ಕೊರೊನಾ ಬಂದ ನಂತರ ಜನಜೀವನ ಬದಲಾಗ್ತಿದೆ. ಅದರಿಂದ ಕಲಿತಿದ್ದು ಬಹಳ ಇದೆ. ಪರಸ್ಪರ ಸ್ನೇಹ, ಸೌಹಾರ್ದ, ಹಂಚಿ ತಿನ್ನುವ ಗುಣ ಇತ್ಯಾದಿಗಳನ್ನು ಕೊರೊನಾ ಕಲಿಸಿಕೊಟ್ಟಿದೆ. ಆದರೆ ಅನೇಕ ತಿಂಗಳು ಮನೆಯಲ್ಲೇ ಇದ್ದು ಬಿದ್ದು ಎದ್ದು ವರ್ಕ್ ಫ್ರಂ ಹೋಮ್ ಎಂದು ಲ್ಯಾಪ್‌ಟಾಪ್‌ಗೆ ಅಂಟಿಕೊಂಡವರಿಗೆ ಮನೆಯ ವಾತಾವರಣ ಅಲ್ಲೋಲ ಕಲ್ಲೋಲ ಮಾಡಿದ್ದೂ ಉಂಟು.

ಸುನಾಮಿಗೆ ಉಕ್ಕಿ ಹರಿಯಲು ಕಲಿಸಿದವರು ಯಾರು? ಅಗ್ನಿಪರ್ವತಕ್ಕೆ ಸ್ಫೋಟಿಸಲು ತಿಳಿಸಿದವರು ಯಾರು? ಕೊರೊನಾ ಇದೇ ಟೈಪು! ಅದಕ್ಕೆ ಅರಸನ ಅಂಕೆಯಿಲ್ಲ, ಸಾವಿನ ಸಂಖ್ಯೆಯಿಲ್ಲ.

ಸ್ವಾತಂತ್ರ್ಯ ಪೂರ್ವದಲ್ಲಿ ಪ್ಲೇಗು, ಮಲೇರಿಯಾಗಳು ಜನರಿಗೆ ಸಾಂಕ್ರಾಮಿಕ ಪಿಡುಗುಗಳಾಗಿದ್ದವು. ಸ್ವಾತಂತ್ರ್ಯೋತ್ತರದಲ್ಲಿ ಕೊರೊನಾ ಅದೇ ರೀತಿ ಆಟ ಆಡಿಸಿದೆ. ಉಕ್ಕಿ ಹರಿಯುವ ಯೌವನವಿರುವ ಹದಿಹರೆಯದವರ ಹುಚ್ಚು ಪ್ರೀತಿಗೆ ಬ್ರೇಕ್ ಹಾಕಿದೆ. ವೀಕೆಂಡ್ ಪಾರ್ಟಿಗಳಲ್ಲಿನ ಮೋಜು, ಮಸ್ತಿಗೆ ಲಾಕ್ ಹಾಕಿದೆ. ಡ್ರಿಂಕಿನ ಜೊತೆಗೆ ಡ್ರಗ್ ಸೇರಿ ರಾಂಗ್ ಕನೆಕ್ಷನ್‍ಗಳು ಕಾಣಿಸಿಕೊಂಡಿದ್ದನ್ನು ಸದೆ ಬಡಿದಿದೆ. ಅವಕಾಶ ಸಿಕ್ಕಾಗ ತಬ್ಬಿ ನಿಲ್ಲುವ ಬಿಸಿಯುಸಿರಿನ ತರುಣ ತರುಣಿಯರಿಗೆ ಪಾಠ ಹೇಳಲು ಕೊರೊನಾ ಪ್ರತ್ಯಕ್ಷವಾಗಿದೆ. ಇದು ಕೆಲವರ ಅಂಬೋಣ.

ಸಾಮಾಜಿಕ ಜಾಲತಾಣದಲ್ಲಿ ಮೊನ್ನೆ ಒಂದು ಜೋಕ್ ಕಂಡೆ.

