ಖಾಸಗಿ ರೇಡಿಯೊಗಳ ಜೊತೆಜೊತೆಗೇ ವಾಣಿಜ್ಯೋದ್ದೇಶದ ಖಾಸಗಿ ಟೆಲಿವಿಷನ್ ವಾಹಿನಿಗಳೂ ಪ್ರಾರಂಭವಾದದ್ದು ಕನ್ನಡದ ಸಾಂಸ್ಕೃತಿಕ ವಾತಾವರಣದ ಮಹತ್ವದ ಸಂದರ್ಭವೆನ್ನಬೇಕು. ಸುದ್ದಿ ಮತ್ತು ಮನರಂಜನೆ ಎನ್ನುವ ಎರಡು ಮುಖ್ಯ ವಿಭಾಗಗಳನ್ನು ಗುರುತಿಸಿಕೊಂಡು ಅವಕ್ಕೆ ಪ್ರತ್ಯೇಕವಾದ ವಾಹಿನಿಗಳು ಹುಟ್ಟಿಕೊಂಡವು. ಮಾರುಕಟ್ಟೆಯ ಅಗತ್ಯಗಳಿಗೆ ಸ್ಪಂದಿಸುವಂಥ ನವೀನತಮ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯ ಇದ್ದುದರಿಂದ ದೊಡ್ಡ ಮೊತ್ತದ ಬಂಡವಾಳವನ್ನು ತೊಡಗಿಸಿದ ಈ ವಾಹಿನಿಗಳ ಗಮನ ಸಹಜವಾಗಿಯೇ ಲಾಭಾಂಶ ಗಳಿಕೆಯತ್ತಲೇ ಇರುವುದು ತಪ್ಪೆನ್ನುವಂತಿಲ್ಲ.

ವಾಹಿನಿಗಳ ಕಾರ್ಯವಿಧಾನ, ನಿರ್ವಹಣೆ ಮತ್ತು ಆರ್ಥಿಕ ಯೋಜನೆ - ಎಲ್ಲವೂ ಕೇಂದ್ರೀಕೃತವಾಗಿರುವುದು ತಮ್ಮ ಪ್ರಸಾರ ಸೆಳೆಯಬಲ್ಲ ಜಾಹೀರಾತು ಗಳಿಕೆಯ ಸುತ್ತಲೇ ಆದ್ದರಿಂದ ಎಲ್ಲ ಯೋಜನೆಗಳೂ, ಜಾಹೀರಾತು ಜಗತ್ತಿನ ಸಿದ್ಧ ಸೂತ್ರಗಳ ಅಳವಡಿಕೆಯನ್ನು ಮುಖ್ಯವೆಂದು ಭಾವಿಸುತ್ತವೆ. ಕಾಲದಿಂದ ಕಾಲಕ್ಕೆ ಜಾಹೀರಾತು ಜಗತ್ತು ಆವಿಷ್ಕರಿಸುವ ಹೊಸ ಸೂತ್ರಗಳ ಪ್ರಯೋಗಕ್ಕೂ ಈ ವಾಹಿನಿಗಳು ವೇದಿಕೆಯನ್ನೊದಗಿಸುತ್ತವೆ. ಪ್ರಯೋಗಸಿದ್ಧ ಪಾಶ್ಚಿಮಾತ್ಯ ಕಾರ್ಯಕ್ರಮ ಮಾದರಿಗಳನ್ನೇ ಪ್ರಾದೇಶಿಕ ಭಾಷೆಗಳಿಗೆ ಅಳವಡಿಸುವ ಪ್ರಯತ್ನ ಮಾಡುವಾಗ ಅದರ ಪರಿಣಾಮ ಮೊಟ್ಟಮೊದಲಿಗೆ ಆಗುವುದು ಕಾರ್ಯಕ್ರಮದ ಭಾಷೆಯ ಮೇಲೆ.

