ಅಗಲಿದವರ ತೇಜೋವಧೆ ಸರಿಯೇ?

ನಟ ಹಾಗೂ ಸಿನಿಮಾ ನಿರ್ದೇಶಕ ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಸುದ್ದಿಯನ್ನು ಭಾನುವಾರ ಮಧ್ಯಾಹ್ನ ಎಲ್ಲ ಸುದ್ದಿ ಚಾನೆಲ್ಗಳು ಬಿತ್ತರಿಸುತ್ತಿದ್ದವು. ಒಂದು ಚಾನೆಲ್ ಸುದ್ದಿ ನಿರೂಪಕ ಈ ಸಂದರ್ಭದಲ್ಲಿ, ಖ್ಯಾತನಾಮರು, ಸಿನಿಮಾ ಮಂದಿ, ಬರಹಗಾರರಿಗೆ ಕರೆ ಮಾಡಿ, ಗುರುಪ್ರಸಾದ್ ಅವರ ಸಿನಿಮಾ ಜೀವನ ಹಾಗೂ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಅಪ್ರಬುದ್ಧ ಪ್ರಶ್ನೆಗಳನ್ನು ಕೇಳುತ್ತಿದ್ದುದನ್ನು ನೋಡಿ ಬೇಸರವಾಯಿತು. ಆ ನಿರೂಪಕನ ಪ್ರಶ್ನೆಗಳಿಗೆ ಬರಹಗಾರರೊಬ್ಬರು, ‘ಗುರುಪ್ರಸಾದ್ ಅವರಿಗೆ ಕುಡಿತದ ಚಟವಿತ್ತು, ಸಿನಿಮಾ ಸೆಟ್ಗೆ ಲೇಟಾಗಿ ಬರುತ್ತಿದ್ದರು, ಯಾರ ಜೊತೆಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ, ಪ್ರತಿ ದಿನದ ಖರ್ಚಿಗೂ ಅವರ ಬಳಿ ಹಣ ಇರುತ್ತಿರಲಿಲ್ಲ ಅನ್ನಿಸುತ್ತದೆ, ಅವರಿಗೆ ಆತ್ಮೀಯ ಸ್ನೇಹಿತರು ಇರಲಿಲ್ಲ ಅನ್ನಿಸುತ್ತದೆ’ ಎಂದೆಲ್ಲ, ಅಗಲಿದ ಜೀವದ ಬಗ್ಗೆ ಮಾತನಾಡಿ ‘ಬುದ್ಧಿವಂತಿಕೆ’ ತೋರಿಸಿದರು. ಅಗಲಿದ ವ್ಯಕ್ತಿಯ ಬಗ್ಗೆ ಹೀಗೆಲ್ಲಾ ಮಾತನಾಡುವ ಪ್ರವೃತ್ತಿ ನಿಲ್ಲಬೇಕು.

ಗುರುಪ್ರಸಾದ್ ಅವರ ವೈಯಕ್ತಿಕ ಜೀವನ ಬದಿಗಿರಲಿ. ಅವರು ಕನ್ನಡ ಸಿನಿಮಾ ಲೋಕಕ್ಕೆ ತೋರಿಸಿದ ಹೊಸ ದಿಕ್ಕು, ನೈಜತೆ ತುಂಬಿದ ಸಂಭಾಷಣೆ, ವಾಸ್ತವ ಚಿತ್ರಣದ ನಿರೂಪಣೆ, ಸಮಾಜದ ಅಂಕುಡೊಂಕನ್ನು ಅಚ್ಚುಕಟ್ಟಾಗಿ ಸೆರೆ ಹಿಡಿಯುತ್ತಿದ್ದ ಅಪರೂಪದ ವ್ಯಕ್ತಿಯಾಗಿದ್ದರು. ಅಂತಹವರು ಅಕಾಲದಲ್ಲಿ ನಮ್ಮನ್ನು ಅಗಲಿರುವುದು ಕನ್ನಡ ಸಿನಿಮಾ ಲೋಕಕ್ಕೆ ದೊಡ್ಡ ಆಘಾತ ಉಂಟುಮಾಡಿದ ಸಂಗತಿ.

