ADVERTISEMENT

ಬದುಕು–ಬರಕ್ಕೆ ಸಡ್ಡು ಹೊಡೆದ ಮರಾಠಾವಾಡದ ಮಹಾಮಾತೆ

ಮುಸಾಫಿರ್

ಸತೀಶ್ ಚಪ್ಪರಿಕೆ
Published 12 ಮಾರ್ಚ್ 2016, 19:30 IST
Last Updated 12 ಮಾರ್ಚ್ 2016, 19:30 IST
ಬದುಕು–ಬರಕ್ಕೆ ಸಡ್ಡು ಹೊಡೆದ  ಮರಾಠಾವಾಡದ ಮಹಾಮಾತೆ
ಬದುಕು–ಬರಕ್ಕೆ ಸಡ್ಡು ಹೊಡೆದ ಮರಾಠಾವಾಡದ ಮಹಾಮಾತೆ   

ಈ ವರ್ಷದ ಜನವರಿಯೊಂದೇ ತಿಂಗಳು, ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲೆಯಲ್ಲಿ ಅರವತ್ತಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿಯಾಗಿದೆ. ಈಗಿನ ಸರ್ಕಾರಿ ಮಾಹಿತಿ ಪ್ರಕಾರ ಫೆಬ್ರುವರಿಯಲ್ಲಿ ಆ ಸಂಖ್ಯೆ 120ರ ಗಡಿ ದಾಟಿದೆ. ಕರ್ನಾಟಕದ ಗಡಿಗಂಟಿಕೊಂಡೇ ಇರುವ ಮರಾಠವಾಡ ಈಗ ಅಕ್ಷರಶಃ ಸಾವಿನರಮನೆ!

ಬರ, ಸರಣಿ ಆತ್ಮಹತ್ಯೆಯ ಆ ದಟ್ಟ ನೆರಳಿನಡಿ ಪುಣೆಯಿಂದ ಮುಂಜಾನೆ ಐದು ಗಂಟೆಗೆ ಹೊರಟ ನಾನು ಮತ್ತು ವಾಹನ ಚಾಲಕ ಕೃಷ್ಣ ಬಾರಾಮತಿ ತಲುಪುವಷ್ಟರಲ್ಲಿ ಬೆಳಕು ಹರಿದಿತ್ತು. ತುಳಜಾಪುರ ಪ್ರವೇಶಿಸಿದಾಗ, ಕೃಷ್ಣ ನನ್ನ ಬಳಿ ‘ತುಳಜಾಭವಾನಿಯ ದರ್ಶನ ಮಾಡಬೇಕೆ?’ ಎಂದಾಗ, ‘ನಾನು ದರ್ಶನ ಮಾಡಬೇಕಾದ ಮಹಾಮಾತೆ ಗಂಧೋರದಲ್ಲಿದ್ದಾರೆ’ ಎಂದೆ. ಆತ ನಸುನಗೆ ಸೂಸಿ, ವಾಹನವನ್ನು ನಲದುರ್ಗ ರಸ್ತೆಗೆ ತಿರುಗಿಸಿದರು.

ಗಂಧೋರ, ತುಳಜಾಪುರದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಒಂದು ಹಳ್ಳಿ. ಅಲ್ಲಿರುವವರು ಕೂಡ ಮಳೆಯಾಶ್ರಿತ ವ್ಯವಸಾಯವನ್ನು ಅವಲಂಬಿಸಿದ ರೈತಾಪಿ ಜನರು. ಮಳೆರಾಯ ಕೃಪೆ ತೋರಿದರೆ ಒಂದು ಬೆಳೆ. ಇಲ್ಲವಾದಲ್ಲಿ ನೀರಿಗೆ ಹಾಹಾಕಾರ. ಹೊಟ್ಟೆಗೆ ಬೆಂಕಿ. ಊರಿಗೆ ಊರೇ ಬೀಗ ಹಾಕಿ ವಲಸೆ. ತುತ್ತು ಅನ್ನಕ್ಕಾಗಿ ಪಟ್ಟಣಗಳಲ್ಲಿ ಕೂಲಿ–ನಾಲಿ. ಅಂತಹ ಆತಂಕದ ನಡುವೆಯೇ ಸುಮಾರು ನಲವತ್ತು ವರ್ಷಗಳ ಹಿಂದೆ ಅಲ್ಲಿನ ಸರ್ಕಾರಿ ಶಾಲೆಯ ಬಡಮೇಷ್ಟ್ರು ಭೀಮಾಶಂಕರ ಮಾರ್ಗಾನ್ ಡಾಂಗೆ ಮತ್ತು ಪತ್ನಿ ವಿಜಯ ಭಾಯಿ ಡಾಂಗೆ ತುಂಬು ಕುಟುಂಬದಲ್ಲಿ ಹುಟ್ಟಿದ ಮಗು ಗೋದಾವರಿ. 

