ಯಂತ್ರಗಳೂ ಆಲೋಚಿಸಬಲ್ಲವೇ?
ಈ ಪ್ರಶ್ನೆಗೆ ಉತ್ತರವಾಗಿ ರೂಪುಗೊಂಡಿದ್ದೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ AI.

ಕಂಪ್ಯೂಟರ್ ವಿಜ್ಞಾನದ ವೈವಿಧ್ಯಮಯ ವಿಭಾಗಗಳಲ್ಲಿ AI ಕೂಡ ಒಂದು. ಇಂಗ್ಲಿಷಿನಲ್ಲಿ ಇದನ್ನು ಆರ್ಟಿಫಿಶಿಯಲ್ ಅಂತ ಕರೆಯಬಹುದಾದರೂ, ಕನ್ನಡದಲ್ಲಿ ಶಬ್ದಾರ್ಥವನ್ನು ಬಳಸಿದರೆ ತಂತ್ರಜ್ಞಾನವನ್ನು ಸಮರ್ಪಕವಾಗಿ ಧ್ವನಿಸುವುದು ಸಾಧ್ಯವಿಲ್ಲ. ಯಾಕೆಂದರೆ, ಇದು ಯಂತ್ರದ ಜಾಣ್ಮೆ ಹೌದಾದರೂ, ಕೃತಕವಲ್ಲ. ಈ ಜಾಣ್ಮೆಯಲ್ಲಿ ಕೃತಕತೆಯಿಲ್ಲ, ಕೃತಕವಾಗಿ ತಯಾರಿಸುವುದೂ ಸಾಧ್ಯವಿಲ್ಲ. ಯಂತ್ರವೊಂದು ತಾನಾಗಿ ಅಥವಾ ಸಹಜವಾಗಿ ಕಲಿತುಕೊಳ್ಳುವಂತೆ ಮಾಡುವ ತಂತ್ರಜ್ಞಾನವಿದು. ಯಂತ್ರವೇ ಆರ್ಜಿಸಿದ ಜಾಣ್ಮೆ ಎನ್ನಬಹುದು.

