ADVERTISEMENT

ಜೂಲಿ ಸಾವಯವ ಸಾಂಗತ್ಯ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2016, 19:59 IST
Last Updated 7 ಮಾರ್ಚ್ 2016, 19:59 IST
-ಚಿತ್ರಗಳು: ಸತೀಶ್‌ ಬಿ. ಆರಾಧ್ಯ
-ಚಿತ್ರಗಳು: ಸತೀಶ್‌ ಬಿ. ಆರಾಧ್ಯ   

ಕೃಷಿ ಕುಟುಂಬದ ಹಿನ್ನೆಲೆ ಉಳ್ಳವರೂ ಕೃಷಿಯಿಂದ ವಿಮುಖರಾಗುವುದು ಹೆಚ್ಚುತ್ತಿದೆ. ಇದಕ್ಕೆ ತದ್ವಿರುದ್ಧವೆಂಬಂತೆ ದೇಶ ವಿದೇಶದಲ್ಲಿ ವ್ಯಾಸಂಗ ಮುಗಿಸಿ, ಆಧುನಿಕತೆಯ ಗೋಜಲನ್ನು ಹಚ್ಚಿಕೊಳ್ಳದೆ ಸಾವಯವ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ನೆಮ್ಮದಿಯಿಂದಿರುವವರು ಬೆರಳೆಣಿಕೆಯಷ್ಟು. ಅಂಥವರಲ್ಲಿ ಒಬ್ಬರು ಈ ಜೂಲಿ...

ಜೀಪ್‌ ಹೋಗಲಷ್ಟೇ ದಾರಿಯಿದ್ದ ಕಲ್ಲು ಮುಳ್ಳಿನ ಹಾದಿಯಲ್ಲಿ ಹೇಗೋ ಸಾವರಿಸಿಕೊಂಡು ಒಳಹೊಕ್ಕರೆ, ಚಿಲಿಪಿಲಿ ಹಕ್ಕಿಗಳ ಕಲರವ, ಆಕಾಶದೆತ್ತರದ ಮರಗಳಿಂದ ಬೀಸುವ ಕುಳಿರ್ಗಾಳಿ,  ಕರುವಿನ ‘ಅಂಬಾ’ ಎನ್ನುವ ರಾಗ, ಕಾಳುಗಳನ್ನು ಹೆಕ್ಕಿ ತಿನ್ನಲು ಗುದ್ದಾಡುತ್ತಿದ್ದ ಕೋಳಿಗಳ ಸದ್ದು, ಅತ್ತ ಯಾವುದೋ ಗಿಡದ ಪರಿಮಳ ಮೂಗಿಗೆ ತಾಕುತ್ತಿದ್ದಂತೆ ದಣಿವು ಮರೆಯಾಗಿ, ಬೇರೆಯದ್ದೇ ಪ್ರಪಂಚಕ್ಕೆ ಕಾಲಿಟ್ಟಂತೆ ಭಾಸವಾಯಿತು. ಅಲ್ಲೆಲ್ಲೂ ಮನುಷ್ಯರ ಸುಳಿವಿರಲಿಲ್ಲ. ಹಸಿ ಮಣ್ಣಿನ ಗದ್ದೆಯಲ್ಲೇ ನಡೆದು ಹೊರಟಾಗ ದೂರದಲ್ಲೆಲ್ಲೋ ಒಂದಷ್ಟು ಕಟ್ಟಿಗೆ ಕೈಯಲ್ಲಿ ಹಿಡಿದು ಜೂಲಿ ಅವರು ಇತ್ತ ಸಾಗುತ್ತ ಕೈ ಬೀಸಿದಾಗ ದೀರ್ಘ ನಿಟ್ಟುಸಿರು ಬಿಡುವಂತಾಯಿತು. 

