ADVERTISEMENT

ಬೆಂಗಳೂರಿನಲ್ಲಿ ಎಲೆಕ್ಟ್ರಿಕ್‌ ಏರ್‌ಟ್ಯಾಕ್ಸಿ ಸೇವೆಗೆ ಸಿದ್ಧತೆ

ಪಿಟಿಐ
Published 20 ಏಪ್ರಿಲ್ 2024, 0:27 IST
Last Updated 20 ಏಪ್ರಿಲ್ 2024, 0:27 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದಲ್ಲಿ 2026ರ ವೇಳೆಗೆ ಎಲೆಕ್ಟ್ರಿಕ್‌ ಏರ್‌ ಟ್ಯಾಕ್ಸಿ ಸೇವೆ ಆರಂಭಿಸಲು ಇಂಡಿಗೊ ಕಂಪನಿಯ ಮಾತೃಸಂಸ್ಥೆಯಾದ ಇಂಟರ್‌ಗ್ಲೋಬಲ್‌ ಎಂಟರ್‌ಪ್ರೈಸಸ್‌ ಮತ್ತು ಅಮೆರಿಕದ ಆರ್ಚರ್‌ ಏವಿಯೇಷನ್‌ ಜಂಟಿಯಾಗಿ ಸಿದ್ಧತೆ ನಡೆಸಿವೆ.

ಪ್ರಥಮ ಬಾರಿಗೆ ನವದೆಹಲಿಯ ಕನೌಟ್‌ ಸ್ಥಳದಿಂದ ಹರಿಯಾಣದ ಗುರುಗ್ರಾಮಕ್ಕೆ ಈ ಸೇವೆ ಆರಂಭವಾಗಲಿದೆ. ಏಳು ನಿಮಿಷಗಳಲ್ಲಿ ಪ್ರಯಾಣಿಕರನ್ನು ತಲುಪಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

ನವದೆಹಲಿ ಬಳಿಕ ಮುಂಬೈ ಮತ್ತು ಬೆಂಗಳೂರಿನಲ್ಲಿಯೂ ಈ ಸೇವೆ ವಿಸ್ತರಿಸಲು ಈ ಕಂಪನಿಗಳು ನಿರ್ಧರಿಸಿವೆ. 

ADVERTISEMENT

‘ಎಲೆಕ್ಟ್ರಿಕ್‌ ಏರ್‌ ಟ್ಯಾಕ್ಸಿ ಸೇವೆ ಕುರಿತು ಅಮೆರಿಕದ ಫೆಡರಲ್‌ ಏವಿಯೇಷನ್‌ ಅಡ್ಮಿನಿಸ್ಟ್ರೇಷನ್‌ (ಎಫ್‌ಎಎ) ಜೊತೆಗೆ ಮಾತುಕತೆ ನಡೆಯುತ್ತಿದೆ. ಏರ್‌ಕ್ರಾಫ್ಟ್‌ಗೆ ಮುಂದಿನ ವರ್ಷ ಅನುಮತಿ ಸಿಗುವ ನಿರೀಕ್ಷೆಯಿದೆ. ಇದಾದ ಬಳಿಕ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯಕ್ಕೆ (ಡಿಜಿಸಿಎ) ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗುವುದು’ ಎಂದು ಆರ್ಚರ್‌ ಏವಿಯೇಷನ್‌ ಸಂಸ್ಥಾಪಕ ಮತ್ತು ಸಿಇಒ ಆಡಮ್ ಗೋಲ್ಡ್‌ಸ್ಟೈನ್‌ ಅವರು, ಶುಕ್ರವಾರ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಏರ್‌ ಟ್ಯಾಕ್ಸಿಯಲ್ಲಿ ಕನೌಟ್‌ನಿಂದ ಗುರುಗ್ರಾಮಕ್ಕೆ ತಲುಪಲು ₹2 ಸಾವಿರದಿಂದ ₹3 ಸಾವಿರ ವೆಚ್ಚವಾಗಲಿದೆ. ಈ ಎರಡು ಸ್ಥಳಗಳ ನಡುವೆ 27 ಕಿ.ಮೀ. ದೂರವಿದೆ. ರಸ್ತೆ ಮಾರ್ಗದಲ್ಲಿ ಕಾರಿನಲ್ಲಿ ಕ್ರಮಿಸಲು 90 ನಿಮಿಷ ಬೇಕಿದ್ದು, ₹1,500 ವೆಚ್ಚವಾಗಲಿದೆ ಎಂದು ಹೇಳಿದ್ದಾರೆ.

ಐದು ಆಸನಗಳ ಸಾಮರ್ಥ್ಯದ 200 ಮಿಡ್‌ನೈಟ್ ಏರ್‌ಕ್ರಾಫ್ಟ್‌ಗಳನ್ನು ಈ ಮಾರ್ಗದಲ್ಲಿ ಕಾರ್ಯಾಚರಣೆಗೆ ಇಳಿಸಲು ನಿರ್ಧರಿಸಲಾಗಿದೆ. ಪೈಲಟ್‌ ಸೇರಿ ನಾಲ್ವರು ಪ್ರಯಾಣಿಸಲು ಅವಕಾಶ ಸಿಗಲಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.