ವಿಶ್ವದ ಶ್ರೀಮಂತ ಬಿಲ್ ಗೇಟ್ಸ್ 27 ವರ್ಷ ಪ್ರತಿನಿತ್ಯ ಆಫೀಸಿಗೆ ಹೋಗುತ್ತಿದ್ದರು. ಆಗ ಅವರು ಆರಾಮವಾಗಿದ್ದರಂತೆ. ಕೊರೊನಾದಿಂದ ಒಂದುವರ್ಷ ವರ್ಕ್ ಫ್ರಂ ಹೋಮ್ ಮಾಡಿದಾಗ ತಮ್ಮ ದೀರ್ಘ ದಾಂಪತ್ಯಕ್ಕೆ ತಿಲಾಂಜಲಿ ಕೊಟ್ಟು ಬಿಲ್ ಸೆಟಲ್ ಮಾಡಿ ಗೇಟುಗಳ ತೆರೆದರಂತೆ! ಕೊರೊನಾ ಹೆಣ್ಣು-ಗಂಡಿನ ಪ್ರೀತಿಯ ನಡುವೆ ಅಡ್ಡಗೋಡೆಯಾಗಿ ಬಂದಿದ್ದು ಸತ್ಯವಿರಬಹುದು.

ಸ್ವಾತಂತ್ರ್ಯ ಹೋರಾಟದಲ್ಲಿ ಇಂಗ್ಲಿಷರ ಲಾಠಿ ಏಟುಗಳಿಂದ ತಪ್ಪಿಸಿಕೊಂಡ ದೇಶಭಕ್ತರೇ ಇರಲಿಲ್ಲ ಎನ್ನಬಹುದು. ಈಗಲೂ ಅಷ್ಟೇ. ಕೊರೊನಾ ಸಮಯದಲ್ಲಿ ಬೇಡವೆಂದರೂ ಹೊರಗಡೆ ಅಲೆದಾಡಿ ಪೊಲೀಸರ ಲಾಠಿ ಏಟಿನ ರುಚಿ ಕಾಣದ ವ್ಯಕ್ತಿಗಳೇ ಇಲ್ಲ. ಬೀದಿಗೊಂದು ಬೀಟು, ಮನೆಗೊಂದು ಏಟು!

ವರ್ಕ್ ಫ್ರಂ ಹೋಮ್ ಎಂಬ ಕಾನ್ಸೆಪ್ಟ್ ವಿದೇಶದಲ್ಲಿ ಈ ಮೊದಲೇ ಜನಪ್ರಿಯವಾಗಿತ್ತು. ಕೊರೊನಾ ಬಂದ ಮೇಲೆ ನಮ್ಮಲ್ಲೂ ಚಾಲ್ತಿಗೆ ಬಂತು. ಬಟ್ಟೆ ಒಗೆದು ಕೊಡುವ ಭಾಗ್ಯಮ್ಮ, ಪಾತ್ರೆ ಬೆಳಗುವ ಪಾತಮ್ಮ ಸಹ ವರ್ಕ್ ಫ್ರಂ ಹೋಮ್ ಬಯಸಿದ್ದಾರೆ.

ಕೊರೊನಾ ದಾಳಿಯಿಂದಾಗಿ ಸಾಮಾಜಿಕ ವ್ಯವಸ್ಥೆಗಳೇ ಬದಲಾದವು.

ಅನೇಕ ಸಿನಿಮಾ ಥಿಯೇಟರ್‌ಗಳು ಮಾಲ್‍ಗಳಾದವು. ಮದುವೆ ಛತ್ರಗಳು ಆಸ್ಪತ್ರೆಗಳಾದವು. ಬಂಧು, ಸ್ನೇಹಿತರು ದೂರವಾದರು. ಮದುವೆ, ಸಂಸ್ಕಾರ ಮೊದಲಾದ ಕಾರ್ಯಕ್ರಮಗಳಿಗೆ ಬಂಧು-ಸ್ನೇಹಿತರು ಬಾರದೆ ದೂರ ಉಳಿದರು.