ಮೂವರು ಸಹೋದರಿಯರು ಮತ್ತು ಒಬ್ಬ ಸಹೋದರನ ನೆರಳಲ್ಲಿ ಬೆಳೆದ ಗೋದಾವರಿ ಹತ್ತನೇ ತರಗತಿ ಮುಗಿಸುವಷ್ಟರಲ್ಲಿ ಹಸೆಮಣೆ ಏರಿಯಾಗಿತ್ತು. ಮರು ವರ್ಷವೇ ಕೈಗೊಂದು ಮಗು. ಎರಡು ವರ್ಷಕ್ಕೆ ಮತ್ತೊಂದು ಗಂಡು ಮಗು. ಅದಾದ ಒಂದೇ ವರ್ಷಕ್ಕೆ ಆಕೆಗೆ ವಿಧವೆಯ ಪಟ್ಟ! ಆಗ ಗಂಡನ ಮನೆಯವರು ಕ್ಯಾರೇ ಎನ್ನದೇ ಕೈಬಿಟ್ಟರು. ಕೈಯಲ್ಲಿ ಎರಡು ಹಸುಗೂಸುಗಳನ್ನು ಹಿಡಿದು, ತವರು ಮನೆಗೆ ಕಾಲಿಟ್ಟಾಗ ಹತ್ತೊಂಬತ್ತು ವರ್ಷ. ಗಂಧೋರಾದ ಮಣ್ಣಿನ ಮುಖ್ಯರಸ್ತೆಗಂಟಿಕೊಂಡೇ ಇರುವ ಆ ಮನೆಯಲ್ಲಿ ಆಗಲೂ ಇದ್ದದ್ದು ಮತ್ತು ಈಗಲೂ ಇರುವುದು ಒಂದೇ ಕೋಣೆ. ತಂದೆ–ತಾಯಿ, ಅಣ್ಣ–ಅತ್ತಿಗೆ ಅವರ ಮಕ್ಕಳು, ಗೋದಾವರಿ ಮತ್ತಾಕೆಯ ಎರಡು ಮಕ್ಕಳು.

‘ಆ ದಿನ ಕೈಯಲ್ಲಿ ಎರಡು ಮಕ್ಕಳನ್ನು ಎತ್ತಿಕೊಂಡು ಈ ಮನೆಯೊಳಗೆ ಕಾಲಿಡುವಾಗ ನನ್ನ ಬದುಕೇ ಮುಗಿಯಿತು ಎಂಬ ಭಾವನೆ ಆವರಿಸಿಕೊಂಡಿತ್ತು’– ಮನೆಯ ಮೆಟ್ಟಿಲ ಮೇಲೆ ಕೂತು ಹಳೆಯ ನೆನಪುಗಳ ಬುತ್ತಿ ಬಿಚ್ಚುವಾಗ ಆಕೆಯ ಕಣ್ಣಂಚಿನಲ್ಲಿ ನೀರು ಇರಲಿಲ್ಲ! ‘ಒಂದು ವರ್ಷ ಇವಳು ಆ ಪುಟ್ಟ ಕೋಣೆ ಬಿಟ್ಟು ಹೊರಬಂದಿರಲಿಲ್ಲ. ದಿನಕ್ಕೊಮ್ಮೆ ಬಹಿರ್ದೆಸೆಗೆ ಮತ್ತು ಸ್ನಾನಕ್ಕೆ ಮಾತ್ರ ಹೊರಗೆ ಬರುತ್ತಿದ್ದಳು. ಉಳಿದಂತೆ ಊಟ–ತಿಂಡಿ ಎಲ್ಲವನ್ನೂ ನಾವು ಬಲವಂತವಾಗಿ ಕೋಣೆಯೊಳಗೆ ಮುದುಡಿ ಕುಳಿತಿದ್ದ ಅವಳಿಗೆ ಒತ್ತಾಯ ಮಾಡಿ ತಿನ್ನಿಸಬೇಕಿತ್ತು’. ವಿಜಯ ಭಾಯಿ ಮಗಳ ಬದುಕಿನ ಘೋರ ದಿನಗಳನ್ನು ನೆನಪಿಸಿಕೊಂಡರು.

