ADVERTISEMENT

ಚೆಲುವಿನ ಖನಿ ಸಿಕ್ಕಿಂ!

ಡಾ.ಎಂ.ವೆಂಕಟಸ್ವಾಮಿ
Published 6 ಮಾರ್ಚ್ 2016, 11:24 IST
Last Updated 6 ಮಾರ್ಚ್ 2016, 11:24 IST
ಚೆಲುವಿನ ಖನಿ ಸಿಕ್ಕಿಂ!
ಚೆಲುವಿನ ಖನಿ ಸಿಕ್ಕಿಂ!   

ಗ್ಯಾಂಗ್‌ಟಕ್‌ ಸಿಕ್ಕಿಂನ ರಾಜಧಾನಿ ನಗರವಷ್ಟೇ ಅಲ್ಲ; ಆ ರಾಜ್ಯದ ಸ್ವಚ್ಛತೆಯ ಮಾದರಿಗೆ ಕನ್ನಡಿ ಹಿಡಿದಿರುವ ನಗರವೂ ಹೌದು. ಸಿಕ್ಕಿಂ ನುಡಿಯಲ್ಲಿ ‘ಗ್ಯಾಂಗ್’ ಎಂದರೆ ಗಂಗಾಳ, ‘ಠೋಕ್’ ಎಂದರೆ ದೇವರಿಗೆ ಅರ್ಪಣೆ ಎಂದರ್ಥವಂತೆ. ವರ್ಷದ ಮೊದಲ ಕೊಯಿಲನ್ನು ಗಂಗಾಳದಲ್ಲಿಟ್ಟು ದೇವರಿಗೆ ಅರ್ಪಿಸುವುದನ್ನು ಗ್ಯಾಂಗ್‌ಠೋಕ್ – ಗ್ಯಾಂಗ್‌ಟಕ್‌ ಎನ್ನುತ್ತಾರೆ.

ಕೋಲ್ಕತ್ತಾದಿಂದ ಬಗ್ದೋದ್ರಾ ವಿಮಾನ ನಿಲ್ದಾಣದಲ್ಲಿ ಇಳಿದುಕೊಂಡು ಅಲ್ಲಿಂದ 125 ಕಿ.ಮೀ. ರಸ್ತೆಯಲ್ಲಿ ಸಾಗಿದರೆ ಗ್ಯಾಂಗ್‌ಟಕ್ ಸಿಗುತ್ತದೆ. ಇಲ್ಲವೇ ಬೆಂಗಳೂರಿನಿಂದ ‘ಗೌಹಾಟಿ ಎಕ್ಸ್‌ಪ್ರೆಸ್’ ರೈಲಿನಲ್ಲಿ 47 ಗಂಟೆ ಪ್ರಯಾಣ ಮಾಡಿ, ಎನ್‌ಜೆಪಿ ನಿಲ್ದಾಣದಲ್ಲಿ ಇಳಿದುಕೊಂಡು, ಅಲ್ಲಿಂದ ರಸ್ತೆ ಮಾರ್ಗವಾಗಿ ಗ್ಯಾಂಗ್‌ಟಕ್‌ ತಲುಪಬಹುದು.

ರಸ್ತೆಗಳಲ್ಲಿ ಸಾಗುವ ಈ ಎರಡೂ ದಾರಿಗಳ ಪಯಣಕ್ಕೆ ಸುಮಾರು 4 ಗಂಟೆ ತಗುಲುತ್ತದೆ. ದಾರಿಯುದ್ದಕ್ಕೂ ಹಿಮಾಲಯ ಪರ್ವತಗಳ ಚೆಲುವನ್ನು ಆಸ್ವಾದಿಸಬಹುದು. ಡಾರ್ಜಿಲಿಂಗ್ ಮತ್ತು ಕಲಿಂಪಾಗ್ ಚಹಾ ತೋಟಗಳ ಮೂಲಕ ದಾರಿ ಸವಿದರೆ ಅದು ಇನ್ನೊಂದು ಅದ್ಭುತ. ಯಾವುದೇ ದಾರಿಯಲ್ಲಿ ಸಾಗಿದರೂ ಟೀಸ್ತಾ ಮತ್ತು ರಂಗೀತ್ ನದಿಗಳು ನಮ್ಮ ಜೊತೆಜೊತೆಗೆ ಸಾಗಿಬರುತ್ತವೆ.  