ಬಸನಗೌಡ ಪಾಟೀಲ, ಯರಗುಪ್ಪಿ

ಮರಳು ಗಣಿಗಾರಿಕೆ: ಬೇಕಾಗಿದೆ ಎಚ್ಚರ

ದೀಪಾವಳಿ ಪ್ರಯುಕ್ತ ವಾಹನವನ್ನು ತೊಳೆಯಲು ನದಿಗೆ ತೆರಳಿದ್ದ ಹದಿಹರೆಯದ ಬಾಲಕ ಮತ್ತು ಆತನ ಚಿಕ್ಕಪ್ಪ, ಮರಳಿಗಾಗಿ ನದಿಯಲ್ಲಿ ತೋಡಿದ್ದ ಗುಂಡಿಯಲ್ಲಿ ಮುಳುಗಿ ಮೃತಪಟ್ಟಿರುವ ದುರಂತವು ಹರಿಹರ ಹೊರವಲಯದ ಗುತ್ತೂರು ಬಳಿ ನಡೆದಿರುವುದು ಅತೀವ ದುಃಖಕರ ಸಂಗತಿ. ಈ ಭಾಗದಲ್ಲಿ ಹರಿಯುವ ತುಂಗಭದ್ರಾ ನದಿಯ ಪಾತ್ರದಲ್ಲಿ ಹಗಲು ಇರುಳೆನ್ನದೆ ಮರಳು ಮತ್ತು ಮಣ್ಣಿನ ಗಣಿಗಾರಿಕೆ ನಡೆಯುತ್ತಿದೆ. ಅದಕ್ಕಾಗಿ ತೋಡುವ ಗುಂಡಿಗಳನ್ನು ಬಳಿಕ ಮುಚ್ಚದೆ ಹಾಗೇ ಬಿಡಲಾಗುತ್ತಿದೆ. ಈ ಬಗ್ಗೆ ನದಿಪಾತ್ರದಲ್ಲಿ ಇರುವ ಗ್ರಾಮಸ್ಥರು ಯಾವುದೇ ವಿರೋಧ ವ್ಯಕ್ತಪಡಿಸದೆ ಮೌನವಾಗಿದ್ದು, ಇಂತಹ ಗುಂಡಿಗಳಲ್ಲಿ ಸಿಲುಕಿ ಜಾನುವಾರುಗಳು ಮತ್ತು ಜನರ ಪ್ರಾಣಹಾನಿ ಸಂಭವಿಸಿದಾಗ ಮಾತ್ರ ಸರ್ಕಾರವನ್ನು ದೂಷಿಸುವುದು ಎಷ್ಟು ಸರಿ?

ಜನರ ಜೀವನಾಡಿಯಾಗಿರುವ ನದಿಗಳು ಹಾಗೂ ಅವುಗಳ ತಟಗಳನ್ನು ಸಂರಕ್ಷಿಸಲು ಕಟಿಬದ್ಧರಾಗೋಣ.

ಜಬೀವುಲ್ಲಾ ಟಿ., ದಾವಣಗೆರೆ

ಪುಸ್ತಕೋದ್ಯಮದ ಸಂಕಷ್ಟ ಅರಿವಿಗೆ ಬರಲಿ

ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಹಿಂದಿನ ಮಾರ್ಚ್ ತಿಂಗಳಲ್ಲಿ ಪುಸ್ತಕ ಖರೀದಿಸಿರುವ ಬಾಬ್ತು ₹13 ಕೋಟಿಯನ್ನು ಲೇಖಕರು, ಪ್ರಕಾಶಕರಿಗೆ ಇನ್ನೂ ನೀಡದೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಪುಟವಾರು ಬೆಲೆ
ಹೆಚ್ಚಿಸಿ 8 ವರ್ಷ ಕಳೆದರೂ, ಕಾಗದದ ಬೆಲೆ ಗಗನಕ್ಕೇರಿದ್ದರೂ ಇದನ್ನು ಗಣನೆಗೇ ತೆಗೆದುಕೊಂಡಿಲ್ಲ. ಕೆಲವು ಪುಸ್ತಕ ಖರೀದಿ ಯೋಜನೆಗಳು ಸ್ಥಗಿತವಾಗಿದ್ದು, ಈಗ ಸಗಟು ಪುಸ್ತಕ ಖರೀದಿಯನ್ನೂ ನಿಲ್ಲಿಸುವ ಪ್ರಯತ್ನ ನಡೆದಿದೆ.