ಆಗಷ್ಟೆ ಸ್ತ್ರೀಶಕ್ತಿ ಸಂಘಗಳು ಎಲ್ಲೆಡೆ ಚಿಗುರೊಡೆಯುತ್ತಿದ್ದ ಕಾಲವದು. ಪುಣೆ ಮೂಲದ ‘ಸ್ವಯಂ ಶಿಕ್ಷಣ್ ಪ್ರಯೋಗ್’ (ಎಸ್‌ಎಸ್‌ಪಿ) ಸ್ವಯಂಸೇವಾ ಸಂಸ್ಥೆಯ ಬಾಲಾಸಾಹೇಬ್ ಅವರ ಕಿವಿಗೆ ಗೋದಾವರಿ ಕಥೆ ಬಿದ್ದಾಗ, ಹೇಗಾದರೂ ಮಾಡಿ ಆಕೆಯನ್ನು ಸಮಾಜದ ಮುಖ್ಯವಾಹಿನಿಗೆ ತಂದು ನೋವು ಮರೆಯುವಂತೆ ಮಾಡಬೇಕು ಎಂಬ ನಿರ್ಧಾರ ತೆಗೆದುಕೊಂಡರು. ಆಗ ಅಣ್ಣ ಸುನೀಲ್ ಮಶಾಂಕರ್ ಡಾಂಗೆಯಿಂದ ‘ಅವಳೇನೂ ಮನೆಯಿಂದ ಹೊರಹೋಗಿ ದುಡಿಯಬೇಕಿಲ್ಲ.  ಮರ್ಯಾದೆಯಿಂದ ಮನೆಯೊಳಗೆ ಇದ್ದರೆ ಸಾಕು’ ಬಂದ ಅಪಸ್ವರ. ಗೋದಾವರಿಗೆ ತಂದೆ–ತಾಯಿ, ನೆರೆಹೊರೆಯ ಮಹಿಳೆಯರ ಬೆಂಬಲ ಸಿಕ್ಕಿತು. ಮುದುಡಿ ಕುಳಿತಿದ್ದ ಯುವ ವಿಧವೆ ಕೊನೆಗೂ ಕತ್ತಲೆಯ ಕೋಣೆಯಿಂದ ಹೊರಗಡಿಯಿಟ್ಟು ಬೆಳಕಿನೆಡೆ ಹೆಜ್ಜೆ ಹಾಕಿದರು. 

ಕೈಯಲ್ಲಿ ಇಪ್ಪತ್ತು ರೂಪಾಯಿ ಹಿಡಿದು ಮನೆಯ ಹೊಸ್ತಿಲು ದಾಟಿದ ಗೋದಾವರಿ ಸ್ಥಾಪಿಸಿದ ಮೊದಲ ಸ್ತ್ರೀಶಕ್ತಿ ಸಂಘ, ‘ಯಶವಂತಿ ಸಖಿ ಬಚತ್ ಘಟಕ್’. ‘ನಾನು ಬದುಕಿನ ಬಗ್ಗೆ ಎಷ್ಟು ನಿರಾಸಕ್ತಳಾಗಿದ್ದೆ ಎಂದರೆ, ಸಂಘದ ಲೆಕ್ಕ ಬರೆಯುವಾಗ 407ರ ಬದಲು 4007 ಬರೆದು ಬಿಡುತ್ತಿದ್ದೆ. ಕ್ಲಸ್ಟರ್ ಮೀಟಿಂಗ್ ವೇಳೆ ಒಂದು ಮೂಲೆಯಲ್ಲಿ ಕೂತು ಅಳುತ್ತಿದ್ದೆ. ಕ್ರಮೇಣ ಉಳಿದ ಮಹಿಳೆಯರ ಜೊತೆ ಹೊಂದಿಕೊಂಡು ಅವರ ಕಷ್ಟ-ಸುಖಗಳೊಂದಿಗೆ ನನ್ನ ಕಷ್ಟ–ಸುಖಗಳನ್ನು ಹಂಚಿಕೊಳ್ಳಲಾರಂಭಿಸಿದೆ. ಮನಸ್ಸು ಹಗುರವಾಗಲಾರಂಭಿಸಿತು. ಸಂಘದ ಎಲ್ಲ ಚಟುವಟಿಕೆಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡೆ. ನಾನು ತುಂಬಾ ಚೆನ್ನಾಗಿ ಲೆಕ್ಕ ಬರೆಯುತ್ತಿದ್ದರಿಂದ ನಮ್ಮ ಸುತ್ತಮುತ್ತಲಿನ 10 ಹಳ್ಳಿಗಳ 25 ಸಂಘಗಳ ಲೆಕ್ಕ ಬರೆಯುವ ಜವಾಬ್ದಾರಿ ಹೊರಿಸಿದರು.