ಕೆಲವು ಸಾಮಗ್ರಿಗಳ ವ್ಯಾಪಾರ ನಿಂತೇ ಹೋಯಿತು. ಹೆಣ್ಣು ಸೌಂದರ್ಯ ಪ್ರಿಯೆ. ಗಂಡಿನ ಕಣ್ಣಿಗೆ ಸುಂದರವಾಗಿ ಕಾಣಲು ಆಕೆ ಮಾಡುವ ಖರ್ಚು ಅಷ್ಟಿಷ್ಟಲ್ಲ. ಲೆಕ್ಕವಿಲ್ಲದಷ್ಟು ಕ್ರೀಮುಗಳು, ಲೋಷನ್ನುಗಳನ್ನು ಬಳಸುತ್ತಾಳೆ. ಏಳು ದಿನಗಳಲ್ಲಿ ಬೆಳ್ಳಗಾಗುವ ತಯಾರಿ ನಡೆಸುತ್ತಾಳೆ. ಕಂಡ ಕಂಡ ಸೋಪು ಹಚ್ಚಿಕೊಂಡು ವಿಶ್ವಸುಂದರಿ ಆಗುವ ಬಯಕೆ ಹೊಂದಿರುವವರೂ ಇದ್ದಾರೆ. ಈಗ ಕಾಸ್ಮೆಟಿಕ್ ಐಟಮ್‍ಗಳಿಗೆ ಡಿಮ್ಯಾಂಡೇ ಇಲ್ಲ. ಯಾವ ಸೌಂದರ್ಯವರ್ಧಕ ಹಚ್ಚಿಕೊಂಡರೂ ಮುಖ ತೋರಿಸುವಂತಿಲ್ಲ. ಲಿಪ್‍ಸ್ಟಿಕ್ ಬಣ್ಣ ತೋರಿಸಲು ಲಿಪ್ ಮೇಲೆ ಬೆಳಕು ಬೀಳುವುದೇ ಇಲ್ಲ. ನೋಡಿ ಆಸ್ವಾದಿಸುವ ಕಣ್ಣುಗಳೂ ಇಲ್ಲ. ಯಾವ ತಪ್ಪೂ ಮಾಡದೆ ಮುಖ ಮರೆಮಾಚುವ ಪರಿಸ್ಥಿತಿ ಬಂದಿದ್ದು ಕೊರೊನಾದಿಂದ. ಇದರಿಂದಾಗಿ ಸೌಂದರ್ಯ ಸಾಧನಗಳನ್ನು ತಯಾರು ಮಾಡುವ ಸಂಸ್ಥೆ, ಕಾರ್ಖಾನೆಗಳಿಗೆ ಹೊಡೆತ ಬಿದ್ದಿದೆ.

ಕೊರೊನಾ ಬಂದು ಮನೆಯಲ್ಲೇ ಬಂದಿಯಾದ ಮೇಲೆ ಪರಿಸ್ಥಿತಿ ಬೇರೆಯಾಯಿತು. ಹಳೇ ನೈಟಿಗಳಲ್ಲೇ ಡೇ ಟೈಮಲ್ಲಿ ಓಡಾಡುವುದು ಮಹಿಳೆಯರಿಗೆ ಅಭ್ಯಾಸವಾಯಿತು. ಚೆಡ್ಡಿ, ತ್ರೀ-ಫೋರ್ತ್‌ನಲ್ಲೇ ಗಂಡಸರು ಕಾಲ ಕಳೆಯಲಾರಂಭಿಸಿದರು. ಹೊಸ ಬಟ್ಟೆಗಳಿಗೆ ಡಿಮ್ಯಾಂಡ್ ಕುಸಿಯಿತು. ಹೊಸ ಜೀನ್ಸನ್ನು ಅಲ್ಲಲ್ಲಿ ಹರಿದು ಧರಿಸಿ ಹೊಸ ವಿನ್ಯಾಸವೆಂದು ಮೆರೆಯುವ ಅವಕಾಶ ಸಹ ತಪ್ಪಿ ಹೋಯಿತು.

ಇನ್ನುಮುಂದೆ ಯಾವ ಬ್ಯುಸಿನೆಸ್ ಮಾಡಿದರೆ ಒಳ್ಳೆಯದು? ಸೌಂದರ್ಯ ಸಾಧನಗಳ ಬದಲು ಪರ್‌ಫ್ಯೂಮ್‌ಗೆ ಬೆಲೆ ಬರಬಹುದು. ಏಕೆಂದರೆ, ಸ್ಯಾನಿಟೈಸರ್ ಹಾಕಿದ ಶರೀರ ಆಸ್ಪತ್ರೆಯ ವಾಸನೆಯನ್ನು ಹೊಮ್ಮಿಸುತ್ತದೆ. ಪರ್‌ಫ್ಯೂಮ್ ಸ್ವಲ್ಪ ಮಟ್ಟಿಗೆ ರಿಲೀಫ್ ಕೊಡಬಹುದು.