ಮುಗುಳ್ನಗುತ್ತ ನಮ್ಮತ್ತ ಸಾಗಿದ ಜೂಲಿ ‘ಸಾರಿ, ಕೆಲಸದಲ್ಲಿ ಸ್ವಲ್ಪ ಬಿಜಿಯಾಗಿದ್ದೆ’ ಎಂದು ಇಂಗ್ಲಿಷ್‌ ಮಿಶ್ರಿತ ಕನ್ನಡದಲ್ಲಿ ನುಡಿದರು. ಆನಂತರ ತೆರೆದುಕೊಂಡದ್ದು ಅವರ ಪುಟ್ಟ ಪ್ರಪಂಚದ ಅನುಭವ. ಮೈಸೂರು ಜಿಲ್ಲೆ, ಎಚ್‌.ಡಿ. ಕೋಟೆ ತಾಲ್ಲೂಕಿನ ಹಲಸೂರು ಗ್ರಾಮದ ಬಳಿ ಇರುವ ಜಮೀನಿನಲ್ಲಿ ಜೂಲಿ ಹಾಗೂ ವಿವೇಕ್‌ ಕಾರ್ಯಪ್ಪ ದಂಪತಿ 30 ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿ, ಅದರಲ್ಲಿ ಯಶಸ್ಸು ಸಾಧಿಸಿದ್ದಾರೆ. ಸಿಎಫ್‌ಟಿಆರ್ಐ ಮಾಜಿ ನಿರ್ದೇಶಕ ಡಾ.ಎಚ್.ಎ.ಪಿ. ಪಾರ್ಪಿಯಾ ಅವರ ಪುತ್ರಿ ಜೂಲಿ ಪ್ರಾಥಮಿಕ ಶಿಕ್ಷಣವನ್ನು ಸಿಎಫ್‌ಎಟಿಆರ್‌ಐ ಶಾಲೆಯಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ಇಟಲಿಯ ರೋಮ್, ಅಮೆರಿಕ ಮತ್ತಿತರ ಕಡೆ ಪಡೆದಿದ್ದಾರೆ.

ದೆಹಲಿಯ ಹಿಂದೂ ಕಾಲೇಜಿನಲ್ಲಿ ಸಮಾಜಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿರುವ ಅವರಿಗೆ ಆಧುನಿಕ ಜಗತ್ತಿನ ಗೀಳು ಹತ್ತಿದ್ದರೆ ಅಂದೇ ವಿದೇಶದಲ್ಲಿ ನೆಲೆಯೂರಬಹುದಿತ್ತು. ಆದರೆ, ಅವರ ಮನದ ಇಂಗಿತವೇ ಬೇರೆಯಾಗಿತ್ತು. ಸ್ವಚ್ಛಂದವಾಗಿ ಬದುಕು ಸಾಗಿಸಬೇಕು ಎಂಬ ಅವರ ಚಿಕ್ಕಂದಿನ ಕನಸನ್ನು ಸಾಕಾರ ಮಾಡಿಕೊಳ್ಳಲು ಹಳ್ಳಿಯತ್ತ ಮುಖ ಮಾಡಿದರು. ಕೃಷಿಯಲ್ಲಿ ಆ ನೆಮ್ಮದಿಯನ್ನು ಕಂಡರು. ಇದಕ್ಕೆ ಸ್ಫೂರ್ತಿಯ ಸೆಲೆಯಾಗಿ ನಿಂತವರು ಪತಿ ವಿವೇಕ್‌ ಕಾರ್ಯಪ್ಪ. ವ್ಯವಸಾಯ ಮಾಡಲೆಂದೇ ವಿವೇಕ್‌ ಅವರನ್ನು ವರಿಸಿ ಹಲಸೂರಿಗೆ ಬಂದ ಜೂಲಿ ಅವರದ್ದು ಇಬ್ಬರು ಗಂಡು ಮಕ್ಕಳು, ಒಬ್ಬ ಸೊಸೆ, ಒಬ್ಬ ಸಾಕು ಮಗಳನ್ನು ಹೊಂದಿರುವ ತುಂಬು ಕುಟುಂಬ.