ನಂತರ ನನ್ನ ಬದುಕೇ ಬದಲಾಗಿ ಹೋಯಿತು’. ಗೋದಾವರಿ ಆರಂಭದ ಹೆಜ್ಜೆಗಳ ಮೆಲುಕು ಹಾಕಿದರು. ಗೋದಾವರಿ ಅವರಿಗಿದ್ದ ಅಚ್ಚುಕಟ್ಟಿನ ವ್ಯವಹಾರ ಜ್ಞಾನದ ಫಲ, ತುಳಜಾಪುರ ಮತ್ತು ಸುತ್ತಮುತ್ತಲಿನ ಹಲವಾರು ಕ್ಲಸ್ಟರ್‌ಗಳಲ್ಲಿದ್ದ ನೂರಾರು ಮಹಿಳಾ ಸ್ವಸಹಾಯ ಸಂಘಗಳಿಗೆ ಲಭ್ಯವಾಯಿತು. ಮೂವತ್ತರ ಗಡಿ ದಾಟುವಷ್ಟರಲ್ಲಿ ಆಕೆ ತುಳಜಾಪುರ ಬ್ಲಾಕ್‌ನ 500 ಸ್ವಸಹಾಯ ಸಂಘಗಳ ಫೆಡರೇಷನ್‌ನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಅದರೊಂದಿಗೆಯೇ ‘ಎಸ್‌ಎಸ್‌ಪಿ’ ಗ್ರಾಮೀಣ ಮಟ್ಟದಲ್ಲಿ ಸ್ಥಾಪನೆ ಮಾಡಿದ ಕೃಷಿ ಮಂಡಲಗಳ ನೇತೃತ್ವ ಕೂಡ ವಹಿಸಿಕೊಂಡರು.

ಸದಾ ಬರದ ನೆರಳಲ್ಲಿಯೇ ಬದುಕಿ–ಬೆಳೆದ ಗೋದಾವರಿ ನೇತೃತ್ವದ ಮಹಿಳಾ ಪಡೆ, ಬರಕ್ಕೆ ಬೆನ್ನೊಡ್ಡಿ ಓಡುವ ಬದಲು, ಎದೆಯೊಡ್ಡಿ ನಿಲ್ಲುವುದು ಹೇಗೆ ಎಂಬುದರ ಬಗ್ಗೆ ಚಿಂತೆ ಮಾಡಿತು. ಬರವನ್ನು ಮೆಟ್ಟಿ ನಿಲ್ಲಲು ‘5–ಜ’ಗಳ ಸೂತ್ರ ಹುಟ್ಟುಹಾಕಿದರು. ಬರವನ್ನು ಮೆಟ್ಟಿ ನಿಲ್ಲಬೇಕಿದ್ದರೆ ಜಮೀನು, ಜಲ, ಜಂಗಲ್, ಜಾನುವಾರು ಮತ್ತು ಜನಸಮುದಾಯವನ್ನು ಕಾಪಾಡಿಕೊಳ್ಳಬೇಕು. ಆ ಪಂಚಸೂತ್ರಗಳೊಂದಿಗೆ ಕಾರ್ಯಾಚರಣೆಗೆ ಇಳಿದ ಈ ಮಹಿಳಾ ಪಡೆ ಮಾಡಿದ ಮೊದಲ ಕೆಲಸವೆಂದರೆ, ಸದಾ ಪುರುಷರ ಕಪಿಮುಷ್ಟಿಯಲ್ಲಿದ್ದ ಕೃಷಿ ಚಟುವಟಿಕೆಗೆ ಸಂಬಂಧಿಸಿದ ನಿರ್ಧಾರದಲ್ಲಿ ತಮ್ಮ ಪಾಲು ಕಸಿದುಕೊಂಡಿದ್ದು.

