ಜಾನಪದ ವಿಶ್ವವಿದ್ಯಾಲಯವು ಪಾರಂಪರಿಕ ಜ್ಞಾನ ಪದ್ಧತಿ ಶಿಕ್ಷಣದ ಅಡಿ ‘ಜನಪದ ವೈದ್ಯ’, ‘ಬುಡಕಟ್ಟು ವೈದ್ಯ’ ಮತ್ತು ‘ಪ್ರಾಣಿ ವೈದ್ಯ’ ಎಂಬ ಸರ್ಟಿಫಿಕೇಟ್ ಕೋರ್ಸುಗಳ ರೂಪುರೇಷೆ ಸಿದ್ಧಪಡಿಸಿದೆ. ಇದು ಈಗ ಗೊಂದಲಕ್ಕೆ ಕಾರಣವಾಗಿದ್ದು, ಈ ಕೋರ್ಸುಗಳಿಂದ ಆಗಬಹುದಾದ ದೂರಗಾಮಿ ಅಡ್ಡ ಪರಿಣಾಮಗಳ ಬಗ್ಗೆ ಚರ್ಚಿಸುವುದಕ್ಕೆ ಇದು ಸಕಾಲ.

ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸದಿರುವುದರಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ಈಗಾಗಲೇ ನಾವೆಲ್ಲ ಎದುರಿಸುತ್ತಿದ್ದೇವೆ. ಢೋಂಗಿ ವೈದ್ಯರಿಂದಾಗುತ್ತಿರುವ ಅನಾಹುತಗಳು ದಿನಕ್ಕೊಂದಾದರೂ ಕಣ್ಣಿಗೆ ರಾಚುತ್ತಿರುತ್ತವೆ. ಇಂತಹ ಸ್ಥಿತಿಯಲ್ಲಿ, ಹೊಸ ವೈದ್ಯಮಹಾಶಯರನ್ನು ಅತಿ ಕಡಿಮೆ ಸಮಯದಲ್ಲಿ ಉತ್ಪಾದಿಸುವ ನವೀನ ಕಾರ್ಖಾನೆಯೊಂದಕ್ಕೆ ಜಾನಪದ ವಿಶ್ವವಿದ್ಯಾಲಯ ಮಾನ್ಯತೆ ಕೊಟ್ಟಿರುವುದು ದುರಂತವೇ ಸರಿ.

ಜನಪದ ಕಲೆ, ಜನಪದ ರಂಗಭೂಮಿ, ಪಾರಂಪರಿಕ ಜ್ಞಾನ ಪದ್ಧತಿ, ಯಕ್ಷಗಾನ ಪರಂಪರೆ, ಕರಕುಶಲ ಕಲೆ, ಪ್ರವಾಸೋದ್ಯಮ, ಸ್ನಾತಕೋತ್ತರ ಡಿಪ್ಲೊಮಾ ಮತ್ತು ಇತರ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸುಗಳಿಗೆ ಜಾನಪದ ವಿಶ್ವವಿದ್ಯಾಲಯ ಮಾನ್ಯತೆ ಕೊಟ್ಟು, ಪ್ರವೇಶ ಪ್ರಕ್ರಿಯೆಯನ್ನು ವಿವಿಧ ಶಾಖೆಗಳಲ್ಲಿ ವಿಧ್ಯುಕ್ತವಾಗಿ ಪ್ರಾರಂಭಿಸಿದೆ. ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳಿಗೆ ಅರ್ಹತೆಯನ್ನು ನಿಗದಿ ಮಾಡಿದೆ.