ಪುಸ್ತಕೋದ್ಯಮದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿರುವ ಯಾರೊಬ್ಬರನ್ನೂ ರಾಜ್ಯೋತ್ಸವ ಪ್ರಶಸ್ತಿ ಅಥವಾ ಸುವರ್ಣ ಸಂಭ್ರಮ ಪ್ರಶಸ್ತಿಗೆ ಪರಿಗಣಿಸಿಲ್ಲ. ಬಜೆಟ್ನಲ್ಲಿ ಇಲಾಖೆಗೆ ಅನುದಾನ ಕಡಿತ ಮಾಡಲಾಗುತ್ತದೆ. ಇಷ್ಟಾದರೂ ರಾಜ್ಯೋತ್ಸವದ ದಿನದಂದು ಸಚಿವರು ಕನ್ನಡದ ಮೇಲೆ ಅಪಾರವಾದ ಪ್ರೀತಿ ವ್ಯಕ್ತಪಡಿಸುತ್ತಾ
ಮಾಡುವ ಭಾಷಣಗಳನ್ನು ಕೇಳಿದರೆ ಆಶ್ಚರ್ಯವಾಗುತ್ತದೆ. ಸಾಹಿತಿಗಳು ಸರ್ಕಾರದ ವಿರುದ್ಧ ಧ್ವನಿ
ಎತ್ತುತ್ತಿಲ್ಲ. ಪುಸ್ತಕೋದ್ಯಮ ಅನಾಥವಾಗುತ್ತಿದೆ. ನಮ್ಮ ಸಂಕಟವನ್ನು ಅಧಿಕಾರಸ್ಥರು ಅರ್ಥ ಮಾಡಿಕೊಳ್ಳಬೇಕಾಗಿದೆ.

ನಿಡಸಾಲೆ ಪುಟ್ಟಸ್ವಾಮಯ್ಯ, ಬೆಂಗಳೂರು

ವಕ್ಫ್ ಆಸ್ತಿ: ನಡೆಯಬೇಕಿದೆ ತನಿಖೆ

ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳ ರೈತರಿಗೆ ಅವರ ಜಮೀನಿನ ಮಾಲೀಕತ್ವವು ವಕ್ಫ್ ಮಂಡಳಿಗೆ ಸೇರಿದ್ದೆಂದು ನೋಟಿಸ್ ಜಾರಿ ಮಾಡಿದ ಕಂದಾಯ ಇಲಾಖೆಯ ಕ್ರಮ ದುಡುಕಿನದ್ದಾಗಿದೆ. ಇದರಿಂದ ರೈತರು ಸಹಜವಾಗಿ ಆತಂಕಕ್ಕೆ ಗುರಿಯಾಗಿದ್ದಾರೆ. ಇಂತಹ ಗೊಂದಲಗಳು ಹೊಸವೇನಲ್ಲ. ತಮಿಳುನಾಡಿನ ತಿರುಚಿನಾಪಳ್ಳಿ ಜಿಲ್ಲೆಯ ತಿರುಚೆಂತುರಯ್ನ 1,500 ವರ್ಷಗಳಷ್ಟು ಹಳೆಯದಾದ ಸುಂದರೇಶ್ವರ ದೇವಾಲಯವೂ ಸೇರಿದಂತೆ ಗ್ರಾಮದ ಎಲ್ಲಾ ಜಮೀನು ವಕ್ಫ್ ಮಂಡಳಿಗೆ ಸೇರಿದ್ದೆಂದು ದಾಖಲೆಗಳಲ್ಲಿ ನಮೂದಿಸಿರುವುದಾಗಿ ವರದಿಯಾಗಿತ್ತು. ನಮ್ಮ ರಾಜ್ಯದ 48 ಲಕ್ಷ ಪಹಣಿಗಳು ಇನ್ನೂ ಸತ್ತವರ ಹೆಸರಿನಲ್ಲಿ ಇರುವುದಾಗಿ ಕಂದಾಯ ಸಚಿವರೇ ಇತ್ತೀಚೆಗೆ ಬೇಸರ ವ್ಯಕ್ತಪಡಿಸಿದ್ದರು. ಇಂತಹ ಎಡವಟ್ಟುಗಳ ಮುಂದುವರಿದ ಭಾಗವಾಗಿ ಇದೀಗ ಕಂದಾಯ ಇಲಾಖೆಯಿಂದ ರೈತರಿಗೆ ನೋಟಿಸ್ ಜಾರಿಯಾಗಿದೆ.

