ಬ್ಯಾಂಕಾಕ್: ಸತತ ಎರಡನೇ ದಿನವೂ ಸೋಲಿನ ಸುಳಿಗೆ ಬಿದ್ದ ಭಾರತದ ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಅವರು ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್ನಿಂದ ಬಹುತೇಕ ಹೊರಬಿದ್ದರು. ಗುರುವಾರ ನಡೆದ ‘ಬಿ’ ವಿಭಾಗದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಸಿಂಧು ತಾಯ್ಲೆಂಡ್ನ ರಚನಾಕ್ ಇಂಟನನ್ಗೆ 18-21, 13-21ರಲ್ಲಿ ಮಣಿದರೆ ಶ್ರೀಕಾಂತ್ ತಾಯ್ವಾನ್ನ ವಾಂಗ್ ತ್ಸು ವೀ ಎದುರು 19-21, 21-9, 21-19ರಲ್ಲಿ ಸೋತರು. ಬುಧವಾರ ನಡೆದ ಪಂದ್ಯಗಳಲ್ಲಿ ಸಿಂಧು ಮತ್ತು ಶ್ರೀಕಾಂತ್ ಎದುರಾಳಿಗಳ ವಿರುದ್ಧ ಹೋರಾಡಿ ಸೋತಿದ್ದರು.

ವಾರದ ಹಿಂದೆ ನಡೆದ ಥಾಯ್ಲೆಂಡ್ ಓಪನ್ ಟೂರ್ನಿಯಲ್ಲಿ ರಚನಾಕ್ ಎದುರು ನೀರಸ ಆಟವಾಡಿದ್ದ ಸಿಂಧು ಗುರುವಾರವೂ ನಿರಾಸೆ ಅನುಭವಿಸಿದರು. ಮೂರನೇ ಶ್ರೇಯಾಂಕದ ಆಟಗಾರ್ತಿ ಎದುರು ಮೊದಲ ಗೇಮ್ನಲ್ಲಿ ಸ್ವಲ್ಪ ಪ್ರತಿರೋಧ ತೋರಿದರೂ ಎರಡನೇ ಗೇಮ್ನಲ್ಲಿ ಕಳಪೆ ಆಟವಾಡಿದರು. ಆರಂಭದಲ್ಲಿ 5–2ರ ಮುನ್ನಡೆ ಗಳಿಸಿದ ಸಿಂಧು ನಂತರ ಅದನ್ನು 11–6ಕ್ಕೆ ಏರಿಸಿ ಭರವಸೆಯೊಂದಿಗೆ ವಿರಾಮಕ್ಕೆ ತೆರಳಿದರು. ಆದರೆ ವಿರಾಮದ ನಂತರ ರಚನಾಕ್ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಛಲದಿಂದ ಹೋರಾಡಿದ ಅವರು ಸತತ ಪಾಯಿಂಟ್ಗಳನ್ನು ಗಳಿಸುವುದರೊಂದಿಗೆ 14–14ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಆದರೆ ಸಿಂಧು ಕೂಡ ಪಟ್ಟು ಬಿಡಲಿಲ್ಲ. 18–17ರ ಮುನ್ನಡೆ ಸಾಧಿಸಿದ ಅವರು ಗೇಮ್ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ಆಘಾತ ನೀಡಿ ನಾಲ್ಕು ಪಾಯಿಂಟ್ಗಳನ್ನು ಗಳಿಸಿದ ರಚನಾಕ್ ಮೇಲುಗೈ ಸಾಧಿಸಿದರು.

ಎರಡನೇ ಗೇಮ್ನಲ್ಲೂ ರಚನಾಕ್ ಅಮೋಘ ಆಟ ಮುಂದುವರಿಸಿದರು. ಹೀಗಾಗಿ ವಿರಾಮದ ವೇಳೆ 11–8ರ ಮುನ್ನಡೆ ಗಳಿಸಲು ಅವರಿಗೆ ಸಾಧ್ಯವಾಯಿತು. ತಿರುಗೇಟು ನೀಡಲು ಪ್ರಯತ್ನಿಸಿದ ಸಿಂಧು ಸತತ ಪಾಯಿಂಟ್ಗಳನ್ನು ಕಲೆ ಹಾಕಿ ಹಿನ್ನಡೆಯನ್ನು 11–12ಕ್ಕೆ ಇಳಿಸಿಕೊಂಡರು. ಆದರೆ ಪಂದ್ಯವನ್ನು ಬಿಟ್ಟುಕೊಡಲು ರಚನಾಕ್ ಸಿದ್ಧ ಇರಲಿಲ್ಲ. 15–13ರ ಮುನ್ನಡೆ ಗಳಿಸಿದ್ದ ವೇಳೆ ಸತತ ಆರು ಪಾಯಿಂಟ್ಗಳನ್ನು ಗಳಿಸಿದ ಅವರು ಪಂದ್ಯ ಗೆದ್ದು ಸಂಭ್ರಮಿಸಿದರು.