ಗೋದಾವರಿ ಆತ್ಮೀಯ ಗೆಳತಿ ಅರ್ಚನಾ ತಾಯಿ, ‘ಮೊದಲು ನಮ್ಮ ಭೂಮಿಯಲ್ಲಿ ಏನು ಬೆಳೆಯಬೇಕು ಎಂಬ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಕುಟುಂಬದ ಮಹಿಳೆಯರಿಗೆ ಇರಲಿಲ್ಲ. ಎಲ್ಲ ಗಂಡಸರು ಹತ್ತಿ, ಕಬ್ಬು ಹಾಗೂ ಇನ್ನಿತರ ವಾಣಿಜ್ಯ ಬೆಳೆಗಳ ಬೆನ್ನ ಹಿಂದೆ ಬಿದ್ದು ಕೈಸುಟ್ಟುಕೊಳ್ಳುತ್ತಿದ್ದರು. ಮೊದಲ ಹಂತದಲ್ಲಿ ನಾವು ಅವರ ಮನವೊಲಿಸಿ ಇದ್ದ ಭೂಮಿಯಲ್ಲಿ ಒಂದಿಷ್ಟು ಭಾಗವನ್ನು ಮಹಿಳೆಯರಿಗೆ ಸಿಗುವಂತೆ ಮಾಡಿದೆವು.

ಆ ಭೂಮಿಯಲ್ಲಿ ತರಕಾರಿ, ನವಣೆ, ಜೋಳ ಮುಂತಾದ ಕುಟುಂಬದ ಆಹಾರಕ್ಕೆ ಮತ್ತು ಆರೋಗ್ಯಕ್ಕೆ ಅನುಕೂಲಕರವಾದ ಬೆಳೆ ಬೆಳೆದೆವು. ಜೊತೆಯಲ್ಲಿಯೇ ಶೂನ್ಯ ಕೃಷಿ, ಪಶು ಸಂಗೋಪನೆ, ಕೋಳಿ–ಕುರಿ ಸಾಕಣೆ ಶುರುವಾಯಿತು. ಒಮ್ಮೆ ನಾವು ಸಾಧನೆ ಮಾಡಿ ತೋರಿಸಿದ ಮೇಲೆ ಮನೆಯೊಳಗಿನ ಪುರುಷರು ಕೃಷಿಯ ಜವಾಬ್ದಾರಿಯನ್ನು ಕ್ರಮೇಣ ಮಹಿಳೆಯರಿಗೆ ವಹಿಸಿದರು. ಈಗಂತೂ ನಾವು ಕೆಲಸ ಮಾಡುವ ಒಸ್ಮಾನಾಬಾದ್‌ನ 100 ಹಳ್ಳಿಗಳಲ್ಲಿನ ಪ್ರತಿಯೊಂದು ಮನೆಯಲ್ಲೂ ಮಹಿಳೆಯರದ್ದೇ ದರ್ಬಾರು’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಸಣ್ಣ ಉಳಿತಾಯ ಮತ್ತು ಕೃಷಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ ಗೋದಾವರಿ ಅವರ ಮಹಿಳಾ ಪಡೆ, ಕ್ರಮೇಣ ಗ್ರಾಮೀಣ ಮಟ್ಟದಲ್ಲಿ ಮಹಿಳೆಯರು ಸ್ಥಳೀಯವಾಗಿ ಸಣ್ಣ–ಸಣ್ಣ ಉದ್ಯಮ ಸ್ಥಾಪನೆ ಮಾಡುವಂತಹ ವಾತಾವರಣವನ್ನು ಸೃಷ್ಟಿ ಮಾಡಿತು. ಗ್ರಾಮೀಣ ಪ್ರದೇಶವನ್ನು ಸದಾ ಕಾಡುವ ವಿದ್ಯುತ್ ಸಮಸ್ಯೆಗೆ ಪರಿಹಾರವಾಗಿ ಸಿಕ್ಕಿದ್ದು ಸೋಲಾರ್ ದೀಪಗಳ ರೂಪದಲ್ಲಿ. ಆ ಸೋಲಾರ್ ದೀಪಗಳನ್ನು ಮಾರುವ, ಅಗತ್ಯ ಬಿದ್ದರೆ ರಿಪೇರಿ ಮಾಡುವ ಸಲುವಾಗಿ ‘ಊರ್ಜಾ ಸಖಿ’ಯರ ಪಡೆಯ ಉದ್ಭವ. ಅದರೊಂದಿಗೆಯೇ ಹಿಟ್ಟಿನ ಗಿರಣಿ, ಕಿರಾಣಿ ಅಂಗಡಿ, ಕೃಷಿ ಸಲಕರಣೆಗಳ ಅಂಗಡಿ...