ವಾಸ್ತವವಾಗಿ ಏನಿದು ಆರ್ಟಿಫಿಶಿಯಲ್ಲು?
ಮನುಷ್ಯನ ಬುದ್ಧಿಮತ್ತೆಯ ಅವಶ್ಯಕತೆ ಎಲ್ಲೆಲ್ಲಾ ಇದೆಯೋ, ಅಂಥದ್ದೇ ಕೆಲಸ ಕಾರ್ಯಗಳನ್ನು ಮಾಡಬಲ್ಲ ಸ್ಮಾರ್ಟ್ ಯಂತ್ರಗಳನ್ನು ನಿರ್ಮಿಸುವ ಕಂಪ್ಯೂಟರ್ ವಿಜ್ಞಾನದ ಒಂದು ಭಾಗವೇ ಎಐ. ಹಲವು ಆಯಾಮಗಳುಳ್ಳ ಕಂಪ್ಯೂಟರ್ ವಿಜ್ಞಾನವಿದು. ಈಗ ಹೆಚ್ಚು ಅಭಿವೃದ್ಧಿಯಾಗುತ್ತಿರುವ, ನವೀನ ಆವಿಷ್ಕಾರಗಳಾಗುತ್ತಿರುವ ಯಂತ್ರದ ಕಲಿಕೆ (ಮೆಷಿನ್ ಲರ್ನಿಂಗ್) ಮತ್ತು ಆಳವಾದ ಕಲಿಕೆ (ಡೀಪ್ ಲರ್ನಿಂಗ್) ಶಾಖೆಗಳ ಸುಧಾರಿತ, ಸಂಯೋಜಿತ ಫಲವಿದು ಎನ್ನಬಹುದು.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬ ಪರಿಕಲ್ಪನೆಗೆ ಏಳೆಂಟು ದಶಕಗಳ ಹಿಂದಿನ ಆಸಕ್ತಿದಾಯಕ ಇತಿಹಾಸವಿದೆ. ಎರಡನೇ ಜಾಗತಿಕ ಯುದ್ಧದ ಸಂದರ್ಭದಲ್ಲಿ ಇಂಗ್ಲಿಷ್ ವಿಜ್ಞಾನಿ, ಗಣಿತಜ್ಞ, ಕಂಪ್ಯೂಟರ್ ವಿಜ್ಞಾನಿ ಅಲನ್ ಮ್ಯಾಥಿಸನ್ ಟೌರಿಂಗ್ ಅವರು ತಮ್ಮ ಬುದ್ಧಿಮತ್ತೆಯನ್ನು ಲೋಕಮುಖಕ್ಕೆ ಪರಿಚಯಿಸಿದವರು. ನಾಜಿಗಳು ಕಳುಹಿಸುತ್ತಿದ್ದ ಸಂಕೇತಗಳನ್ನೆಲ್ಲ ಭೇದಿಸಿ, ನಾಜಿ ಪಡೆಗಳ ವಿರುದ್ಧ ಮಿತ್ರ ಪಡೆಗಳು ಮಹಾ ಯುದ್ಧವನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಹಜ ಜಾಣ್ಮೆ ಇವರದು. ಬ್ರಿಟನ್ನಲ್ಲಿ ಸಂಕೇತಾಕ್ಷರ ಭೇದಿಸುವ ಗವರ್ನಮೆಂಟ್ ಕೋಡ್ ಆ್ಯಂಡ್ ಸೈಫರ್ ಸ್ಕೂಲ್ (GC&CS) ನಲ್ಲಿ ಕೆಲಸ ಮಾಡುತ್ತಾ, ಅಲ್ಟ್ರಾ ಇಂಟೆಲಿಜೆನ್ಸ್ ಎಂಬ ಘಟಕ ರೂಪಿಸುವಲ್ಲಿ ಟೌರಿಂಗ್ ಪಾತ್ರವೇ ಮುಖ್ಯವಾದದ್ದು. ಈ ಅಲ್ಟ್ರಾ ಇಂಟೆಲಿಜೆನ್ಸ್ ತಂತ್ರಜ್ಞಾನದ ಮೂಲಕವಾಗಿ, ರೇಡಿಯೋ ಮತ್ತು ಟೆಲಿಪ್ರಿಂಟರ್ ಸಂವಹನದಲ್ಲಿ ಎನ್ಕ್ರಿಪ್ಟ್ (ಗೂಢಲಿಪೀಕರಣ) ಮಾಡಿ ನಾಜಿಗಳು ತಮ್ಮವರಿಗಾಗಿ ಕಳುಹಿಸುತ್ತಿದ್ದ ಗರಿಷ್ಠ ಮಟ್ಟದ ಸುರಕ್ಷತೆಯಿದ್ದ ಸಂದೇಶವನ್ನೇ ಭೇದಿಸಲಾಗುತ್ತಿತ್ತು. ಈ ರೀತಿಯ ಮಹತ್ವದ ಸಂದೇಶವನ್ನೊಳಗೊಂಡಿದ್ದ ಕೋಡ್-ವರ್ಡ್ಗಳನ್ನು ಅಥವಾ ಸಂಕೇತಾಕ್ಷರಗಳನ್ನು ಭೇದಿಸಿದ್ದೇ ಮಿತ್ರ ಪಡೆಗಳ ಗೆಲುವಿಗೆ ಹೇತುವಾಯಿತು.

ಈ ಪರಿಯ ಮಹಾ ಮೇಧಾವಿ ಟೌರಿಂಗ್ ಅವರು 1950ರಲ್ಲಿ 'ಕಂಪ್ಯೂಟಿಂಗ್ ಮೆಶಿನರಿ ಆ್ಯಂಡ್ ಇಂಟೆಲಿಜೆನ್ಸ್' ಎಂಬ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು. ಇದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನ ಗುರಿಯೇನು ಮತ್ತು ಅದರ ಸಾಧ್ಯತೆಗಳೇನು ಎಂಬುದರ ಸೂಕ್ಷ್ಮ ಮಾಹಿತಿ ಹೊಂದಿದೆ. ಟೌರಿಂಗ್ ಅವರೇ ಕೇಳಿದ 'ಯಂತ್ರಗಳೂ ಆಲೋಚಿಸಬಲ್ಲವೇ?' ಎಂಬ ಪ್ರಶ್ನೆಯೇ ಇಂದಿನೆಲ್ಲಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಪ್ರಗತಿಯ ಪಂಚಾಂಗ. ಈ ಪ್ರಶ್ನೆಗೆ ಹೌದು ಎಂದು ಉತ್ತರಿಸುವ ಪ್ರಯತ್ನವೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನ ಜೀವಾಳ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂದರೆ ಏನು ಎಂಬುದಕ್ಕೆ ನಿರ್ದಿಷ್ಟವಾದ ವಿವರಣೆಯಿಲ್ಲ. ಹಲವು ಆಯಾಮಗಳಿರುವುದರಿಂದ ಇದಮಿತ್ಥಂ ಎಂಬ ವಿವರಣೆ ನೀಡಲಾಗದು; ಸಾಧ್ಯತೆಗಳು ಅನೇಕ ಎಂಬುದೇ ಇದಕ್ಕೆ ಕಾರಣ. ಜಾಣ್ಮೆಯುಳ್ಳ ಯಂತ್ರಗಳ ನಿರ್ಮಾಣದ ಬಗ್ಗೆ ಮಾತನಾಡಬಹುದಾದರೂ, ಯಂತ್ರಗಳನ್ನು ಜಾಣ ಆಗಿಸುವುದು ಹೇಗೆ? ಎಂಬುದು ಕ್ಲಿಷ್ಟಕರ ಪ್ರಶ್ನೆ.