ಭಾರತ ನಕ್ಷೆಯ ಈಶಾನ್ಯ ಭಾಗದಲ್ಲಿ ಒಂದು ಸಣ್ಣ ಕೊಂಬಿನಂತೆ, ಚೀನಾ ನಕ್ಷೆಯ ಒಳಕ್ಕೆ ತೂರಿಕೊಂಡಿರುವ ಪುಟ್ಟ ರಾಜ್ಯ ಸಿಕ್ಕಿಂ. ಜೊತೆಗೆ ನೇಪಾಳ, ಭೂತಾನ್ ಮತ್ತು ಟಿಬೆಟ್ ದೇಶಗಳು ಸಿಕ್ಕಿಂ ಅನ್ನು ಸುತ್ತುವರಿದಿದ್ದು, ದಕ್ಷಿಣದಲ್ಲಿ ಪಶ್ಚಿಮ ಬಂಗಾಳ ಇದೆ. ಈಶಾನ್ಯ ಹಿಮಾಲಯದ ಅತಿ ದುರ್ಗಮ ಮತ್ತು ಸುಂದರ ರಾಜ್ಯ ಎನ್ನುವುದು ಸಿಕ್ಕಿಂನ ವಿಶೇಷ.

ಇದರ ವಿಸ್ತೀರ್ಣ ಕೇವಲ 7 ಸಾವಿರ ಚ.ಕಿ.ಮೀ. ನಾಲ್ಕು ಜಿಲ್ಲೆಗಳ ಈ ರಾಜ್ಯದ ಜನಸಂಖ್ಯೆ ಕೇವಲ 6 ಲಕ್ಷ. ರಾಜ್ಯದ ನಾಲ್ಕನೇ ಮೂರು ಭಾಗ ಅರಣ್ಯ ಮತ್ತು ಹಿಮ ಆವರಿಸಿಕೊಂಡಿರುವ ಪರ್ವತ ಶ್ರೇಣಿಗಳು.

ಪ್ರಪಂಚದ ಎರಡನೇ ಅತಿ ಎತ್ತರದ ಶಿಖರ ಕಾಂಚನ್‌ಜೊಂಗಾ ಸಿಕ್ಕಿಂನ ಪಶ್ಚಿಮ ಜಿಲ್ಲೆಯಲ್ಲಿದೆ. ರಾಜ್ಯದ ಯಾವುದೇ ಮೂಲೆಯಲ್ಲಿ ನಿಂತರೂ ಈ ಅದ್ಭುತ ಬಿಳಿ ತಲೆಗಳ ಕಾಂಚನ್‌ಜೊಂಗಾ ‘ಓ’ ಎನ್ನುತ್ತದೆ. ಯಾವ ಕಡೆ ನೋಡಿದರೂ ಹಸಿರು ಕಾಡು ಕಣಿವೆಗಳು, ಜಲಪಾತಗಳು, ಮೋಡಗಳ ಜೊತೆಗೆ ಆಕಾಶದತ್ತ ತಲೆಯೆತ್ತಿ ನಿಂತಿರುವ ಬಿಳಿ ಶಿಖರಗಳು; ಕಣಿವೆಗಳ ತುಂಬಾ ಬಣ್ಣಬಣ್ಣದ ಹೂವುಗಳು.

ಮಧ್ಯೆ ಮಧ್ಯೆ ಹೆಪ್ಪುಕಟ್ಟಿಕೊಂಡಿರುವ ಹಿಮ ಸರೋವರಗಳು. ಸಿಕ್ಕಿಂನಲ್ಲಿ ಪ್ರಕೃತಿಯ ಚೆಲುವೆಲ್ಲ ಕಾಲು ಮುರಿದುಕೊಂಡು ಬಿದ್ದಂತಿದೆ. 11,500 ಅಡಿಗಳಿಗಿಂತ ಎತ್ತರದಲ್ಲಿರುವ ಪರ್ವತ ಶ್ರೇಣಿಗಳ ಮೇಲೆಲ್ಲ ಹಿಮದ ಹೊದಿಕೆ ಕಾಣಬಹುದು. ಚಳಿಗಾಲದಲ್ಲಿ ಹಿಮ ಕವಚಗಳು ಇನ್ನಷ್ಟು ಕೆಳಕ್ಕೆ ಇಳಿದುಬರುತ್ತವೆ.