ಹೀಗೆ ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ಗ್ರಾಮೀಣ ಮಟ್ಟದಲ್ಲಿಯೇ ಉದ್ಯಮಶೀಲರಾದರು. ಅವರೆಲ್ಲರಿಗೆ ಬೆಂಬಲವಾಗಿ ನಿಂತದ್ದು ‘ಎಸ್‌ಎಸ್‌ಪಿ’ ಮತ್ತು ಗೋದಾವರಿ ನೇತೃತ್ವದ ‘ಸಖಿ’ಯರು. ಈ ‘ಸಖಿ’ಯರ ಪ್ರಭಾವ ಈಗ ಎಷ್ಟು ವ್ಯಾಪಕವಾಗಿದೆಯೆಂದರೆ ಕೆಲವೇ ತಿಂಗಳ ಹಿಂದೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಕೂಡ ಇವರು ಜಯಭೇರಿ ಬಾರಿಸಿದ್ದಾರೆ. ಗಂಧೋರಾದ ಸಮೀಪದಲ್ಲಿಯೇ ಇರುವ ತೀರ್ಥ್‌ನಲ್ಲಿ ‘ಊರ್ಜಾ ಸಖಿ’ಯಾಗಿ ಉದ್ಯಮಶೀಲರಾಗಿದ್ದ ವರ್ಷ ರಾಣಿ ದಿನಕರ್ ಪವಾರ್ ಈಗ ಅಲ್ಲಿನ ಸರಪಂಚ. 

‘ಮಹಾರಾಷ್ಟ್ರ ಸರ್ಕಾರ ಒಸ್ಮಾನಾಬಾದ್ ಜಿಲ್ಲೆಯನ್ನು ‘ಶೂನ್ಯ ಆತ್ಮಹತ್ಯೆ’ ಪ್ರದೇಶವನ್ನಾಗಿಸಲು ಪಣ ತೊಟ್ಟಿದೆ. ಅದಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೂ ಇಲ್ಲಿ, ತಿಂಗಳಿಗೆ ಕನಿಷ್ಠ 50 ರೈತರು ಸಾವಿಗೆ ಶರಣಾಗುತ್ತಿದ್ದಾರೆ. ‘ನಿಮಗೆ ನಂಬಲು ಕಷ್ಟವಾಗಬಹುದು. ಆದರೂ ನಂಬಲೇಬೇಕು. ಅದೇನೆಂದರೆ ಕಳೆದ ಐದು ವರ್ಷಗಳ ಅವಧಿಯಲ್ಲಿ ‘ಎಸ್‌ಎಸ್‌ಪಿ’ ಮತ್ತು ಗೋದಾವರಿ ಅವರ ನೇತೃತ್ವದ ಮಹಿಳಾ ಪಡೆ ಕೆಲಸ ಮಾಡುವ ಇಲ್ಲಿನ 100 ಹಳ್ಳಿಗಳಲ್ಲಿ ಒಬ್ಬನೇ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿಲ್ಲ. ಒಂದು ಕುಟುಂಬ ಕೂಡ ಮನೆಯ ಬಾಗಿಲಿಗೆ ಬೀಗ ಹಾಕಿ ವಲಸೆ ಹೋಗಿಲ್ಲ’ ಎನ್ನುತ್ತಾರೆ ಎಸ್‌ಎಸ್‌ಪಿಯ ನಸೀಮ್ ಶೇಖ್.