ತಲೆಗೆ ಬಣ್ಣ ಹಚ್ಚಿಕೊಂಡರೂ ಅದನ್ನು ನೋಡುವವರ‍್ಯಾರು? ಮಾಸ್ಕ್ ಒಳಗಿರುವ ಮೀಸೆ, ಗಡ್ಡಗಳನ್ನು ಟ್ರಿಂ ಮಾಡುವ ಸುದ್ದಿಗೇ ಬಹುಮಂದಿ ಹೋಗಿಲ್ಲ. ಗಡ್ಡ, ಮೀಸೆಗಳಲ್ಲಿ ಈ ಮೊದಲು ಅದೆಷ್ಟು ವಿನ್ಯಾಸಗಳು ಬರುತ್ತಿದ್ದವು. ಹೈವೇ ನಕ್ಷೆ ಬಿಡಿಸಿ ಸರ್ವಿಸ್ ರಸ್ತೆಗೆ ಕನೆಕ್ಷನ್ ಕೊಡುತ್ತಿದ್ದರು. ಈಗ ಏನೇ ಅಲಂಕಾರ ಮಾಡಿಕೊಂಡರೂ ಅದು ‘ಮಾಸ್ಕ್’ ಆಗುತ್ತದೆ.

ಮುಂದಿನ ದಿನಗಳಲ್ಲಿ ಮಾಸ್ಕ್ ಹೊಸ ರೂಪ ತಾಳುತ್ತದೆ. ತಲೆ, ಮುಖ ಮತ್ತು ಮೈಗೆ ರಕ್ಷಣೆ ಕೊಡುವ ಪುಲ್‍ಓವರ್ಸ್ ರೀತಿ ಅರಿವೆಗಳು ಬರಬಹುದು. ಕಣ್ಣು, ಮೂಗಿಗೆ ಮಾತ್ರ ಜಾಲರಿಯನ್ನು ಬಳಸುತ್ತಾರೆ. ಇವು ಪ್ಲಾಸ್ಟಿಕ್ ಜರಿ, ಬೆಳ್ಳಿ ಜರಿ ಮತ್ತು ಬಂಗಾರದ ಜರಿಗಳಾಗಿರುತ್ತವೆ. ಅವರವರ ಅಂತಸ್ತಿಗೆ ತಕ್ಕಂತೆ ಜರಿ ಮಾಸ್ಕ್! ತಲೆಯನ್ನು ಬುರುಕಿಯೊಳಗೆ ತುರುಕುತ್ತಾರೆ!

ಇನ್ನು ದೇವಸ್ಥಾನಗಳಿಗೆ ಡಿಮ್ಯಾಂಡ್ ಇಲ್ಲವಾಗಿದೆ. ಮುಂದೆ ಹೊಸ ರೀತಿಯ ಪೂಜೆ, ತಾಯತಗಳು ಶುರುವಾಗ್ತವೆ. ಕೊರೊನಾವನ್ನು ಓಡಿಸಲು ಸಂಕಲ್ಪ ಮಾಡಿ ಪೂಜೆ ಮಾಡುವ ಶಾಸ್ತ್ರ ಈಗಾಗಲೇ ಬಂದಿದೆ. ಕೊರೊನಾ ರೋಗ ಬಂಧಿಸುವ, ಕೊರೊನಾ ಧ್ವಂಸಕಾರಕ ತಾಯತಗಳಿಗೆ ಇನ್ನು ಮುಂದೆ ಡಿಮ್ಯಾಂಡ್ ಬರುತ್ತದೆ. ಇದರಲ್ಲೂ ಬೆಳ್ಳಿ ತಾಯತ, ಬಂಗಾರದ ತಾಯತ ಎಂಬ ವರ್ಗೀಕರಣ. ಈ ತಾಯತಗಳನ್ನು ಕತ್ತಿಗೆ ಕಟ್ಟಿಕೊಂಡರೆ ಕಳ್ಳ ಹತ್ತಿರ ಬಂದರೂ ಕೊರೊನಾ ಬಳಿ ಸುಳಿಯುವುದಿಲ್ಲ.