ನಾಹೊಂಗ್, ಚಾಂಗ್ ಮತ್ತು ಮೊನ್ ಬುಡಕಟ್ಟು ಜನಾಂಗಗಳು ಚೀನಾದಿಂದ ಬಂದು ಸಿಕ್ಕಿಂನಲ್ಲಿ ನೆಲೆನಿಂತವು ಎನ್ನಲಾಗಿದೆ. ಅನಂತರ ಬಂದ ಲೆಪ್‌ಛಾ ಬುಡಕಟ್ಟು ಜನಾಂಗ ಮೇಲಿನ ಮೂರು ಜನಾಂಗಗಳನ್ನು ಹೆಚ್ಚು ಕಡಿಮೆ ಪೂರ್ಣವಾಗಿ ಜೀರ್ಣಿಸಿಕೊಂಡಿತು. ಲೆಪ್‌ಛಾಗಳು ಬ್ರಹ್ಮಪುತ್ರಾದ ದಕ್ಷಿಣಕ್ಕಿರುವ ಮಿಕಿರ್, ಘಾರೋ ಮತ್ತು ಕಾಶಿ ಪರ್ವತಗಳಿಂದ ಬಂದವರೆಂದು ಹೇಳಲಾಗಿದೆ.

ಅದಕ್ಕೂ ಮುಂಚೆ ಇವರು ಬರ್ಮಾ, ಟೆಬೆಟ್ ಕಡೆಯಿಂದ ಬಂದವರೆಂದು ಹೇಳಲಾಗುತ್ತದೆ. ಮುಂದೆ ಇಲ್ಲಿಂದ ಕೆಲವರು ನೇಪಾಳ ಕಡೆಗೆ ಹೊರಟರು. ಇವರು ನಿಸರ್ಗವನ್ನು ಆರಾಧಿಸುವವರಾಗಿದ್ದರು. ಕ್ರಿ.ಶ. 1400ರಲ್ಲಿ ಲೆಪ್‌ಛಾಗಳು ಟುರ್ಪೆ ಪನೋ ಎಂಬವನನ್ನು ತಮ್ಮ ರಾಜನಾಗಿ ಆಯ್ಕೆ ಮಾಡಿಕೊಂಡರು.

ಆತ ಯುದ್ಧದಲ್ಲಿ ಮಡಿದ ಮೇಲೆ ಮೂವರು ರಾಜರು ಈ ಪ್ರದೇಶವನ್ನು ಆಳಿದ್ದರು. ೧೭ನೇ ಶತಮಾನದಲ್ಲಿ ಟಿಬೆಟ್‌ನಿಂದ ಬಂದ ರೊಂಗ್ ಜನಾಂಗ ಸಿಕ್ಕಿಂ ಜನರನ್ನು ತಮ್ಮ ಸೇವಕರನ್ನಾಗಿ ಮಾಡಿಕೊಂಡಿತು. ಇವರೆಲ್ಲ ಕೆಂಪು ಟೋಪಿಗಳನ್ನು ಧರಿಸುವವರಾಗಿದ್ದು, ಇವರಿಗೆ ವಿರುದ್ಧವಾಗಿ ಸ್ಥಳೀಯರು ಹಳದಿ ಟೋಪಿಗಳನ್ನು ಧರಿಸುತ್ತಿದ್ದರು. ನಿಸರ್ಗ ಆರಾಧಕರಾದ ಲೆಪ್‌ಛಾಗಳು ನಿಧಾನವಾಗಿ ಬೌದ್ಧ ಧರ್ಮದ ಕಡೆಗೆ ತಿರುಗಿದರು.

