ನಮ್ಮ ದೇಶದಲ್ಲಿ ಸ್ವಾತಂತ್ರ್ಯಾ ನಂತರ, ಸಂವಿಧಾನದ ಕರಡು ರಚನೆ ಆರಂಭವಾದಾಗಿನಿಂದ, ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸಿನ ಬಗ್ಗೆ ಬಹಳಷ್ಟು ಪ್ರತಿರೋಧ ವ್ಯಕ್ತವಾಗುತ್ತಾ ಬಂದಿದೆ. ಪಂಚಾಯತ್ ರಾಜ್ ವಿಚಾರ ಸಂವಿಧಾನದ ಮುಖ್ಯ ಭಾಗದಲ್ಲಿ ಸೇರಿರದ ಬಗ್ಗೆ ಗಾಂಧೀಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಂತರ, ಆ ವಿಚಾರವನ್ನು ‘ಸರ್ಕಾರಗಳಿಗೆ ಮಾರ್ಗದರ್ಶಿ ಸೂತ್ರಗಳು’ ವಿಭಾಗದಲ್ಲಿ ಸಂವಿಧಾನ ರಚನಾಕಾರರು ಸೇರಿಸಿದರು.

ಇದಾದ ನಂತರ ಪಂಚಾಯತ್ ರಾಜ್ ವಿಚಾರ ಜಾರಿಯಾಗಲು 43 ವರ್ಷಗಳೇ ಬೇಕಾದವು. 1989ರಲ್ಲಿ ರಾಜೀವ್ ಗಾಂಧಿ ಅತ್ಯಂತ ಕಾಳಜಿಯಿಂದ ಸಂಸತ್ತಿನಲ್ಲಿ ಎರಡು ವಿಚಾರಗಳನ್ನು ಮಂಡಿಸಿದರು. ಅವರ ಅಕಾಲಿಕ ಮರಣದ ನಂತರ, ಪಿ.ವಿ.ನರಸಿಂಹ ರಾವ್ ಸಂವಿಧಾನಕ್ಕೆ 73ನೇ ತಿದ್ದುಪಡಿ ತರುವ ಮೂಲಕ, ಪಂಚಾಯತ್ ರಾಜ್ ದೇಶದಾದ್ಯಂತ ಜಾರಿಗೆ ಬಂದಿತು.

ಇಂದು ಕರ್ನಾಟಕದಲ್ಲಿ ರಮೇಶ್ ಕುಮಾರ್ ಸಮಿತಿಯ ವರದಿ ಮತ್ತು ಅದರ ಆಧಾರದಲ್ಲಿ ತಯಾರಾದ ಕರಡು ಮಸೂದೆಗಳು ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ಹಾಗೂ ಸಂವಿಧಾನದ ಆಶಯಗಳ ಆಧಾರದಲ್ಲೇ ತಯಾರಾಗಿವೆ. ಗ್ರಾಮೀಣ ಜನರ, ಗ್ರಾಮ ಸಭಾ ಸದಸ್ಯರ ಹಕ್ಕುಗಳ ಸಂರಕ್ಷಣೆಯತ್ತ ಎಲ್ಲ ಚರ್ಚೆಗಳನ್ನು, ಆಶಯಗಳನ್ನು ತಿರುಗಿಸುವುದು ಮುಖ್ಯ ಎಂದು ಈ ಸಮಿತಿ ನಂಬಿತ್ತು. ದುರದೃಷ್ಟವಶಾತ್, ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಅವರು ಇತ್ತೀಚೆಗೆ ವಿಧಾನಸಭೆಯಲ್ಲಿ ಮಂಡಿಸಿದ ಮಸೂದೆಯನ್ನು ನೋಡಿದರೆ, ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಇನ್ನೂ ಅನೇಕ ದಶಕಗಳ ಹಿಂದಕ್ಕೆ ತಳ್ಳಿದಂತೆ ಕಾಣಿಸುತ್ತಿದೆ. ಇದು ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ಆದ ತೀವ್ರ ಹಿನ್ನಡೆ.

