಡ್ ರಸೆಲ್ನ, ಮಹಾತ್ಮ ಗಾಂಧಿಯ, ವಾಲ್ಡನ್ನ ಥೋರುವಿನ, ಕರ್ಮಯೋಗಿ ಸಿದ್ಧರಾಮನ, ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಕಾಯಕ ನಿಷ್ಠೆಯಲ್ಲಿ, ಧ್ಯಾನವು ಲೀನರೂಪೇಣ ಸೇರಿಹೋಗಿದೆ. ಇದೇ ಲೌಕಿಕ ಹಾಗೂ ಅಲೌಕಿಕ ಧ್ಯಾನಗಳ ನಡುವಿನ ವ್ಯತ್ಯಾಸ. ಇದನ್ನು ಅರಿತವನು ಅವ್ಯಕ್ತದ ಜೊತೆ ಸತ್ಸಂಗ ಸಲ್ಲಾಪ ನಡೆಸಿ ಸದಾಶಯ ಈಡೇರಿಸಿಕೊಳ್ಳುವ ಕಡೆಗೆ ನಡೆಯುವಲ್ಲಿ ಇತ್ಯಾತ್ಮಕ ಚಿಂತನೆ ಮತ್ತು ಕಾರ್ಯಗಳು ತೊಡಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.