ಕಸೂತಿ ಕಲೆ ಕಲಿಸಿದರೆ ಆ ವಿದ್ಯಾರ್ಥಿಗಳು ಮುಂದೆ ತಮ್ಮ ಕೌಶಲ ತೋರಿಸಬಹುದು. ಸಾಂಪ್ರದಾಯಿಕ ಅಡುಗೆ, ಮರಗೆಲಸ, ಅಕ್ಕಸಾಲಿಗತನ ಎಲ್ಲವನ್ನೂ ಕಲಿಯಬಹುದು. ಈ ಕಲಿಕೆಗಳಲ್ಲಿ ಲೋಪದೋಷಗಳಾದರೆ ಮುಂದೆ ಕಲಿಕಾ ವಿಧಾನಗಳನ್ನು ತಿದ್ದಿಕೊಳ್ಳಬಹುದು. ಇದರಿಂದ ಯಾರ ಜೀವಕ್ಕೂ ತೊಂದರೆಯಾಗದು. ಆದರೆ ಇಲ್ಲಿ ಪ್ರಶ್ನೆ ಇರುವುದು ವೈದ್ಯ ಪದ್ಧತಿಗಳನ್ನು (ಜನಪದ, ಬುಡಕಟ್ಟು ಮತ್ತು ಪ್ರಾಣಿ) ಕಲಿಸುವಲ್ಲಿ. ಇವುಗಳ ಕಲಿಕೆಯಲ್ಲಿ ಲೋಪದೋಷಗಳಾದರೆ ಜೀವವೇ ಹೋಗುವ ಸಂಭವವಿರುವುದರಿಂದ ಆರೋಗ್ಯವನ್ನು, ಪ್ರಾಣಿಗಳ ಪ್ರಾಣವನ್ನು ಪಣಕ್ಕಿಡುವುದು ಸರಿಯೇ?

ಇಂಥ ಕೋರ್ಸ್‌ಗಳನ್ನು ಎಸ್ಸೆಸ್ಸೆಲ್ಸಿ ಪಾಸಾದ ಹುಡುಗರಿಗೆ ಕೊಟ್ಟು ಅವರಿಂದ ಏನನ್ನು ನಿರೀಕ್ಷಿಸಬೇಕು? ಸರಿಯಾಗಿ ತರಬೇತಿ ಸಿಕ್ಕಿದ್ದೇ ಆದಲ್ಲಿ ಆ ಅಭ್ಯರ್ಥಿ ಮುಂದೆ ಆಯಾ ವೈದ್ಯಕೀಯ ಪದ್ಧತಿಯನ್ನು ಪ್ರಾಕ್ಟೀಸ್ ಮಾಡಬೇಕೆ? ಇಷ್ಟು ಕಲಿತ ಮಾತ್ರಕ್ಕೇ ಅವರು ವೈದ್ಯಕೀಯ ಸೇವೆ ಪ್ರಾರಂಭಿಸಿಬಿಡಬಹುದೇ? ಹಾಗೆ ಮಾಡಲು ಸಾಧ್ಯವಾಗದಿದ್ದರೆ ಅಂಥ ಕೋರ್ಸ್ ಮಾಡಿ ಏನುಪಯೋಗ? ಬುಡಕಟ್ಟು ವೈದ್ಯ ಪದ್ಧತಿಯನ್ನು ಕಲಿಸಿ ಅವರಿಂದ ಅಪೇಕ್ಷಿಸುವುದು ಏನನ್ನು? ಈ ಪ್ರಶ್ನೆಗಳಿಗೆ ವಿ.ವಿ. ಉತ್ತರಿಸಬೇಕಾ ಗಿದೆ. ಉತ್ತರ ಸಿಗದಿದ್ದಲ್ಲಿ, ಅದರ ದೂರಗಾಮಿ ಪರಿಣಾಮ, ಅನಾಹುತ ಸೃಷ್ಟಿಸುವುದರಲ್ಲಿ ಸಂದೇಹವೇ ಇಲ್ಲ.