ಸಮಿತಿ ತನ್ನ ವರದಿಯಲ್ಲಿ ನೀಡಿರುವ 88 ಶಿಫಾರಸುಗಳ ಪೈಕಿ ಕೇವಲ ಮೂರನ್ನು ಮಸೂದೆಯಲ್ಲಿ ಸೇರಿಸಲಾಗಿದೆ. ಜೊತೆಗೆ ‘ಕಡ್ಡಾಯ ಮತದಾನ’ದ ಅಂಶವನ್ನು ಹೊಸತಾಗಿ ಅಳವಡಿಸಲಾಗಿದೆ. ಸಮಿತಿಯ ಶಿಫಾರಸುಗಳಲ್ಲಿ ಒಟ್ಟಾರೆಯಾಗಿ ತೆಗೆದುಕೊಂಡಿರುವ ಮೂರು ವಿಷಯಗಳು ಬಹಳ ಮಹತ್ವದವಾದರೂ, ಉಳಿದ 85 ವಿಷಯಗಳು ಇಲ್ಲದೇ ಹೋದರೆ ಈ ವಿಷಯಗಳಿಗೆ ಹೆಚ್ಚು ಬಲ ಇರುವುದಿಲ್ಲ. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಈಗ ತಕ್ಷಣಕ್ಕೆ ಚುನಾವಣೆಗೆ ಸಂಬಂಧಿಸಿದ ಶಿಫಾರಸುಗಳನ್ನು ಮಾತ್ರ ಗಮನಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಆದರೆ, ಸಮಿತಿಯ ವರದಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಇನ್ನೂ ಅನೇಕ ಶಿಫಾರಸುಗಳು ಇದ್ದು, ಅವುಗಳನ್ನೂ ಈ ಮಸೂದೆಯಲ್ಲಿ ಸೇರಿಸಬೇಕಿತ್ತು. ಅವೆಲ್ಲವನ್ನೂ ಇಚ್ಛಾಶಕ್ತಿಯ ಕೊರತೆಯಿಂದ ಕಡೆಗಣಿಸಿದಂತಿದೆ.

ಸಮಿತಿಯ ಶಿಫಾರಸುಗಳನ್ನು ಮಸೂದೆಯಲ್ಲಿ ಸೇರಿಸಲು ಕಾಲಾವಕಾಶದ ಕೊರತೆ ಇದೆ ಎಂದಿರುವ ಸಚಿವರು, ತಮ್ಮ ಆಯ್ಕೆಯ

‘ಕಡ್ಡಾಯ ಮತದಾನ’ದ ವಿಚಾರವನ್ನು ಮಸೂದೆಯಲ್ಲಿ ಸೇರಿಸಿದ್ದಾರೆ. ಕುತೂಹಲದ ಸಂಗತಿಯೆಂದರೆ, ಇದು ಸಮಿತಿಯ ಶಿಫಾರಸಿನಲ್ಲಾಗಲಿ, ಸಂಪುಟ ಸಭೆಯಲ್ಲಾಗಲಿ ಚರ್ಚೆಯಾದ ವಿಚಾರವಲ್ಲ. ಮತದಾನಕ್ಕೆ ಒತ್ತಾಯಿಸುವುದು ‘ವೈಯಕ್ತಿಕ ಸ್ವಾತಂತ್ರ್ಯಕ್ಕೆ ವಿರುದ್ಧ’ ಎನ್ನುವ ಕಾರಣಕ್ಕೆ ಇಂತಹ ಒಂದು ಪ್ರಸ್ತಾಪವನ್ನು ಕಾಂಗ್ರೆಸ್ ಗುಜರಾತ್‌ನಲ್ಲಿ ವಿರೋಧಿಸಿದೆ. ಅಲ್ಲಿಯ ರಾಜ್ಯಪಾಲರಾದ ಕಮಲಾ ಬೆನ್ ಅವರೂ ಅಂತಹ ಪ್ರಸ್ತಾಪವನ್ನು ಕೆಲವು ಬಾರಿ ವಿಧಾನ ಮಂಡಲಕ್ಕೆ ವಾಪಸ್ ಕಳುಹಿಸಿದ್ದಾರೆ.

ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಾದರೂ ಹೆಚ್ಚಿನ ರಾಜಕಾರಣಿಗಳು ಹೆಚ್ಚೂಕಡಿಮೆ ಒಂದೇ ರೀತಿ ಎನ್ನುವುದು ವಿಷಾದಕರ. ಸಾಮಾನ್ಯವಾಗಿ ಕಾನೂನುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸುತ್ತಾರೆ. ಚುನಾವಣೆಗೆ ಸಂಬಂಧಿಸಿದ ಕಾನೂನುಗಳೂ ಅವುಗಳಲ್ಲಿ ಒಂದು. ಈ ಕಾನೂನುಗಳನ್ನು ರಾಜಕೀಯ ಸ್ವಾರ್ಥಕ್ಕೆ ತಕ್ಕಂತೆ ತಿದ್ದುಪಡಿ ಮಾಡುತ್ತಾರೆ. ತತ್ವಗಳನ್ನು ಬದಿಗೆ ಸರಿಸುತ್ತಾರೆ. (ತಮ್ಮ ಗೌರವಧನ ಇನ್ನಿತರ ಸವಲತ್ತು ಹೆಚ್ಚಿಸಿಕೊಳ್ಳುವ ಮಸೂದೆಯನ್ನು ಇತ್ತೀಚೆಗೆ ಅಂಗೀಕರಿಸಿದ್ದು ಒಂದು ಉದಾಹರಣೆ).

ಪ್ರಪಂಚದ 22 ದೇಶಗಳಲ್ಲಿ ಕಡ್ಡಾಯ ಮತದಾನ ಜಾರಿಯಲ್ಲಿದೆ ಎಂದು ಸಚಿವರು ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ. ಇವುಗಳಲ್ಲಿ 5 ಯುರೋಪ್ ಖಂಡದ ದೇಶಗಳು ಹಾಗೂ ಭಾರತಕ್ಕಿಂತ ಎಷ್ಟೋ ಚಿಕ್ಕ ದೇಶಗಳು ಎಂಬುದನ್ನು ಮಾತ್ರ ಅವರು ಹೇಳುವುದಿಲ್ಲ. 10 ದೇಶಗಳು ಮಧ್ಯ ಹಾಗೂ ದಕ್ಷಿಣ ಅಮೆರಿಕ ಖಂಡದಲ್ಲಿವೆ. ಒಂದು ದೇಶ ಆಫ್ರಿಕಾ ಖಂಡದ್ದು, 2 ದೇಶಗಳು ಏಷ್ಯಾದಲ್ಲಿ ಹಾಗೂ ಇನ್ನೆರಡು ದೇಶಗಳು ಧ್ರುವ ಪ್ರದೇಶದಲ್ಲಿವೆ. ಕೈಗಾರಿಕೀಕರಣದಲ್ಲಿ ಮುಂದುವರಿದ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಆಸ್ಟ್ರೇಲಿಯ, ಸ್ವಿಟ್ಜರ್ಲೆಂಡ್ ಹಾಗೂ ಸಿಂಗಪುರ ಇವುಗಳಲ್ಲಿ ಸೇರಿವೆ.