ಒಂದು ಸಿದ್ಧ ಪಾಶ್ಚಾತ್ಯ ಮಾದರಿಯನ್ನು ಅನುಸರಿಸಿ ಕಾರ್ಯಕ್ರಮದ ಸ್ವರೂಪವನ್ನು ಪ್ರಾದೇಶಿಕ ಸ್ವರೂಪದಲ್ಲಿ ಪುನರ್ರೂಪಿಸಲು ಆಳವಾದ ಅಧ್ಯಯನದ ಅಗತ್ಯವಿದೆ. ಸಂಸ್ಕೃತಿಯ ‘ಅನುವಾದ’ ಅಪೇಕ್ಷಣೀಯವಲ್ಲ ಎನ್ನುವುದು ಒಂದು ಸಾಮಾನ್ಯಾಭಿಪ್ರಾಯ. ಅಧ್ಯಯನದ ಕೊರತೆಯುಂಟಾದಲ್ಲಿ, ಇಂತಹ ಕಾರ್ಯಕ್ರಮಗಳಿಂದ ಉಂಟಾಗುವ ದೂರಗಾಮಿ ಪ್ರತಿಕೂಲ ಪರಿಣಾಮಗಳನ್ನು ಆಯಾ ಪ್ರಾದೇಶಿಕ ಸಂಸ್ಕೃತಿಗಳೇ ಭರಿಸಬೇಕಾದೀತು.

ಕನ್ನಡದ ಖಾಸಗಿ ಟೆಲಿವಿಷನ್ ವಾಹಿನಿಗಳು ದೊಡ್ಡ ಪ್ರಮಾಣದಲ್ಲಿ ಜನರಿಗೆ ಸುದ್ದಿ ಮತ್ತು ಮನರಂಜನೆಯನ್ನು ನೀಡಲು ಪ್ರಯತ್ನಿಸುತ್ತಿವೆ ಎನ್ನುವುದನ್ನು ಒಪ್ಪಲೇಬೇಕು. ಆದರೆ, ಬಹುತೇಕ ಸುದ್ದಿವಾಹಿನಿಗಳ ಸುದ್ದಿವಾಚಕರ ‘ನುಡಿರೂಢಿ’ (ವೋಕಲ್ ಮ್ಯಾನರಿಸಮ್) ಬಗ್ಗೆ, ಕನ್ನಡ ಭಾಷೆಯ ಕುರಿತು ಕಾಳಜಿಯನ್ನು ಹೊಂದಿರುವ ಪ್ರಜ್ಞಾವಂತ ಜನ ಹಲವು ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಿರುವುದೂ ಅಷ್ಟೇ ಸತ್ಯ. ಸುದ್ದಿವಾಚಕರಲ್ಲಿ ಎದ್ದುಕಾಣುವ ಒಂದು ಅನಪೇಕ್ಷಿತ ‘ನುಡಿರೂಢಿ’ ಎಂದರೆ ‘ಎ’ ಕಾರದ ವಿಕೃತ ಉಚ್ಚಾರಣೆ. ‘ಆಗಿದೆ’, ‘ಹೇಳಿದ್ದಾರೆ’, ‘ಮಾಡಿದ್ದಾರೆ’- ಎನ್ನುವಂತಹ ಪದಗಳನ್ನು ಉಚ್ಚರಿಸುವಾಗ ಅಲ್ಲಿನ ‘ಎ’ ಕಾರಾಂತವನ್ನು ಇತ್ತ ‘ಅ’ ಕಾರವೂ ಅಲ್ಲದ, ಅತ್ತ ‘ಎ’ಕಾರವೂ ಅಲ್ಲದ, ಕನ್ನಡದ ಜಾಯಮಾನದಲ್ಲಿ ಇಲ್ಲದ ಒಂದು ವಿಚಿತ್ರ ಸ್ವನವನ್ನು ಬಳಸಿ ಉಚ್ಚರಿಸುತ್ತಾರೆ.

ಈ ಸ್ವನಕ್ಕೆ ಕನ್ನಡ ಲಿಪಿಯನ್ನು ನಿರ್ದೇಶಿಸಲಾಗದೆ ಇರುವುದರಿಂದ ಓದುಗರು ತಮ್ಮ ಅನುಭವವನ್ನು ಆಧರಿಸಿಯೇ ಇದನ್ನು ಗ್ರಹಿಸಬೇಕು. ‘ಬಂದ್ರು’, ‘ಮಾಡಿದು’, ‘ಹೋದು’, ‘ಆಯು’- ಎನ್ನುವಂತಹ ಉಕಾರಾಂತಗಳನ್ನು ಬಂದ್ರೋ, ಮಾಡಿದ್ರೋ, ಹೋದ್ರೋ, ಆಯ್ತೋ ಎನ್ನುವುದನ್ನೇ ನುಡಿರೂಢಿಯನ್ನಾಗಿ ಮಾಡಿಕೊಂಡಿರುವ ಒಬ್ಬ ನಿರೂಪಕರಿಗೆ ತಮ್ಮ ವಿಕೃತ ಕನ್ನಡ ಉಚ್ಚಾರಣೆಯ ಬಗ್ಗೆ ಅತ್ಯಂತ ಹೆಮ್ಮೆ ಇರುವಂತೆ ತೋರುತ್ತದೆ.