‘ಸ್ವಾವಲಂಬಿ ಹಾಗೂ ಸುಸ್ಥಿರತೆಯ ಬದುಕು ಕಟ್ಟಿಕೊಳ್ಳಲು ನಾವು ಕೃಷಿಯನ್ನು ಆರಿಸಿಕೊಂಡೆವು’ ಎಂದು ಮಾತಿಗೆ ಇಳಿದ ಜೂಲಿ, ಕೃಷಿಯಲ್ಲಿ ಏನೆಲ್ಲ ಇದೆ ಎಂದು ಎಳೆಎಳೆಯಾಗಿ ಬಿಚ್ಚಿಟ್ಟರು. ‘1986ರಲ್ಲಿ ಖರೀದಿಸಿದ 22 ಎಕರೆ ಜಮೀನಿನಲ್ಲಿ ಕಲ್ಲು ಮಣ್ಣು  ಬಿಟ್ಟರೆ ಬೇರೆ ಏನೂ ಇರಲಿಲ್ಲ. ಮೂರು ಮಾವಿನ ಮರ, ಜತೆಗೆ ಒಂದು ತಾರೆ ಮರ ಇತ್ತು. ಈ ಮಣ್ಣಿನಲ್ಲಿ ಬೆಳೆ ಹೇಗೆ ಬರುತ್ತದೆ ಎಂದು ಸಂಶಯ ತೋರಿದವರೇ ಹೆಚ್ಚು. ಸತತ ಎರಡು ಮೂರು ವರ್ಷಗಳ ಪರಿಶ್ರಮದ ಫಲವಾಗಿ ಕಲ್ಲುಗಳನ್ನು ಮಣ್ಣಿನಿಂದ ಬೇರ್ಪಡಿಸಿ ಕೃಷಿಭೂಮಿಯನ್ನಾಗಿ ಪರಿವರ್ತಿಸಿದೆವು. ಭೂಮಿಗೆ ನಾವೇ ತಯಾರಿಸಿದ ಕಾಂಪೋಸ್ಟ್‌ ಗೊಬ್ಬರ ಹಾಕಿ ಹದ ಮಾಡಿದೆವು.

ಮೊದಲ 5 ವರ್ಷ ನಿರೀಕ್ಷೆಯಷ್ಟು ಬೆಳೆ ಬರದಿದ್ದರೂ, ಯಾವುದೇ ಕೀಟನಾಶಕ ಸಿಂಪಡಿಸದ ಪರಿಶುದ್ಧ ಬೆಳೆ ಬೆಳೆದ ಖುಷಿ ನಮ್ಮಲ್ಲಿನ ಉತ್ಸಾಹವನ್ನು ನೂರ್ಮಡಿಗೊಳಿಸಿತ್ತು’ ಎನ್ನುವಾಗ ಜೂಲಿ ಅವರ ಮುಖದಲ್ಲಿ ಮಂದಹಾಸ ಮೂಡಿತ್ತು. ಭೂಮಿಗೆ ರಾಸಾಯನಿಕಗಳನ್ನು ಹಾಕಿದರೆ ಬಲು ಬೇಗ ಮಣ್ಣಿನ ಸಾರ ಅಳಿದುಹೋಗುತ್ತದೆ. ಅಂತಹ ಮಣ್ಣಿನಲ್ಲಿ ಬೆಳೆಯುವ ಬೆಳೆ ಕೂಡ ಸಾರಹೀನವಾಗುತ್ತದೆ ಎಂಬ ನಿಲುವಿಗೆ ಕಟಿಬದ್ಧರಾಗಿರುವ ಅವರು, ‘ಕ್ರಿಮಿನಾಶಕ, ರಾಸಾಯನಿಕ, ಗೊಬ್ಬರ ಇವನ್ನೆಲ್ಲ ನಮ್ಮ ರೈತರು ಭೂಮಿಗೆ ಹಾಕುವುದನ್ನು ಬಿಡಬೇಕು. ಆಗ ಮಾತ್ರ ಪರಿಶುದ್ಧ ಬೆಳೆ ಬೆಳೆಯಲು ಸಾಧ್ಯ. ಸಾವಯವ ಕೃಷಿಯಲ್ಲಿ ಯಥೇಚ್ಚವಾಗಿ ಬೆಳೆ ಬರದಿದ್ದರೂ, ನಷ್ಟವಂತೂ ಆಗುವುದಿಲ್ಲ. ಅಲ್ಲದೇ, ಬರೀ ಲಾಭದ ದೃಷ್ಟಿಯಿಟ್ಟುಕೊಂಡು ಕೃಷಿ ಮಾಡ ಹೊರಟರೆ ಭೂಮಿ ಬಂಜರಾಗುತ್ತದೆ.