ಸರಳವಾಗಿ, (ಆದರೆ ಪರಿಪೂರ್ಣವಲ್ಲದೆ) ಹೇಳಬಹುದಾದರೆ, ಪರಿಸರ ಅಥವಾ ಸುತ್ತಮುತ್ತಲಿನ ವಾತಾವರಣದಲ್ಲೇನಾಗುತ್ತದೆ ಎಂಬುದನ್ನು ಗ್ರಹಿಸಿ, ಅದಕ್ಕೆ ತಕ್ಕಂತೆ ಪ್ರತಿಸ್ಪಂದಿಸುವ ಮತ್ತು ಕಲಿತುಕೊಳ್ಳುತ್ತಲೇ ಮತ್ತಷ್ಟು ಸ್ಮಾರ್ಟ್ ಆಗುವ ತಂತ್ರಜ್ಞಾನ ಎನ್ನಬಹುದು.

ಮನುಷ್ಯನಂತೆಯೇ ಯೋಚಿಸುವುದು, ತರ್ಕಬದ್ಧವಾಗಿ ಯೋಚಿಸುವುದು, ಮನುಷ್ಯನಂತೆಯೇ ವರ್ತಿಸುವುದು, ತರ್ಕಬದ್ಧವಾಗಿ ವರ್ತಿಸುವುದು - ಈ ಕ್ರಿಯೆಗಳ ಮಿಶ್ರಣವಿದು ಅಂತ 'ಆರ್ಟಿಫಿಶಿಯಲ್ ಇಂಟೆಲಿಜೆನ್ಸ್: ಎ ಮಾಡರ್ನ್ ಅಪ್ರೋಚ್' ಎಂಬ ಅತ್ಯಂತ ಪ್ರಸಿದ್ಧವಾದ ಪುಸ್ತಕದಲ್ಲಿ ವಿವರಿಸಿದ್ದಾರೆ ವಿಜ್ಞಾನಿಗಳಾದ ಸ್ಟುವರ್ಟ್ ರಸೆಲ್ ಮತ್ತು ಪೀಟರ್ ನಾರ್ವಿಗ್.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮೆಶಿನ್ ಲರ್ನಿಂಗ್ ಮತ್ತು ಡೀಪ್ ಲರ್ನಿಂಗ್
ಈ ಮೂರನ್ನು ಪ್ರತ್ಯೇಕಿಸುವುದು ಕ್ಲಿಷ್ಟಕರ ಕೆಲಸ. ಅತ್ಯಂತ ಸೂಕ್ಷ್ಮ ವ್ಯತ್ಯಾಸವಷ್ಟೇ. ಒಂದು ದತ್ತಾಂಶ ಸಂಚಯವನ್ನು, ಅಂಕಿ ಅಂಶವನ್ನು ಬಳಸಿಕೊಂಡು, ನಿರ್ದಿಷ್ಟ ಕಾರ್ಯವೊಂದನ್ನು ಹೇಗೆ ಸುಲಭ ಮಾಡುವುದು, ಮತ್ತು ಹೆಚ್ಚು ಹೆಚ್ಚು ಬಳಕೆಯಾಗುತ್ತಿರುವಂತೆ, ಫಲಿತಾಂಶವನ್ನು ಹೇಗೆ ಉತ್ತಮ ಪಡಿಸಿಕೊಳ್ಳುವುದು ಎಂಬುದನ್ನು ಯಂತ್ರವು ಕಲಿತುಕೊಳ್ಳುವುದೇ ಮೆಶಿನ್ ಲರ್ನಿಂಗ್.

