ಅಡಿಲೇಡ್: ಆಸ್ಟ್ರೇಲಿಯಾ ನೆಲದಲ್ಲಿ ಏಳು ದಶಕಗಳ ನಂತರ ಟೆಸ್ಟ್ ಸರಣಿ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದ ಭಾರತ ತಂಡ ಈಗ ಏಕದಿನ ಸರಣಿ ಸೋಲುವ ಭೀತಿ ಎದುರಿಸುತ್ತಿದೆ.

ಸಿಡ್ನಿಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ನಿರಾಸೆ ಕಂಡಿತ್ತು. ಸರಣಿ ಜಯದ ಆಸೆ ಜೀವಂತವಾಗಿಟ್ಟುಕೊಳ್ಳಬೇಕಾದರೆ ಮಂಗಳವಾರದ ಹೋರಾಟದಲ್ಲಿ ವಿರಾಟ್ ಕೊಹ್ಲಿ ಬಳಗ ಗೆಲ್ಲಲೇಬೇಕು.

ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆಯುವ ಎರಡನೇ ಪಂದ್ಯ ಪ್ರವಾಸಿ ಪಡೆಯ ಪಾಲಿಗೆ ‘ಮಾಡು ಇಲ್ಲವೇ ಮಡಿ’ ಹೋರಾಟವೆನಿಸಿದೆ.

ಸಂಕ್ರಾಂತಿ ಹಬ್ಬದಂದು ನಡೆಯುತ್ತಿರುವ ಈ ಹಣಾಹಣಿಯಲ್ಲಿ ಭಾರತ ಎಳ್ಳು, ಬೆಲ್ಲದ ಸಿಹಿ ಸವಿಯುತ್ತದೆಯೋ ಅಥವಾ ಕಹಿ ಅನುಭವಿಸಲಿದೆಯೋ ಎಂಬ ಕುತೂಹಲ ಅಭಿಮಾನಿಗಳಲ್ಲಿ ಗರಿಗೆದರಿದೆ.

ಮೊದಲ ಹೋರಾಟದಲ್ಲಿ ಪ್ರವಾಸಿ ಪಡೆ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿತ್ತು. ಶಿಖರ್ ಧವನ್, ಕೊಹ್ಲಿ ಮತ್ತು ಅಂಬಟಿ ರಾಯುಡು ವಿಕೆಟ್ ನೀಡಲು ಅವಸರಿಸಿದ್ದರು! ಹೀಗಾಗಿ ನಾಲ್ಕನೇ ಕ್ರಮಾಂಕದ ಆಟಗಾರ ಮಹೇಂದ್ರ ಸಿಂಗ್ ಧೋನಿ ನಾಲ್ಕನೇ ಓವರ್‌ನಲ್ಲೇ ಬ್ಯಾಟಿಂಗ್ ಮಾಡಲು ಅಂಗಳಕ್ಕಿಳಿಯಬೇಕಾಗಿತ್ತು.

ಎಸ್‌ಸಿಜಿಯಲ್ಲಿ ಧೋನಿ ಮತ್ತು ರೋಹಿತ್ ಅಮೋಘ ಜೊತೆಯಾಟ ಆಡಿ ಅಭಿಮಾನಿಗಳನ್ನು ರಂಜಿಸಿದ್ದರು. ಹೀಗಿದ್ದರೂ ತಂಡ ಸೋಲಿನಿಂದ ಪಾರಾಗಿರಲಿಲ್ಲ.

ಹೆಣ್ಣುಮಗುವಿನ ತಂದೆಯಾದ ಬಳಿಕ ಮೊದಲ ಶತಕ ಸಿಡಿಸಿ ಸಂಭ್ರಮಿಸಿದ್ದ ರೋಹಿತ್, ಈ ಪಂದ್ಯದಲ್ಲೂ ಗರ್ಜಿಸಲು ಸಿದ್ಧರಾಗಿದ್ದಾರೆ. ಧೋನಿ ‘ಧಮಾಕ’ ಕಣ್ತುಂಬಿಕೊಳ್ಳಲೂ ಕ್ರಿಕೆಟ್ ಪ್ರಿಯರು ಕಾತರರಾಗಿದ್ದಾರೆ.

ಇವರ ಜೊತೆ ಧವನ್, ಕೊಹ್ಲಿ ಮತ್ತು ರಾಯುಡು ಅಬ್ಬರಿಸಬೇಕು. ಹಾಗಾದಲ್ಲಿ ಮಾತ್ರ ಅಡಿಲೇಡ್ ಓವಲ್ ಮೈದಾನದಲ್ಲಿ ರನ್ ಮಳೆ ಸುರಿಯಲಿದೆ. ದಿನೇಶ್ ಕಾರ್ತಿಕ್, ಕೇದಾರ್ ಜಾಧವ್ ಮತ್ತು ರವೀಂದ್ರ ಜಡೇಜ ಅವರೂ ನಿರೀಕ್ಷೆಗೆ ಅನುಗುಣವಾಗಿ ಆಡಬೇಕಿದೆ.

