ADVERTISEMENT

ಕರಿಮಣಿಯಲ್ಲಿ ತರಹೇವಾರಿ ಆಭರಣ; ಕೈಗೂ, ಕಾಲಿಗೂ, ಕಿವಿಗೂ...

ರೂಪಾ .ಕೆ.ಎಂ.
Published 23 ಫೆಬ್ರುವರಿ 2024, 23:30 IST
Last Updated 23 ಫೆಬ್ರುವರಿ 2024, 23:30 IST
   

ಕರಿಮಣಿ ಮಾಲೀಕನ ಬಗ್ಗೆ ಚರ್ಚೆಯಾಗುತ್ತಿರುವ ಈ ಹೊತ್ತಿನಲ್ಲಿ ಕರಿಮಣಿಯನ್ನು ಪ್ರಧಾನವಾಗಿಟ್ಟುಕೊಂಡು  ಆಭರಣ ಲೋಕದಲ್ಲಿ ಹಲವು ಬಗೆಯ ಪ್ರಯೋಗಗಳು ನಡೆದಿವೆ ಎನ್ನುವುದನ್ನು ಮರೆಯುವಂತಿಲ್ಲ. ಹಲವು ಚೌಕಟ್ಟುಗಳನ್ನು ಮೀರಿಯೂ ಕಪ್ಪುಮಣಿ ಹೊಸತನಕ್ಕೆ ಹಾಗೂ ಹೊಸ ವಿನ್ಯಾಸಗಳಿಗೆ ತನ್ನನ್ನು ಒಗ್ಗಿಸಿಕೊಂಡಿದೆ. ಬಗೆ ಬಗೆಯ ಗಾತ್ರ, ವಿನ್ಯಾಸಗಳಿಂದ ಈ ಕರಿಮಣಿಯೆಂಬ ಆಭರಣವು ಹೆಂಗಳೆಯರ ಆಕ್ಸೆಸರಿಗಳಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದ್ದು, ತೊಟ್ಟವರ ಅಂದ ಹೆಚ್ಚಿಸಿದೆ. ಕರಿಮಣಿಯನ್ನು ಬಳಸಿ ಮಾಡಿದ ಅಂಥ ಕೆಲವು ಕುತೂಹಲಕಾರಿ ಆಭರಣಗಳು ಇಲ್ಲಿವೆ...

ಕರಿಮಣಿ ಬ್ರೇಸ್ಲೇಟ್‌: ಎರಡು, ಮೂರೆಳೆಯ ಸಣ್ಣ ಸಣ್ಣ ಕರಿಮಣಿ ಇರುವ ಬ್ರೇಸ್ಲೆಟ್‌ಗಳು ಈಗಿನ ಟ್ರೆಂಡ್‌. ದಪ್ಪ ಕರಿಮಣಿ ಬಳಸಿ ಮಾಡಿದ ಒಂದು ಎಳೆಯ ಬ್ಲೇಸ್ಲೆಟ್‌ಗಳು ಸಂದರ್ಭಕ್ಕೆ ಅನುಸಾರವಾಗಿ ಬಳಕೆಯಾಗುತ್ತದೆ. ಬೆಳ್ಳಿ ಬಳಸಿ ಒಂದೇ ಎಳೆಯಲ್ಲಿ ಮಾಡಿದ ಕರಿಮಣಿಯ ಬ್ರೇಸ್ಲೆಟ್‌ಗಳ ಬಳಕೆ ಹೆಚ್ಚಿದೆ. ಕರಿಮಣಿಯ ಜತೆಗೆ ಕುಸುರಿ ಇರುವ ಬೆಳ್ಳಿ ಪೆಂಡೆಂಟ್‌ಗಳನ್ನು ಬಳಸಿ ಮಾಡಿದ ಬ್ಲೇಸ್ಲೇಟ್‌ಗಳು ಎಲ್ಲ ಸಮಾರಂಭಗಳಿಗೂ ಒಪ್ಪುತ್ತದೆ. ಸಣ್ಣ ಸಣ್ಣ ಮಣಿ ಬಳಸಿ ಜತೆಗೆ ಹೂವಿನ ಕುಸುರಿ ಇರುವ ಹಾಗೂ ಕಪ್ಪು ಮಣಿಯ ಜತೆಗೆ ಇತರೆ ಬಣ್ಣದ ಮಣಿ ಸೇರಿಸಿ ಮಾಡಿದ ಆ್ಯಂಕ್ಲೇಟ್‌ ಬ್ಲೇಸ್ಲೇಟ್‌ಗಳು ಯುವತಿಯರನ್ನು ಹೆಚ್ಚು ಸೆಳೆದಿವೆ.