ಡೀಪ್ ಲರ್ನಿಂಗ್ ಎಂಬುದು ಮೆಶಿನ್ ಲರ್ನಿಂಗ್ನ ಸುಧಾರಿತ ವಿಧಾನ. ಜೈವಿಕ ಪ್ರಚೋದನೆಯಿರುವ ನರವ್ಯೂಹಗಳಿಂದ ಇನ್ಪುಟ್ ಪಡೆದುಕೊಂಡು, ಲಭ್ಯ ದತ್ತಾಂಶವನ್ನು ಸಂಸ್ಕರಿಸುವ ಯಂತ್ರವೊಂದು, ಮತ್ತಷ್ಟು ಆಳವಾಗಿ 'ಕಲಿಕೆ'ಯನ್ನು ಸಾಧಿಸಿ ಹೆಚ್ಚು ಪರಿಣಾಮಕಾರಿ ಫಲಿತಾಂಶ ನೀಡುವಲ್ಲಿ ನೆರವಾಗುವುದೇ ಡೀಪ್ ಲರ್ನಿಂಗ್.

ಹಾಗಿದ್ದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್? ಇವೆರಡರ ತಂತ್ರಜ್ಞಾನದ ಫಲಿತಾಂಶಗಳನ್ನು, ಅಲ್ಗಾರಿದಂ ಬಳಸಿಕೊಂಡು, ಮಾನವನ ಬೌದ್ಧಿಕ ಜಾಣ್ಮೆಯನ್ನು ಆರ್ಜಿಸಲು, ಅನುಕರಿಸಲು ಪ್ರಯತ್ನ ಮಾಡುವ ತಂತ್ರಜ್ಞಾನ.

ದೈನಂದಿನ ಬಳಕೆಯಲ್ಲಿ ಇಂಟೆಲಿಜೆನ್ಸ್ ತಂತ್ರಜ್ಞಾನ
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಟುವಟಿಕೆಗಳನ್ನು ನಮ್ಮ ಸುತ್ತಮುತ್ತ ಪ್ರತಿದಿನವೂ ಕಾಣುತ್ತಿದ್ದೇವೆ. ಈ ತಂತ್ರಜ್ಞಾನದ ತೀರಾ ಸರಳ ರೂಪವನ್ನು ವಿವರಿಸುವುದಾದರೆ, ಗೂಗಲ್ ಸರ್ಚ್ ಎಂಜಿನ್. ನಾವು ಒಂದಕ್ಷರ ಟೈಪ್ ಮಾಡುತ್ತೇವೆ, ಗೂಗಲ್ನ ತಂತ್ರಜ್ಞಾನವು ಅದಕ್ಕೆ ಸಂಬಂಧಿಸಿದ್ದೆಲ್ಲವನ್ನೂ ನಮ್ಮ ಮುಂದೆ ತಂದಿರಿಸುತ್ತದೆ. ಅದೇ ರೀತಿ, ಗೂಗಲ್ ವಾಯ್ಸ್ ಅಸಿಸ್ಟೆಂಟ್, ಸಿರಿ, ಅಲೆಕ್ಸಾ ಎಂಬ ಧ್ವನಿ ಸಹಾಯಕ ತಂತ್ರಾಂಶಗಳನ್ನು ನಾವು ಬಳಸುತ್ತೇವೆ. 'ಒಕೆ ಗೂಗಲ್, ನಾಳೆ ಬೆಂಗಳೂರಿನ ಹವಾಮಾನ ಹೇಗಿರುತ್ತದೆ' ಅಂತ ನಮ್ಮದೇ ಆಂಡ್ರಾಯ್ಡ್ ಫೋನ್ನಲ್ಲಿರುವ ಗೂಗಲ್ ಧ್ವನಿಸಹಾಯಕ ತಂತ್ರಾಂಶವನ್ನು ಆನ್ ಮಾಡಿ ಕೇಳಿದರೆ, ಅದು ನಿರ್ದಿಷ್ಟ ದತ್ತಾಂಶ ಸಂಚಯದಿಂದ ಈ ಮಾಹಿತಿಯನ್ನು ತಿಳಿದು ನಮಗೆ ತೋರಿಸುತ್ತದೆ / ಉತ್ತರ ಹೇಳುತ್ತದೆ. ಸ್ವಯಂಚಾಲಿತ ಕಾರುಗಳು ಕೂಡ ಇಂದೇ ತಂತ್ರಜ್ಞಾನದ ಅಂಗ.