ಪ್ರಪಂಚದಲ್ಲೇ ಅತ್ಯಂತ ಹೆಚ್ಚು ನಿಯಮ, ನಿಬಂಧನೆಗಳು ಇರುವ, ಅತಿ ಹೆಚ್ಚು ಪುರುಷ ಪ್ರಧಾನ ಸಮಾಜದ ದೇಶಗಳು ಇವು. ಈಗ ಇಲ್ಲೂ ಕಡ್ಡಾಯ ಮತದಾನವನ್ನು ಪುನರ್ ವಿಮರ್ಶೆ ಮಾಡಲು ಒತ್ತಾಯ ಹೆಚ್ಚುತ್ತಿದೆ. ಕಡ್ಡಾಯ ಮತದಾನದ ಪರವಾದ ಇನ್ನೊಂದು ವಾದವೆಂದರೆ, ಚುನಾವಣೆಗಳಲ್ಲಿ ಮತದಾನದಿಂದ ದೂರ ಉಳಿಯುವ ಒಂದು ವರ್ಗವನ್ನು ಮತ ಹಾಕುವಂತೆ ಈ ಕಾನೂನು ಒತ್ತಾಯಿಸುತ್ತದೆ ಎಂಬುದು. ಮತದಾನದಿಂದ ಸಾಮಾನ್ಯವಾಗಿ ದೂರ ಉಳಿಯುವ ವರ್ಗ ಶ್ರೀಮಂತರು ಮತ್ತು ಅಧಿಕಾರಸ್ಥರು. ಅವರು ಚುನಾವಣೆಯಲ್ಲಿ ಪ್ರಭಾವ ಬೀರುವ ಅಗತ್ಯವಿಲ್ಲದವರು. ಯಾವುದೇ ಸರ್ಕಾರ ಬಂದರೂ ಅದನ್ನು ಕೊಂಡುಕೊಂಡು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಆಲೋಚಿಸುವವರು.

ಸಚಿವರು ಹೇಳುವುದು ಇನ್ನೊಂದು ಗುಂಪಿನ ಬಗ್ಗೆ. ತಮಗೆ ಧ್ವನಿ ಎತ್ತಲು ಆಗದವರನ್ನು ಪಟ್ಟಭದ್ರರು ಮತದಾನ ಮಾಡದಂತೆ ಅಡ್ಡಿಪಡಿಸುತ್ತಾರೆ ಎಂದು ಹೇಳುತ್ತಾರೆ. ಅವರು ಯಾರು ಎಂಬುದು ಪ್ರಶ್ನೆ. ಅವರು ಬಡ ಮತದಾರರು. ಈಗ ನಮ್ಮ ದೇಶದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಯಾವುದೇ ಅಧಿಕಾರಕ್ಕಾಗಿ ಲಾಬಿ ಮಾಡುವುದು ಅಸಾಧ್ಯ. ತೀರ್ಮಾನವೊಂದಕ್ಕೆ ತಮ್ಮ ಅಸಮ್ಮತಿಯನ್ನು ಸೂಚಿಸಲು ಅವರಿಗೆ ಇರುವ ಸಾಧ್ಯತೆಯನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲಾಗಿದೆ.

ಹಾಗಾಗಿ ಬಡವರಿಗೆ ವ್ಯವಸ್ಥೆಯ ಮೇಲೆ ಪ್ರಭಾವ ಬೀರಲು ಇರುವ ಅವಕಾಶವೆಂದರೆ ಚುನಾವಣೆ. ಮತವನ್ನು ಕೊಳ್ಳುವುದು ನಡೆಯುತ್ತಿದ್ದರೂ, ಈ ಹಿಂದೆ ಅನೇಕ ಬಾರಿ ಚುನಾವಣೆಯಲ್ಲಿ ಅಭೂತಪೂರ್ವ ಬದಲಾವಣೆಯನ್ನು ತಂದವರು ತಾವೇ ಎಂಬುದನ್ನು ಆ ವರ್ಗದ ಮತದಾರರು ತೋರಿಸಿಕೊಟ್ಟಿದ್ದಾರೆ. ಆದರೆ ನಿಜವಾಗಿ ಮತದಾನದ ಹಕ್ಕಿನಿಂದ ವಂಚಿತರು ಎಂದರೆ ಮತದಾರರಾಗಿ ನೋಂದಾವಣೆಗೊಳ್ಳದ ವಲಸೆ ಸಮುದಾಯದವರು. ಅವರಿಗೆ ಮತದಾನದ ಹಕ್ಕು ಸಿಗದಂತೆ ಮಾಡಿದ್ದು ಸರ್ಕಾರ.

