ದೇಶದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆಈ ಮಾರ್ಚ್ ವೇಳೆಗೆ 74.31 ಕೋಟಿಗೆ ಏರಿಕೆಯಾಗಿದೆ. ಹಾಗಂತ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಹೇಳಿದೆ. 2019ರ ಡಿಸೆಂಬರ್‌ನಲ್ಲಿ ಇವರ ಸಂಖ್ಯೆ 71.87 ಕೋಟಿಯಷ್ಟಿತ್ತು. ಅಂದರೆ, ಮೂರು ತಿಂಗಳ ಅವಧಿಯಲ್ಲಿ 2.44 ಕೋಟಿಯಷ್ಟು ಹೊಸ ಬಳಕೆದಾರರನ್ನು ಸೆಳೆದಿದೆ, ಶೇಕಡ 3.4ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಮಾರ್ಚ್ ನಂತರದ ಅವಧಿಯಲ್ಲಿ ಈ ಬೆಳವಣಿಗೆಯ ಶೇಕಡಾವಾರು ಪ್ರಮಾಣ ಮತ್ತಷ್ಟು ಹೆಚ್ಚಿರುವ ಸಾಧ್ಯತೆ ಇದೆ. ಕಾರಣ: ಕೊರೊನಾ. ಈ ಸಾಂಕ್ರಾಮಿಕವುಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ಅನಿವಾರ್ಯವಾಗಿಸಿದ್ದು ಮತ್ತು ಬೇರೆ ಬೇರೆ ಬಗೆಯ ವೃತ್ತಿಪರರನ್ನು ಮನೆಯಿಂದಲೇ ಕೆಲಸ ಮಾಡಬೇಕಾದ ಸ್ಥಿತಿಗೆ ದೂಡಿದ್ದು.

ಬಳಕೆದಾರರ ವಲಯ ಹಿಗ್ಗುತ್ತಿರುವ ಈ ವಿದ್ಯಮಾನವನ್ನು ನಾವು ಎರಡು ನೆಲೆಗಳಲ್ಲಿ ನೋಡಬೇಕಾಗಿದೆ. ಒಂದು, ವ್ಯಕ್ತಿ ಮತ್ತು ಆ ಮೂಲಕ ಒಟ್ಟಾರೆ ಸಮಾಜದ ಸಬಲೀಕರಣಕ್ಕೆ ಪೂರಕವಾಗಿ ಒದಗಿಬರುವ ನೆಲೆಯಲ್ಲಿ. ಮತ್ತೊಂದು, ವ್ಯಕ್ತಿಯ ನೈಜ ಸಾಮರ್ಥ್ಯ ಬಳಕೆಗೆ ತೊಡರುಗಾಲಾಗಿ ಪರಿಣಮಿಸುವ ಹಾಗೂ ಸಮಾಜದ ಸೌಹಾರ್ದದ ತಂತುಗಳನ್ನು ತುಂಡರಿಸಲು ಬಳಕೆಯಾಗಬಹುದಾದ ಅಪಾಯದ ನೆಲೆಯಲ್ಲಿ.

ಜ್ಞಾನ ಆಧಾರಿತ ಸಮಾಜ ಎಂಬ ನಂಬಿಕೆಗೆ ಪೂರಕವಾಗಿ ಈ ಬೆಳವಣಿಗೆಯನ್ನು ನಾವು ಗ್ರಹಿಸಿದರೆ, ಸಬಲೀಕರಣದ ಅಪರಿಮಿತ ಸಾಧ್ಯತೆಗಳು ನಮ್ಮ ಕಣ್ಣೆದುರು ತೆರೆದುಕೊಳ್ಳುತ್ತವೆ. ಇಂಟರ್ನೆಟ್ ಸಂಪರ್ಕವು ಜಗತ್ತಿನ ಆಗುಹೋಗುಗಳನ್ನು ಬೆರಳತುದಿಗೆ ತಂದಿರಿಸಿದೆ. ‘ಗ್ಲೋಬಲ್ ವಿಲೇಜ್’ ಎಂಬ ಪರಿಕಲ್ಪನೆಯನ್ನು ಜಾಗತೀಕರಣ ಪ್ರಕ್ರಿಯೆಯು ಸಾಕಾರಗೊಳಿಸಿದೆಯೋ ಇಲ್ಲವೋ? ಆದರೆ ಇಂಟರ್ನೆಟ್ ಮಾತ್ರ ಅದನ್ನು ಸಾಧ್ಯವಾಗಿಸುವ ದಿಸೆಯಲ್ಲಿ ದಾಂಗುಡಿ ಇಟ್ಟಿದೆ.

