ADVERTISEMENT

ದೊಡ್ಡಿಶೇಖರ ಅವರ ಕವನ: ಬ್ರಾಂಡ್ ಬೀಡಿಗಳು ಮತ್ತು ಯೋಗ ನಿದ್ರೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 22:30 IST
Last Updated 24 ಫೆಬ್ರುವರಿ 2024, 22:30 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಸಾಣೆ ಹಿಡಿದ ಕತ್ತರಿ ನಾಲಗೆ ಯಾವಾಗಲೂ
ಬಾಯಕಳೆದು ಚಕ ಚಕ ಆಡುತ್ತಿದೆ
ಕಲ್ಪನೆಯಂತೆ ಸಮಮೂಲೆಯ ಕತ್ತರಿಸಿ
ಚೌಕಾರಗೊಳಿಸಿದ ಎಲೆಗಳ ಓತಿದ್ದಾರೆ
ಹದವಾದ ಹರೆಯದ ಎಲೆಗಳನ್ನೇ ಆರಿಸಿ

ತಾಳದ ತೊಡೆ ಮೇಲೆ ಹೊಸೆದೊಸೆದು
ಸುರುಳಿಗಟ್ಟಿಸಿ, ಮೈತುಂಬ
ಆವೇಶದ ತಂಬಾಕು ಹುಡಿಯ ತುಂಬಿ
ತಲೆಯ ಮಡಚಿ ಮಡಚಿ ಉರಿವ ಕಣ್ಣಾಗಿಸಿ
ಬಿಚ್ಚದಂತೆ ಸೇದುವ ತುದಿಗೆ ವಿಶ್ವಾಸದ
ನೂಲ ಸುತ್ತಿ ಭದ್ರಮಾಡಿಟ್ಟಿದ್ದಾರೆ
ಬ್ರಾಂಡ್ ಬೀಡಿಗಳು ಎಲ್ಲೂ ದೊರೆಯುತ್ತವೆ

ADVERTISEMENT

ಎಲ್ಲೆಂದರಲ್ಲಿ ನಶೆ ಹತ್ತಿಸಿ ಆವೇಶದ ಮಜಾ
ತಲೆ ತುಂಬ ಮಂಜು ಕಣ್ಣಲ್ಲಿ ವೇಷ ಭಾಷೆಯ ನಂಜು
ಸೇದುವುದು ಸೇದಿಸುವುದು ಹುಚ್ಚು ಸುಖದ ಕೇಕೆ
ಹೊಗೆಯ ಕೋಟೆಯೊಳಗೆ ರಾಜನ ಸಿಂಹಾಸನ ಭದ್ರ

ಕಬ್ಬಿನ ಗದ್ದೆಯಂತೆ ತರಗಟ್ಟಿರುವ ಊರೂರು
ಪುಡಾರಿ ಪುಂಡರ ಬೀಡಿ ನಶೆಯ ಚಟಕ್ಕೆ ಕಿಡಿಯುದುರಿ
ಕತ್ತಲ ನಾಲಗೆಯಾಗಿ ಧಗಧಗಿಸುತ್ತ ಸೌದೆ ಸಾಲಿಟ್ಟಿವೆ

ಎಲ್ಲೂ ಕೆಮ್ಮು ಕಫವಾಗಿ ಉಗಿವ ಮಾತು
ಸಪಾಟು ನೆಲದಲ್ಲೂ ಬೋರೆಹತ್ತಿದ ಆಯಾಸ
ರಕ್ತದ ವಾಂತಿ ನೆಲವೆಲ್ಲ ಭೀತಿಯ ವಾಸನೆ
ಬೆರಳಾಟದ ಬೀಡಿಗಳು ದೇಹದ ಕೊಳ್ಳಿಯಾಗಿವೆ

ನಶೆಯಲ್ಲಿ ನಕ್ಕವರು ಉಕ್ಕಿದವರು ಸೊಕ್ಕಿದವರು
ಧರ್ಮಕ್ಕೆ ತೂತು ಕೊರೆದು, ಹೆಣ್ಣುಗಳ ಕಣ್ಣ ಹಿಂಡಿ
ಚಿತೆಯ ಬೆಳಕಿನಲ್ಲಿ ಮುಖವ ತೀಡಿಕೊಂಡವರು
ಮಸಣ ವೈಭವದಲ್ಲಿ ಯೋಗ ನಿದ್ರೆಗೆ ಜಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.