ಕರಿಮಣಿ ಬಳೆ: ಮಂಗಳಸೂತ್ರದಷ್ಟೆ ಕರಿಮಣಿ ಬಳೆಗೂ ಹಲವು ಸಮುದಾಯಗಳಲ್ಲಿ ಪ್ರಾಮುಖ್ಯತೆ ಇದೆ.  ಗಂಡನಾದವನು ಸೀಮಂತದ ಸಮಯದಲ್ಲಿ ಕರಿಮಣಿ ಇರುವ ಬಂಗಾರದ ಬಳೆಗಳನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯ ಕೆಲವು ಭಾಗಗಳಲ್ಲಿದೆ. ಇದನ್ನು ಹೊರತುಪಡಿಸಿ ಮಂಗಳಸೂತ್ರದೊಂದಿಗೆ ಕರಿಮಳೆ ಬಳೆ ತೊಟ್ಟರೆ ಬೇರೆ ಯಾವ ಆಭರಣವೂ ಬೇಕೆನಿಸದು.

ADVERTISEMENT

ಕರಿಮಣಿಯ ಓಲೆ ಮತ್ತು ಜುಮ್ಕಾ: ಕರಿಮಣಿ ಇರುವ ಸ್ಟಡ್‌ಗಳು, ಲೋಲಾಕುಗಳು ಎಲಿಗೆಂಟ್ ಲುಕ್‌ ನೀಡುತ್ತವೆ. ಉದ್ದ ಆಕಾರದ ಕರಿಮಣಿಯ ಚಾಂಡೇಲಿಯರ್‌ಗಳು ಮದುವೆ ಸಮಾರಂಭಗಳಿಗೆ ಒಪ್ಪುತ್ತದೆ. ಸಣ್ಣ ಸಣ್ಣ ಕರಿಮಣಿ ಬಳಸಿ ಮಾಡಿದ ಜುಮ್ಕಾಗಳು ಎಲ್ಲ ಸಮಾರಂಭಗಳಿಗೂ ಹೇಳಿ ಮಾಡಿಸಿದ ಕಿವಿಯೋಲೆ. ಪುಟ್ಟ ಪುಟ್ಟ ಹೂಗೊಂಚಲಿನಂತೆ ಕಾಣುವ ಈ ಕರಿಮಣಿಯ ಜುಮ್ಕಾಗಳಿಗೆ ಸದಾ ಬೇಡಿಕೆ. 

anklet

ಟ್ವಿನ್ಡ್‌ ಕರಿಮಣಿ ಕಡಗ: ತಿಪ್ಪಿದ ಹಾಗೆ ಕಾಣುವ ಟ್ವಿನ್ಡ್‌ ಕರಿಮಣಿ ಕಡಗವೊಂದನ್ನು ತೊಟ್ಟರೆ ಸಾಕು ಬೇರೆ ಆಭರಣವೇ ಬೇಡ. ಬಹಳ ಎಲಿಗೆಂಟ್ ಆಗಿ ಕಾಣುವ ಈ ಆಭರಣವು ಹಲವು ಕುಸುರಿಗಳಲ್ಲಿ ಲಭ್ಯ. ಸಾಮಾನ್ಯವಾಗಿ ಚಿನ್ನ ಹಾಗೂ ಬೆಳ್ಳಿಯ ಕರಿಮಣಿ ಕಡಗಗಳು ಬಳಕೆ ಹೆಚ್ಚಿದ್ದು, ಆನೆ, ಲಕ್ಷಿಯ ಕುಸುರಿ ಇರುವ ಟ್ವಿನ್ಡ್‌ ಕರಿಮಣಿ ಕಡಗ ಹಲವು ವಿನ್ಯಾಸಗಳಲ್ಲಿ ಲಭ್ಯವಿದೆ. 

ಮಕ್ಕಳಿಗೆ ಕೆಟ್ಟದೃಷ್ಟಿ ತಾಕದಂತೆ ಕಾಯಲೆಂದು ತುಸು ದಪ್ಪ ಕಪ್ಪು ಮಣಿಯನ್ನು ಸರ ಹಾಗೂ ಬಳೆಯನ್ನು ಹಾಕಲಾಗುತ್ತದೆ. ಮೊದಲೆಲ್ಲ ಕರಿಮಣಿ ಚಿನ್ನದ ಜತೆಗೆ ಹೆಚ್ಚು ಬಳಕೆಯಾಗುತ್ತಿತ್ತು. ಆದರೆ, ಈಗ ಬೆಳ್ಳಿಯಲ್ಲಿಯೂ ತರಹೇವಾರಿ ಮಂಗಳಸೂತ್ರವನ್ನು ನೋಡಬಹುದು. ಚಂದಕ್ಕಷ್ಟೆ ಅಲ್ಲದೇ ಭದ್ರತೆಯ ದೃಷ್ಟಿಯಿಂದಲೂ ಬೆಳ್ಳಿಯ ಕರಿಮಣಿ ಸರ, ಬಳೆ, ಓಲೆಗಳು ಟ್ರೆಂಡ್‌ ಆಗಿವೆ. ಅದು ವಯೋಭೇದವಿಲ್ಲದೇ ಎಲ್ಲರ ಗಮನ ಸೆಳೆಯುತ್ತಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.