ಕಡ್ಡಾಯ ಮತದಾನ ಮಾಡದ ಅಪರಾಧಕ್ಕೆ ಯಾವುದೇ ಶಿಕ್ಷೆಯನ್ನೂ ನಿಗದಿಪಡಿಸದ ಸಚಿವರು, ಪಾಸ್‌ಪೋರ್ಟ್‌ಗೆ ಅರ್ಜಿ ಹಾಕುವಾಗ ಹಾಗೂ ಸರ್ಕಾರದ ಸಬ್ಸಿಡಿ ಸವಲತ್ತು ಪಡೆದುಕೊಳ್ಳುವಾಗ ಮತ ಹಾಕದವರು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದ್ದಾರೆ. ಇದು ಸರ್ವಾಧಿಕಾರಿ ಮನೋಭಾವವನ್ನು ಕೆಟ್ಟ ರೀತಿಯಲ್ಲಿ ತೋರಿಸುತ್ತದೆ. ಕಡ್ಡಾಯವಾಗಿರುವ ಕಾನೂನನ್ನು ಉಲ್ಲಂಘಿಸಿದರೆ ಮುಂದೆ ಯಾವ ಪರಿಣಾಮವನ್ನು ಎದುರಿಸಬೇಕು ಎಂಬುದನ್ನು ತಿಳಿಸದೆ ಕೇವಲ ಭಯದ ವಾತಾವರಣವನ್ನು ಸೃಷ್ಟಿಸುತ್ತದೆ.

ಪ್ರಜಾಪ್ರಭುತ್ವದಲ್ಲಿ ಜನ ಮನಃಪೂರ್ವಕವಾಗಿ ಮತದಾನ ಮಾಡಲೇಬೇಕು. ಪ್ರಜಾಪ್ರಭುತ್ವವೆಂದರೆ ಸ್ವಾತಂತ್ರ್ಯ. ಗಾಂಧೀಜಿ ಸದಾ ಅಸಹ್ಯಪಟ್ಟುಕೊಳ್ಳುತ್ತಿದ್ದ ಕಡ್ಡಾಯ ಮತದಾನವು ಪ್ರಜಾಪ್ರಭುತ್ವಕ್ಕೆ ತದ್ವಿರುದ್ಧ. ಹಕ್ಕುಗಳ ಪರಿಕಲ್ಪನೆಯಲ್ಲಿ, ಆಯ್ಕೆಗಾಗಿ ಮತದಾನವು ಪ್ರಜೆಯ ಮೂಲಭೂತ ಹಕ್ಕು. ಹಾಗೆಯೇ ಮತದಾನ ಮಾಡದೇ ಇರುವುದು ಕೂಡ ಪ್ರಜೆಯ ಮೂಲಭೂತ ಹಕ್ಕು ಎಂಬುದನ್ನು ಅರಿತುಕೊಳ್ಳಬೇಕು. ಪ್ರಜೆಯ ಈ ಮೂಲಭೂತವಾದ ಹಕ್ಕನ್ನು ಪ್ರಶ್ನಿಸುವ, ನಿಬಂಧನೆಗೆ ಒಳಪಡಿಸುವ ಯಾವುದೇ ಕ್ರಿಯೆ ನೈಜ ಪ್ರಜಾಪ್ರಭುತ್ವದ ಅಂಶಗಳನ್ನು ನಾಶಪಡಿಸುತ್ತದೆ.

ಈಗ ಜನರ ಭಾಗವಹಿಸುವಿಕೆ ತುಂಬಾ ದುರ್ಬಲವಾಗಿದೆ ಎನ್ನುವುದು ಪಾಟೀಲರ ವಾದ. ಅವರು ಈ ಒಂದು ಕುಂಟು ನೆಪಕ್ಕೆ ಜೋತು ಬಿದ್ದಿದ್ದಾರೆ ಮತ್ತು ಕಡ್ಡಾಯ ಮತದಾನ ಜನರ ಭಾಗವಹಿಸುವಿಕೆಯನ್ನು ಸದೃಢಗೊಳಿಸುತ್ತದೆ ಎನ್ನುವ ಸುಳ್ಳು ಕನಸಿನ ಬೀಜವನ್ನು ಬಿತ್ತುತ್ತಿದ್ದಾರೆ. ಐದು ವರ್ಷಕ್ಕೊಮ್ಮೆ ಜನರನ್ನು ಒತ್ತಾಯದಿಂದ ಮತಗಟ್ಟೆಗೆ ಕರೆಸಿ ಮತ ಹಾಕಿಸುವ ಮೂಲಕ ಜನ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಚೆನ್ನಾಗಿ ಭಾಗವಹಿಸುತ್ತಾರೆ ಎಂದುಕೊಳ್ಳುವುದು ಒಂದು ದೊಡ್ಡ ಮಿಥ್ಯೆ.

