ADVERTISEMENT

ಬೇಸಿಗೆಗೆ ಲಘುಬಗೆಯ ಫ್ಯಾಷನ್

ರೂಪಾ .ಕೆ.ಎಂ.
Published 5 ಏಪ್ರಿಲ್ 2024, 23:30 IST
Last Updated 5 ಏಪ್ರಿಲ್ 2024, 23:30 IST
   

ಬೇಸಿಗೆಯ ಧಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಉಡಲು–ತೊಡಲು ಆಯ್ಕೆ ಮಾಡುವ ಬಟ್ಟೆಗಳು ಹಾಗೂ ಅವುಗಳ ಬಣ್ಣಗಳು ಬೇಸಿಗೆಯನ್ನು ಇನ್ನಷ್ಟು ಸಹ್ಯಗೊಳಿಸಲು ನೆರವಾಗುತ್ತವೆ. ಏರುತ್ತಿರುವ ತಾಪಮಾನಕ್ಕೆ, ಸೆಕೆಗೆ ಹಿತವೆನಿಸುವ ಬಟ್ಟೆಗಳಿಗೆ ಆದ್ಯತೆ ಕೊಟ್ಟು, ವಾರ್ಡ್‌ರೋಬ್‌ ಅನ್ನು ಮರುಜೋಡಿಸುವ ಕೆಲಸ ಆಗಲಿ.

ಸೀರೆ ಉಡುವವರಾದರೆ ಕೈಮಗ್ಗ ಕಾಟನ್‌ ಸೀರೆಗಳು, ಖಾದಿ ಕಾಟನ್‌, ಚಾಂದೇರಿ ಕಾಟನ್‌, ಬಾಂದನಿ ಕಾಟನ್‌, ಮಾಹೇಶ್ವರಿ ಕಾಟನ್‌ ಹೀಗೆ ಇಚ್ಛೆಯನುಸಾರ ಆದ್ಯತೆ ನೀಡಬಹುದು. ಕುರ್ತಾಗಳು, ಮ್ಯಾಕ್ಸಿ. ಮಿನಿಸ್‌ಗಳು ಸಮ್ಮರ್‌ ಕಲೆಕ್ಷನ್‌ನಲ್ಲಿ ಅಗತ್ಯವಾಗಿರಲಿ.  

ಸ್ಟ್ರ್ಯಾಪಿ ಮಿಡಿ: ಕಾಟನ್ ಸ್ಟ್ರ್ಯಾಪಿ ಮಿಡಿಗಳು ಬಿಸಿಲಿಗೆ ಹೇಳಿ ಮಾಡಿಸಿದ ಬಟ್ಟೆಗಳು. ಬಹಳ ಸುಲಭವಾಗಿ ಧರಿಸಬಹುದಾದ, ಕ್ಲಾಸಿಕ್‌ ಹಾಗೂ ಕಾಟೆಂಪರರಿ ಲುಕ್ ನೀಡುವ ಸ್ಟ್ರ್ಯಾಪಿ ಮಿಡಿಗಳು ಹೈ –ನೆಕ್‌ಲೈನ್‌, ಸ್ಕ್ವೇರ್‌ ನೆಕ್‌ಲೈನ್‌, ವಿ ನೆಕ್‌ಲೈನ್‌ ಹೀಗೆ ತರಹೇವಾರಿಯಲ್ಲಿ ನೆಕ್‌ಲೈನ್‌ಗಳಲ್ಲಿ ಲಭ್ಯವಿದೆ. ಬಿಳಿ, ಹಸಿರು ಹೀಗೆ ಆದಷ್ಟು ತಿಳಿ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಿ. ಇದರ ಮೇಲೊಂದು ಹಗುರವೆನಿಸುವ ಲೆನಿನ್‌ ಕೋಟ್‌ ಧರಿಸಿದರೆ ಆಫೀಸಿಗೂ ಹಾಕಿಕೊಂಡು ಹೋಗಬಹುದು. ಕ್ಯಾಷುಯಲ್ ವೇರ್‌, ಆಫೀಸ್‌ವೇರ್‌ ಎರಡಕ್ಕೂ ಹೊಂದಿಕೊಳ್ಳುವ ಉಡುಗೆಯಿದು. 

ADVERTISEMENT

ಥಾಲಿಯಾ ಮ್ಯಾಕ್ಸಿ ಡ್ರೆಸ್‌: ಬೇಸಿಗೆ ಕಾಲಕ್ಕೆ ಸೂಕ್ತವೆನಿಸುವ ಬಟ್ಟೆ ಎಂದರೆ ಮ್ಯಾಕ್ಸಿ ಡ್ರೆಸ್‌.  ಬೀಚ್‌,  ಪಾರ್ಟಿ  ಅಥವಾ ಪ್ರವಾಸಕ್ಕೆ ಹೋಗುವವರಾದರೆ   ಮ್ಯಾಕ್ಸಿ ಡ್ರೆಸ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಎರಡೂ ಬಣ್ಣಗಳನ್ನು ಹೊಂದಿರುವ ಮ್ಯಾಕ್ಸಿ ಮೇಲೆ ಬಣ್ಣ ಬಣ್ಣದ ಬ್ಲಾಕ್‌ ಪ್ರಿಂಟ್‌ಗಳಿದ್ದರೆ ಅವುಗಳನ್ನು ಥಾಲಿಯಾ ಮ್ಯಾಕ್ಸಿ ಡ್ರೆಸ್‌ ಎನ್ನಲಾಗುತ್ತದೆ. ಕೆಂಪು ಮತ್ತು ಬಿಳಿ ಬಣ್ಣದ ಮ್ಯಾಕ್ಸಿ ಡ್ರೆಸ್‌ ಮೇಲೆ ಬ್ಲಾಕ್‌ ಪ್ರಿಂಟ್ಸ್ ಇರುವ ಮ್ಯಾಕ್ಸಿ ಡ್ರೆಸ್‌ಗಳು ಹಿತವಾಗಿರುತ್ತದೆ. ಬ್ರಾಡ್‌ ನೆಕ್‌ ವಿಥ್‌  ಸ್ಟ್ರೈಪ್ಸ್‌  ಇರುವ ಮ್ಯಾಕ್ಸಿ ಡ್ರೆಸ್‌ಗಳು ಸದ್ಯದ ಟ್ರೆಂಡ್‌. ಚಂದದ ಕಾಲರ್‌ ಬೋನ್‌  ಇರುವವರಿಗೆ ಈ ಡ್ರೆಸ್‌ ಚೆನ್ನಾಗಿ ಒಪ್ಪುತ್ತದೆ. 