ಇನ್ನು, ಅಪರಾಧ ಸುದ್ದಿಗಳ ದೃಶ್ಯದ ಹಿನ್ನೆಲೆಯ ವರದಿಯನ್ನು ಅನಾಗರಿಕ, ಅಸಭ್ಯ, ಅನುಚಿತ ಎನ್ನಬಹುದಾದ ಪದಗಳನ್ನು ಬಳಸಿ ಬರೆದು, ಕಂಠಸ್ವರವನ್ನು ಉದ್ದೇಶಪೂರ್ವಕವಾಗಿ ಕರ್ಕಶಗೊಳಿಸಿಕೊಂಡು, ‘ಅಮಾನುಷ’ವಾಗಿ ಓದುತ್ತಾರೆ. ಸುದ್ದಿ ಅಪರಾಧದ್ದು, ನಿಜ. ಆದರೆ, ಓದುವವರ ಕಂಠವೂ ಕರ್ಕಶವಾಗಬೇಕು, ಭಾಷೆಯೂ ಒರಟಾಗಿರಬೇಕು, ಔಚಿತ್ಯ ಮೀರಬೇಕು ಎನ್ನುವುದು ಯಾರು ಹಾಕಿಕೊಟ್ಟ ದಾರಿ? ಇಂಥ ವಿಪರೀತದ ಸುದ್ದಿಯನ್ನು ವಿಕೃತವಾಗಿ ಪ್ರಸಾರ ಮಾಡುವುದೇ ಆಯಾ ವಾಹಿನಿಯವರು ಕನ್ನಡ ಭಾಷೆ, ಮಾನಸಿಕತೆ ಮತ್ತು ಸಂಸ್ಕೃತಿಯ ಕುರಿತು ಮಾಡುತ್ತಿರುವ ದೊಡ್ಡ ಅಪರಾಧ. ಹೀಗಿರುವಾಗ ಬೇರೆಯ ಅಪರಾಧ ಸುದ್ದಿಯೇತಕ್ಕೆ ಬೇಕು?

ಕನ್ನಡ ಭಾಷೆಗೆ ಸಹಜವಾಗಿರುವ ಭಾವತೀವ್ರತೆ, ಮಾಧುರ್ಯ, ಆರ್ದ್ರತೆ, ಅರ್ಥ ನಿಷ್ಕೃಷ್ಟತೆ ಮತ್ತು ಲಾಲಿತ್ಯಗಳನ್ನು ನಿತ್ಯದ ಬಳಕೆಯಲ್ಲಿ ತಂದು ಅದನ್ನು ಸರ್ವಾಂಗ ಸುಂದರವನ್ನಾಗಿಯೇ ಉಳಿಸಬೇಕೆನ್ನುವ ಹಂಬಲ ಎಲ್ಲ ಕನ್ನಡಿಗರಿಗೂ ಇರಬೇಕು. ನವೋದಯದ ನವಿರಿನ ಮರೆಯಲ್ಲಿಯೇ ಮಚ್ಚ, ಮಟಾಷ್, ಲಾಂಗು, ಸ್ಕೆಚ್ಚು - ಎನ್ನುವಂತಹ ಪದಗಳು ‘ಕಿರಿದರಲಿ ಪಿರಿದರ್ಥಮಂ’ ಹೇಳುತ್ತಲೇ ವರ್ತಮಾನ ಸಮಾಜದ ಮಾನಸಿಕತೆ ಹೇಗೆ ವಿಕೃತಗೊಳ್ಳುತ್ತಿದೆ ಎನ್ನುವುದನ್ನು ಪ್ರತಿಬಿಂಬಿಸುತ್ತವೆ. ಕನ್ನಡ ಸಂಸ್ಕೃತಿಜನಿತವಲ್ಲದ ಇಂತಹ ಎಲ್ಲ ವ್ಯಾಪಾರಿ ವಾಹಿನಿಗಳೂ ‘ನಾವಾಡಿದ ನುಡಿಯೇ ಕನ್ನಡ ನುಡಿ’ ಎನ್ನುವ ಧಾರ್ಷ್ಟ್ಯವನ್ನು ಈಗಾಗಲೇ ಬೆಳಸಿಕೊಂಡಿರುವುದು, ಭಾಷೆ ಮತ್ತು ಭಾವನೆಗಳ ಮಟ್ಟಿಗೆ ಕನ್ನಡ ನಾಡಿನ ಅತಿ ದೊಡ್ಡ ಸಾಂಸ್ಕೃತಿಕ ದುರಂತ.

