ಇವರ ಹೆಸರು ಇಸ್ಮಾಯಿಲ್ ಕಾಣಂತೂರು. ಶಾಲೆಗೆ ಹೋಗಿ ಓದಿದ್ದಕ್ಕಿಂತ ಬದುಕಿನ ಪಾಠಶಾಲೆಯಲ್ಲಿ ಕಲಿತಿದ್ದೇ ಹೆಚ್ಚು. ದಕ್ಷಿಣ ಕನ್ನಡ ಜಿಲ್ಲೆ ಮುಡಿಪು ಬಳಿಯ ಕಾಣಂತೂರು ಗ್ರಾಮ ಪಂಚಾಯಿತಿ ವಾಣಿಜ್ಯ ಸಂಕೀರ್ಣದಲ್ಲಿ ಗುಜರಿ ಅಂಗಡಿ ಹೊಂದಿದ್ದಾರೆ. ಅಲ್ಲಿಂದ 3 ಕಿ.ಮೀ. ಅಂತರದಲ್ಲಿ ಬಾಳೆಪುಣಿಯ ಹೂಹಾಕುವ ಕಲ್ಲು ಗ್ರಾಮದಲ್ಲಿ ಮನೆ ಇದೆ. ಎರಡೂ ಕಡೆ ಪುಟ್ಟ ಗ್ರಂಥಾಲಯ ರೂಪಿಸಿದ್ದಾರೆ ಈ ಗುಜರಿ ವ್ಯಾಪಾರಿ.

ಗುಜರಿಗೆ ಎಲ್ಲ ಬಗೆಯ ವಸ್ತುಗಳೂ ಬರುತ್ತವೆ. ಅವುಗಳಲ್ಲಿ ಪುಸ್ತಕಗಳೂ ಹೇರಳವಾಗಿರುತ್ತವೆ. ಗುಜರಿ ಅಂಗಡಿಯಲ್ಲಿ ಬಿದ್ದಿರುತ್ತಿದ್ದ ಪುಸ್ತಕಗಳನ್ನು ಕೊಡುವಂತೆ ಮಕ್ಕಳು ಬಂದು ಕೇಳುತ್ತಿದ್ದರಂತೆ. ಅವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಇವರು, ಗುಜರಿಗೆ ಬರುವ ಪುಸ್ತಕಗಳನ್ನು ಎತ್ತಿಡಲು ಆರಂಭಿಸಿದರು. ಹತ್ತು ವರ್ಷಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ‘ಗುಜರಿ ಪುಸ್ತಕ’ಗಳು ಸಂಗ್ರಹವಾಗಿವೆ. ಈಗ ಅದು ಗ್ರಂಥಾಲಯಗಳ ರೂಪ ಪಡೆದುಕೊಂಡಿದೆ.

ಬಡ ಇಸ್ಮಾಯಿಲ್ ಅವರ ಬದುಕಿಗೆ ಗುಜರಿ ವ್ಯಾಪಾರ ಆಸರೆಯಾಗಿದ್ದರೆ, ‘ಗುಜರಿ ಗ್ರಂಥಾಲಯ‘ ಅವರಿಗೆ ಕೀರ್ತಿಯನ್ನೂ ತಂದುಕೊಡುತ್ತಿದೆ.

‘ನಮ್ಮದು ಬಡ ಕುಟುಂಬ. ಹಣ್ಣಿನ ವ್ಯಾಪಾರ ಮಾಡುತ್ತಿದ್ದೆ. ಉದ್ರಿ ಮಾರಾಟವೇ ಹೆಚ್ಚಾಗಿತ್ತು. ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ನಿತ್ಯ ನನ್ನ ಅಂಗಡಿಗೆ ಬರುತ್ತಿದ್ದ ಮುಡಿಪು ಶಾಲೆಯ ಪ್ರಾಚಾರ್ಯ ಬಸವರಾಜ ಪಲ್ಲಕ್ಕಿ, ಗುಜರಿ ವ್ಯಾಪಾರ ಆರಂಭಿಸುವಂತೆ ಸಲಹೆ ನೀಡಿದರು. ಹಣ್ಣಿನ ವ್ಯಾಪಾರ ಬಿಟ್ಟು ಗುಜರಿ ವ್ಯಾಪಾರ ಶುರುಮಾಡಿದೆ. ಇದರಿಂದ ನನ್ನ ಆರ್ಥಿಕ ಮಟ್ಟ ಸುಧಾರಿಸಿತು’ ಎಂದು ಮೆಲಕು ಹಾಕುವ ಅವರು, ತಮ್ಮ ಗ್ರಂಥಾಲಯ ಪ್ರೀತಿಯ ಬಗ್ಗೆ ಹೇಳುವುದು ಹೀಗೆ...

ಎರಡು ವರ್ಷಗಳಿಂದ ಗುಜರಿ ಅಂಗಡಿಯಲ್ಲಿ, ಒಂದು ವರ್ಷದಿಂದ ಮನೆಯಲ್ಲಿ ಪುಟ್ಟ ಗ್ರಂಥಾಲಯ ಆರಂಭಿಸಿದ್ದೇನೆ. ಪುಸ್ತಕ ಇಡಲು ಜಾಗ ಸಾಲುತ್ತಿಲ್ಲ. ಹೀಗಾಗಿ ಬಹಳಷ್ಟು ಪುಸ್ತಕಗಳನ್ನು ಗೋಣಿ ಚೀಲಗಳಲ್ಲಿ ತುಂಬಿ ಇಟ್ಟಿದ್ದೇನೆ. ಮಕ್ಕಳು ಕುಳಿತು ಓದಲು ಅನುಕೂಲವಾಗುವಂತೆ ಮನೆಯ ಆವರಣದಲ್ಲಿ ಚಪ್ಪರ ಹಾಕಿಸಿದ್ದೇನೆ. ಒಂದು ಟೇಬಲ್– ಕುರ್ಚಿ ಇಟ್ಟಿದ್ದೇನೆ. ನಿತ್ಯ 25–30 ಮಕ್ಕಳು ಬಂದು ಓದುತ್ತಾರೆ.