ಮಾಹಿತಿಗೆ ಸಂಬಂಧಿಸಿದ ಈ ಸೂಪರ್ ಹೆದ್ದಾರಿಗೆ ಭೌಗೋಳಿಕ ಗಡಿಗಳ ಹಂಗು ಇಲ್ಲ. ಇಂಟರ್ನೆಟ್ ಸೌಕರ್ಯವು ಯಾವ ತುದಿಯಿಂದ ಮತ್ಯಾವ ತುದಿಗೆ ಬೇಕಾದರೂ ಸಂಪರ್ಕ ಸೇತುವಾಗಬಲ್ಲದು. ಅಕಾಡೆಮಿಕ್ ಕಲಿಕೆಗೆ ಇದ್ದ ಭೌಗೋಳಿಕ ಮಿತಿಗಳನ್ನು ಮುರಿದುಹಾಕಿದೆ. ಇದರಿಂದಾಗಿ, ಜಾಗತಿಕ ಮಾಹಿತಿ ಮೂಲಗಳ ಬಾಗಿಲುಗಳು ತೆರೆದುಕೊಂಡಿವೆ. ಮಾಹಿತಿ ಹಂಚಿಕೆಗೆ, ಕಲಿಕೆಗೆ, ಸಂಶೋಧನೆಗೆ ಬೆಳಕಿಂಡಿಯಾಗಿದೆ.

ಈ ಸೌಲಭ್ಯವು ಸಮರ್ಪಕವಾಗಿ ಬಳಕೆಯಾದರೆ ವ್ಯಕ್ತಿ ಮತ್ತು ವ್ಯವಸ್ಥೆಯ ಕಾರ್ಯದಕ್ಷತೆಯಲ್ಲಿ ಗುಣಾತ್ಮಕ ಬದಲಾವಣೆಗಳನ್ನು ಕಾಣಬಹುದು. ವ್ಯಕ್ತಿಯ ದೈನಂದಿನ ಬದುಕಿನ ಜಂಜಡಗಳ ಹೊರೆ ಇಳಿಸುವುದರ ಜತೆಜತೆಗೇ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮೂಡಿಸಲು ಸಹಕಾರಿಯೂ ಆಗಬಲ್ಲದು.ಆನ್‌ಲೈನ್ ಮೂಲಕ ಶಿಕ್ಷಣ ಎಂಬುದು ಒಂದು ವರ್ಗಕ್ಕೆ ಬಹುದೊಡ್ಡ ಸನ್ನೆಗೋಲು ಆಗುವ ಸಾಧ್ಯತೆ ಇದೆ. ದೇಶದ ಯಾವುದೋ ಮೂಲೆಯಲ್ಲಿ ಇರುವ ವಿದ್ಯಾರ್ಥಿಗೆ, ಜೆಎನ್‌ಯು, ಆಕ್ಸ್‌ಫರ್ಡ್, ಐಐಎಸ್‌ಸಿ ಅಥವಾ ಇನ್ಯಾವುದೋ ವಿಶ್ವದರ್ಜೆಯ ವಿದ್ಯಾಸಂಸ್ಥೆಯ ಬೋಧಕರ ಪಾಠ ಕೇಳುವ ಅವಕಾಶವನ್ನು ಆನ್‌ಲೈನ್ ಶಿಕ್ಷಣ ಕಲ್ಪಿಸಬಲ್ಲದು.

ಜನಸಾಮಾನ್ಯರು ವಿದ್ಯುತ್ ಬಿಲ್, ನೀರಿನ ಬಿಲ್‌ನಿಂದ ಆರಂಭಿಸಿ ತೆರಿಗೆ ಪಾವತಿವರೆಗೆ, ಬ್ಯಾಂಕ್ ವ್ಯವಹಾರದಂತಹ ಕೆಲಸಗಳನ್ನು ಮನೆಯಲ್ಲಿ ಕುಳಿತೇ ಮಾಡಿಮುಗಿಸಲು ಇಂಟರ್ನೆಟ್ ಸಹಕಾರಿ. ಕಚೇರಿಗಳಿಗೆ ಅಲೆಯುವುದನ್ನು, ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲುವುದನ್ನು ಇದು ನಿವಾರಿಸಬಲ್ಲದು. ಶ್ರಮ,ಸಮಯ ಮತ್ತು ಹಣ ಪೋಲಾಗುವುದನ್ನು ತಪ್ಪಿಸುತ್ತದೆ.

ಇದರಿಂದ ಆಗಬಹುದಾದ ಅನುಕೂಲಗಳ ಪಟ್ಟಿಯನ್ನು ಎಷ್ಟಾದರೂ ಹಿಗ್ಗಿಸಬಹುದು. ನೆಟ್ ಕನೆಕ್ಟಿವಿಟಿ, ಸಿಗ್ನಲ್ ಲಭ್ಯತೆ ಮತ್ತು ಒಂದು ಸ್ಮಾರ್ಟ್ ಫೋನ್ ಇವು ವ್ಯಕ್ತಿಯ ಸಂಪರ್ಕ ಸಾಧ್ಯತೆಗಳನ್ನು ಎಲ್ಲಿಗೆ ಬೇಕಾದರೂ ಒಯ್ಯಬಲ್ಲವು. ಆದರೆ, ಸೌಲಭ್ಯವು ರಚನಾತ್ಮಕವಾಗಿ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಬಳಕೆ ಆಗುತ್ತಿದೆ ಎಂಬುದರ ಮೇಲೆ ಫಲಾಫಲಗಳು ನಿಂತಿವೆ.