ದೃಶ್ಯಮಾಧ್ಯಮಗಳು ದೃಶ್ಯದ ಕಲಾತ್ಮಕತೆಯತ್ತ ಗಮನ ನೀಡಬೇಕಾದದ್ದು ಅಗತ್ಯ. ಸುದ್ದಿವಾಹಿನಿಗಳು ಈ ಕುರಿತು ಯೋಚನೆಯನ್ನೇ ಮಾಡುವುದಿಲ್ಲವೇ ಎನ್ನುವ ಪ್ರಶ್ನೆ ನಮ್ಮೆದುರು ಮೂಡುತ್ತದೆ. ಒಂದೇ ದೃಶ್ಯವನ್ನು ಮತ್ತೆ ಮತ್ತೆ ತುರುಕುತ್ತ, ಆ ದೃಶ್ಯದಲ್ಲಿನ ವಿವರಗಳಿಗೆ ಸಂಬಂಧವಿಲ್ಲದ ಮಾತುಗಳನ್ನು ಪ್ರಸಾರಮಾಡುವುದು ಇಂದಿಗೆ ಸಾಮಾನ್ಯವೆನ್ನಿಸಿಬಿಟ್ಟಿದೆ. ಮಾತನ್ನು ಮಿತಗೊಳಿಸಿ ‘ನೋಟ’ದ ಅನುಭವವನ್ನು ಶ್ರೀಮಂತಗೊಳಿಸುವುದು ಮತ್ತು ತನ್ಮೂಲಕ ವಿಷಯವನ್ನು ಸಮರ್ಥವಾಗಿ ಸಂವಹನಗೊಳಿಸುವುದೇ ದೃಶ್ಯಮಾಧ್ಯಮದ ಶಕ್ತಿ ಹಾಗೂ ಉದ್ದೇಶ. ಆದರೆ ಇಂದಿನ ಟೆಲಿವಿಷನ್ ನಿರೂಪಕರು, ರೇಡಿಯೊ ನಿರೂಪಕರಿಗಿಂತಲೂ ಹೆಚ್ಚು ಮಾತನಾಡುತ್ತಾರೆ ಎನ್ನುವುದು ವಿಪರ್ಯಾಸ.