ಬಾಲ್ಯದಲ್ಲಿ ನಾನಂತೂ ಕಲಿಯಲಿಲ್ಲ. ಮಕ್ಕಳಾದರೂ ಕಲಿಯಲಿ ಎಂಬ ಕಾರಣಕ್ಕೆ ಇದನ್ನೆಲ್ಲ ಮಾಡುತ್ತಿದ್ದೇನೆ. ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಈ ಬಾರಿ ನಮ್ಮ ಮನೆಯ ಅಂಗಳದಲ್ಲೇ ಆಚರಿಸಿದೆವು. ನನಗೆ ಈ ವರೆಗೆ ಕರ್ನಾಟಕ, ಕೇರಳದಲ್ಲಿ 32 ಸನ್ಮಾನ ನಡೆದಿದ್ದು, ಅಲ್ಲಿ ಕೊಡುವ ಪುಸ್ತಕಗಳನ್ನೂ ತಂದು ಈ ಗ್ರಂಥಾಲಯಗಳಲ್ಲಿ ಇಡುತ್ತೇನೆ.

ಈ ಗ್ರಂಥಾಲಯಗಳಲ್ಲಿನ ಪುಸ್ತಕಗಳನ್ನು ಯಾರು ಬೇಕಾದರೂ ಯರವಲು ಪಡೆದುಕೊಂಡು ಹೋಗಬಹುದು. ತಮಗೆ ಇಷ್ಟದ ಪುಸ್ತಕಗಳನ್ನು ಮಕ್ಕಳು ಶಾಶ್ವತವಾಗಿ ತಮ್ಮ ಬಳಿಯೇ ಇಟ್ಟುಕೊಳ್ಳಬಹುದು. ಇಲ್ಲಿ ನಿರ್ವಹಣೆ ಶುಲ್ಕ, ದಾಖಲಾತಿ ಯಾವುದೂ ಇಲ್ಲ.

ಗಾಂಧಿ ತತ್ವದಲ್ಲಿ ವ್ಯಾಪಾರ ಮಾಡುವ ಕಾರಣ ನನ್ನನ್ನು ಊರಿನ ಜನ ’ಗಾಂಧಿವಾದಿ ಇಸ್ಮಾಯಿಲ್‘ ಎಂದೇ ಕರೆಯುತ್ತಾರೆ. ಇದು ನನಗೆ ಖುಷಿ ಕೊಡುತ್ತದೆ ಎಂದು ಮುಗುಳ್ನಕ್ಕರು 50 ವರ್ಷ ವಯಸ್ಸಿನ ಇಸ್ಮಾಯಿಲ್.

ಇವರಿಗೆ ಮೂವರು ಗಂಡು, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಒಬ್ಬ ಮಗ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರೂ ಪುತ್ರಿಯರಿಗೆ ವಿವಾಹ ಆಗಿದೆ. ಪತ್ನಿ ಜಮೀಲಾ, ಇಬ್ಬರು ಪುತ್ರರು ತಮ್ಮ ಸೇವೆಗೆ ಕೈಜೋಡಿಸಿದ್ದಾಗಿ ಇವರು ಹೇಳುತ್ತಾರೆ.

ನಮ್ಮ ಹಾಗೆ ಬಡ ಮಕ್ಕಳೂ ಇದ್ದಾರೆ. ಅವರ ಜ್ಞಾನದ ಪರಿಧಿ ಬೆಳೆಯಲಿ. ಅವರು ಓದಿ ಉತ್ತಮ ಬದುಕು ರೂಪಿಸಿಕೊಳ್ಳಲಿ ಎಂಬ ಕಾರಣಕ್ಕೆ ಈ ಸಣ್ಣ ಸೇವೆಯಲ್ಲಿ ತೊಡಗಿದ್ದೇನೆ. ಬಡ ಮಕ್ಕಳಿಗೆ ಶಾಲಾ ಪುಸ್ತಕ ಕೊಡಿಸಿದ್ದೂ ಇದೆ. ಈಗ ಕೆಲ ದಾನಿಗಳು ಹಣ ಕೊಟ್ಟು ತಮ್ಮ ಲೆಕ್ಕದಲ್ಲಿ ಮಕ್ಕಳಿಗೆ ಪುಸ್ತಕ ಕೊಡುವಂತೆ ಹೇಳುತ್ತಿದ್ದಾರೆ. ದಾನಿಗಳ ನೆರವನ್ನು ಬಡ ಮಕ್ಕಳಿಗೆ ತಲುಪಿಸುತ್ತಿದ್ದೇನೆ; ಇದಕ್ಕೆ ಸಂಘ–ಸಂಸ್ಥೆಗಳೂ ಕೈಜೋಡಿಸಿವೆ ಎಂದು ವಿನಮ್ರರಾಗಿ ಹೇಳುತ್ತಾರೆ ಅವರು.

ಇಸ್ಮಾಯಿಲ್ ಅವರ ಸಂಪರ್ಕ ಸಂಖ್ಯೆ: 99641 57505

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.