ಹುಡುಗ-ಹುಡುಗಿಯರ ನಡುವೆ ಈ ಮೊದಲಿದ್ದ ಪ್ರೀತಿ, ರೇಗಿಸುವುದು, ಲೈನ್ ಹೊಡೆಯುವುದು, ವೇಲ್ ಎಳೆಯುವುದು ಈ ಕಷ್ಟಾಚಾರ ಮರೆತೇ ಹೋಗಿದೆ. ಲೈನ್ ಹೊಡೆಯುವ ಸಂಪ್ರದಾಯ ಮರೆಯಾಗುತ್ತಿದೆ. ಮುಖವನ್ನ, ತಲೆಯನ್ನ ಮುಚ್ಚಿಕೊಂಡು ನಡೆಯುತ್ತಿರುವ ವ್ಯಕ್ತಿ ಗಂಡೋ, ಹೆಣ್ಣೋ ಎಂಬುದೇ ಗೊತ್ತಾಗುವುದಿಲ್ಲ. ಇನ್ನು ಲೈನಿನ ರಿಸ್ಕ್ ಯಾಕೆ?
ಕೊರೊನಾ ಬಂದ ಮೇಲೆ ಮಾಸ್ಕ್ ಒಳಗೆ ನಗುವುದೇ ಅಪರೂಪವಾಗಿದೆ. ಹೀಗಾಗಿ ಲಾಫ್ಟರ್ ಕ್ಲಬ್ಬುಗಳಿಗೆ ಡಿಮ್ಯಾಂಡ್ ಬರುತ್ತದೆ. ನಗಿಸುವವರಿಗೆ ನಗೆ ಲೇಖನಗಳಿಗೆ ವಿಪರೀತ ಬೇಡಿಕೆ ಬರಬಹುದು. ಕೈಗೆ ಸದಾ ಗ್ಲೌಸುಗಳನ್ನು ಹಾಕಿಕೊಳ್ಳುವ ಗೋಜಲು ತಪ್ಪಿಸಲು ಕರಗಿಸಿದ ಪ್ಲಾಸ್ಟಿಕ್ ದ್ರಾವಣದಲ್ಲಿ ಕೈ ಅದ್ದಿದರೆ ಸಾಕು, ಅದು ಗ್ಲೌಸ್ ಆಗಬಹುದಾದ ತಂತ್ರಜ್ಞಾನ ವೃದ್ಧಿಯಾಗುತ್ತದೆ.

ಕೊರೊನಾ ಸಂದರ್ಭದಲ್ಲಿ ಅನವಶ್ಯಕವಾಗಿ ಹೊರಗಡೆ ಬಂದವರಿಗೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಇಂಥ ಲಾಠಿ ಏಟುಗಳಿಂದ ಮುಕ್ತಿ ಪಡೆಯಲು ಕೆಲವು ‘ಆ್ಯಂಟಿ ಲಾಠಿ’ ಜರ್ಕಿನ್‍ಗಳು ಇನ್ನುಮುಂದೆ ಬರುತ್ತವೆ. ಗುಂಡು ನಿರೋಧಕ ಜರ್ಕಿನ್ ರೀತಿ ‘ಆ್ಯಂಟಿ ಲಾಠಿ’ ಜರ್ಕಿನ್ನುಗಳು ಜನಪ್ರಿಯ ಆಗುತ್ತವೆ. ಪೊಲೀಸರು ಎಷ್ಟು ಬಡಿದರೂ ಮೈಗೆ ಏಟು ತಾಕದಂತೆ ಜರ್ಕಿನ್ ರಕ್ಷಿಸುತ್ತದೆ.