ಇನ್ನು ಘಟನಾ ಸ್ಥಳವೊಂದರಿಂದ ಟಿವಿ ವರದಿಗಾರರು ನೀಡುವ ನೇರ ವರದಿಗಳಲ್ಲಿ ಅವರ ವಾಕ್ಯರಚನೆಗಳಲ್ಲಿನ ವಿಕೃತಿಗಳನ್ನು ನೋಡಿಯೇ ಅನುಭವಿಸಬೇಕು. ‘ಒಟ್ಟಾರೆಯಾಗಿ ಹೇಳಬೇಕೆಂದರೆ’ - ಎನ್ನುವುದನ್ನು ಸಂದರ್ಭವೊಂದರ ವಿಸ್ತೃತ ವಿವರಣೆಯ ಕೊನೆಗೆ ಸಂಗ್ರಹವಾಗಿ ವಿಷಯದ ಫಲಿತವನ್ನು ಹೇಳುವಾಗ ಬಳಸಿದರೆ ಉಚಿತ. ಆದರೆ ವರದಿಗಾರ, ಪ್ರತಿ ಎರಡನೆ ಅಥವಾ ಮೂರನೆ ಸಾಲಿಗೆ ‘ಒಟ್ಟಾರೆಯಾಗಿ ಹೇಳಬೇಕೆಂದರೆ’ ಎಂದು ಪ್ರಾರಂಭಿಸುವುದನ್ನು ಗಮನಿಸಬಹುದು. ಇದು ಆಯಾ ವರದಿಗಾರನ ವೈಯಕ್ತಿಕ ಅಭಿವ್ಯಕ್ತಿಯ ಅಸಾಮರ್ಥ್ಯವನ್ನು ಎತ್ತಿತೋರಿಸುವುದರ ಜೊತೆಗೆ ಭಾಷಾ ಪ್ರಯೋಗದ ಕುರಿತು ವಾಹಿನಿಯ ಔದಾಸೀನ್ಯವನ್ನು ಬಿಂಬಿಸುವುದಿಲ್ಲವೇ? ಇಂತಹ ಹಲವಾರು ಅನೌಚಿತ್ಯಗಳನ್ನು ಪ್ರಸ್ತಾಪಮಾಡಬಹುದು.

ಭಾಷಾ ಪ್ರಯೋಗವೆನ್ನುವುದು ಮಾಧ್ಯಮ ಸಂಹಿತೆಯಲ್ಲಿ ಪರೋಕ್ಷವಾಗಿ ಪ್ರಸ್ತಾಪಿಸಲ್ಪಟ್ಟಿರುವ ವಿಷಯವಿರಬಹುದು. ಮಾಧ್ಯಮಗಳು ನಾಡು-ನುಡಿಯನ್ನು ಕಟ್ಟುವ ಕೆಲಸ ಮಾಡುವ ದೃಷ್ಟಿಯನ್ನು ಹೊಂದಿರಬೇಕು. ದೃಶ್ಯಮಾಧ್ಯಮವೊಂದು ನೋಡುಗರ ನೋಟ ಮತ್ತು ಕೇಳ್ಮೆ- ಈ ಎರಡನ್ನೂ ಏಕಕಾಲಕ್ಕೆ ಪ್ರಭಾವಿಸುವುದರಿಂದ ದೃಶ್ಯ ಮತ್ತು ಶಬ್ದ, ಎರಡೂ ಕಲಾತ್ಮಕವಾಗಿರಬೇಕು. ಹೀಗಾದಾಗಲೇ ವಾಹಿನಿಯೊಂದರ ಪ್ರಸಾರ, ನೋಡುಗರು/ಕೇಳುಗರು ಅದನ್ನು ನೋಡಲು/ಕೇಳಲು ವ್ಯಯಿಸುವ ಸಮಯದ ‘ಮೌಲ್ಯವರ್ಧನೆ’ ಮಾಡಲು ಸಾಧ್ಯ.

ಮೌಲ್ಯವರ್ಧನೆಯ ಈ ವಿಚಾರವನ್ನು ಹಿಡಿದೇ ವಾಹಿನಿಗಳ ಖ್ಯಾತಿ, ಪ್ರಸ್ತುತತೆ ಹೆಚ್ಚುತ್ತದೆ. ವಾಹಿನಿಗಳು ಕೇಳುಗ/ನೋಡುಗರನ್ನು ಗ್ರಾಹಕರನ್ನಾಗಿ ಪರಿಭಾವಿಸಿದಾಗ ಅವರೂ ವ್ಯಾಪಾರೀ ದೃಷ್ಟಿಯಿಂದಲೇ ವಾಹಿನಿಗಳ ಮೌಲ್ಯಮಾಪನ ಮಾಡುತ್ತಾರೆ ಎನ್ನುವುದನ್ನು ಮರೆಯುವಂತಿಲ್ಲ. ವಾಹಿನಿಗಳ ಮುಖವಾಣಿಗಳಾಗುವ ನಿರೂಪಕರೆಲ್ಲರೂ ಈ ವಿಷಯವನ್ನು ಗಮನದಲ್ಲಿಡಬೇಕು. ವೈಯಕ್ತಿಕ ಪ್ರಚಾರದ ಆಸಕ್ತಿವಹಿಸಿ ಮಾಧ್ಯಮದ ಘನ ಉದ್ದೇಶಗಳನ್ನು ಗಾಳಿಗೆ ತೂರಿದಲ್ಲಿ ಅದರ ಪ್ರತಿಕೂಲ ಪರಿಣಾಮವಾಗುವುದು ವಾಹಿನಿಗಳ ಪ್ರಸ್ತುತತೆ ಮತ್ತು ಗಳಿಕೆಯ ಮೇಲೆ ಎನ್ನುವುದನ್ನು ಎಲ್ಲ ನಿರೂಪಕರೂ ಮನಸ್ಸಿಗೆ ತಂದುಕೊಳ್ಳಲೇ ಬೇಕು.