ಶ್ರೀಕಾಂತ್ ಗೆಲುವಿನ ಆರಂಭ
ಬುಧವಾರ ಆ್ಯಂಟೊನ್ಸೆನ್ ಎದುರು ಹೋರಾಡಿ ಸೋತಿದ್ದ ಶ್ರೀಕಾಂತ್ ಗುರುವಾರ ಮೊದಲ ಗೇಮ್ನಲ್ಲಿ ಗೆಲುವು ಸಾಧಿಸಿ ಭರವಸೆ ಮೂಡಿಸಿದರು. ನಂತರ ಲಯ ಕಳೆದುಕೊಂಡರು. ಮೊದಲ ಗೇಮ್ನ ಆರಂಭದಿಂದಲೇ ವಾಂಗ್ ಅತ್ಯುತ್ತಮ ಪೈಪೋಟಿ ನೀಡಿದರು. ಹೀಗಾಗಿ ಗೇಮ್ 5–5, 9–9ರ ಸಮಬಲದಲ್ಲಿ ಸಾಗಿತು. ವಿರಾಮಕ್ಕೆ ತೆರಳುವಾಗ ಶ್ರೀಕಾಂತ್ 11–10ರ ಮುನ್ನಡೆ ಸಾಧಿಸಿದರು. ನಂತರ ಮುನ್ನಡೆ 15–11ಕ್ಕೆ ಏರಿಸಿಕೊಂಡರು. ಸುದೀರ್ಘ ರ್ಯಾಲಿಗಳಲ್ಲಿ ಪಾಯಿಂಟ್ ಕಲೆ ಹಾಕಿದ ಅವರು ಮುನ್ನಡೆಯನ್ನು 17–12ಕ್ಕೆ ಏರಿಸಿದ ನಂತರ ಗೇಮ್ ಗೆದ್ದುಕೊಂಡರು.

ಎರಡನೇ ಗೇಮ್ನಲ್ಲಿ ಇಬ್ಬರೂ ಆಟಗಾರರು ಅಮೋಘ ರ್ಯಾಲಿಗಳ ಮೂಲಕ ಪಾಯಿಂಟ್ಗಳಿಗಾಗಿ ಸೆಣಸಾಡಿದರು. ಆದರೆ 9–5ರ ಮುನ್ನಡೆ ಸಾಧಿಸಲು ವಾಂಗ್ಗೆ ಸಾಧ್ಯವಾಯಿತು. ನಂತರ ಶ್ರೀಕಾಂತ್ ಸ್ವಯಂ ತಪ್ಪುಗಳನ್ನು ಎಸಗಿದ್ದರಿಂದ ವಾಂಗ್ ಮುನ್ನಡೆ 11–5ಕ್ಕೆ ಏರಿತು. 16–6ರ ಮುನ್ನಡೆ ಸಾಧಿಸಿದ ನಂತರ ಅವರು ಹಿಂತಿರುಗಿ ನೋಡಲಿಲ್ಲ. ನಿರ್ಣಾಯಕ ಗೇಮ್ನ ಆರಂಭದಲ್ಲಿ ಶ್ರೀಕಾಂತ್ 4–1ರ ಮುನ್ನಡೆ ಗಳಿಸಿದರು. ತಕ್ಷಣ ತಿರುಗೇಟು ನೀಡಿದ ವಾಂಗ್ ಸತತ ಏಳು ಪಾಯಿಂಟ್ ಕಲೆ ಹಾಕಿ 8–4ರಲ್ಲಿ ಮುನ್ನಡೆದರು. ಆದರೂ ಎದೆಗುಂದದ ಶ್ರೀಕಾಂತ್ 10–10ರ ಸಮಬಲ ಸಾಧಿಸಿದರು. ವಾಂಗ್ ಭರ್ಜರಿ ಆಟವಾಡಿ 17–13ರಲ್ಲಿ ಮುನ್ನಡೆದರು. ಎದುರಾಳಿಯನ್ನು ಅಂಗಣದ ತುಂಬ ಓಡಾಡಿಸಿದ ಶ್ರೀಕಾಂತ್ ಹಿನ್ನಡೆಯನ್ನು 16–17ಕ್ಕೆ ಇಳಿಸಿ ನಿರೀಕ್ಷೆ ಮೂಡಿಸಿದರು. ಆದರೆ ಕೆಲವು ತಪ್ಪು ಹೊಡೆತಗಳಿಂದಾಗಿ ಪಾಯಿಂಟ್ಗಳನ್ನು ಕಳೆದುಕೊಂಡು ಎದುರಾಳಿಗೆ ಗೇಮ್ ಮತ್ತು ಪಂದ್ಯವನ್ನು ಒಪ್ಪಿಸಿದರು.

ಪ್ರತಿ ಗುಂಪಿನಲ್ಲಿ ಅಗ್ರ ಸ್ಥಾನ ಗಳಿಸುವ ಇಬ್ಬರಿಗೆ ಮಾತ್ರ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿದೆ. ಹೀಗಾಗಿ ಸಿಂಧು ಮತ್ತು ಶ್ರೀಕಾಂತ್ ಅವರ ಮುಂದಿನ ಹಾದಿ ದುರ್ಗಮವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.