ಗೋದಾವರಿ ಡಾಂಗೆ ಅಥವಾ ಗೋದಾವರಿ ತಾಯಿಯ ಯಶೋಗಾಥೆ ಕೇವಲ ಒಸ್ಮಾನಾಬಾದ್ ಜಿಲ್ಲೆಗೆ ಮಾತ್ರ ಸಿಮೀತವಾಗಿಲ್ಲ. ಮರಾಠಾವಾಢದ ಪ್ರತಿಯೊಂದು ಜಿಲ್ಲೆಯಲ್ಲೂ ಆಕೆಯ ಹೆಜ್ಜೆಗುರುತು ಸ್ಪಷ್ಟವಾಗಿ ಮೂಡಿದೆ. ಮಹಾರಾಷ್ಟ್ರದ ಮತ್ತೊಂದು ರೈತ ಆತ್ಮಹತ್ಯಾ ರಾಜಧಾನಿ ವಿದರ್ಭದ ಹಲವು ಹಳ್ಳಿಗಳಲ್ಲಿ ಕೂಡ ಗೋದಾವರಿ ಮತ್ತು ಅವರ ಮಹಿಳಾ ಪಡೆ ಕೆಲಸ ಮಾಡಿ, ಪರಿಣಾಮ ಬೀರಿ ಬಂದಿದ್ದಾರೆ. 1993ರ ಲಾಥೂರ್ ಭೂಕಂಪದ ಸಂತ್ರಸ್ತರಾದ ಇಲ್ಲಿನ ಮಹಿಳೆಯರು 2001ರ ಗುಜರಾತ್ ಭೂಕಂಪ ಮತ್ತು 2004ರ ಸುನಾಮಿ ಸಂದರ್ಭದಲ್ಲಿ ಅಲ್ಲಿಗೆ ಧಾವಿಸಿ ಸಂತ್ರಸ್ತರಿಗೆ ನೆರವು ನೀಡಿದವರು. ಅಷ್ಟೇಕೆ, ಕಳೆದ ವರ್ಷ ನೇಪಾಳದಲ್ಲಿ ಭೂಕಂಪವಾದಾಗ ಈ ಮಹಿಳೆಯರ ಪಡೆ ನೆರೆದೇಶಕ್ಕೆ ಹೋಗಿ ನೆರವಿನ ಹಸ್ತ ಚಾಚಿ ಬಂದಿದೆ.

ಗಂಧೋರಾದ ಪುಟ್ಟ ಮನೆಯ ಮುಂದಿನ ಹಗ್ಗದ ಮಂಚದ ಮೇಲೆ ಕೂತರೆ, ಸುಮಾರು ಐದಡಿ ಎತ್ತರದ ಒಬ್ಬ ಸಾಮಾನ್ಯ ಮಹಿಳೆಯಂತೆ ಕಂಡು ಬರುವ ಗೋದಾವರಿ ಡಾಂಗೆ ಸಪ್ತಸಾಗರವನ್ನು ಮೀರಿ ನಿಂತಾಕೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಅಮೆರಿಕದಿಂದ ಹಿಡಿದು ಜಪಾನ್‌ವರೆಗೆ 11 ದೇಶಗಳಿಗೆ ಭೇಟಿ ನೀಡಿ, ಅಲ್ಲೆಲ್ಲ ನಡೆದ ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನಗಳಲ್ಲಿ ಮರಾಠಾವಾಢದ ಮಹಿಳೆಯರ ಯಶೋಗಾಥೆಯನ್ನು ಮರಾಠಿಯಲ್ಲಿ ಸಾರಿ ಬಂದವರು.

ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಮಹಿಳಾ ವಿಚಾರ ಸಂಕಿರಣದಿಂದ ಹಿಡಿದು ಜಪಾನ್‌ನ ಟೋಕಿಯೊದಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿರುವ ಗೋದಾವರಿ, ಈಗ ಬೇರು ಮಟ್ಟದ ಅಂತರರಾಷ್ಟ್ರೀಯ ತಾರೆಯಾಗಿ ಹೊಳೆಯುತ್ತಿದ್ದಾರೆ. ಆದರೆ, ಯಾವುದೇ ಕಾರಣಕ್ಕೆ ಗಂಧೋರ ಬಿಟ್ಟು ಅವರ ಪರಿಧಿಯನ್ನು ತೊರೆದು ಹೋಗುವ ಕಿಂಚಿತ್ತೂ ಯೋಚನೆ ಆಕೆಗಿಲ್ಲ. ‘ನನ್ನ ಬದುಕು ಮೀಸಲಾಗಿರುವುದು ಮರಾಠಾವಾಢದ ಮಹಿಳೆಯರು–ಮಕ್ಕಳಿಗೆ ಸೇವೆ ಸಲ್ಲಿಸಲು. ನನ್ನ ಹಳ್ಳಿಯಲ್ಲೇ ಇದ್ದು ನನ್ನ ಕೈಲಾದ ಮಟ್ಟಿಗೆ ಈ ಪ್ರಯತ್ನ ಮುಂದುವರಿಸುತ್ತೇನೆ. ಯಾವುದೇ ಕಾರಣಕ್ಕೆ ಸಮಾಜಸೇವಾ ಕ್ಷೇತ್ರ ಬಿಡುವುದಿಲ್ಲ ಮತ್ತು ನನ್ನ ಊರು ಬಿಡುವುದಿಲ್ಲ’ ಎಂಬ ದೃಢ ನಿರ್ಧಾರ ಆಕೆಯದು.

ರಾತ್ರಿ–ಹಗಲು ಸಮಾಜಕ್ಕಾಗಿ ದುಡಿಯುತ್ತಲೇ ಇರುವ ಗೋದಾವರಿ ವೈಯಕ್ತಿಕ ಬದುಕಿನಲ್ಲೂ ಕೂಡ ಈಗ ಸುಃಖದ ಸುಪ್ಪತ್ತಿಗೆಯಲ್ಲೇ ಇದ್ದಾರೆ. ಹಿರಿಯ ಮಗ ಶುಭಮ್ ವಿಜ್ಞಾನ ಪದವೀಧರ. ಕಿರಿಯ ಮಗ ಸುಶಾಂತ್ ಕೃಷಿ ಡಿಪ್ಲೊಮೊದ ಅಂತಿಮ ವರ್ಷದಲ್ಲಿದ್ದಾರೆ. ಅಂದು ಬಾಗಿಲು ಮುಚ್ಚಿಕೊಂಡಿದ್ದ ಗಂಡನ ಮನೆ ಈಗ ಕೈಬೀಸಿ ಕರೆಯುತ್ತಿದೆ. ತಂದೆ–ತಾಯಿ, ಅಣ್ಣ–ಅತ್ತಿಗೆ ಮಾತ್ರ ಗೋದಾವರಿ ಎಂಬ ಸಂಪತ್ತನ್ನು ಯಾವುದೇ ಕಾರಣಕ್ಕೆ ಬಿಟ್ಟುಕೊಡಲು ಸಿದ್ಧರಿಲ್ಲ.

ಉರಿ ಬಿಸಿಲು. ನಡು ಮಧ್ಯಾಹ್ನ. ‘ಊಟ ಸಿದ್ಧವಾಗಿದೆ. ಒಳಗೆ ಬನ್ನಿ’ ಎಂದು ನಮ್ಮನ್ನು ಕರೆದಾಗ ನಾವು ಬಂದು ತೊಂದರೆ ಕೊಟ್ಟೆವೋ ಎಂದು ಒಂದು ಕ್ಷಣ ಸಂಕೋಚವಾಯಿತು. ಸಿಮೆಂಟ್ ಶೀಟ್ ಹೊದಿಸಿದ್ದ ಆ ಪುಟ್ಟ ಮನೆಯೊಳಗೆ ಹೆಜ್ಜೆ ಹಾಕಿ, ಅಡುಗೆ ಮನೆಯ ಪಕ್ಕದಲ್ಲಿ ಭೀಮಾಶಂಕರ್ ಮೇಷ್ಟ್ರು ಮತ್ತು ಕೃಷ್ಣನ ನಡುವೆ ಊಟಕ್ಕೆ ಕುಳಿತಾಗ ನನ್ನ ‘ಮನೆ’ಯ ನೆನಪಾಯಿತು. ಎರಡು ಚಪಾತಿ, ಸೊಪ್ಪಿನ ಪಲ್ಯೆ, ಒಂಚೂರು ಅನ್ನ, ನುಗ್ಗೇಕಾಯಿಯ ಸಾರು... ಮೃಷ್ಟಾನ್ನ ಭೋಜನ. ಎದುರಿಗೆ ಊಟ ಬಡಿಸುತ್ತಿದ್ದ ಗೋದಾವರಿ ‘ಮಹಾತಾಯಿ’ ತುಳಜಾಪುರದ ತುಳಜಾಭವಾನಿ, ಕೊಲ್ಲೂರಿನ ಮೂಕಾಂಬಿಕೆ, ಹುಂಚದ ಪದ್ಮಾವತಿ ದೇವಿಯರಿಗಿಂತ ಬಹಳಷ್ಟು ಎತ್ತರವಾಗಿರುವಂತೆ ಕಂಡರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.