ADVERTISEMENT

ಕುವೆಂಪು ಪದ ಸೃಷ್ಟಿ: ಚಾಮರಸಮುದ್ರ

ಕುವೆಂಪು ಪದ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 0:32 IST
Last Updated 14 ಏಪ್ರಿಲ್ 2024, 0:32 IST
<div class="paragraphs"><p>ಕುವೆಂಪು</p></div>

ಕುವೆಂಪು

   

ಚಾಮರಸಮುದ್ರ

ಕುವೆಂಪು ಅವರು ‘ಕಬ್ಬಿನ ಗದ್ದೆಗಳ ನಡುವಣ ರಸ್ತೆಯಲ್ಲಿ ಕಾರು ಚಲಿಸುವಾಗ ಕಬ್ಬಿನ ಹೂವಿನ ಚಾಮರಸಮುದ್ರ ಅಲೆ ಅಲೆಯಾಗಿ ಚಲಿಸುವ ದಿವ್ಯ ದೃಶ್ಯಕ್ಕೆ ‘ಓಂ ಇಕ್ಷುಪುಷ್ಪ ಜಗನ್ಮಾತೆ ನಮೋ ನಮಃ’ ಎಂಬ ಮಂತ್ರಧ್ಯಾನ ಪೂಜೆ ಸಲ್ಲುತ್ತಿರುತ್ತದೆ.’ ಎಂದು ‘ಮಂತ್ರಾಕ್ಷತೆ’ ಕವನದ ಭಾವ ಸಂದರ್ಭದಲ್ಲಿ ಸೂಚಿಸಿದ್ದಾರೆ. ಅದರಲ್ಲಿ ‘ಚಾಮರಸಮುದ್ರ’ ಎಂಬ ಹೊಸ ಪದದಲ್ಲಿ ಕಬ್ಬಿನ ಹೂವಿನ ಅಲೆದಾಟವನ್ನು ಬಣ್ಣಿಸಿದ್ದಾರೆ.

ADVERTISEMENT

ಬಟ್ಟೆಬೆಂತರ

ಬಟ್ಟೆಬೆಂತರ (ನಾ). ದಾರಿಯದೆವ್ವ; ಮಾರ್ಗದಲ್ಲಿನ ಪಿಶಾಚಿ

ಮುದಿ ಅರಸ ದಶರಥನು ತನ್ನ ನಯನಾಭಿರಾಮ ಮಗ ರಾಮಚಂದ್ರನು ಸೀತೆ, ಲಕ್ಷ್ಮಣರೊಡನೆ ರಥವೇರಿ ಕಾಡಿಗೆ ಹೋಗುತ್ತಿರಲು-ರಥವೇಗಕ್ಕೆ ಸಮನಾಗಿ ಸಾಗಲಾರದೆ ಕೂಗುತ್ತ, ಕಡೆದ ಮೂರ್ತಿಯಂತೆ ನಿಂತುಬಿಟ್ಟನು. ನಟ್ಟ ನಡು ಬೀದಿಯಲ್ಲಿ ಶಿಸ್ತುಬದ್ಧವಾಗಿ ಬಿದ್ದನು. ಕೌಸಲ್ಯೆ ಓಡಿ ಬಂದು ಎತ್ತಿದಳು. ಕೈಕೆಯನ್ನು ನೋಡಿದ ರಾಜನು ಉರಿವ ಕೋಪದಲ್ಲಿ ಚೀರಿದನು.

ಕುವೆಂಪು ಅವರು ದೊರೆ ದಶರಥನ ಆಗಿನ ದಾರುಣ ಸ್ಥಿತಿಯನ್ನು ಚಿತ್ರಿಸುವಾಗ ಬಟ್ಟೆಬೆಂತರನಂತೆ ನಡೆದನು ಎಂಬ ಪದ ಪ್ರಯೋಗಿಸಿದ್ದಾರೆ.

ದೊರೆಯಿಂತು

ಚಿತ್ತವೈಕಲ್ಯದಿಂ, ದುಃಖಡಾಕಿನಿಯಿಂದೆ

ಪೊಯ್ವಡೆದನೋಲ್, ಕಿಳ್ತು ನವಿರಂ ಶರೀರಮಂ

ವಸನಂಗಳಂ, ಚರಿಸೆ ಬಟ್ಟೆಬೆಂತರನಂತೆ.

ಜಡೆವೊರು

ಜಡೆವೊರು (ಕ್ರಿ). ಜಟೆಯನ್ನು ಧರಿಸು; ಜಡೆಯನ್ನು ಹೊಂದಿರು; ಜಡೆಗಟ್ಟಿದ ಮುಡಿಯಿಂದ ಕೂಡಿರು

(ಜಡೆ + ಪೊರು)

ರಾಮಸೀತೆ ಲಕ್ಷ್ಮಣರು ಪಂಚವಟಿಯಿಂದ ಅಯೋಧ್ಯೆಗೆ ಹಿಂತಿರುಗುವ ಬಗ್ಗೆ ಆಲೋಚಿಸುತ್ತಿರುತ್ತಾರೆ. ಆ ಸಂದರ್ಭದ ಒಂದು ದಿನ ಊಟದ ನಂತರ ವಿಶ್ರಮಿಸಿಕೊಳ್ಳುತ್ತಿರುವಾಗ ಅಲ್ಲಿಗೆ ತಪಸ್ವಿಗಳ ಗುಂಪು ಬರುತ್ತದೆ. ಅವರು ತಮಗೆ ಮಾಯಾವಿಗಳು, ಹೆಣ್ಣುವೇಷ ಹೊತ್ತವರು ಚೆನ್ನಾಗಿ ಬಡಿದರು. ರಕ್ಕಸರ ಹಿರಿದಾದ ತಂಡ ಒಂದು ಇತ್ತೀಚೆಗೆ ಬಂದಿರುವ ಶಂಕೆಯಿದೆ. ರಕ್ಷಣೆ ಕೊಡಿ ಎಂದು ರಾಮಚಂದ್ರನನ್ನು ಕೇಳಿಕೊಳ್ಳುವರು. ಅವನು ಕಳವಳವನ್ನು ವ್ಯಕ್ತಪಡಿಸದೆ ತಮ್ಮನಿಗೆ ಧನುರ್ಧಾರಿಯಾಗಿ ಹೋಗಿ ಅವರನ್ನು ಎದುರಿಸಲು ಹೇಳುತ್ತಾನೆ.

ಆ ರೀತಿ ಬೆದರಿದ ಜಟೆಹೊಂದಿದ ಸಾತ್ತ್ವಿಕ ಋಷಿಮುನಿಗಳನ್ನು ಕುವೆಂಪು ಅವರು ‘ಜಡೆವೊರು’ ಎಂದು ಹೊಸ ಪದ ಕಟ್ಟಿ ಚಿತ್ರಿಸಿದ್ದಾರೆ.

ಅಭಯ ವಚನವನಿತ್ತು ಕಳುಹಿದನ್ ಬೆದರಿದಾ

ಜಡೆವೊತ್ತರಂ. ಕಳವಳವನುಳಿದು ತಮ್ಮನಂ

ಬೆಸಸಿದನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.