ಜನಪದ ವೈದ್ಯ ಪದ್ಧತಿ ಮತ್ತು ಬುಡಕಟ್ಟು ವೈದ್ಯ ಪದ್ಧತಿಗಳು ಜನರಿಂದ ಜನರಿಗೆ ಹರಿದು ಬಂದಿವೆಯಾದರೂ, ಅಪಾರ ಅನುಭವವುಳ್ಳವರಿಂದ ಪಾರಂಪರಿಕವಾಗಿ, ಕೆಲವೊಮ್ಮೆ ಕೌಟುಂಬಿಕವಾಗಿ ಆಯಾ ಪದ್ಧತಿಗಳು ಚಾಲ್ತಿಯಲ್ಲಿವೆ. ವಿಶೇಷ ಸಂಶೋಧನೆಗಳ ಮೂಲಕ ಇವುಗಳ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಿ, ಹೆಚ್ಚು ಪರಿಣಾಮಕಾರಿ ಎಂಬುದು ತಿಳಿದ ನಂತರ ಅದನ್ನು ವಿಧ್ಯುಕ್ತವಾಗಿ ತಜ್ಞ ವೈದ್ಯರ ಮೂಲಕ ಪ್ರಚಲಿತಕ್ಕೆ ತರುವ ಯೋಜನೆ ರೂಪಿಸಬೇಕು. ಅದು ಬಿಟ್ಟು ದೇಹ ರಚನಾ ಶಾಸ್ತ್ರ, ಕ್ರಿಯಾ ಶಾಸ್ತ್ರ, ರೋಗ ವಿಜ್ಞಾನ ಶಾಸ್ತ್ರಗಳನ್ನು ಒಳಗೊಂಡ ಸಂಪೂರ್ಣ ವೈದ್ಯಕೀಯ ಶಾಸ್ತ್ರವನ್ನು ಅಭ್ಯಸಿಸದೇ ಇರುವ ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗೆ ಇದನ್ನು ಕಲಿಸುವುದರಲ್ಲಿನ ಸದುದ್ದೇಶವೇನೊ ತಿಳಿಯದಾಗಿದೆ.

ಸರ್ಟಿಫಿಕೇಟ್ ಕೋರ್ಸ್ ಪಡೆದ ವಿದ್ಯಾರ್ಥಿಗಳು ಸುಮ್ಮನೆ ಕುಳಿತಾರೆಯೇ? ಔಷಧಿ ದ್ರವ್ಯಗಳನ್ನು ಪ್ರಯೋಗಿಸಲು ಪ್ರಾರಂಭಿಸಿಬಿಡುತ್ತಾರೆ. ರೋಗಿಗಳಿಗೇನು ಕಮ್ಮಿ? ಸಣ್ಣಗೆ ಸ್ವಲ್ಪ ಪರಿಣಾಮ ಕಂಡರೂ ಅವರು ವೈದ್ಯರೆನಿಸಿಬಿಡುತ್ತಾರೆ. ಒಂದು ವೇಳೆ ಅಡ್ಡ ಪರಿಣಾಮಗಳಾದರೆ ಯಾರು ಜವಾಬ್ದಾರಿ? ಜನ ತಮ್ಮ ದೇಹವನ್ನು ಇವರ ಪ್ರಯೋಗಗಳಿಗೆ ಸಾಧನವನ್ನಾಗಿಸಬೇಕೆ?

ಇಂದಿನ ನಮ್ಮ ವ್ಯವಸ್ಥೆಯಲ್ಲಿ, ಸರ್ಟಿಫಿಕೇಟ್ ಕೋರ್ಸ್ ಪಡೆದ ವ್ಯಕ್ತಿಗಳು ಮುಂದೊಮ್ಮೆ ಪ್ರಾಕ್ಟೀಸ್‌ಗೂ ಅನುಮತಿ ಗಿಟ್ಟಿಸಿಬಿಡಬಹುದು. ಆಗ ಅವರು ಕೇವಲ ಜನಪದ ವೈದ್ಯಕೀಯವನ್ನು ಪ್ರಾಕ್ಟೀಸ್ ಮಾಡುತ್ತಾರೆ ಎನ್ನುವುದಕ್ಕೆ ಏನಿದೆ ಗ್ಯಾರಂಟಿ? ಈಗ ವಿವಿಧ ವೈದ್ಯಕೀಯ ಪದ್ಧತಿಗಳನ್ನು ಕಲಿತ ವೈದ್ಯರು ಆಯಾ ಪದ್ಧತಿಗಳಿಗೇ ಸೀಮಿತವಾಗಿದ್ದಾರೆಯೆ?