ನಾವಾಡುವ ಮಾತು ಎಲ್ಲರೂ ಕೇಳಬೇಕು, ಕೇಳಿದವರೆಲ್ಲರೂ ಅದನ್ನು ಮೆಚ್ಚಬೇಕು ಎನ್ನುವ ಆಸೆ ಎಲ್ಲ ನಿರೂಪಕರಿಗೂ ಇರುವುದು ಸಹಜವೇ. ನಾವಾಡಿದ ಮಾತನ್ನು ಎಲ್ಲರೂ ‘ಏಕೆ’ ಕೇಳಬೇಕು? ನಮ್ಮ ಮಾತು, ಅದನ್ನು ಕೇಳುವ ಸಮಯದ ಮೌಲ್ಯವರ್ಧನೆ ಮಾಡಿ ಆ ಕ್ಷಣವನ್ನು ಅರ್ಥಪೂರ್ಣ ಮತ್ತು ಚೈತನ್ಯಪೂರ್ಣವನ್ನಾಗಿಸುತ್ತದೆಯೇ? ನಾವು ಕೇಳುಗರ ಜ್ಞಾನದಾಹವನ್ನು ತಣಿಸಲು ಶಕ್ಯರಾಗಿದ್ದೇವೆಯೇ? ತತ್ಕ್ಷಣಕ್ಕೆ ಕೇಳುಗರಿಗೆ ನಮ್ಮ ಮಾತಿನ ಅಗತ್ಯವಿದೆಯೇ? ಪ್ರತಿಕ್ಷಣವೂ ನಾವು ಅಪ್ರಸ್ತುತರಾಗದೆ ಇರುವುದು ಹೇಗೆ? ಕೇಳುಗ/ನೋಡುಗರೊಂದಿಗೆ ನಾವು ಮಾತನಾಡುತ್ತಿರುವ ವಿಷಯದ ಕುರಿತು ನಮ್ಮ-ಅವರ ನಡುವೆ ಅಗತ್ಯ ಪಾತಳಿ ನಿರ್ಮಾಣವಾಗಿದೆಯೇ? ಇಲ್ಲವಾದರೆ ನಿರ್ಮಿಸುವುದು ಹೇಗೆ?

- ಇಂತಹ ಹತ್ತುಹಲವು ಪ್ರಶ್ನೆಗಳಿಗೆ ಉತ್ತರಗಳು ದೊರೆತಾಗಲಷ್ಟೇ ಯಾವುದೇ ಮಾತನಾಡಲು ನಮಗೆ ರಹದಾರಿ ಸಿಕ್ಕಂತೆ. ಇಲ್ಲವಾದಲ್ಲಿ ಮಾತು ಅನಗತ್ಯವೆನ್ನಿಸಬಹುದು, ಅಪ್ರಸ್ತುತವೆನ್ನಿಸಬಹುದು, ಅಸಂಬದ್ಧವೆನ್ನಿಸಬಹುದು, ಅಸಂಗತವೆನ್ನಿಸಬಹುದು, ಅತಿಯಾದಲ್ಲಿ ಅಸಹ್ಯಕರ ಎನ್ನಿಸಲೂಬಹುದು. ಶ್ರವ್ಯ ಮತ್ತು ದೃಶ್ಯ ಮಾಧ್ಯಮಗಳ ‘ಮಾತುಗಾರರು’ ಸದಾ ಈ ಎಚ್ಚರಿಕೆಯಲ್ಲಿ ಇರುವುದು ಒಳಿತು.

99860 01369
ಮುಂದಿನವಾರ: ಮುಗಿಯದ ಮಾತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.