ಇದ್ದಕ್ಕಿದ್ದಂತೆ, ಗ್ರಾಮ ಸಭೆಗಳು ಫಲಪ್ರದವಾಗುತ್ತವೆ ಮತ್ತು ರಚನಾತ್ಮಕವಾಗಿ ನಡೆಯುತ್ತವೆ ಎಂದು ಜನ ಭಾವಿಸುತ್ತಾರೆ ಎನ್ನುವುದೂ ನಿಜವಲ್ಲ. ನಿಜವಾದ ಸಮಸ್ಯೆ ಎಂದರೆ, ಗ್ರಾಮ ಪಂಚಾಯಿತಿಗಳನ್ನು ಶಕ್ತಿಹೀನವಾಗಿಸಲಾಗಿದೆ, ಗ್ರಾಮ ಸಭೆಗಳ ಹಕ್ಕುಗಳನ್ನು ಅಪಹರಿಸಲಾಗಿದೆ. ಇಂದು ತೀರ್ಮಾನಿಸುವ ಶಕ್ತಿ ಮತ್ತು ಅಧಿಕಾರದ ಕೇಂದ್ರಗಳು ಶಾಸಕರು, ಸಂಸದರ ಗಂಟಾಗಿ ಹೋಗಿವೆ. ಇದು ಒಂದು ರೀತಿ ಮನೆಗೆ ಹಾಲು ಹಂಚುವ ಹುಡುಗನೊಡನೆ, ಎಲ್ಲೋ ತೀರ್ಮಾನವಾಗುವ ಹಾಲಿನ ಗುಣ, ಅಳತೆ, ರುಚಿಯ ಬಗ್ಗೆ ಚರ್ಚಿಸಿದಂತಾಗುತ್ತದೆ. ಆದರೆ ಹಾಲು ಹಾಕುವ ಹುಡುಗನಿಗೆ ಅವುಗಳ ಮೇಲೆ ನಿಯಂತ್ರಣ ಇರದಿದ್ದಾಗ ಆತ ಏನು ಉತ್ತರ ಕೊಟ್ಟಾನು?

ಇದೇ ರೀತಿ ಯಾವುದೇ ಅಧಿಕಾರ ಇಲ್ಲದ ಗ್ರಾಮ ಸಭೆ ಹಾಗೂ ಪಂಚಾಯಿತಿಗಳಿಗೆ ಎಲ್ಲೋ ಆದ ತೀರ್ಮಾನಗಳ ಬಗ್ಗೆ ವಿವರಣೆ ಕೇಳುವುದು ಎಷ್ಟು ಸಮಂಜಸ? ಅವುಗಳ ಸ್ಥಿತಿಯೂ ಹಾಲು ವಿತರಕ ಹುಡುಗನಂತಿದೆ. ಇಂದಿನ ಮುಖ್ಯ ಸವಾಲು ಗ್ರಾಮ ಪಂಚಾಯಿತಿಗಳು ಮತ್ತು ಗ್ರಾಮ ಸಭೆಗಳನ್ನು ಸದೃಢಗೊಳಿಸುವುದರಲ್ಲಿದೆ. ಕೆಲಸ ನಿರ್ವಹಿಸಲು ಅವುಗಳಿಗೆ ಅಗತ್ಯವಾದ ಹಣಕಾಸು, ಕಾರ್ಯಕ್ರಮ ಮತ್ತು ಸಿಬ್ಬಂದಿಯನ್ನು ಒದಗಿಸಬೇಕು. ಈ ಎಲ್ಲವನ್ನೂ ಸಾಧಿಸಲು ರಮೇಶ್ ಕುಮಾರ್ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನ ಮಾಡುವಲ್ಲಿ ಉತ್ತರವಿದೆ.