ಎಐ ಬಳಕೆಯ ಮತ್ತಷ್ಟು ಉದಾಹರಣೆಗಳು:

* ಗೂಗಲ್ ಮ್ಯಾಪ್ಸ್ನಲ್ಲಿ ನಮಗೆ ಬೇಕಾದ ತಾಣಕ್ಕೆ ತೆರಳಲು ಮಾರ್ಗದರ್ಶನ ಮಾಡುವ ತಂತ್ರಜ್ಞಾನ

* ಮೊಬೈಲ್ ಫೋನ್ನಲ್ಲಿರುವ ಧ್ವನಿ ಸಹಾಯಕ ತಂತ್ರಜ್ಞಾನ.

* ಅತ್ಯಾಧುನಿಕ ಫೋನ್ಗಳಲ್ಲಿ ಮುಖ ಗುರುತಿಸಿ, ಬೆರಳಚ್ಚು ಗುರುತಿಸಿ ಲಾಗಿನ್ ಅಥವಾ ಸ್ಕ್ರೀನ್ ಅನ್ಲಾಕ್ ಮಾಡುವ ಅವಕಾಶ

* ಫೇಸ್ಬುಕ್ನಲ್ಲಿ ಯಾರಾದರೂ ನಮ್ಮ ಫೋಟೋ ಅಪ್ಲೋಡ್ ಮಾಡಿದ ಕೂಡಲೇ ಮುಖವನ್ನು ಗುರುತಿಸಿ ಟ್ಯಾಗ್ ಮಾಡಲು ಕೇಳುವುದು

* ಫೋನ್ನಲ್ಲಿ ಏನೋ ಟೈಪ್ ಮಾಡಿದಾಗ, ಸ್ಪೆಲ್ಲಿಂಗ್ (ಕಾಗುಣಿತ) ಸರಿಪಡಿಸುವ ಪ್ರಕ್ರಿಯೆ

* ನಾವು ಗೂಗಲ್ನಲ್ಲಿ ಏನಾದರೂ ಸರ್ಚ್ ಮಾಡಿದರೆ, ಆ ಬಳಿಕ ಯಾವುದೇ ವೆಬ್ ಸೈಟ್ ತೆರೆದರೆ ಅದಕ್ಕೆ ಸಂಬಂಧಿಸಿದ ಜಾಹೀರಾತುಗಳೇ ಕಾಣಿಸುವುದು

* ಕೆಲವು ವೆಬ್ ತಾಣಗಳಲ್ಲಿ ಗ್ರಾಹಕ ಸೇವಾ ವಿಭಾಗದಲ್ಲಿ ಸಂದೇಹಗಳಿಗೆ ಸ್ವಯಂಚಾಲಿತವಾಗಿ ಉತ್ತರಿಸುವ ಚಾಟ್-ಬಾಟ್ಗಳು

* ಸೋಷಿಯಲ್ ಮೀಡಿಯಾ ತಾಣಗಳಲ್ಲಿ ಸುಳ್ಳು ಸುದ್ದಿ, ದ್ವೇಷ ಹರಡುವ ಪೋಸ್ಟ್ಗಳು, ಹಿಂಸೆ ಪ್ರಚೋದಕ ಚಿತ್ರಗಳನ್ನು ಎಐ ತಂತ್ರಜ್ಞಾನವೇ ಗುರುತಿಸಿ, ಇತರರಿಗೆ ಕಾಣಿಸದಂತೆ ಫಿಲ್ಟರ್ ಮಾಡುತ್ತದೆ.

* ನೀವು ಯಾವುದನ್ನು ಬ್ರೌಸ್ ಮಾಡುತ್ತೀರಿ ಎಂಬುದನ್ನು ಆಧರಿಸಿ, ಅದೇ ರೀತಿಯ ವಿಷಯಗಳನ್ನು ಹೆಚ್ಚು ಹೆಚ್ಚು ತೋರಿಸಲು ಜಾಲತಾಣಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನೇ ಬಳಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.