ಯಾವುದೇ ಕಾರಣಕ್ಕೂ ಭೂ ತಾಯಿಯ ಒಡಲನ್ನು ಬರಿದು ಮಾಡಬಾರದು. ನಾವೆಷ್ಟು ಆಸ್ಥೆಯಿಂದ ಆಕೆಯನ್ನು ನೋಡಿಕೊಳ್ಳುತ್ತೇವೋ ಅದಕ್ಕೆ ತಕ್ಕಂತೆ ಭೂತಾಯಿ ನಮಗೆ ಬೆಳೆ ನೀಡುತ್ತಾಳೆ’ ಎನ್ನುತ್ತ ತಮ್ಮ ಭೂಮಿ ಮೇಲಿನ ಪ್ರೀತಿಯನ್ನು ಹೊರಹಾಕಿದರು. ದಂಪತಿಯ ಈ ಪರಿ ಭೂಮಿ ಪ್ರೀತಿಯನ್ನು ಗುರುತಿಸಿ ರಾಜ್ಯ ಸರ್ಕಾರ 2007ರಲ್ಲಿ ‘ಕೃಷಿ ಪಂಡಿತ’ ಪ್ರಶಸ್ತಿ ನೀಡಿದೆ. ಬಿತ್ತನೆ ಬೀಜಗಳನ್ನು ಆರಂಭದ ವರ್ಷಗಳಲ್ಲಿ ಮಾರುಕಟ್ಟೆಯಿಂದ ತರುತ್ತಿದ್ದ ಅವರು, ಅವುಗಳಲ್ಲಿಯೂ ಕಳಪೆ ಗುಣಮಟ್ಟ ಇರುವುದನ್ನು ಕಂಡು, ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ಜಮೀನಿಗೆ ಬೇಕಾದ ಬಿತ್ತನೆ ಬೀಜವನ್ನು ತಾವೇ ತಯಾರಿ ಮಾಡಿಕೊಳ್ಳುತ್ತಾರೆ. ಸುತ್ತಮುತ್ತಲಿನ ರೈತರಿಗೂ ಬಿತ್ತನೆ ಬೀಜಗಳನ್ನು ಮಾರಾಟ ಮಾಡುತ್ತಾರೆ.

ಕೃಷಿಯೇತರ ಚಟುವಟಿಕೆಗಳಲ್ಲೂ ತೊಡಗಿಕೊಂಡಿರುವ ಜೂಲಿ, ನಿರಂತರ ಸಂಶೋಧನೆಗೆ ಮುಂದಾಗಿದ್ದಾರೆ. ತಾವು ತೊಡುವ ಬಟ್ಟೆಯನ್ನು ತಾವೇ ತಯಾರಿಸಿಕೊಳ್ಳುವ ಜತೆಗೆ ಹೋಮಿಯೋಪಥಿ ಚಿಕಿತ್ಸಾ ವಿಧಾನವನ್ನು ಕರಗತ ಮಾಡಿಕೊಂಡಿದ್ದಾರೆ. ತಮ್ಮ ಕುಟುಂಬ ಹಾಗೂ ಸುತ್ತಮುತ್ತಲ ಹೆಣ್ಣುಮಕ್ಕಳ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುತ್ತಿದ್ದಾರೆ. ಬಟ್ಟೆಗೆ ಬೇಕಾದ ಬಣ್ಣ ತಯಾರಿಸುವುದು, ಯಾವ ಪದಾರ್ಥದಿಂದ ಯಾವ ಬಣ್ಣ ತಯಾರಿಸಬಹುದು ಎಂಬ ಸಂಶೋಧನೆ ನಿರಂತರವಾಗಿ ಸಾಗಿದೆ.