ವೈದ್ಯಕೀಯ ಶಿಕ್ಷಣ ಇಲಾಖೆ, ವೈದ್ಯ ವೃತ್ತಿ ಕೈಗೊಳ್ಳಲು ಅನುಮತಿ ಕೊಡುವ ಕೆ.ಎ.ಯು.ಪಿ. ಮಂಡಳಿ, ಭಾರತೀಯ ವೈದ್ಯ ಪದ್ಧತಿಗಳ ನಿಯಂತ್ರಣ ಮಂಡಳಿಯಾದ ಸಿ.ಸಿ.ಐ.ಎಂ. ಎಲ್ಲವೂ ಕೂಡಲೇ ಈ ಬಗ್ಗೆ ಗಮನಹರಿಸಬೇಕಿದೆ. ಉಪೇಕ್ಷೆ ಮಾಡಿದಲ್ಲಿ ಎಸ್ಸೆಸ್ಸೆಲ್ಸಿ ಪಾಸಾದ ಅಮಾಯಕ ಹುಡುಗರು ಯಾರದೋ ಮಾತಿಗೆ, ಮೋಡಿಗೆ ಸಿಕ್ಕಿ, ಏನೇನೂ ವಿಚಾರ ಮಾಡದೆ ಈ ಕೋರ್ಸ್‌ಗಳಿಗೆ ಪ್ರವೇಶ ಪಡೆಯುತ್ತಾರೆ. ಬಳಿಕ ಒಂದು ವರ್ಷದ ಅರೆಬರೆ ಅಥವಾ ಸಂಪೂರ್ಣ ಕೋರ್ಸ್ ಒಂದನ್ನು ಮುಗಿಸಿ, ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಅನ್ನು ತೋರಿಸುತ್ತಾರೆ. ಮುಂದೆ?

ಎಸ್ಸೆಸ್ಸೆಲ್ಸಿ ಮುಗಿಸಿದ ವಿದ್ಯಾರ್ಥಿಗಳು ಕಲಿಕೆಯ ಮಹತ್ತರ ತಿರುವಿನ ಹಂತದಲ್ಲಿರುತ್ತಾರೆ. ಪಿಯುಸಿಯ ವಿವಿಧ ವಿಷಯಗಳು, ವೃತ್ತಿಪರ ಡಿಪ್ಲೊಮಾ ಕೋರ್ಸುಗಳು, ಅರೆವೈದ್ಯಕೀಯ ಕೋರ್ಸುಗಳು ಅಥವಾ ಇನ್ನಿತರ ಕೋರ್ಸುಗಳಿಗೆ ಪ್ರವೇಶ ಪಡೆಯುವ ಹಂತದಲ್ಲಿರುತ್ತಾರೆ. ಇಂಥ ಸಮಯದಲ್ಲಿ ಪ್ರಾಯೋಗಿಕವೆಂಬಂತೆ ನಡೆಸುವ ಈ ರೀತಿಯ ಕೋರ್ಸುಗಳ ಪ್ರವೇಶ ಪಡೆದು, ಅದನ್ನು ಮುಗಿಸಿದ ಮೇಲೆ ಅವರು ಏನು ಮಾಡಬೇಕು ಎಂಬುದು ವಿಚಾರ ಮಾಡಲೇಬೇಕಾದ ವಿಷಯ. ಈ ವಿಶ್ವವಿದ್ಯಾಲಯದ ಪ್ರಕಾರ, ಇವರಿಗೆ ವೃತ್ತಿ ಮಾಡಲು ಪರವಾನಗಿ ಕೊಡುವ ಅಧಿಕಾರವಂತೂ ಇಲ್ಲ. ಮುಂದೆ? ಉತ್ತರವಿಲ್ಲ.