1700ರಲ್ಲಿ ನೇಪಾಳದ ಗೂರ್ಖಾಗಳು ಸಿಕ್ಕಿಂ ಮೇಲೆ ದಾಳಿ ಮಾಡಿ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡರು. ಈ ಪ್ರದೇಶ ಬ್ರಿಟಿಷರ ವಶವಾದ ಮೇಲೆ ಸಿಕ್ಕಿಂ ಭಾರತದೊಂದಿಕೆ ಒಡಂಬಡಿಕೆ ಮಾಡಿಕೊಂಡ ಕಾರಣ ನೇಪಾಳದ ಗೂರ್ಖಾಗಳು ಸಿಕ್ಕಿಂ ಮೇಲೆ ಮತ್ತೆ ದಾಳಿ ಮಾಡಿದರು. ಅನಂತರ ಬ್ರಿಟಿಷರು ಗೂರ್ಖಾಗಳನ್ನು ಹಿಮ್ಮೆಟ್ಟಿಸಿ, ಆ ಪ್ರದೇಶವನ್ನು ವಶಪಡಿಸಿಕೊಂಡಿದ್ದರು.

ಇಂದಿನ ಡಾರ್ಜಿಲಿಂಗ್ ಕೂಡ ಸಿಕ್ಕಿಂನಲ್ಲಿತ್ತು. 1962ರಲ್ಲಿ ಭಾರತ – ಚೀನಾ ಯುದ್ಧ ನಡೆದಾಗ ಸಿಕ್ಕಿಂ ಪ್ರತ್ಯೇಕವಾಗಿತ್ತು. ಆ ಪ್ರದೇಶದ ನಾಥುಲಾ ಪಾಸ್ ಗಡಿಯಲ್ಲಿ ಎರಡೂ ದೇಶಗಳ ಮಧ್ಯೆ ಯುದ್ಧ ನಡೆದು ನಾಥುಲಾ ಪಾಸ್ ರಸ್ತೆಯನ್ನು 2006ರವರೆಗೂ ಮುಚ್ಚಲಾಗಿತ್ತು. ಏಪ್ರಿಲ್ 14, 1975ರಲ್ಲಿ ಸಿಕ್ಕಿಂ ಜನರು ಭಾರತದ ಜೊತೆಗೆ ಸೇರಿಕೊಳ್ಳಬೇಕೆ ಇಲ್ಲವೆ ಎಂದು ಮತ ಚಲಾವಣೆ ಮಾಡಿದಾಗ ಸಿಕ್ಕಿಂ ಜನರು ಭಾರತದೊಂದಿಗೆ ಇರಲು ಅನುಮೋದನೆ ನೀಡಿದ್ದರು. ಈ ನಿರ್ಣಯವನ್ನು ವಿಶ್ವಸಂಸ್ಥೆ ಅನುಮೋದಿಸಿದರೂ ಚೀನಾ ಮಾತ್ರ ಒಪ್ಪಲಿಲ್ಲ. ಸಿಕ್ಕಿಂ ತನಗೆ ಸೇರಿದ ಪ್ರದೇಶವೆಂದು ಚೀನಾ ಇಂದಿಗೂ ಹೇಳಿಕೊಳ್ಳುತ್ತಿದೆ.

ಪ್ರಸ್ತುತ ಬುಟಿಯಾ ಜನಾಂಗದ ನಾಮ್ಗಿಲ್ ರಾಜವಂಶ ಸಿಕ್ಕಿಂ ರಾಜ್ಯದ ಧರ್ಮಕರ್ತರಾಗಿದ್ದಾರೆ. 19ನೇ ಶತಮಾನದಲ್ಲಿ ಸಿಕ್ಕಿಂ ಆಳುತ್ತಿದ್ದ ಬುಟಿಯಾಗಳು ಯಾವುದೇ ತೊಂದರೆ ಬಂದರೂ ಟಿಬೆಟ್ ಕಡೆಗೆ ನೋಡುತ್ತಿದ್ದರು. ಆದರೆ ಈಗ ಅದು ಚೀನಾ ಪಾಲಾಗಿದೆ, ಸಿಕ್ಕಿಂ ಭಾರತದ ಒಂದು ರಾಜ್ಯವಾಗಿದೆ.