ಜನರ ನೈಜ ಅಗತ್ಯಗಳನ್ನು ಪೂರೈಸಲು ಹಣಕಾಸಿನ ಗರಿಷ್ಠ ಸದ್ಬಳಕೆ, ಸಾಮಾಜಿಕ ನ್ಯಾಯದ ನೆಲೆಯಲ್ಲಿ ಹಳ್ಳಿಗಳ ಸಮಗ್ರ ಅಭಿವೃದ್ಧಿಯಲ್ಲಿ ಅಲ್ಲಿಯ ಎಲ್ಲರನ್ನೂ ಒಳಗೊಳ್ಳಲು ಸಾಧ್ಯವಾಗುತ್ತದೆ. ಸಚಿವ ಪಾಟೀಲರಿಗೆ ಪ್ರಜಾಪ್ರಭುತ್ವದ ವಿಕೇಂದ್ರೀಕರಣ, ಅಧಿಕಾರ ಮೇಲ್ಮಟ್ಟದಿಂದ ಕೆಳಮಟ್ಟಕ್ಕೆ ಹರಿಯುವುದರ ಬಗ್ಗೆ ಒಂದು ಸಾಮಾನ್ಯ ದೃಷ್ಟಿಕೋನ ಮತ್ತು ಬದ್ಧತೆ ಇದ್ದಂತಿಲ್ಲ. ಅದರ ಬದಲು ಅವರ ಆಶಯಗಳು ‘ಮೋದಿ ಸೂತ್ರ’ದ ಆಡಳಿತದತ್ತ ನಡೆಯುವಂತಿವೆ. ಅದು ಒಂದು ರೀತಿ ‘ಕುದುರೆ ಮುಂದೆ ಕ್ಯಾರೆಟ್ ಕಟ್ಟಿದ ಕೋಲಿನ’ ನೀತಿ ಹೇಳುವಂತಿದೆ. ಹೆದರಿಕೆಯ ಜೊತೆ ಕಡ್ಡಾಯ ಮತದಾನ ಮಾಡುವುದನ್ನು ಕೋಲು ಸಂಕೇತಿಸಿದರೆ, ಸ್ಪಷ್ಟವಿಲ್ಲದ ಆರ್ಥಿಕ ಲಾಭಗಳ ಸಿಹಿಯಾದ ಭರವಸೆಗಳು ಕ್ಯಾರೆಟ್ ಆಗಿ ಮುಂದೆ ನಿಂತಿವೆ.

ರಮೇಶ್ ಕುಮಾರ್ ಸಮಿತಿಯ ಹಣೆಬರಹ ಏನು ಎನ್ನುವುದು ನಮಗಿನ್ನೂ ತಿಳಿಯುತ್ತಿಲ್ಲ. ಆದರೆ ಈವರೆಗಿನ ಬೆಳವಣಿಗೆಯೆಲ್ಲ ಪಂಚಾಯತ್ ರಾಜ್‌ನ ಹಿಮ್ಮುಖ ನಡೆಯಂತೆ ತೋರುತ್ತಿದೆ. ಗ್ರಾಮ ಸ್ವರಾಜ್ ಕನಸಿನ ಗಂಟಾಗಿ ಉಳಿಯುವ ಲಕ್ಷಣಗಳು ಗೋಚರಿಸುತ್ತಿವೆ.
(ಲೇಖಕಿ ಸಾಮಾಜಿಕ, ರಾಜಕೀಯ ಕಾರ್ಯಕರ್ತೆ ಮತ್ತು ರಮೇಶ್ ಕುಮಾರ್ ಸಮಿತಿ ಸದಸ್ಯೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.