ನೀಲಿ ಬಣ್ಣ ತಯಾರಿಕೆಗೆ ಪ್ರಮುಖವಾಗಿ ಬೇಕಾಗುವ ‘ಇಂಡಿಗೋಫೆರಾ ಟಿಂಕ್ಟೋರಿಯಾ’ ಎಂಬ ಸಸ್ಯ ಕೂಡ ಇವರ ಜಮೀನಿನಲ್ಲಿ ಸ್ಥಾನ ಪಡೆದಿದೆ. ‘ಇದು ನಮ್ಮ ದೇಶದಲ್ಲಿ ಅದರಲ್ಲೂ ಈ ಭಾಗದಲ್ಲಿ ಮಾತ್ರ ಬೆಳೆಯುವ ಸಸ್ಯವಾಗಿದ್ದು, ಬ್ರಿಟಿಷರು ಆಗಿನ ಕಾಲದಲ್ಲಿ ಇಡೀ ವಿಶ್ವಕ್ಕೆ ಇದನ್ನು ಪರಿಚಯಿಸಿದರು’ ಎಂಬ ವಿವರಣೆ ನೀಡುತ್ತಾರೆ ಜೂಲಿ. ಅದೇ ರೀತಿ, ಅಡಿಕೆ, ಅರಿಶಿಣ, ದಾಳಿಂಬೆ ಚಕ್ಕೆ, ಈರುಳ್ಳಿ ಸಿಪ್ಪೆಯಿಂದ ಬಟ್ಟೆಗಳಿಗೆ ಬೇಕಾಗುವ ಬಣ್ಣವನ್ನು ತಯಾರಿಸುತ್ತಾರೆ.

ಸೂರ್ಯಕಾಂತಿ, ಕೊಬ್ಬರಿಯಿಂದ ಎಣ್ಣೆಯನ್ನು ತಯಾರಿಸುವ ವಿವೇಕ್‌ ಕಾರ್ಯಪ್ಪ ಅವರ ಬಳಿ ಎಣ್ಣೆ ತಯಾರಿಕೆಗೆ ಬೇಕಾಗುವ ಮಿಷನ್‌ ಕೂಡ ಇದೆ. ಕೊಬ್ಬರಿ ಎಣ್ಣೆಯಿಂದ ಸಾಬೂನು, ಹತ್ತಿಯಿಂದ ಬಟ್ಟೆ, ಹಣ್ಣುಗಳಿಂದ ಜಾಮ್, ಹಾಲಿನಿಂದ ತುಪ್ಪ, ಪನ್ನೀರ್‌, ಚೀಸ್‌ ತಯಾರಿಸಿ, ಗೋವಾ, ಪುದುಚೆರಿ, ಹೈದರಾಬಾದ್, ಕೋಲ್ಕತ್ತ ಹಾಗೂ ಜಮೀನಿನ ಸಮೀಪದಲ್ಲೇ ಇರುವ ರೆಸಾರ್ಟ್‌ಗಳಿಗೆ ಮಾರಾಟ ಮಾಡುತ್ತಾರೆ. ಕಡಿಮೆ ಇಳುವರಿ ಬಂದರೂ ಮೌಲ್ಯವರ್ಧನೆಯಿಂದ ಹೆಚ್ಚು ಆದಾಯ ಬರುತ್ತಿದೆ. ಭೂಮಿಯನ್ನು ನಂಬಿ ಸರಿಯಾಗಿ ವ್ಯವಸಾಯ ಮಾಡಿದರೆ ನಷ್ಟ ಅನ್ನೋದು ಇಲ್ಲವೇ ಇಲ್ಲ ಎಂಬುದು ಅವರ ನಿಲುವು.