ಬೌಲಿಂಗ್‌ನಲ್ಲಿ ಭಾರತ ಶಕ್ತಿಯುತವಾಗಿದೆ. ಮೊದಲ ಪಂದ್ಯದಲ್ಲಿ ಎದುರಾಳಿಗಳನ್ನು 300ರನ್‌ಗಳ ಗಡಿಯೊಳಗೆ ಕಟ್ಟಿಹಾಕಿದ್ದು ಇದಕ್ಕೆ ನಿದರ್ಶನ.

ಜಸ್‌ಪ್ರೀತ್ ಬೂಮ್ರಾ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್ ವಿಭಾಗದ ಜವಾಬ್ದಾರಿ ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಮತ್ತು ಖಲೀಲ್ ಅಹ್ಮದ್ ಅವರ ಹೆಗಲಿಗೆ ಬಿದ್ದಿದೆ. ಇದನ್ನು ಇವರು ಯಶಸ್ವಿಯಾಗಿ ನಿಭಾಯಿಸಬೇಕಿದೆ.

ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜ ಮತ್ತೊಮ್ಮೆ ಮಿಂಚಲು ಕಾಯುತ್ತಿದ್ದಾರೆ.

ಸರಣಿ ಜಯದ ಹಂಬಲ: ಮೊದಲ ಪಂದ್ಯದಲ್ಲಿ ಗೆದ್ದು ಬೀಗಿರುವ ಆ್ಯರನ್ ಫಿಂಚ್ ಬಳಗ ಎರಡನೇ ಹಣಾಹಣಿಯಲ್ಲೂ ಪ್ರವಾಸಿ ಪಡೆಗೆ ಸೋಲಿನ ರುಚಿ ತೋರಿಸಲು ತಯಾರಾಗಿದೆ.

ಉಸ್ಮಾನ್ ಖ್ವಾಜಾ, ಶಾನ್ ಮಾರ್ಷ್ ಮತ್ತು ಪೀಟರ್ ಹ್ಯಾಂಡ್ಸ್‌ಕಂಬ್ ಉತ್ತಮ ಲಯದಲ್ಲಿರುವುದು ಈ ತಂಡಕ್ಕೆ ವರವಾಗಿ ಪರಿಣಮಿಸಿದೆ. ಇವರು ಮೊದಲ ಹಣಾಹಣಿಯಲ್ಲಿ ಅರ್ಧಶತಕಗಳನ್ನು ಗಳಿಸಿ ಗಮನ ಸೆಳೆದಿದ್ದರು.

ಮಾರ್ಕಸ್ ಸ್ಟೊಯಿನಿಸ್ ಕೂಡಾ ಮಿಂಚಿದ್ದರು. ಆದರೆ ನಾಯಕ ಫಿಂಚ್ ಮತ್ತು ಉಪ ನಾಯಕ ಅಲೆಕ್ಸ್ ಕೇರಿ ಅವರು ಲಯ ಕಂಡುಕೊಳ್ಳಬೇಕಿದೆ.

ಹೊಟ್ಟೆ ನೋವಿನಿಂದ ಚೇತರಿಸಿಕೊಂಡಿರುವ ಮಿಷೆಲ್ ಮಾರ್ಷ್ ಈ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಒಂದೊಮ್ಮೆ ಅವರು ಆಡಿದರೆ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳ ಶಕ್ತಿ ಹೆಚ್ಚಲಿದೆ.

ಆತಿಥೇಯರ ಬೌಲಿಂಗ್ ಪಡೆಯೂ ಬಲಿಷ್ಠವಾಗಿದೆ. ಸಿಡ್ನಿಯಲ್ಲಿ ನಡೆದಿದ್ದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಜೇಸನ್ ಬೆಹ್ರನ್‌ಡ್ರಾಫ್ ಎರಡು ವಿಕೆಟ್ ಉರುಳಿಸಿದ್ದರು. ಜೈ ರಿಚರ್ಡ್ಸನ್ ನಾಲ್ಕು ವಿಕೆಟ್ ಕಬಳಿಸಿದ್ದರು. ಇವರು ಮತ್ತೊಮ್ಮೆ ಕೊಹ್ಲಿ ಪಡೆಯ ಬ್ಯಾಟಿಂಗ್ ಶಕ್ತಿಗೆ ಪೆಟ್ಟು ನೀಡುವ ಹುಮ್ಮಸ್ಸಿನಲ್ಲಿದ್ದಾರೆ. ಪೀಟರ್ ಸಿಡ್ಲ್, ಮಾರ್ಕಸ್ ಸ್ಟೊಯಿನಿಸ್ ಮತ್ತು ನೇಥನ್ ಲಯನ್ ಅವರ ಬಲವೂ ತಂಡಕ್ಕಿದೆ.

ಅಡಿಲೇಡ್ ಅಂಗಳದಲ್ಲಿ ಉಭಯ ತಂಡಗಳು ಇದುವರೆಗೆ ಐದು ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಆಸ್ಟ್ರೇಲಿಯಾ ನಾಲ್ಕರಲ್ಲಿ ವಿಜಯಿಯಾಗಿದೆ. ಇದನ್ನು ಗಮನಿಸಿದರೆ ಮಂಗಳವಾರದ ಪೈಪೋಟಿಯಲ್ಲೂ ಆತಿಥೇಯರಿಗೆ ಗೆಲುವಿನ ಅವಕಾಶ ಹೆಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.