ಈ ಬೆಳವಣಿಗೆಯನ್ನು ರಾಜಕಾರಣಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ವಕ್ಫ್ ಮಂಡಳಿ ವರ್ಸಸ್ ರೈತರು ಅಥವಾ ಹಿಂದೂಗಳು ವರ್ಸಸ್ ಮುಸ್ಲಿಮರ ನಡುವಿನ ಸಂಘರ್ಷದಂತೆ ಬಿಂಬಿಸುತ್ತಿರುವುದು ದುರದೃಷ್ಟಕರ. ವಕ್ಫ್ ಮಂಡಳಿಗೆ ಸಂಘರ್ಷ ಇರುವುದು ಮಂಡಳಿಯ ಆಸ್ತಿಯನ್ನು ಅಕ್ರಮವಾಗಿ ಕಬಳಿಸಿರುವ ಪ್ರಭಾವಿ ಮುಸ್ಲಿಂ ಮುಖಂಡರು ಹಾಗೂ ಈ ಕಬಳಿಕೆಗೆ ಅವರಿಗೆ ಬೆಂಬಲವಾಗಿ ನಿಂತ ಸರ್ಕಾರಿ ಅಧಿಕಾರಿಗಳೊಂದಿಗೆ. ವಾಲ್ಮೀಕಿ ನಿಗಮದ ಅಕ್ರಮದ ಪರಿಣಾಮ ಎದುರಿಸುವವರು ವಾಲ್ಮೀಕಿ ಸಮುದಾಯದ ಬಡವರು. ಭೋವಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದಿಂದ ನಷ್ಟ ಅನುಭವಿಸುವವರು ಬಡ ಭೋವಿ ಸಮುದಾಯದವರು. ಅದೇ ರೀತಿ ವಕ್ಫ್ ಮಂಡಳಿಯ ಅವ್ಯವಹಾರದ ಕಾರಣದಿಂದ ಬಡ ಮುಸ್ಲಿಮರ ಕಲ್ಯಾಣಕ್ಕಾಗಿ ಮೀಸಲಾದ ಅನುದಾನವು ಪ್ರಭಾವಿಗಳ ಪಾಲಾಗಿದೆ. ಈ ಕಾರಣದಿಂದ, ಎಲ್ಲೆಡೆ ವಕ್ಫ್ ಮಂಡಳಿಯ ವಿವಾದವೇ ಸುದ್ದಿಯಾಗಿರುವ ಈ ಸಂದರ್ಭದಲ್ಲಾದರೂ, ನನೆಗುದಿಗೆ ಬಿದ್ದಿರುವ ಮಂಡಳಿಯ ಆಸ್ತಿ ಕಬಳಿಕೆಯ ಬಗ್ಗೆ ಸೂಕ್ತ ತನಿಖೆ ನಡೆದು, ಈ ವಿಷಯ ತಾರ್ಕಿಕ ಅಂತ್ಯ ಕಾಣಲಿ ಎಂದು ಆಶಿಸೋಣ.

ಟಿ.ಜಯರಾಂ, ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.