ಸ್ಮಾರ್ಟ್ ಫೋನ್‌ಗಳು ನಮ್ಮಲ್ಲಿ ಹೆಚ್ಚಾಗಿ ಚಾಟಿಂಗ್, ಗೇಮ್ಸ್, ಸೆಲ್ಫಿಯಂತಹ ಕ್ಷಣಿಕ ಷೋಕಿಗಾಗಿ ಬಳಕೆಯಾಗುತ್ತಿವೆ ಎಂಬ ಭಾವನೆಯು ಸಮಾಜದಲ್ಲಿ ದಟ್ಟವಾಗಿ ನೆಲೆಯೂರಿದೆ. ಯುವಪೀಳಿಗೆಯ ಹವ್ಯಾಸಗಳನ್ನು ಗಮನಿಸಿದವರಿಗೆ ಈ ಆರೋಪದಲ್ಲಿ ಹುರುಳಿದೆ ಎಂದೂ ಭಾಸವಾಗುತ್ತದೆ. ಮಕ್ಕಳು ಹೆಚ್ಚಿಗೆ ಮೊಬೈಲ್ ಫೋನ್ ಬಳಸುವುದಕ್ಕೆ ಕುಟುಂಬ ವಲಯದಲ್ಲಿ ವಿರೋಧ ಇತ್ತು. ಕೊರೊನಾ ವೈರಾಣುವಿನ ಪರಿಣಾಮಗಳಿಂದ ಆ ಭಾವನೆ ತಕ್ಕಮಟ್ಟಿಗೆ ಬದಲಾಗಿದೆ. ಶಾಲಾ–ಕಾಲೇಜುಗಳ ತರಗತಿಗಳು ಆನ್‌ಲೈನ್‌ಗೆ ಹೊರಳಿದ ಕಾರಣಕ್ಕೆ ಮೊಬೈಲ್ ಫೋನ್ ಬಳಕೆಗೆ ಪೋಷಕ ವಲಯದಲ್ಲಿ ಅನುಮೋದನೆಯ ಮುದ್ರೆ ಬಿದ್ದಿದೆ. ಈ ಅವಕಾಶದ ಸದ್ಬಳಕೆಯು ಮಕ್ಕಳ ಮನಃಸ್ಥಿತಿ ಮತ್ತು ನಡೆಯನ್ನು ಅವಲಂಬಿಸಿದೆ.

ನಮ್ಮಲ್ಲಿ ದ್ವೇಷ ಹರಡುವುದಕ್ಕೆಆನ್‌ಲೈನ್ ಮಾಧ್ಯಮ ಬಳಕೆಯಾಗುತ್ತಿದೆ. ಇದು, ಸಾವು–ನೋವು, ಆಸ್ತಿ ಹಾನಿಗೆ ಕೂಡ ಕಾರಣವಾಗಿದೆ ಎಂಬ ಮಾತಿಗೆ ಪುಷ್ಟಿ ನೀಡುವ ನಿದರ್ಶನಗಳಿವೆ. ಸುಳ್ಳುಸುದ್ದಿಗಳು ಕಾಳ್ಗಿಚ್ಚಿನಂತೆ ಹಬ್ಬಲು ಈ ಮಾಧ್ಯಮ ದುರ್ಬಳಕೆ ಆಗುತ್ತಿರುವುದು ದುರದೃಷ್ಟಕರ. ದುರುದ್ದೇಶದಿಂದಲೋ ಅಥವಾ ಪರಿಣಾಮಗಳ ಅರಿವಿಲ್ಲದೆಯೋ ಸುಳ್ಳುಸುದ್ದಿಗಳ ಪ್ರಸರಣಕ್ಕೆ ಕಾರಣವಾಗುವ ಕೆಲವರಿಂದಾಗಿ ಇದರ ಬಿಸಿಯನ್ನು ಎಲ್ಲರೂ ಅನುಭವಿಸುವಂತಹ ಸ್ಥಿತಿ ಎದುರಾಗಿದೆ. ಇಂತಹ ಎಡವಟ್ಟುಗಳಿಂದಾಗಿ ಇದು ಹೆದರಿಕೆಗೂ ಕಾರಣವಾಗಿದೆ. ಈ ಮಿತಿಗಳು ವ್ಯಕ್ತಿಯ ಪ್ರಜ್ಞೆಗೆ ಇಳಿದು, ಅವು ಪೂರ್ತಿಯಾಗಿ ಅಲ್ಲದಿದ್ದರೂ ಗಣನೀಯವಾಗಿ ನಿವಾರಣೆಯಾದರೆ ಇಂಟರ್ನೆಟ್, ಸಬಲೀಕರಣದ ಬಹುದೊಡ್ಡ ಅಸ್ತ್ರ ಎಂಬುದರಲ್ಲಿ ಅನುಮಾನ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.