ಎಲ್ಲ ವಿಷಯಗಳನ್ನೂ ಪ್ರಮಾಣಬದ್ಧವಾಗಿ ಮತ್ತು ವೈಜ್ಞಾನಿಕವಾಗಿ ನಡೆಸುವ ಉದ್ದೇಶದಿಂದ ಜಾನಪದ ವಿಶ್ವವಿದ್ಯಾಲಯವನ್ನು ರೂಪಿಸಿರುವುದಾಗಿ ಅದರ ಧ್ಯೇಯೋದ್ದೇಶಗಳಲ್ಲಿ ಹೇಳಲಾಗಿದೆ. ಭಾರತೀಯ ದೇಸಿ ವೈದ್ಯಕೀಯ ಪದ್ಧತಿಗಳಲ್ಲಿ ಪದವಿ ಪಡೆಯುವ ಅಭ್ಯರ್ಥಿಗಳಿಗೆ ಈ ಕೋರ್ಸುಗಳನ್ನು ಪರಿಚಯಿಸಿದರೆ ಈ ಧ್ಯೇಯೋದ್ದೇಶಕ್ಕೆ ಅರ್ಥ ಬರುತ್ತದೆಯೇ ಹೊರತು, ಪ್ರಾಥಮಿಕ ವೈದ್ಯಶಾಸ್ತ್ರದ ಅರಿವೇ ಇಲ್ಲದ ಹುಡುಗರಿಗೆ ಇದನ್ನು ಕಲಿಸುವುದರಿಂದ ಅಲ್ಲ.

ಹೀಗೆ ವೈದ್ಯಶಾಸ್ತ್ರವನ್ನು ಹಗುರವಾಗಿ ಪರಿಗಣಿಸಿ ಸಮಾಜಕ್ಕೆ ಸಾರುವ ಸಂದೇಶವಾದರೂ ಏನು? ಈಗಾಗಲೇ ರಾಜೀವ್ ಗಾಂಧಿ ಆರೋಗ್ಯ ವಿ.ವಿ. ಎಲ್ಲ ವೈದ್ಯಕೀಯ ಕೋರ್ಸುಗಳನ್ನೂ ನಡೆಸುತ್ತಿರುವಾಗ, ಈ ದೇಸಿ ವೈದ್ಯಕೀಯ ಪದ್ಧತಿಗಳನ್ನು ಆಯಾ ವಿ.ವಿ.ಗಳ ಅಡಿ ಯಲ್ಲಿ ನಿರ್ವಹಣೆಗೆ ಕೊಡುವುದು ಸೂಕ್ತ. ಕಲಿಕೆ ವಿಷಯ ದಲ್ಲಿ ರೋಗ ವಿಜ್ಞಾನ ಮತ್ತು ರೋಗಗಳ ತಿಳಿವಳಿಕೆ ಅಂಶಗಳಿರುವುದರಿಂದ ತಜ್ಞರಿಂದ ಈ ವಿಷಯಗಳನ್ನು ಕಲಿಸಬೇಕಾಗುತ್ತದೆ. ಹಾಗೆಯೇ ಪ್ರಾಣಿಶಾಸ್ತ್ರ ಸಹ ಸಂಶೋಧನೆಗಳ ಮೂಲಕ ಹೊಸ ಹೊಸ ಆಯಾಮ ಗಳನ್ನು ಪಡೆದುಕೊಂಡಿದೆ. ಪಾರಂಪರಿಕ ಪ್ರಾಣಿಶಾಸ್ತ್ರದ ಅಧ್ಯಯನವನ್ನು ಈ ವಿಭಾಗದಲ್ಲಿ ಮುನ್ನಡೆಸಬೇಕೇ ವಿನಾ, ಇದರ ಲವಲೇಶವೂ ಗೊತ್ತಿಲ್ಲದ ವಿದ್ಯಾರ್ಥಿಗಳಿಗೆ ಇದನ್ನು ಕಲಿಸುವುದರಲ್ಲಿ ಯಾವ ಅರ್ಥವೂ ಇಲ್ಲ.

ಢೋಂಗಿ ವೈದ್ಯರ ಸಮಸ್ಯೆಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿರುವ ಈ ಸಂದರ್ಭದಲ್ಲಿ, ಮತ್ತೊಮ್ಮೆ ಅಂತಹ ಪರಿಸ್ಥಿತಿ ಒದಗದಂತೆ ಜಾನಪದ ವಿಶ್ವವಿದ್ಯಾಲಯ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಈಗಲೇ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಕ್ರಮ ಜರುಗಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.