ಇನ್ನು ಭಾರತೀಯ ಸಂಪ್ರದಾಯದಂತೆ ಸೋಷಿಯಲ್ ಡಿಸ್ಟೆನ್ಸ್ ಇಟ್ಟುಕೊಂಡು ನಮಸ್ಕಾರ ಮಾಡುವ ಶೈಲಿಯನ್ನು ಈಗ ಲೋಕವೇ ಪಾಲಿಸುತ್ತಿದೆ. ಕೈ ಕುಲುಕುವ, ತಬ್ಬುವ, ಹಗ್ ಮಾಡಿಕೊಳ್ಳುವ, ಬಗ್ಗಿ ಕಾಲು ಮುಟ್ಟುವ ಸಂಪ್ರದಾಯಗಳು ಬಿಟ್ಟುಹೋಗಿವೆ. ಕೈ ಕುಲುಕುವ ಆಸೆ ಇದ್ದವರಿಗೆ ಕೃತಕವಾದ ಒಂದು ರಬ್ಬರ್ ಕೈಯನ್ನ ತಯಾರಿಸಿಕೊಡಲಾಗುತ್ತದೆ. ಈ ಕೈನ ಜೇಬಿನಲ್ಲಿ ಇಟ್ಟುಕೊಳ್ಳಬಹುದು. ಯಾರಾದರೂ ಎದುರಾದಾಗ ತಮ್ಮ ರಬ್ಬರ್ ಕೈ ತಾವೇ ಕುಲುಕಿ ಎದುರುಗಡೆ ಪಾರ್ಟಿಯತ್ತ ಎಸೆಯುತ್ತಾರೆ. ಅವರು ಅದನ್ನು ಕ್ಯಾಚ್ ಹಿಡಿದು ಆ ಕೈ ಕುಲುಕಿ ಮತ್ತೆ ವಾಪಸ್ ನಮಗೇ ಎಸೆಯುತ್ತಾರೆ. ರಬ್ಬರ್ ಕೈ ಒಳಗಿರುವ ಸ್ಯಾನಿಟೈಸರ್ ಹನಿಗಳಿಂದ ಷೇಕ್‍ಹ್ಯಾಂಡ್ ಸುರಕ್ಷಿತವಾಗಿರುತ್ತದೆ. ಫ್ಲೈಯಿಂಗ್ ಕಿಸ್ ಮಾದರಿ!
ಗಂಡು-ಹೆಣ್ಣುಗಳು ಪ್ರೀತಿ ಮಾಡುವ ಮೊದಲು ಡಾಕ್ಟರ್ ಬಳಿ ಸಮಾಲೋಚನೆಗೆ ಹೋಗಬಹುದು. ಮುತ್ತು ಕೊಡುವುದು ಯಾವಾಗ, ಹೇಗೆ ಎಷ್ಟು ಕಾಲ ಕೊಡಬಹುದು? ತುಟಿಗಳಿಗೆ ಸ್ಯಾನಿಟೈಸರ್ ಬೇಕಾ? ತಬ್ಬಿಕೊಂಡ ನಂತರ ಸ್ನಾನ ಮಾಡಬೇಕಾ?

ಪಿಪಿಇ ಕಿಟ್ ಧರಿಸಿ ತಬ್ಬುವುದು ಒಳ್ಳೆಯದು ಎಂಬ ಸಲಹೆ ವೈದ್ಯರು ನೀಡುತ್ತಾರೆ. ಹನಿಮೂನ್‍ಗೆ ಗಂಡು-ಹೆಣ್ಣು ಬೇರೆ ಬೇರೆ ದಿನಗಳಲ್ಲಿ ಹೋಗಿ ಬರುವ ಸುರಕ್ಷಿತ ರೀತಿಗಳು ಚಾಲ್ತಿಗೆ ಬರಬಹುದು.

ಎಲ್ಲಕ್ಕಿಂತ ಮುಖ್ಯವಾಗಿ ಕೋವಿಡ್-19 ಬಂದ ನಂತರ ಜನಗಳು ವರ್ಷ ಮತ್ತು ಇಸವಿಗಳನ್ನ ಹೇಳುವ ರೀತಿ ಸಹ ಬದಲಾವಣೆ ಆಗುತ್ತದೆ. ಬಿ.ಸಿ ಎಂದರೆ ಬಿಫೋರ್ ಕೊರೊನಾ, ಎ.ಸಿ ಎಂದರೆ ಆಫ್ಟರ್ ಕೊರೊನಾ. ಕೊರೊನಾ ಬರುವ 20 ವರ್ಷ ಮುಂಚೆ ಹುಟ್ಟಿದೆ ಎನ್ನಲು 20 ಇಯರ‍್ಸ್ ಬಿ.ಸಿ. ಹುಟ್ಟಿದ್ದು ಎಂಬ ಹೊಸ ವ್ಯಾಖ್ಯಾನ ಬರಬಹುದು.

ಶತ ಶತಮಾನಗಳಿಂದ ಆಮ್ಲಜನಕವನ್ನು ಉಸಿರಾಡುತ್ತಾ ಇದ್ದೇವೆ. ಜೀವವಾಯು ಆಮ್ಲಜನಕ ಎಷ್ಟು ಮುಖ್ಯ ಎಂಬುದು ನಮಗೆ ಗೊತ್ತಾಗಿದ್ದು ಇತ್ತೀಚೆಗೆ. ಗಾಳಿಯನ್ನೂ ಖರೀದಿ ಮಾಡುವ ದಿನ ಬಂದಿದೆ. ಆದರೆ ನೆಮ್ಮದಿ, ಸಂತೋಷಗಳನ್ನು ಫ್ಯಾಕ್ಟರಿಯಲ್ಲಿ ತಯಾರಿಸಿ ಖರೀದಿ ಮಾಡುವ ಕೃತಕ ವಿಧಾನಗಳು ಇನ್ನೂ ಹುಟ್ಟಿಕೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.