ಎಲ್ಲವೂ ಇದೆ ಇಲ್ಲಿ...
ಪಟ್ಟಣದಿಂದ ಸುಮಾರು 20 ಕಿ.ಮೀ ದೂರವಿರುವ ಇವರ ಜಮೀನಿನಲ್ಲಿ ಏನು ಬೇಕೋ ಎಲ್ಲವೂ ಇವೆ. ಸೊಪ್ಪು, ತರಕಾರಿ, ಹಣ್ಣು, ಮಸಾಲೆ ಗಿಡಗಳು, ಹೂವಿನ ಬಳ್ಳಿಗಳು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ರಾಗಿ, ಭತ್ತ, ಜೋಳ, ಮುಸುಕಿನ ಜೋಳ, ನವಣೆ, ಸಜ್ಜೆ, ತೊಗರಿ, ಶೇಂಗಾ, ಉದ್ದು, ಹೆಸರು, ಅಲಸಂದಿ, ಅವರೆ, ಬಾಳೆ, ತೆಂಗು, ಅಡಿಕೆ, ಹೀರೇಕಾಯಿ, ಬೀನ್ಸ್‌, ಕ್ಯಾರೆಟ್‌, ಮೂಲಂಗಿ, ಆಲೂಗಡ್ಡೆ, ಈರುಳ್ಳಿ, ಸೌತೆಕಾಯಿ, ಟೊಮೆಟೊ, ಬೀಟ್‌ರೂಟ್‌, ಮುಳಗಾಯಿ,

ಕೊತ್ತಂಬರಿ, ಮೆಂತ್ಯ, ಪಾಲಾಕ್‌, ಬಸಳೆ, ಕಿರ್‌ಕಿರೆ, ಅರಿವೆ ಇತ್ಯಾದಿ ಎಲ್ಲ ಬಗೆಯ ಸೊಪ್ಪುಗಳಲ್ಲದೇ, ವಿದೇಶಗಳಲ್ಲಿ ಬೆಳೆಯುವ ತರಕಾರಿ, ಸೊಪ್ಪುಗಳ ತಳಿಗಳು ಕೂಡ ಇಲ್ಲಿವೆ. ಚಕ್ಕೆ, ಲವಂಗ, ಏಲಕ್ಕಿ, ಪಲಾವ್‌ ಎಲೆ, ಕರಿ ಮೆಣಸು, ವೀಳ್ಯದೆಲೆ, ಸಪೋಟಾ, ದಾಳಿಂಬೆ, ಸೇಬು, ಪಪ್ಪಾಯ, ಕಲ್ಲಂಗಡಿ, ಕರಬೂಜ ಹೀಗೆ ಆಯಾ ಋತುಮಾನದಲ್ಲಿ ಯಾವ ಬೆಳೆ ಚೆನ್ನಾಗಿ ಬರುತ್ತದೋ ಆ ಬೆಳೆಗಳು ಇಲ್ಲಿ ಬಿತ್ತನೆಯಾಗುತ್ತವೆ. ಸಸ್ಯಗಳೊಂದಿಗೆ ಇಲ್ಲಿ ಪ್ರಾಣಿ, ಪಕ್ಷಿಗಳೂ ದಂಪತಿಯ ಪ್ರೀತಿಯನ್ನು ಹಂಚಿಕೊಂಡಿವೆ.

ಆಡು, ಹಸು, ಜೋಡೆತ್ತು, ಕೋಳಿ (ಕಕ್ಕುಟೋದ್ಯಮಕ್ಕೆ), ಬಾತುಕೋಳಿ, ಗಿಣಿ, ನಾಯಿ ಹೀಗೆ ಇವುಗಳ ಪಟ್ಟಿಯೂ ಬೆಳೆಯುತ್ತದೆ. ‘ಕೃಷಿಯಲ್ಲಿ ಮಹಿಳೆಯೇ ಹೆಚ್ಚು ದುಡಿಯುವುದು. ಬಿತ್ತಿದ ಬೆಳೆ ಫಲ ನೀಡುವವರೆಗೂ ಆಸ್ಥೆ ವಹಿಸಿ, ಸಸಿಗಳನ್ನು ಕಾಳಜಿಯಿಂದ ನೋಡಿಕೊಳ್ಳುವುದು ಮಹಿಳೆ. ಆದರೆ, ಅದರಿಂದ ಬಂದ ಆದಾಯವೆಲ್ಲವನ್ನೂ ಪುರುಷರು ಪಡೆಯುತ್ತಾರೆ. ಈ ಕ್ರಮ ಸರಿಯಲ್ಲ’ ಎನ್ನುತ್ತ ಗ್ರಾಮೀಣ ಭಾಗದ ಮಹಿಳೆಯರ ಸ್ಥಿತಿ ಕಂಡು ಮರುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT