ADVERTISEMENT

ನಾ ದಿವಾಕರ ಅವರ ಕವನ: ಹನಿಗೊಂದು ಬೊಗಸೆಗಾಗಿ

ನಾ ದಿವಾಕರ
Published 24 ಮಾರ್ಚ್ 2024, 0:04 IST
Last Updated 24 ಮಾರ್ಚ್ 2024, 0:04 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನನ್ನ ಕಂಬನಿಗೊಂದು
ಬೊಗಸೆ ಬೇಕಿದೆ
ನೆಲೆಗಾಣದ ನೋವುಗಳು
ಬಿತ್ತರಿಸುವ ಹನಿಗಳನು
ನೆಲಗಾಣದ ಹಾಗೆ ಕಾಪಿಡಲು
ಒಂದು ಬೊಗಸೆ ಬೇಕಿದೆ ;

ಅಮ್ಮನ ಸೆರಗಂಚಿನ ನೆನಪು
ಹನಿಹನಿಯೂ ಧ್ವನಿಸುತ್ತದೆ
ಅದೆಷ್ಟು ಕಸುವಿತ್ತು
ಆ ತುಣುಕು ಬಟ್ಟೆಯಲಿ
ಮೂಗು ಸೀಟಿದ ಕಲೆಯೊಡನೆ
ಕಣ್ಣ ಹನಿ ಬೆರೆವಾಗ
ನೇವರಿಸುವ ಕೈಗಳೇ ಜೀವಸಾಕ್ಷಾತ್ಕಾರ ;

ADVERTISEMENT

ನೆನಪುಗಳಿಂದೊಸರುವ
ಒಂದೆರಡು ಹನಿ
ಯಾರಿಗಾಗಿ ಎಂದರೆ
ಹೇಳಲೇನುಂಟು
ಏತಕ್ಕಾಗಿ ಎಂಬ ಪ್ರಶ್ನೆಗೆ
ಉತ್ತರವಾದರೂ ಎಲ್ಲುಂಟು ?

ಅಮ್ಮ ನೆನಪಾಗುತ್ತಾಳೆ
ತೊರೆದವರು ಕಾಡಿದಾಗೆಲ್ಲಾ....
ಅವಳ ಬೊಗಸೆಯಲೂ ಒಂದು
ಹೃದಯವಡಗಿತ್ತು
ಸೆರಗಿನೊಡನೆ ಸಂವಾದಿಸುವ
ಅವಳ ಒಡಲಾಳದ ಮಾತು
ಕಣ್ಣಂಚಿನ ಹನಿಹನಿಯಲೂ
ಉಸಿರಾಡುತಿತ್ತು!

ಇಂದು ಅವಳಿರಬೇಕಿತ್ತು
ಅಣ್ಣನಿಗೆ ಮಿಡಿದ ಒಂದೆರಡು ಹನಿಗೆ
ಅವಳು ಮಡಿಲಾಗಬಹುದಿತ್ತು! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.