ಪ್ರಸ್ತುತ ಸಿಕ್ಕಿಂನಲ್ಲಿ ಲೆಪ್‌ಛಾ, ಬುಟಿಯಾ, ಲಿಂಬಸ್, ಷರ್ಪಾ ಮತ್ತು ನೇಪಾಳಿ ಜನಾಂಗಗಳಿದ್ದು ಹೆಚ್ಚು ಕಡಿಮೆ ಎಲ್ಲರೂ ಮಹಾಯಾನ ಬೌದ್ಧ ಧರ್ಮವನ್ನು ಅನುಸರಿಸುತ್ತಿದ್ದಾರೆ. ಇವರ ಜೊತೆಗೆ ದೇಶದ ಇತರ ಭಾಷೆಗಳನ್ನು ಮಾತನಾಡುವ ವ್ಯಾಪಾರಿ ಜನಾಂಗಗಳು, ಬಂಗಾಲಿಗಳು ಮತ್ತು ವಲಸೆ ಬಂದಿರುವ ಬಾಂಗ್ಲಾ ದೇಶಿಗರು ಇದ್ದಾರೆ. ನೇಪಾಳಿ ಇಲ್ಲಿನ ರಾಜ್ಯ ಭಾಷೆ.

ಈ ಪುಟ್ಟ ರಾಜ್ಯ ಪ್ರಸ್ತುತ ಇಡೀ ದೇಶವೇ ತನ್ನ ಕಡೆಗೆ ನೋಡುವಂತಹ ಎರಡು ಕೆಲಸಗಳನ್ನು ಮಾಡಿ ಗಮನ ಸೆಳೆದಿದೆ. ೭೫ ಸಾವಿರ ಹೆಕ್ಟೇರ್ ಭೂಮಿಯಲ್ಲಿ ಸಾವಯುವ ಕೃಷಿ ಮಾಡುತ್ತಿರುವ ಮೊದಲ ರಾಜ್ಯ ಇದಾಗಿದೆ. 13 ವರ್ಷಗಳ ಹಿಂದೆ ಅಂದಿನ ಸಿಕ್ಕಿಂ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್, ಸಿಕ್ಕಿಂ ರಾಜ್ಯವನ್ನು ಸಾವಯುವ ಕೃಷಿಗೆ ಅಳವಡಿಸುವುದಾಗಿ ವಿಧಾನಸಭೆಯಲ್ಲಿ ಘೋಷಿಸಿದ್ದರು. ಅವರ ಮಾತು ಈಗ ಸಾಕಾರವಾಗಿದೆ.

ಇನ್ನೊಂದು ವಿಷಯವೆಂದರೆ ಇಡೀ ಸಿಕ್ಕಿಂ ರಾಜ್ಯ ಪ್ಲಾಸ್ಟಿಕ್‌ಮುಕ್ತ ಆಗಿರುವುದು. ಸಿಕ್ಕಿಂ ರಾಜ್ಯದ ಪುಟ್ಟ ರಾಜಧಾನಿ ಗ್ಯಾಂಗ್‌ಟಕ್‌ನ ಯಾವುದೇ ಮೂಲೆಯಲ್ಲೂ ಒಂದೇ ಒಂದು ಪ್ಲಾಸ್ಟಿಕ್ ಪೇಪರ್‌ ನೋಡಲು ಸಿಗುವುದಿಲ್ಲ. ನಗರ  ಮಧ್ಯದ ಮುಖ್ಯರಸ್ತೆ ‘ಎಂ.ಜಿ. ರಸ್ತೆ’ಯನ್ನು ಬಿಟ್ಟು ಬರಲು ಮನಸ್ಸೇ ಆಗುವುದಿಲ್ಲ. ಪ್ರವಾಸಪ್ರಿಯರು ಒಮ್ಮೆ ನೋಡಲೇಬೇಕಾದ ರಾಜ್ಯ ಸಿಕ್ಕಿಂ. ಪ್ರಾಕೃತಿಕ ಚೆಲುವಿನಿಂದ ಹಾಗೂ ನಾಗರೀಕರ ಪೌರಪ್ರಜ್ಞೆಯ ಕಾರಣದಿಂದಾಗಿ ಸಿಕ್ಕಿಂ ಗಮನಸೆಳೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.