ಫ್ಲೋರಲ್‌ ಮ್ಯಾಕ್ಸಿ: ಮ್ಯಾಕ್ಸಿ ಮೇಲೆ ಚಂದದ, ಕಣ್ಣಿಗೆ ಹಿತವೆನಿಸುವ ಹೂಗಳ ಪ್ರಿಂಟ್‌ ಇದ್ದರೆ ಅದನ್ನು ಫ್ಲೋರಲ್‌ ಮ್ಯಾಕ್ಸಿ ಎಂದು ಕರೆಯಲಾಗುತ್ತದೆ. ಇದು ಎಲ್ಲ ಕಾಲಕ್ಕೂ ಬೇಸಿಗೆಯ ಟ್ರೆಂಡ್‌ ಎನಿಸಿಕೊಂಡ ಬಟ್ಟೆ. ತುಂಬು ತೋಳಿನ ಹಾಗೂ ತೋಳೆ ಇಲ್ಲದ  ಫ್ಲೋರಲ್‌ ಮ್ಯಾಕ್ಸಿಗಳು ಕಾಲೇಜು ಯುವತಿಯರ ಅಚ್ಚುಮೆಚ್ಚು. ಎಲ್ಲ ಬಣ್ಣಗಳಲ್ಲಿ, ಬಗೆ ಬಗೆಯ ಹೂಗಳ ಪ್ರಿಂಟ್‌ ಇರುವ ಪ್ಲೋರಲ್‌ ಮ್ಯಾಕ್ಸಿಗಳು ಸದ್ಯಕ್ಕೆ ಚಾಲ್ತಿಯಲ್ಲಿವೆ. ಕಾಟನ್‌, ಶಿಫಾನ್‌. ಲೆನಿನ್‌ ಮೂರು ಬಟ್ಟೆಗಳಲ್ಲಿ ಬರುವ ಫ್ಲೋರಲ್‌ ಮ್ಯಾಕ್ಸಿ ತೊಡಲು ಹಿತವೆನಿಸುತ್ತದೆ. 

ಶರ್ಟ್‌ ಡ್ರೆಸ್‌: ಕಾಲರ್‌, ಫ್ರಂಟ್‌ ಬಟನ್‌, ತೋಳಿನಪಟ್ಟಿ ಹೀಗೆ ಶರ್ಟಿನ ವಿನ್ಯಾಸವನ್ನು ಎರವಲು ಪಡೆದ ಮಿಡಿ ಮಾದರಿಯ ಬಟ್ಟೆಯಿದು. ಕಾಟನ್‌, ಸಿಲ್ಕ್‌, ಲೆನಿನ್‌ ಹೀಗೆ ಬಗೆಬಗೆಯ ಬಟ್ಟೆಯಲ್ಲಿಯೂ ಶರ್ಟ್‌ಡ್ರೆಸ್‌ ಅನ್ನು ನೋಡಬಹುದು. ಇದಕ್ಕೊಪ್ಪುವ ಸೊಂಟದ ಬೆಲ್ಟ್ ಧರಿಸಿಬಿಟ್ಟರೆ ಬಹಳ ಸ್ಟೈಲಿಶ್‌ ಆಗಿ ಕಾಣುತ್ತದೆ.

ದೊಗಲೆ ಅಥವಾ ಓವರ್‌ಸೈಸ್ಡ್‌  ಈಗ ಟ್ರೆಂಡ್

ಬೇಸಿಗೆಯಲ್ಲಿ ಯಾವುದೇ ಬಗೆಯ ವಿನ್ಯಾಸವಿರುವ ದೊಗಲೆ ಅಥವಾ ಓವರ್‌ ಸೈಸ್ಡ್‌  ಬಟ್ಟೆ ಧರಿಸುವುದು ಟ್ರೆಂಡ್‌. ಯಾವುದರ ಮೇಲೆ ಈ ಓವರ್‌ ಸೈಸ್ಡ್‌ ಅನ್ನು ಧರಿಸುತ್ತೀರಿ ಎನ್ನುವುದು ಕೂಡ ಮುಖ್ಯವಾಗುತ್ತದೆ. ಉದಾಹರಣೆಗೆ ತಿಳಿನೀಲಿ ಜೀನ್ಸ್ ಮೇಲೆ ದೊಗಳೆ ಅಥವಾ ಓವರ್‌ಸೈಸ್ಡ್‌ ಎನಿಸುವ ಶರ್ಟ್‌ ಡ್ರೆಸ್‌ ಧರಿಸಿ, ಅದಕ್ಕೊಪ್ಪುವ ಬೆಲ್ಟ್ ಹಾಕಿಬಿಟ್ಟರೆ ಕಾಂಟೆಂಪರರಿ ಲುಕ್‌ ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.